• Search Coorg Media

ಗಲ್ವಾನ್​ ನದಿ ಸೇತುವೆ ನಿರ್ಮಾಣ ಕಾರ್ಯ ಯಶಸ್ವಿ; ಚೀನಾ ವಿರೋಧಕ್ಕೆ ಡೋಂಟ್​ ಕೇರ್

ಗಲ್ವಾನ್​ ನದಿ ಸೇತುವೆ ನಿರ್ಮಾಣ ಕಾರ್ಯ ಯಶಸ್ವಿ; ಚೀನಾ ವಿರೋಧಕ್ಕೆ ಡೋಂಟ್​ ಕೇರ್

ಗಡಿ ವಿವಾದದ ನಡುವೆಯೂ ಗಲ್ವಾನ್​ ನದಿಯ ಮೇಲೆ ಭಾರತ ನಿರ್ಮಿಸಲು ಮುಂದಾಗಿದ್ದ ಸೇತುವೆ ಕಾಮಗಾರಿ ಸಂಪೂರ್ಣಗೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇಡೀ ಗಲ್ವಾನ್​ ನದಿ ಕಣಿವೆ ತನ್ನದೆಂದು ಚೀನಾ ಹೇಳಿಕೊಳ್ಳಲು ಮುಖ್ಯವಾದ ಕಾರಣವಿದೆ. ಈ ಪ್ರದೇಶವನ್ನು ತನ್ನದಾಗಿಸಿಕೊಂಡಲ್ಲಿ ಶಯಾಕ್​ ನದಿವರೆಗಿನ ಭಾರತದ ಪ್ರದೇಶಕ್ಕೆ ಪ್ರವೇಶಿಸಲು ಭಾರತೀಯ ಸೇನಾಪಡೆಗೆ ಸುಲಭವಾಗಿ ಅಡ್ಡಿಪಡಿಸಬಹುದಾಗಿದೆ. ಇದು ಸಾಧ್ಯವಾದಲ್ಲಿ ಯುದ್ಧದ ಸಂದರ್ಭದಲ್ಲಿ ಡಿಎಸ್​ಡಿಬಿಒ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಿ, ದೌಲತ್​ ಬೇಗ್​ ಓಲ್ಡೀಗೆ ಭಾರತೀಯ ಸಂಪರ್ಕವನ್ನೇ ಕಡಿಯಬಹುದಾಗಿದೆ. ಜತೆಗೆ ಡಿಬಿಒಗಿಂತ ಮೊದಲು ಬರುವ ಭಾರತದ ಕೊನೆಯ ಗ್ರಾಮ ಮರ್ಗೋ ಬಳಿ ಮತ್ತೊಂದು ರಸ್ತೆಯನ್ನು ತೆರೆದು, ಪಾಕಿಸ್ತಾನದ ಸೇನಾಪಡೆಗೆ ಸುಲಭವಾಗಿ ಪ್ರವೇಶ ದೊರಕಿಸಿಕೊಡಬಹುದಾಗಿದೆ. ಇದರಿಂದಾಗಿ ಭಾರತೀಯ ಸೇನಾಪಡೆ ಮೇಲೆ ಏಕಕಾಲಕ್ಕೆ ಎರಡು ಕಡೆಯಿಂದ ದಾಳಿ ಮಾಡಿ, ಹಣಿಯಲು ಅನುಕೂಲವಾಗುತ್ತದೆ ಎಂಬುದು ಚೀನಾದ ಸಂಚಾಗಿದೆ.

ಈ ಯೋಜನೆಯನ್ನು ಕೈಬಿಡುವಂತೆ ಚೀನಾ ದೇಶದ ಸೈನಿಕರು ಪದೇ ಪದೇ ಅಡ್ಡಗಾಲು ಹಾಕುತ್ತಿತ್ತು. ಅದರ ನಡುವೆಯೂ ಭಾರತದ ಎಂಜಿನಿಯರ್​ಗಳು ಸೇತುವೆ ನಿರ್ಮಾಣದ ಕಾರ್ಯವನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಿದ್ದಾರೆ.

ಜೂ.15ರಂದು ಇದೇ ಪಾಯಿಂಟ್​ 14ರಲ್ಲಿ ಭಾರತ ಮತ್ತು ಚೀನಾ ಯೋಧರ ನಡುವಿನ ಘರ್ಷಣೆ ನಡೆದಿತ್ತು. ಮುಖ್ಯ ನದಿಯೊಂದಿಗೆ ಗಲ್ವಾನ್​ ನದಿ ಸೇರ್ಪಡೆಗೊಳ್ಳುವ ‘ವೈ’ ಪ್ರದೇಶಕ್ಕೆ ಈ ಸೇತುವೆ ತುಂಬಾ ಹತ್ತಿರದಲ್ಲಿದೆ. ಎರಡು ನದಿಗಳು ಸಂಗಮಿಸುವ ಸ್ಥಳದಲ್ಲೇ ಭಾರತದ 120 ಕಿ.ಮೀ. ಕ್ಯಾಂಪ್​ ಇದ್ದು, ಡಿಎಸ್​ಡಿಬಿಒ ರಸ್ತೆಗೆ ಹತ್ತಿರದಲ್ಲಿದೆ.

ಭಾರತದ ಈ ಸೇತುವೆ ನಿರ್ಮಾಣ ಕಾರ್ಯದಿಂದಾಗಿಯೇ ಸಿಟ್ಟಾಗಿದ್ದ ಚೀನಾ ಲಡಾಖ್​ ಬಿಕ್ಕಟ್ಟನ್ನು ಸೃಷ್ಟಿಸಿತ್ತು. ಈ ಪ್ರದೇಶ ತನಗೆ ಸೇರಿದ್ದು ಎಂದು ಉತ್ಪ್ರೇಕ್ಷಿತ ಕಥೆಗಳನ್ನು ಕಟ್ಟಿದ್ದ ತನ್ನ ಯೋಧರ ಮೂಲಕ ಭಾರತದ ವ್ಯಾಪ್ತಿಯ ಪ್ರದೇಶಗಳನ್ನು ಅತಿಕ್ರಮಿಸಿತ್ತು.

ಗುರುವಾರದ ವೇಳೆಗೆ ಈ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಚೀನಾದ ಅಡ್ಡಿಯ ಹೊರತಾಗಿಯೂ ಬಾರ್ಡರ್​ ರೋರ್ಡ್ಸ್​ ಆರ್ಗನೈಜೇಷನ್​ (ಬಿಆರ್​ಒ) ಯೋಧರು ಕಾಮಗಾರಿಯನ್ನು ಮುಂದುವರಿಸಿ, ನಿಗದಿತ ಸಮಯದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದರು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಸಲಿಗೆ ಗಲ್ವಾನ್ ಬಳಿ ಚೀನಾ ಸೈನಿಕರು ಕ್ಯಾತೆ ತೆಗೆಯಲು ಕಾರಣವಾಗಿದ್ದೇ ಈ ಸೇತುವೆಯ ಕಾಮಗಾರಿ ವಿಚಾರ. ಸುಮಾರು 60 ಮೀಟರ್​ ಉದ್ದದ ಈ ಸೇತುವೆ ಭಾರತೀಯ ಸೈನಿಕರು ಅತ್ಯಂತ ಚಳಿಯ ನದಿಯ ಅಡ್ಡಲಾಗಿ ಸಂಚರಿಸಲು ಸಹಾಯಕಾರಿಯಾಗಿದೆ. ಅಲ್ಲದೇ ಕರಕೋರಂನ ಸೂಕ್ಷ್ಮ ವಲಯವನ್ನು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲು ಈ ಸೇತುವೆ ಸಹಾಯಕಾರಿಯಾಗಲಿದೆಯಂತೆ.

ಈ ಕುರಿತು ಮಾಹಿತಿ ನೀಡಿರುವ ಸರ್ಕಾರದ ಹಿರಿಯ ಅಧಿಕಾರಿಗಳು.. ಗುರುವಾರ ಸೇತುವೆ ನಿರ್ಮಾಣ ಕಾರ್ಯ ಮುಗಿದಿದೆ. ಈ ಸೇತುವೆಯಿಂದ ಗಡಿಯಲ್ಲಿ ಮೂಲ ಸೌಕರ್ಯಗಳು ಸಿಗುತ್ತವೆ, ನವೀಕರಣ ಯೋಜನೆಗಳು ಪ್ರಾರಂಭಗೊಳ್ಳುತ್ತವೆ ಎನ್ನುವ ಕಾರಣಕ್ಕೆ ಸ್ಥಗಿತಗೊಳಿಸುವ ಪ್ರಯತ್ನಗಳು ನಡೆದವು. ಅದರ ಮಧ್ಯೆಯೂ ಯಶಸ್ವಿಯಾಗಿ ಸೇತುವೆಯನ್ನು ನಿರ್ಮಿಸಲಾಗಿದೆ ಎಂದಿದ್ದಾರೆ.

ನಾಲ್ಕು ಕಮಾನುಗಳನ್ನು ಹೊಂದಿರುವ ಈ ಸೇತುವೆಯು ಶಯಾಕ್​ ಮತ್ತು ಗಲ್ವಾನ್​ ನದಿಗಳ ಸಂಗಮದಿಂದ ಮೂರು ಕಿ.ಮೀ. ಪೂರ್ವದಲ್ಲಿ ಸ್ಥಿತವಾಗಿದೆ. ವಿವಾದಕ್ಕೆ ಕಾರಣವಾಗಿರುವ ಪೆಟ್ರೋಲಿಂಗ್​ ಪಾಯಿಂಟ್​ 14ರಿಂದ 2 ಕಿ.ಮೀ. ಪೂರ್ವದಲ್ಲಿರುವ ಬೈಲಿ ಸೇತುವೆಗೆ ಸಮೀಪದಲ್ಲಿದೆ.

ಭಾರತ-ಚೀನಾ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಪ್ರಾಣ ಬಿಟ್ಟಿದ್ದು, ಇದಕ್ಕೆ ಪ್ರತಿಯಾಗಿ ನಡೆಸಿದ ದಾಳಿಯಲ್ಲಿ 35 ರಿಂದ 40 ಮಂದಿ ಚೀನಾ ಯೋಧರನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕಾ ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ. ಆದರೆ ಚೀನಾ ಸರ್ಕಾರವು ತಮ್ಮ ಸೈನಿಕರ ಸಾವು ಹಾಗೂ ಹಾನಿಗೆ ಸಂಬಂಧಿಸಿದಂತೆ ಯಾವುದೇ ರೀತಿ ಮಾಹಿತಿಯನ್ನು ನೀಡಿಲ್ಲ.

ಪ್ರಕ್ಷುಬ್ದು ವಾತಾವರಣ ನಡುವೆ ಚೀನಾ ವಿರೋಧಕ್ಕೆ ಡೋಂಟ್​ ಕೇರ್ ಎಂದ ಭಾರತ ಗಲ್ವಾನ್​ ನದಿಗೆ ಸೇತುವೆ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿ ಚೀನಾಕ್ಕೆ ಸೆಡ್ಡು ಹೊಡೆದಿದೆ.

✍. ವಿವೇಕ್‌ ನರೇನ್

Leave a Reply

Your email address will not be published. Required fields are marked *