ಕೊರೊನಾ ಹೊಡೆತದಿಂದ ಸಂಕಷ್ಟಕ್ಕೆ ಸಿಲುಕಿದ ಕೊಡಗಿನ ಆರ್ಥಿಕ ಪರಿಸ್ಥಿತಿ: ಪರ್ಯಾಯ ಕ್ರಮಗಳತ್ತ ಹರಿಯಬೇಕಿದೆ ಚಿಂತನೆ….

ಕೊರೊನಾ ಹೊಡೆತದಿಂದ ಸಂಕಷ್ಟಕ್ಕೆ ಸಿಲುಕಿದ ಕೊಡಗಿನ ಆರ್ಥಿಕ ಪರಿಸ್ಥಿತಿ:
ಪರ್ಯಾಯ ಕ್ರಮಗಳತ್ತ ಹರಿಯಬೇಕಿದೆ ಚಿಂತನೆ….

ಸತತ ಎರಡು ವರ್ಷಗಳಿಂದ ಮಹಾಮಳೆಗೆ ಸಿಲುಕಿ ಪ್ರಾಕೃತಿಕ ವಿಕೋಪದಿಂದ ಕಂಗೆಟ್ಟಿದ್ದ ಕೊಡಗು ಜಿಲ್ಲೆಯ ಆರ್ಥಿಕತೆ ಈ ವರ್ಷದ ಆರಂಭದಲ್ಲಿ ಒಂದಷ್ಟು ಚೇತರಿಕೆ ಕಾಣುತ್ತಿರುವಂತೆಯೇ ಕೊರೊನಾದಿಂದಾಗಿ ತಲೆದೋರಿರುವ ಆರ್ಥಿಕ ಸಂಕಷ್ಟ ಮತ್ತೊಮ್ಮೆ ಜಿಲ್ಲೆಯ ವ್ಯಾಪಾರೋದ್ಯಮಿಗಳನ್ನು ಭಾರೀ ನಷ್ಟದತ್ತ ತಳ್ಳಿದೆ.

ಕೊಡಗಿನ ಆರ್ಥಿಕತೆಯ ಪ್ರಮುಖ ಜೀವನಾಡಿಯಾದ ಪ್ರವಾಸೋದ್ಯಮ ಈಗ ಸಂಕಷ್ಟದಲ್ಲಿದೆ. ಎರಡು ವರ್ಷಗಳ ಸತತ ಪ್ರಾಕೃತಿಕ ವಿಕೋಪದಿಂದ ಕಂಗೆಟ್ಟಿದ್ದ ಉದ್ಯಮವನ್ನು ಕೊರೊನಾ ಸೋಂಕು ಮತ್ತಷ್ಟು ಪಾತಾಳಕ್ಕೆ ತಳ್ಳಿದೆ. ಕಾಫಿ, ಕಾಳುಮೆಣಸು, ಭತ್ತ ಕೃಷಿ, ತೋಟಗಾರಿಕೆ ಬೆಳೆಗಳು ಜಿಲ್ಲೆಯ ಜೀವಾಳವಾದರೆ, ಪ್ರವಾಸೋದ್ಯಮ ಆರ್ಥಿಕತೆಯ ಊರು ಗೋಲಿನಂತಿತ್ತು. ಪ್ರಾಕೃತಿಕ ವಿಕೋಪದಿಂದ ಈ 3 ಕ್ಷೇತ್ರಗಳ ಮೇಲೆ ಭಾರಿ ಹೊಡೆತ ಬಿದ್ದಿದ್ದು, ಇಂದಿಗೂ ಸಂಪೂರ್ಣ ಚೇತರಿಸಿಕೊಂಡಿಲ್ಲ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಪ್ರಸಕ್ತ ಸನ್ನಿವೇಶದಲ್ಲಿ ಉದ್ಯಮವನ್ನು ನಡೆಸುವುದೇ ಕಷ್ಟವಾಗುತ್ತಿದೆ ಎನ್ನುವ ಮಾತುಗಳು ಉದ್ಯಮಿಗಳಿಂದ ಕೇಳಿ ಬರುತ್ತಿದೆ. ನೌಕರರಿಗೆ ಸಂಬಳ ಕೊಡುವುದು ಸೇರಿದಂತೆ ನಿರ್ವಹಣೆಗೆ ದೊಡ್ಡ ಮೊತ್ತದ ಖರ್ಚು ಬರುತ್ತಿದ್ದು, ಅದನ್ನು ಭರಿಸುವುದು ಹೇಗೆ ಎನ್ನುವ ಚಿಂತೆ ಇವರನ್ನು ಕಾಡುತ್ತಿದೆ. ಬಹುತೇಕರು ಉದ್ಯಮದ ಬೆಳವಣಿಗೆಗೆ ಸಾಲ ಮಾಡಿಕೊಂಡಿದ್ದು, ಇದರ ಮರುಪಾವತಿಯ ಬಗ್ಗೆಯೂ ತಲೆಕೆಡಿಸಿಕೊಂಡಿದ್ದಾರೆ. ಕೊರೊನಾ ಸೋಂಕಿಗೆ ಶಾಶ್ವತ ಪರಿಹಾರ ಸಿಗುವ ತನಕವೂ ಇದೇ ಪರಿಸ್ಥಿತಿ ಮುಂದುವರಿಯುವ ಆತಂಕ ಇರುವುದರಿಂದ ತಮ್ಮ ಕ್ಷೇತ್ರವನ್ನು ಬದಲಿಸುವ ಬಗ್ಗೆಯೂ ಕೆಲವರು ಚಿಂತನೆ ನಡೆಸಿದ್ದಾರೆ.

ಈ ವರ್ಷದ ಪ್ರಾರಂಭದ ಎರಡು ತಿಂಗಳಿನಲ್ಲಿ ಜಿಲ್ಲೆಯ ಆರ್ಥಿಕತೆ ಚೇತರಿಕೆಯ ಕಡೆ ಮುಖ ಮಾಡಿತ್ತು. ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಒಂದಿಷ್ಟು ಚೇತರಿಕೆ ಕಾಣುವುದರೊಂದಿಗೆ ವ್ಯಾಪಾರೋದ್ಯಮಿಗಳ ಮುಖದಲ್ಲಿ ಮಂದಹಾಸ ಮೂಡುತ್ತಿದ್ದು, ಆದರೀಗ ಕೊರೊನಾ ಎಂಬ ಮಾರಣಾಂತಿಕ ಸೋಂಕು ಕೊಡಗಿನಲ್ಲಿ ವ್ಯಾಪಿಸುತ್ತಿರುವ ಭೀತಿ ಎಲ್ಲೆಲ್ಲೂ ಕಂಡು ಬಂದಿರುವ ಹಿನ್ನಲೆಯಲ್ಲಿ ಮತ್ತೊಮ್ಮೆ ಕೊಡಗಿನ ಸಾಮಾನ್ಯ ಜನಜೀವನವೂ ಸ್ಥಬ್ಧವಾಗಿದ್ದು, ಜಿಲ್ಲೆಯ ಪ್ರಮುಖ ನಗರಗಳಲ್ಲಿ ವ್ಯಾಪಾರೋದ್ಯಮ ಕುಸಿತ ಕಂಡಿದ್ದು, ಜನಸಂಚಾರ ವಿರಳವಾಗಿದೆ.

ಪ್ರವಾಸೋದ್ಯಮದಿಂದ ಕೇವಲ ಹೋಂ ಸ್ಟೇ, ಹೊಟೇಲ್ ಮತ್ತು ರೆಸಾರ್ಟ್‍ಗಳು ಅಷ್ಟೇ ಅಲ್ಲ ಸ್ಪೈಸಸ್ ಅಂಗಡಿಗಳು, ಕೊಡಗಿನ ವೈನ್ ಎಲ್ಲವೂ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದ್ದವು. ಆದರೆ ಪ್ರವಾಸಿಗರಿಲ್ಲದೇ ಇರುವುದರಿಂದ ಇದೀಗ ಈ ಸ್ಪೈಸಸ್ ಅಂಗಡಿಗಳು ಗ್ರಾಹಕರಿಲ್ಲದೆ ಬಣಗುಡುತ್ತಿವೆ. ಅಷ್ಟೇ ಅಲ್ಲ ಮಂಜಿನ ನಗರಿ ಮಡಿಕೇರಿಯಲ್ಲೇ ವಾರದ ಕೊನೆ ದಿನಗಳಲ್ಲೂ ಜನರು, ವಾಹನಗಳ ಓಡಾಟವಿಲ್ಲದೆ ರಸ್ತೆಗಳು ಖಾಲಿ ಹೊಡೆಯುತ್ತಿವೆ.

ಜನಗಣತಿಯ ಪ್ರಕಾರ ಕೊಡಗು ಜಿಲ್ಲೆಯ ಜನ ಸಂಖ್ಯಾ ಪ್ರಮಾಣ 5 ಲಕ್ಷವಾಗಿದ್ದರೆ, ಈ ಪೈಕಿ ಪ್ರವಾಸೋದ್ಯಮ ಕ್ಷೇತ್ರದಲ್ಲಿಯೇ 1 ಲಕ್ಷಕ್ಕೂ ಅಧಿಕ ಮಂದಿ ಪರೋಕ್ಷವಾಗಿ ತೊಡಗಿಸಿಕೊಂಡಿದ್ದಾರೆ. ಕೊರೊನಾ ಎಫೆಕ್ಟ್‍ನಿಂದಾಗಿ ಇವರೆಲ್ಲಾ ಇದೀಗ ಆರ್ಥಿಕ ವಿಕೋಪಕ್ಕೆ ಸಿಲುಕಿದ್ದು ಆತಂಕಕ್ಕೀಡಾಗಿದ್ದಾರೆ. ಕೊರೊನಾ ಮಹಾ ಮಾರಿಗೆ ಕೊಡಗು ಜಿಲ್ಲೆಯ ಆರ್ಥಿಕ ಪರಿ ಸ್ಥಿತಿಯೇ ತಳಮುಟ್ಟಿದ್ದು, ಮುಂದೇನಾದೀತು ಎಂಬ ಚಿಂತೆ ಜಿಲ್ಲೆಯ ಜನರನ್ನು ಕಾಡುತ್ತಿದೆ.

ಕರೋನಾ ತಡೆಯ ಲಾಕ್ ಡೌನ್ ಪರಿಣಾಮ ನಗರಕ್ಕಿಂತಲೂ ಭೀಕರವಾಗಿ ಹಳ್ಳಿಯ ಬದುಕಿನ ಮೇಲೆ ಬರೆ ಎಳೆದಿದೆ. ಗ್ರಾಮೀಣ ಭಾಗದಲ್ಲಿ ರೈತರು, ಕೃಷಿ ಕೂಲಿಗಳು, ಚಿಕ್ಕಪುಟ್ಟ ಹಣ್ಣು-ತರಕಾರಿ ವ್ಯಾಪಾರಿಗಳು, ಸರಕೆ ಸಾಗಣೆ ವಾಹನಗಳ ಮಾಲೀಕರು ಮತ್ತು ಚಾಲಕರ ಬದುಕು ದಿಕ್ಕೆಟ್ಟಿದೆ. ನಾವೆಲ್ಲರೂ ಎಂದಿನಂತೆ ವ್ಯಾಪಾರ ವಹಿವಾಟು ನಡೆಸಬಹುದು ಎಂದುಕೊಂಡಿದ್ದ ಕೊಡಗಿನ ವ್ಯಾಪಾರಸ್ಥರಿಗೆ ತೀವ್ರ ನಿರಾಸೆ ಮೂಡಿಸಿದೆ.

ಕಾಫಿ, ಕಾಳು ಮೆಣಸು, ಶುಂಠಿ ಬೆಳೆಗಾರರ ಸ್ಥಿತಿ, ಬಾಳೆ ಬೆಳೆಗಾರರ ಸ್ಥಿತಿ, ಹೈನುಗಾರರು, ಕುಕ್ಕಟ ಉದ್ಯಮ ಮುಂತಾದ ವ್ಯಾಪಾರ ವಹಿವಾಟಿನ ಆರ್ಥಿಕ ಬಿಕ್ಕಟ್ಟು ಹಾಗೂ ಭೀಕರ ಹಣಕಾಸು ಮುಗ್ಗಟ್ಟು ಮಹಾಮಾರಿಯ ಆರಂಭಿಕ ಲಕ್ಷಣಗಳು ಮಾತ್ರ. ಮುಂದೆ ಇದರ ಪರಿಣಾಮಗಳು ರೋಗ ಉಲ್ಬಣವಾದಂತೆ ಇನ್ನಷ್ಟು ಭೀಕರ ಸ್ವರೂಪದಲ್ಲಿ ಕಾಣಿಸಿಕೊಳ್ಳಲಿವೆ. ಹಳ್ಳಿಯ ಸೂಕ್ಷ್ಮ ಆರ್ಥಿಕ ಜಾಲಕ್ಕೆ ಈ ಲಾಕ್ ಡೌನ್ ಕೊಟ್ಟಿರುವ ಪೆಟ್ಟಿನ ನಿಜ ಸ್ವರೂಪ ಗೊತ್ತಾಗಲೂ ಇನ್ನೂ ಒಂದೆರಡು ತಿಂಗಳು ಹಿಡಿಯಬಹುದು.

ಬಾಳೆ ಬೆಳೆಗಾರರ ಸ್ಥಿತಿ ಇನ್ನಷ್ಟು ಶೋಚನೀಯ. ಗೊನೆಗಳು ಬಲಿತು ಕೊಯ್ಲಿಗೆ ಬಂದು ಗಿಡದಲ್ಲಿ ಹಣ್ಣಾಗಿ ಉದುರುತ್ತಿದ್ದರೂ ಕಟಾವು ಮಾಡಿ ಮಾರಾಟ ಮಾಡಲಾಗದ ದುರಂತ ಬೆಳೆಗಾರರದ್ದು. ಸಾವಿರಾರು ಟನ್ ಬಾಳೆ ಹೊಲದಲ್ಲಿಯೇ ಮಣ್ಣುಪಾಲಾಗುತ್ತಿದ್ದು, ಮಾರುಕಟ್ಟೆಯ ಭಾಗ್ಯವಿಲ್ಲದೆ ಸಾಲ ಮಾಡಿ ಬಾಳೆ ಬೆಳೆ ಬೆಳೆದ ರೈತ ದಿಕ್ಕೆಟ್ಟು ಆಕಾಶ ನೋಡತೊಡಗಿದ್ದಾನೆ.

ಕೊರೊನಾ ವಿಶ್ವದೆಲ್ಲೆಡೆ ಸೃಷ್ಟಿಸುತ್ತಿರುವ ಅವಾಂತರ ಒಂದೆರಡಲ್ಲ. ದೊಡ್ಡ ದೊಡ್ಡ ರಾಷ್ಟ್ರಗಳೇ ಕೊರೊನಾದ ಹೊಡೆತಕ್ಕೆ ಸಿಲುಕಿ ಪರದಾಡುತ್ತಿವೆ. ಆರ್ಥಿಕತೆಗೆ ಕೊರೊನಾ ಇನ್ನಿಲ್ಲದ ಕಾಟ ಕೊಟ್ಟಿದೆ. ಲಾಕ್‌ಡೌನ್‌ ಪರಿಣಾಮವಾಗಿ ವ್ಯಾಪಾರ ವಹಿವಾಟು ಬಂದ್‌ ಆಗಿದೆ. ಉದ್ದಿಮೆಗಳು ಬಾಗಿಲು ಮುಚ್ಚಿವೆ. ಕೊರೊನಾದಿಂದ ಕೃಷಿ ಉತ್ಪಾದನೆ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಮನುಷ್ಯನ ಉಳಿವಿಗಾಗಿ ಭೂಮಿ, ರೈತ ಸಮುದಾಯ ಮತ್ತು ಕೃಷಿ ಕ್ಷೇತ್ರವನ್ನು ರಕ್ಷಿಸುವ ಪ್ರಯತ್ನಗಳು ನಡೆಯುವುದು ಅತ್ಯಂತ ತುರ್ತು ಅಗತ್ಯವಿದೆ.

ನ್ಯಾಯಬೆಲೆ ಅಂಗಡಿಗಳನ್ನು ಬಳಸಿಕೊಂಡು ಪಡಿತರದೊಂದಿಗೆ ಸ್ವಯಂಸೇವಕರು ಅಥವಾ ಇತರೆ ಸರ್ಕಾರಿ ಸಿಬ್ಬಂದಿ ಬಳಸಿಕೊಂಡು ಹಣ್ಣು-ತರಕಾರಿ ಮಾರಾಟ ವ್ಯವಸ್ಥೆಯನ್ನು ಮಾಡುವುದು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ಗ್ರಾಮಮಟ್ಟದಲ್ಲಿ ಬೆಳೆದ ಹಣ್ಣು ತರಕಾರಿಗಳಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಒದಗಿಸುವುದು ಮತ್ತು ಹಳ್ಳಿಯ ಜನ ತರಕಾರಿ-ಹಣ್ಣು ಖರೀದಿಗಾಗಿ ನಗರ-ಪಟ್ಟಣಗಳಿಗೆ ಹೋಗುವುದನ್ನು ತಡೆಯುವುದು ಕೂಡ ಸಾಧ್ಯ. ಆದರೆ, ಈ ವ್ಯವಸ್ಥೆ ಜಾರಿಗೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಮತ್ತು ಜನಪರ ಕಾಳಜಿಯ ಅಗತ್ಯ ಹೆಚ್ಚಿದೆ. ಇಂತಹ ಪರ್ಯಾಯ ಕ್ರಮಗಳು ಮಾತ್ರ ಒಂದು ಕಡೆ ಕೃಷಿಕರನ್ನು ಮತ್ತೊಂದು ಕಡೆ ಗ್ರಾಹಕರನ್ನು ಈ ಲಾಕ್ ಡೌನ್ ಪತನದಿಂದ ಪಾರುಮಾಡಬಲ್ಲವು.

ಲಾಕ್ ಡೌನ್ ತಗೆದ ತಕ್ಷಣವೇ ಆರ್ಥಿಕ ಸ್ಥಿತಿ ಯಥಾಸ್ಥಿತಿಗೆ ಮರಳಲಾರದು. ಜಿಡಿಪಿ ಬೆಳವಣಿಗೆ ಈ ಹಿಂದೆ ಇದ್ದ ಸ್ಥಿತಿಗೆ ಮರಳಲು ವರ್ಷಗಳೇ ಬೇಕಾಗಬಹುದು. ಆರ್ಥಿಕತೆ ಎಂದರೆ ಹಣ ಅಲ್ಲ, ಪ್ರಯೋಜನಕ್ಕೆ ಬರುವ ಉತ್ಪತ್ತಿ. ಇದರ ಸ್ಪಷ್ಟ ಅರಿವು ಇರಬೇಕು. ಹಣದಿಂದ ಹೊಟ್ಟೆ ತುಂಬುವುದಿಲ್ಲ. ಹೊಟ್ಟೆ ತುಂಬಲು ಹಣದಿಂದ ಖರೀದಿಸಬಹುದು. ಇದಕ್ಕೆ ವ್ಯವಸಾಯದ ಉತ್ಪನ್ನಬೇಕು. ಇಷ್ಟು ಸತ್ಯದ ಅರಿವು ಇದ್ದರೆ ಸಾಕು.

ಕಡಿಮೆ ಮತ್ತು ಮಾಧ್ಯಮ ಪ್ರಮಾಣದ ಆದಾಯ ಹೊಂದಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆ ಮತ್ತು ಸಾಮಾಜಿಕ ಭದ್ರತೆ ನೀಡುವುದು ಕಷ್ಟವಾಗಬಹುದು. ಜನರು ಮತಷ್ಟು ಬಡತನಕ್ಕೆ ಜಾರುವುದರಿಂದ ಮುಂದಿನ ಜೀವನ ನಡೆಸಲು ಸವಾಲುಗಳು ಎದುರಾಗಬಹುದು.

ನಾವುಗಳು ಬದಲಿ ಉತ್ಪನ್ನಗಳ ಬಗ್ಗೆ ಗಮನ ಹರಿಸೋ ಶಿಸ್ತು, ಚೈತನ್ಯ ಬೆಳೆಸಿಕೊಳ್ಳಬೇಕು. ಸರಕಾರದ ಸಹಾಯ ಯಾವತ್ತೂ ಹಕ್ಕಲ್ಲ, ಅದು ಸಹಾಯವೇ.! ಇಲ್ಲದವರಿಗೆ ಸಹಾಯ, ಇದ್ದವರು ತೆಗೆದುಕೊಂಡರೆ ಅದು ಭಿಕ್ಷೆ ಆಗುತ್ತದೆ. ಅವಶ್ಯಕತೆ ಇಲ್ಲದನ್ನು ಬೇಡಬಾರದು ಅನ್ನುವ ಆತ್ಮಗೌರವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಲಾಭದಲ್ಲಿ ಆಸ್ತಿ ಮಾಡಿದವರು, ನಷ್ಟವಾದಾಗ ಆಸ್ತಿಯ ಸ್ವಲ್ಪ ಭಾಗವನ್ನ ಮತ್ತೆ ಬಂಡವಾಳವಾಗಿ ಹೂಡುವಷ್ಟು ಸೌಜನ್ಯ ಬೆಳೆಸಿಕೊಳ್ಳಬೇಕು.

ಲೇಖಕರು: ✍. ಅರುಣ್ ಕೂರ್ಗ್

ಅರುಣ್‌ ಕೂರ್ಗ್‌

0 0 votes
Article Rating
Subscribe
Notify of
guest
0 Comments
Inline Feedbacks
View all comments