ಉತ್ತಮ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಿಸೋಣ ಬನ್ನಿ

ಉತ್ತಮ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಿಸೋಣ ಬನ್ನಿ

ವಿಶ್ವ ಪರಿಸರ ದಿನಾಚರಣೆ : ೨೦೨೦
ಉದ್ಘೋಷಣೆ : ‘ಮಾಲಿನ್ಯ ನಿಯಂತ್ರಿಸಿ ; ಜೀವ ವೈವಿಧ್ಯ ಉಳಿಸಿ’

ಪ್ರತಿವರ್ಷ ಜೂನ್ ೫ ರಂದು ವಿಶ್ವದಾದ್ಯಂತ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿಶ್ವದಾದ್ಯಂತ ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದಿಸೆಯಲ್ಲಿ ಗಿಡ ನೆಟ್ಟು ಹಸಿರು ಸಂಭ್ರಮ ಆಚರಿಸಲಾಗುತ್ತದೆ.

ಅಪಾಯದ ಅಂಚಿನಲ್ಲಿರುವ ಪರಿಸರಾತ್ಮಕ ವಿಷಯಗಳ ಬಗ್ಗೆ ವಿಶ್ವಸಂಸ್ಥೆಯು ಪ್ರತಿವರ್ಷ ಜೂನ್ ೫ ರಂದು ಪರಿಸರ ದಿನಾಚರಣೆ ಅಂಗವಾಗಿ ಘೋಷಣೆಯನ್ನು ಹೊರಡಿಸುತ್ತದೆ. ಅದರ ಉದ್ದೇಶ ಇಡೀ ವಿಶ್ವ ಒಂದಾಗಿ ಪರಿಸರ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದಾಗಿದೆ. ಪ್ರಸಕ್ತ ಸಾಲಿನ ೨೦೨೦ ರ ವಿಶ್ವ ಪರಿಸರ ದಿನದ ಘೋಷಣೆಯು ‘ಮಾಲಿನ್ಯ ನಿಯಂತ್ರಿಸಿ ; ಜೀವ ವೈವಿಧ್ಯ ಉಳಿಸಿ’ – ಪರಿಸರ ಸಂರಕ್ಷಿಸೋಣ ಎಂಬುದಾಗಿದೆ. ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಸರ ವಿಷಯಗಳು ಅತ್ಯಂತ ಮಹತ್ವ ಪಡೆಯುತ್ತಿವೆ. ನೆಲ-ಜಲ, ಮಣ್ಣು, ಅರಣ್ಯ-ವನ್ಯಜೀವಿ ಸಂರಕ್ಷಣೆ, ಅಂತರ್ಜಲ ಹಾಗೂ ಜೀವಿ -ವೈವಿಧ್ಯ ಸಂರಕ್ಷಣೆ – ಹೀಗೆ ಎಲ್ಲಾ ಜೈವಿಕ ಹಾಗೂ ಅಜೈವಿಕ ಸಂಪನ್ಮೂಲಗಳು ಉಳಿಯುವಂತಾಗಲು ಈ ದಿನವನ್ನು ಅತ್ಯಂತ ಜಾಗೃತ ದಿನವೆಂದು ಆಚರಿಸಲಾಗುತ್ತದೆ.

ಪರಿಸರ : ಪರಿಸರ – ಇದು ನಮ್ಮ ಬದುಕಿನ ಅವಿಭಾಜ್ಯ ಅಂಗ. ಮಾನವ ಪರಿಸರದ ಶಿಶು. ಪ್ರಕೃತಿಯಲ್ಲಿ ಎಲ್ಲಾ ಜೀವಿಗಳಂತೆ ಮಾನವ ಕೂಡ ಒಂದು ಜೀವಿಯಷ್ಟೆ. ಪರಿಸರವಿಲ್ಲದೆ ಮಾನವನ ಅಸ್ತಿತ್ವಕ್ಕೆ ಯಾವುದೇ ರೀತಿಯಲ್ಲಿ ಬೆಲೆಯಿರುವುದಿಲ್ಲ. ಆದರೆ, ಮನುಷ್ಯ ಜೀವಿಯಿಲ್ಲದ್ದರೂ ಪರಿಸರದ ಕೊಂಡಿಯೇನು ಕಳಚಿ ಹೋಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಎರಡೂ ಇದೆ.

ನಾವು ಪರಿಸರ ಎಂದರೆ ಕೇವಲ ಗಿಡ-ಮರಗಳನ್ನು ಬೆಳೆಸುವುದಲ್ಲ. ಅವುಗಳ ರಕ್ಷಣೆ ದೇಶ ರಕ್ಷಣೆಯಷ್ಟೇ ಮಹತ್ವವಾದದ್ದು. ನಮ್ಮ ದೈನಂದಿನ ಬದುಕನ್ನು ನಿಯಂತ್ರಿಸುವ ಪರಿಸರವನ್ನು ನಾವು ಕಾಪಾಡಿ – ಸಂರಕ್ಷಿಸಬೇಕು. ನಾಳಿನ ಜನಾಂಗಕ್ಕೆ ಪರಿಸರವನ್ನು ಉಳಿಸಲು, ಕಿರಿಯ ಮನಸ್ಸುಗಳಿಗೆ ಇದರಿಂದಾಗುವ ಉಪಯೋಗಗಳ ಬಗ್ಗೆ ತಿಳುವಳಿಕೆ ನೀಡಿ ಅವರನ್ನು ಭವಿಷ್ಯದಲ್ಲಿ ಪರಿಸರ ರಾಯಭಾರಿಗಳಾಗಿ ರೂಪಿಸಬೇಕಿದೆ. ಭಾರತದಲ್ಲಿ ಕಾಡು ಮತ್ತು ಪರಿಸರವನ್ನು ಒಂದು ಪರಂಪರೆಯಾಗಿ ಸಂರಕ್ಷಿಸುವ ಕಾರ್ಯ ಮುಂದುವರಿದಿದೆ. ಕೊಡಗಿನಲ್ಲಿರುವಂತೆ ದೇಶದ ಹಲವೆಡೆ ‘ದೇವರಕಾಡು’ ಎಂಬ ಹೆಸರಿನಲ್ಲಿ ಗಿಡ-ಮರಗಳನ್ನು ಬೆಳೆಸಿ, ಪೋಷಿಸಿ ಇವುಗಳನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಬುಡಕಟ್ಟು ಸಮುದಾಯಗಳು ಇಂದು ಕೂಡ ಕಾಡಿನಲ್ಲೇ ತಮ್ಮ ಬದುಕು ಕಟ್ಟಿಕೊಂಡು ಕಾಡನ್ನು ಪ್ರೀತಿಸಿ ಸಂರಕ್ಷಿಸುತ್ತಾ ಬಂದಿರುವುದನ್ನು ನಾವು ಕಾಣಬಹುದು.

ಇದಕ್ಕೂ ಮಿಗಿಲಾಗಿ ನಮ್ಮ ಕಣ್ಣೆದುರೆ ಇರುವ ನಾಡಿನ ಸಾಕ್ಷಿಪ್ರಜ್ಞೆ ಎನಿಸಿರುವ ಸಾಲುಮರದ ತಿಮ್ಮಕ್ಕ ನಮಗೆ ಉತ್ತಮ ಉದಾಹರಣೆ ಮತ್ತು ಪರಿಸರ ಸಂರಕ್ಷಣೆಗೆ ಉತ್ತಮ ಪ್ರೇರಣೆಯಾಗಿದ್ದಾರೆ. ಸಾಲುಮರದ ತಿಮ್ಮಕ್ಕ ಹೊಂದಿರುವ ಪರಿಸರ ಕಾಳಜಿಯ ಮಾದರಿಯನ್ನು ನಮ್ಮ ಶಾಲಾ ಮಕ್ಕಳಿಗೆ ಹೇಳುವ ಮೂಲಕ ಪರಿಸರ ಜಾಗೃತಿ ಮೂಡಿಸಿ ಅವರನ್ನು ಭವಿಷ್ಯದ ಪರಿಸರ ಸಂರಕ್ಷಕರನ್ನಾಗಿ ರೂಪಿಸುವ ಹೊಣೆಗಾರಿಕೆ ನಮ್ಮ ಮೇಲಿದೆ.

ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ಅರಣ್ಯ ಹಸರೀಕರಣ ಯೋಜನೆಯಡಿ ಕೋಟಿ ವೃಕ್ಷ ಆಂದೋಲನದ ಮೂಲಕ ನಾಡಿನಾದ್ಯಂತ ಲಕ್ಷ ಲಕ್ಷ ವೃಕ್ಷಗಳನ್ನು ನೆಟ್ಟು ಬೆಳೆಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ಇದಕ್ಕೆ ಪೂರಕವಾಗಿ ಪರಿಸರ ಕಾಳಜಿ ಬೆಳೆಸುವ ದಿಸೆಯಲ್ಲಿ ‘ವಿದ್ಯಾರ್ಥಿಗೊಂದು ಗಿಡ – ಶಾಲೆಗೊಂದು ವನ’ ; ‘ಮನೆಗೊಂದು ಮರ – ಊರಿಗೊಂದು ವನ’ ಎಂಬ ಘೋಷವಾಕ್ಯದೊಂದಿಗೆ ನಮ್ಮ ಪರಿಸರದಲ್ಲಿ ಪ್ರತಿಯೊಬ್ಬರೂ ಗಿಡ ನೆಟ್ಟು ಬೆಳೆಸುವ ದೃಢ ಸಂಕಲ್ಪ ತೊಡಬೇಕಿದೆ. ನಾಳೆಯ ಉತ್ತಮ ಭವಿಷ್ಯಕ್ಕಾಗಿ ನಾವು ಇಂದೇ ನಮ್ಮ ಪರಿಸರದಲ್ಲಿ ಹೆಚ್ಚೆಚ್ಚು ಗಿಡ- ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಿಸುವ ಕಾರ್ಯಕ್ಕೆ ಕಂಕಣಬದ್ಧರಾಗಬೇಕಿದೆ.

“ಇರುವುದೊಂದೇ ಭೂಮಿ : ಇದರ ಸಂರಕ್ಷಣೆ ನಮ್ಮೆಲ್ಲರ ಹೊಣೆ”: ಪ್ರಕೃತಿಯು ನಮಗೆ ಸ್ವಾಭಾವಿಕವಾಗಿ ಗಾಳಿ, ನೀರು ಮತ್ತು ಸುಂದರ ಪರಿಸರವನ್ನು ನೀಡಿದೆ. ಬೆಟ್ಟಗುಡ್ಡ, ಅರಣ್ಯ, ಪರ್ವತ, ನದಿ, ಕಣ ವೆ, ಜಲಪಾತ, ಸಾಗರಗಳು ನಮಗೆ ವರದಾನವಾಗಿದೆ. ಸಸ್ಯ ಮತ್ತು ಪ್ರಾಣ ಸಂಕುಲ ಹಾಗೂ ಜೀವಿ-ವೈವಿಧ್ಯದಿಂದ ಕೂಡಿದ ಪ್ರಕೃತಿಯು ಮಾನವ ಸಂಕುಲದ ತಲೆಮಾರಿನ ಆಸ್ತಿ. ಇದರ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ. ಪ್ರಕೃತಿಯ ಉಳಿವು, ನಮ್ಮೆಲ್ಲ ಉಳಿವು. ಪ್ರಕೃತಿಯ ಅಳಿವು ನಮ್ಮೆಲ್ಲರ ಅಳಿವು. ಆದ್ದರಿಂದ ‘ನಮ್ಮ ನಡೆ ಹಸಿರೆಡೆಗೆ’ ಎಂಬ ಧ್ಯೇಯವಾಕ್ಯದೊಂದಿಗೆ ಹಸಿರು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ. “ಇರುವುದೊಂದೇ ಭೂಮಿ : ಇದೇ ನಮ್ಮೆಲ್ಲರ ಮನೆ, ಇದರ ಸಂರಕ್ಷಣೆ ನಮ್ಮೆಲ್ಲರ ಹೊಣೆ” ಎಂಬ ಘೋಷ ವಾಕ್ಯವನ್ನು ಅರಿತು ಭೂಗ್ರಹ ವ್ಯವಸ್ಥೆಯನ್ನು ಸಂರಕ್ಷಿಸಬೇಕಾದ ಗುರುತರ ಜವಾಬ್ದಾರಿ ನಮ್ಮ ಮೇಲಿದೆ.

ಅರಣ್ಯ ಸಂರಕ್ಷಣೆ: ಅರಣ್ಯ ನಮ್ಮ ಅಮೂಲ್ಯ ಪರಿಸರ ವ್ಯವಸ್ಥೆಗಳಲ್ಲೊಂದು. ಅದು ಆರೋಗ್ಯವಾಗಿದ್ದಾಗ ಮಾತ್ರ ನಮ್ಮ ಬದುಕು ಹಸನಾಗಬಲ್ಲದು. ಕಾಡು ಕ್ಷೀಣ ಸಿದರೆ ಮಳೆ ಕೊರತೆಯುಂಟಾಗಿ ಬರಗಾಲದ ಪರಿಸ್ಥಿತಿ ಒದಗಲಿದೆ. ಇದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿ ಆಹಾರ ಉತ್ಪಾದನೆಯಲ್ಲಿ ತೀವ್ರ ಹಿನ್ನೆಡೆಯುಂಟಾಗಲಿದೆ. ಕಾಡಿಲ್ಲದಿದ್ದಲ್ಲಿ ನೀರಿಗೆ ತೀವ್ರ ತೊಂದರೆಯಾಗಲಿದೆ. ಮನುಷ್ಯನ ಸ್ವಾರ್ಥತೆಯಿಂದ ಪ್ರಕೃತಿಯು ಈಗ ಮುನಿದು ಉತ್ತರವನ್ನು ಕೊಡಲಾರಂಭಿಸಿದೆ. ಆದ್ದರಿಂದ ನಾವು ಈ ಪ್ರಕೃತಿಯನ್ನು ಸಂರಕ್ಷಿಸಿ ಈ ಜಗತ್ತನ್ನು ಮಾಲಿನ್ಯರಹಿತ ಪರಿಸರದಿಂದ ಕೂಡಿದ ಸುಂದರ ತಾಣವನ್ನಾಗಿ ಮಾಡಲು ಕಂಕಣ ಬದ್ಧರಾಗಬೇಕಾಗಿದೆ.

ಪಶ್ಚಿಮಘಟ್ಟ ಸಂರಕ್ಷಣೆ : ಪಶ್ಚಿಮಘಟ್ಟಗಳಂತಹ ಪರ್ವತ ಶ್ರೇಣ ಯು ಭಾರತದ ಜೀವ-ವೈವಿಧ್ಯತೆಯ ತಾಣವಾಗಿದೆ. ಜೀವಿ _ ವೈವಿಧ್ಯದ ದೃಷ್ಠಿಯಲ್ಲಿ ಭಾರತವು ಸಾಕಷ್ಟು ಶ್ರೀಮಂತ ರಾಷ್ಟç. ನಮ್ಮ ಇಂದಿನ ಮತ್ತು ಮುಂದಿನ ಪೀಳಿಗೆಯ ಹಿತದೃಷ್ಠಿಯಿಂದ ಈ ಜೀವಿ-ವೈವಿಧ್ಯ ಶ್ರೀಮಂತಿಕೆಯ ಸ್ಥಳಗಳನ್ನು ಸಂರಕ್ಷಿಸಬೇಕಾಗಿದೆ. ಅದರಲ್ಲೂ ಪಶ್ಚಿಮಘಟ್ಟದ ಪ್ರದೇಶದಲ್ಲಿರುವ ಅಪರೂಪದ ಸಸ್ಯ ಹಾಗೂ ಜೀವಿ ಸಂಪತ್ತು ನಾಡಿನ ಜೀವಿ ಪರಿಸರದ ಉಳಿವಿಗೆ ಪ್ರಮುಖ ಕಾರಣವಾಗಿದೆ. ಈ ದಿಸೆಯಲ್ಲಿ ನಾವು ಜೀವಿ-ವೈವಿಧ್ಯ ಸಂಪತ್ತಿಗೆ ಯಾವುದೇ ಧಕ್ಕೆಯನ್ನುಂಟು ಮಾಡದೆ ಈ ಅಮೂಲ್ಯ ಸಂಪತ್ತಿನ ಸುಸ್ಥಿರತೆ ಉಳಿಸಿಕೊಳ್ಳಬೇಕಾಗಿದೆ.

ನೀರಿನ ಸಂರಕ್ಷಣೆ : ಹವಾಮಾನ ವೈಪರೀತ್ಯ ಹಾಗೂ ಜಾಗತಿಕ ತಾಪಮಾನದಿಂದಾಗಿ ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಮಳೆಯ ಕೊರತೆಯುಂಟಾಗಿ ಬೇಸಿಗೆಯಲ್ಲಿ ಭೀಕರ ಬರಗಾಲದ ಪರಿಸ್ಥಿತಿಯನ್ನು ಎದುರಿಸಿದ್ದೇವೆ. ಇದರಿಂದ ದೇಶ ಮತ್ತು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೊಂದರೆ ಅನುಭವಿಸಿದ್ದೇವೆ. ಆದ್ದರಿಂದ ನಾವು ಮಳೆ ನೀರನ್ನು ಕೂಡ ಅನಾವಶ್ಯಕವಾಗಿ ಪೋಲು ಮಾಡದೇ ನೀರನ್ನು ಮಿತವಾಗಿ ಬಳಕೆ ಮಾಡಬೇಕು. ನೀರಿನ ಸಂರಕ್ಷಣೆಗೆ ಗಮನಹರಿಸದಿದ್ದಲ್ಲಿ ಭವಿಷ್ಯದಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿ ಇಡೀ ಜೀವಿ-ಸಂಕುಲಕ್ಕೆ ತೊಂದರೆಯಾಗಲಿದೆ ಎಂಬ ಅಂಶವನ್ನು ನಾವು ಗಂಭೀರವಾಗಿ ಪಾಲಿಸಬೇಕಿದೆ.

ಗಿಡನೆಟ್ಟು ಬೆಳೆಸೋಣ ಬನ್ನಿ : ಈ ದಿಸೆಯಲ್ಲಿ ನಾವು ನಮ್ಮ ಸುತ್ತಲಿನ ಪರಿಸರದಲ್ಲಿ ಖಾಲಿ ಜಾಗ ಲಭ್ಯವಿರುವ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಕೆಲಸದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ಗಿಡ-ಮರಗಳನ್ನು ಹೆಚ್ಚು ಬೆಳೆಸುವುದರಿಂದ ನದಿ, ಕೆರೆ-ಕಟ್ಟೆ, ಬಾವಿ, ಹಳ್ಳ-ಕೊಳ್ಳಗಳಲ್ಲಿ ನೀರಿನ ಸಂಗ್ರಹಣೆ ಹೆಚ್ಚಾಗಿ ಅಂತರ್ಜಲ ವೃದ್ಧಿಯಾಗಲಿದೆ. ಇದರಿಂದ ಪರಿಸರ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ.

ಪರಿಸರದ ಸಮತೋಲನ ಸುಸ್ಥಿತಿಗಾಗಿ, ಜೀವ ವೈವಿಧ್ಯತೆಯ ರಕ್ಷಣೆಗಾಗಿ, ಸಂಪನ್ಮೂಲಗಳ ಸುಸ್ಥಿರ ಬಳಕೆಗಾಗಿ ಹಾಗೂ ಜೀವ ಸಂಕುಲದ ಉಳಿವಿಗಾಗಿ ಅರಣ್ಯಗಳನ್ನು ಸಂರಕ್ಷಿಸಬೇಕಾಗಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಹುಟ್ಟಿ ಹರಿಯುವ ಜೀವನದಿ ಕಾವೇರಿ ನದಿ ಸೇರಿದಂತೆ ಎಲ್ಲಾ ನದಿಗಳ ಸಂರಕ್ಷಣೆಗೆ ನಾವೆಲ್ಲಾ ಕಂಕಣಬದ್ಧರಾಗಿ ಜೀವಜಲದ ಉಳಿವಿಗೆ ಪಣತೊಡಬೇಕಾಗಿದೆ.

ಜೀವಿ-ವೈವಿಧ್ಯ ಸಂರಕ್ಷಣೆ : ನಾವು ನಮ್ಮ ಪರಿಸರದಲ್ಲಿ ಗಿಡ-ಮರ ಬೆಳೆಸುವುದು. ಅರಣ್ಯ, ವನ್ಯಜೀವಿಗಳ ರಕ್ಷಣೆ ಮತ್ತು ಜೀವಿ-ವೈವಿಧ್ಯ ಸಂರಕ್ಷಣೆಯೊಂದಿಗೆ ನೆಲ-ಜಲ ಮತ್ತು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ನಮ್ಮ ಭವಿಷ್ಯತ್ತಿಗಾಗಿ ಈ ನೆಲ-ಜಲ ಹಾಗೂ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಬನ್ನಿ, ಗಿಡ ನೆಟ್ಟು ಬೆಳೆಸೋಣ. ಕಾಡು ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಿ ಪರಿಸರ ಉಳಿಸೋಣ. ಭೂಮಿಯ ತಾಪಮಾನ ತಡೆಗಟ್ಟೋಣ. ನಾವು ‘ಮುಂದಿನ ಪೀಳಿಗೆಗಾಗಿ ಪ್ರಕೃತಿ ಸಂರಕ್ಷಿಸೋಣ’.

ಲೇಖಕರು: ✍. ಟಿ.ಜಿ.ಪ್ರೇಮಕುಮಾರ್,

One Comment

  1. Really good awareness program, premkumar sir is very knowledgeable person in this program

Leave a Reply

Your email address will not be published. Required fields are marked *