Ganeshotsav History

“ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಫ್ರಭ”
ಲೋಕಮಾನ್ಯ ತಿಲಕರು ಸಂಯೋಜಿಸಿದ ರಾಷ್ಟ್ರೀಯ “ಸಾರ್ವಜನಿಕ ಗಣೇಶೋತ್ಸವ”ಕ್ಕೆ 123 ರ ಸಂಭ್ರಮ
ರಾಷ್ಟ್ರದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಭಾವ ಬೀರಿದ ಎರಡು ಸಂಗತಿ ಎಂದರೆ ಬಂಕಿಮಚಂದ್ರರ ಮಂತ್ರಗೀತೆ “ವಂದೇ ಮಾತರಂ” ಮತ್ತು ಲೋಕಮಾನ್ಯ ತಿಲಕರು ಸಂಯೋಜಿಸಿದ “ಸಾರ್ವಜನಿಕ ಗಣೇಶೋತ್ಸವ!” ಪ್ರತಿ ಭಾದ್ರಪದದಲ್ಲೂ ಮನೆಮನೆಗೂ ಆಹ್ವಾನಿತನಾಗಿ, ಮೋದಕ, ಕಾಯಿಬೆಲ್ಲ ಸ್ವೀಕರಿಸುವ, ಚಿಗುರು ಗರಿಕೆಯಿಂದ ಅಲಂಕಾರ ಮಾಡಿಕೊಳ್ಳಲಾಶಿಸುವ, ಇಪ್ಪತ್ತೊಂದು ಸಾಷ್ಟಾಂಗ ನಮಸ್ಕಾರಗಳಿಂದ ಸಂತುಷ್ಟನಾಗುವ, ತನ್ನ ಆಕಾರದಿಂದಲೇ ವಿನೋದವುಕ್ಕಿಸುವ, ಈ ವರಸಿದ್ಧಿವಿನಾಯಕ, ಭಾರತ ಸ್ವತಂತ್ರ್ಯಾಭಿಷ್ಠವನ್ನೀಡೇರಿಸಲಿಕ್ಕಾಗಿಯೂ ಬೀದಿಗಿಳಿದದ್ದು ಸ್ವಾತಂತ್ರ್ಯ ಇತಿಹಾಸದಲ್ಲೊಂದು ಕುತೂಹಲಕಾರಿ ಅಧ್ಯಾಯ!
ಮಾತೃ ಭೂಮಿಯ ದಾಸ್ಯ ವಿಮೋಚನೆಗಾಗಿ ಮಾಡುವ ಚಳುವಳಿ ಮತ್ತು ಯಾವುದೇ ಭಿನ್ನಭಾವವಿಲ್ಲದೆ ಸರ್ವಜನತೆಯೂ ಒಟ್ಟುಗೂಡಿ ನಡೆಸುವ ಶ್ರೀ ಗಣೇಶನ ಪೂಜೆ – ಉತ್ಸವ- ವಿಸರ್ಜನೆ ಇವೆರಡೂ ದೇಶ ಸೇವೆ ಎಂಬುದನ್ನು ತಿಲಕರು ಸಮಸ್ತ ಜನರ ಮನಕ್ಕೂ ಮುಟ್ಟಿಸಿದರು, ಸ್ವಾತಂತ್ರ್ಯದ ಕಿಚ್ಚನ್ನು ಪ್ರಜ್ವಲಿಸಿ ದೇಶವ್ಯಾಪಿ ಹಬ್ಬಿಸಿದರು! ಶ್ರೀ ವಿನಾಯಕನ ವ್ರತ ಸಾಮಾಜಿಕ ಏಕತೆಯನ್ನು ಬೆಳೆಸುವ ಧಾರ್ಮಿಕ ಕರ್ಮವೂ, ದಾಸ್ಯವಿಮೋಚನಾ ರಾಜಕೀಯವೂ, ಜನರಲ್ಲಿ ನಿರ್ಭಯ ಪ್ರವೃತ್ತಿ, ಸ್ವಾಭಿಮಾನಿ ಉಕ್ಕಿಸುವ ಪ್ರೇರಣಾ ಸ್ತೋತ್ರವೂ ಆಗಿ ತನ್ನ ಮಹತ್ವದ ಪಾತ್ರ ನಿರ್ವಹಿಸಿತು. ಶ್ರೀ ಏಕದಂತ ಗಣೇಶನ ಮಹಿಮೆ ಅದು!
ಈ ಪ್ರಚಂಡ ಮೇಧಾವಿ, ವಿದ್ಯಾಬುದ್ಧಿವರದ, ಸರ್ವವಿಘ್ನನಿವಾರಕ, ಗಜಾನನ ಶಿವಪಾರ್ವತಿಯರ ಪ್ರಿಯಪುತ್ರ, ಪ್ರಮಥಗಣಗಳ ಒಡೆಯ, ಪ್ರಥಮ ಪೂಜಿತ, ತಾಯಿ ಗೌರೀ ದೇವಿಯನ್ನು ಹಿಂಬಾಲಿಸಿ ಬರುವ ಈ ಪೋರನಿಗೇ-ಅವಳನ್ನು ಪೂಜಿಸುವವರು ಅವಳ ಪೂಜೆಗೆ ವಿಘ್ನ ಬರದಿರಲೆಂದು ಮೊದಲು ಪೂಜೆ ಸಲ್ಲಿಸಬೇಕು. ಅಷ್ಟೇಕೆ? ತ್ರಿಪುರಾಸುರ ಸಂಹಾರ ಕಾಲದಲ್ಲಿ ಶಿವ ಮೇರುಪರ್ವತವನ್ನೇ ಬಿಲ್ಲು ಮಾಡಿಕೊಂಡು, ವಾಸುಕಿಯನ್ನೇ ಸಿಂಜಿನಿಯಾಗಿಸಿಕೊಂಡು, ಬ್ರಹ್ಮ ವಿಷ್ಣುಗಳನ್ನು ಬಾಣವಾಗಿಸಿಕೊಂಡು ಲಯಕರ್ತ ಶಿವ ಪ್ರಯೊಗಮಾಡಿದರೂ ಬಾಣ ಎದೆಯಿಂದ ಚಿಮ್ಮಲ್ಲೇ ಇಲ್ಲ. ಆಗ ಶಿವನಿಗೆ ಅರಿವಾಯಿತು! ಅಡ್ಡಿ ನಿವಾರಿಸುವಂತೆ ವಿಘ್ನ ಹರನನ್ನು ಪ್ರಾರ್ಥಿಸಿಕೊಳ್ಳಬೇಕಾಯಿತು! ಇಂತಹ ಪ್ರಚಂಡ ಶಕ್ತಿ ಸ್ವಾತಂತ್ರ್ಯ ಚಳುವಳಿಯನ್ನು ಬಿರುಸುಗೊಳಿಸಿತು ಎಂದರೆ ನಂಬದಿರಲಾದೀತೆ? ಅವನ ಪೂಜೆ, ಕಡುಬು ನಿವೇದನದ ಹಬ್ಬ ಮಾತ್ರವಲ್ಲ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಚಿತ್ರ, ಗಮಕ, ಶಿಲ್ಪ ಅಲಂಕಾರ ಇತ್ಯಾದಿ ಸಕಲಕಲೆಗಳನ್ನೂ ಈ ವಿದ್ವತ್ ಪ್ರಿಯನಿಗೆ ಅರ್ಪಿಸುವ ಸಾಂಸ್ಕøತಿಕ ವಿಕಾಸಾಂದೋಲನವೂ ಆಯಿತು.
ಅಂತಹ ಗಣಪ, ಸ್ವಾತಂತ್ರ್ಯ ಸುವರ್ಣಮಹೋತ್ಸವದ ಸಂದರ್ಭದಲ್ಲಿ ಮನೆ ಮನೆಗೂ ಬರುತ್ತಿದ್ದಾನೆ. “ಸ್ವಾತಂತ್ರ್ಯ ಅಡ್ಡದಾರಿ ಹಿಡಿಯುತ್ತಿದೆ. ಎಚ್ಚರ! ನನ್ನ ಮೂಲಕ ಶಕ್ತಿ ಆರಾಧನೆ, ಧರ್ಮಪಾಲನೆ, ಸಂಸ್ಕøತಿ ರಕ್ಷಣೆ ಮಾಡಿ!! ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಿ” ಎಂದು ಎಚ್ಚರಿಸುತ್ತಾನೆ. ಆ ಮಹಾಬಲನಿಗೆ ಇಪ್ಪತ್ತೊಂದು ನಮಸ್ಕಾರಗಳು”.
0 0 votes
Article Rating
Subscribe
Notify of
guest
0 Comments
Inline Feedbacks
View all comments