ಪಶ್ಚಿಮಘಟ್ಟದ ದೃಶ್ಯ ವೈಭೋಗಕ್ಕೆ ಸಾಕ್ಷಿಯಾಗಿದೆ ಮಡಿಕೇರಿಯ "ನೆಹರು ಮಂಟಪ"

ಪಶ್ಚಿಮಘಟ್ಟದ ದೃಶ್ಯ ವೈಭೋಗಕ್ಕೆ ಸಾಕ್ಷಿಯಾಗಿದೆ ಮಡಿಕೇರಿಯ “ನೆಹರು ಮಂಟಪ”

ಮಡಿಕೇರಿ ನಗರದ ರಾಜಾಸೀಟ್ ಉದ್ಯಾನದ ಸಮೀಪವೇ ಇರುವ ’ನೆಹರೂ ಮಂಟಪ’ ಸುಮಾರು ₹ 18 ಲಕ್ಷ ವೆಚ್ಚದಲ್ಲಿ ಹೊಸ ಸ್ಪರ್ಶ ಪಡೆದ್ದು, ಪ್ರಕೃತಿಯ ಸೊಬಗನ್ನು ಪ್ರವಾಸಿಗರಿಗೆ ಉಣಬಡಿಸಲು ತಯಾರಾಗಿದೆ. ನಿರ್ವಹಣೆಯ ಕೊರತೆಯಿಂದ ಈ ಹಿಂದೆ ಕುಡುಕರ ತಾಣವಾಗಿ ಮಾರ್ಪಟ್ಟಿದ್ದ ನೆಹರು ಮಂಟಪ ಹೊಸ ರೂಪದೊಂದಿಗೆ ಪ್ರವಾಸಿಗರ ಸೆಳೆಯಲು ಸಜ್ಜುಗೊಂಡಿದೆ.
ಹಾಳು ಕೊಂಪೆಯಾಗಿ ನೆಹರು ಮಂಟಪ ಯಾರಿಗೂ ಬೇಡವಾಗಿತ್ತು. ಮಂಟಪದ ಸುತ್ತ ಕಾಡು ಬೆಳೆದುಕೊಂಡಿದ್ದರ ಪರಿಣಾಮ ಸಾರ್ವಜನಿಕರು ಅಲ್ಲಿಗೆ ಹೋಗಲು ಭಯ ಪಡುವ ಸ್ಥಿತಿಯಿತ್ತು. ಕೊನೆಗೂ ಎಚ್ಚೆತ್ತುಕೊಂಡ ಜಿಲ್ಲಾಡಳಿತವು ಪ್ರವಾಸೋದ್ಯಮ ಇಲಾಖೆಯಿಂದ ಮಂಟಪಕ್ಕೆ ಹೊಸ ರೂಪ ನೀಡಿದೆ.
ಕೊಡಗು ಎಂದರೆ ಅದು ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧಿ ಪಡೆದಿದೆ. ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಳವಾದ ತಲಕಾವೇರಿಯೂ ಸಹ ಇದೇ ಪುಣ್ಯ ಭೂಮಿಯಲ್ಲಿದೆ. ಇದರೊಂದಿಗೆ ಹಲವಾರು ಪ್ರವಾಸಿ ತಾಣಗಳೂ ಸಹ ಜಿಲ್ಲೆಯಲ್ಲಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.
ತನ್ನ ಹಸಿರ ಮೈಸಿರಿಯಿಂದಲೇ ಕೊಡಗು ರಾಜ್ಯದಲ್ಲೇ ವಿಶೇಷವಾದ ಸ್ಥಾನ ಹೊಂದಿದೆ. ಅಷ್ಟೇ ಅಲ್ಲದೆ ಐತಿಹಾಸಿಕ ಕಟ್ಟಡಗಳು ಮತ್ತು ಭಾರತೀಯ ಸೈನ್ಯಕ್ಕೆ ಕೊಡುಗೆ ಕೊಟ್ಟಂತಹ ಪ್ರಮುಖ ಸೇನಾ ನಾಯಕರ ನೆಲೆಬೀಡು ಎಂಬ ವಿಶ್ವಖ್ಯಾತಿಯನ್ನೂ ಸಹ ನಮ್ಮ ಜಿಲ್ಲೆ ಹೊಂದಿದೆ.
ಸುಂದರ, ಹಚ್ಚ ಹಸಿರಿನ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ದಿನನಿತ್ಯ ಕೊಡಗಿಗೆ ಭೇಟಿ ನೀಡುತ್ತಾರೆ. ಮಡಿಕೇರಿಯ ಹೃದಯ ಭಾಗದಲ್ಲೇ ಇರುವ ರಾಜಾಸೀಟು ಪ್ರವಾಸಿಗರ ಪಾಲಿನ ಸ್ವರ್ಗವಾಗಿದೆ. ಅನೇಕ ಸಂಖ್ಯೆಯ ಪ್ರವಾಸಿಗರು ಈ ರಾಜಾಸೀಟಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಆದರೆ ರಾಜಾಸೀಟಿನಂತೆ ಪಶ್ಚಿಮಘಟ್ಟಗಳ ದೃಶ್ಯ ವೈಭವವನ್ನು ನಮ್ಮ ಕಣ್‌ಮನಕ್ಕೆ ಉಣಬಡಿಸುವ ಮತ್ತೊಂದು ಸುಂದರ ಸ್ಥಳ ರಾಜಾಸೀಟಿನಿಂದ ಕೂದಲಳತೆಯ ದೂರದಲ್ಲಿದೆ. ಅದುವೇ ‘ನೆಹರು ಮಂಟಪ’.
ಸೂರ್ಯಾಸ್ತಮಾನದ ಸಮಯದಲ್ಲಿ ಹಾಗೆ ಒಮ್ಮೆ ನೆಹರೂ ಮಂಟಪದ ಬಳಿ ನಿಂತು ಪಶ್ಚಿಮಘಟ್ಟಗಳ ಶ್ರೇಣಿ ನೋಡಿದರೆ, ಸೂರ್ಯ ತಣ್ಣಗೆ ನಮ್ಮ ಕಣ್ಣಿನಿಂದ ಮರೆಯಾಗುವ ದೃಶ್ಯ ಅತ್ಯದ್ಭುತವಾಗಿರುತ್ತದೆ. ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿದ್ದರೂ ಪ್ರವಾಸಿಗರಿಂದ ಕೊಂಚ ದೂರವಿರುವಂತೆ ಭಾಸವಾಗುತ್ತದೆ. ವಾಹನದ ಕಿರಿಕಿರಿಯಿಲ್ಲದೆ ತಣ್ಣಗೆ ಬೀಸುವ ಗಾಳಿ ಮನಸ್ಸಿಗೆ ಒಂದು ರೀತಿ ವಿಶೇಷ ಆನಂದ ಮತ್ತು ನೂತನ ಚೈತನ್ಯವನ್ನು ತರುತ್ತದೆ. ನೋಡಿದಷ್ಟು ದೂರ ಬೆಟ್ಟಗಳು, ಮಂಜು ಮುಸುಕಿದ ಆ ಗುಡ್ಡಗಳ ಸೌಂದರ್ಯ ನಿಜಕ್ಕೂ ವರ್ಣನಾತೀತ.
ಈ ಸುಂದರ ನೆಹರೂ ಮಂಟಪ ಬರಿಯ ಪ್ರಕೃತಿ ಸೌಂದರ್ಯದಿಂದ ಮಾತ್ರವಲ್ಲದೆ, ತನ್ನದೇ ಆದ ಐತಿಹಾಸಿಕ ಘಟನೆಯೊಂದರ ಕುರುಹನ್ನು ತನ್ನೊಡಲಲ್ಲಿ ಬೆಚ್ಚಗೆ ಇಟ್ಟು ಹಲವಾರು ವರ್ಷಗಳಿಂದ ಇತಿಹಾಸದ ವಿಚಾರಗಳನ್ನು ಜನರಿಗೆ ಹಂಚುವ ಕಾರ್ಯವನ್ನು ಮಾಡಿದೆ.
ಅತ್ಯಂತ ಪ್ರಶಾಂತವಾದ ವಾತಾವರಣವನ್ನು ಹೊಂದಿರುವ ಈ ಸ್ಥಳವು ಐತಿಹಾಸಿಕ ಹಿನ್ನೆಲೆಯ ಸಂಕೇತವಾಗಿದೆ. ೧೯೫೭ ರಲ್ಲಿ ಮಡಿಕೇರಿಗೆ ಭೇಟಿ ನೀಡಿದ್ದ ಅಂದಿನ ಪ್ರಧಾನ ಮಂತ್ರಿಗಳಾದ ಜವಾಹರ್ ಲಾಲ್ ನೆಹರು ರವರು ಕೊಡಗಿನ ದೃಶ್ಯವೈಭೋಗಕ್ಕೆ ನಿಜಕ್ಕೂ ಮನಸೋತಿದ್ದರು. ಅಂದು ನೆಹರುರವರು ಈ ಸ್ಥಳಕ್ಕೆ ಭೇಟಿ ನೀಡಿದ್ದರಿಂದ ಈ ಸ್ಥಳಕ್ಕೆ ನೆಹರೂ ಮಂಟಪ ಎಂದು ಹೆಸರು ಬಂತು. ಬಳಿಕ ಈ ಸ್ಥಳವನ್ನು ಜಿಲ್ಲಾಡಳಿತ ಅತ್ಯಂತ ಸುರಕ್ಷಿತವಾಗಿ ಕಾಪಾಡಿಕೊಂಡು ಬರುವ ಕಾರ್ಯ ಮಾಡಿದೆ.
ರಾಜಾಸೀಟು ಉದ್ಯಾನವನದಿಂದ ಕೂದಲಳತೆಯ ದೂರದಲ್ಲಿರುವ ನೆಹರೂ ಮಂಟಪವು ಮಡಿಕೇರಿ ಆಕಾಶವಾಣಿ ಪಕ್ಕದಲ್ಲಿದ್ದು, ಉತ್ತಮ ವಾತಾವರಣದಿಂದ ಕೂಡಿದೆ, ಇಲ್ಲಿ ಪ್ರಮುಖವಾದ ಆಕರ್ಷಣೆಯೆಂದರೆ ಅದ್ಭುತ ಸೂರ್ಯಾಸ್ತಮಾನ. ಮುಂಜಾನೆಯ ಸೂರ್ಯೋದಯ ಮತ್ತು ಮುಸ್ಸಂಜೆಯ ಸಮಯ ಇಲ್ಲಿಗೆ ಭೇಟಿ ನೀಡಲು ಸೂಕ್ತವಾದ ಸಮಯವಾಗಿದೆ. ನೆಹರೂ ಮಂಟಪವು ಸ್ಥಳೀಯರಿಗೆ ಚಿರಪರಿಚಿತವಾಗಿದ್ದು, ಇಲ್ಲಿಗೆ ಯಾವುದೇ ರೀತಿಯ ನಿಗದಿತ ಶುಲ್ಕವಿರುವುದಿಲ್ಲ ಮತ್ತು ಉಚಿತ ಪ್ರವೇಶವಾಗಿದೆ.
ಅಲ್ಲದೆ ಪುಟಾಣಿ ಸುಂದರ ಪುಷ್ಪೋದ್ಯಾನವನ್ನೂ ಸಹ ನೆಹರೂ ಮಂಟಪ ಒಳಗೊಂಡಿದೆ. ಗಿರಿಶಿಖರಗಳ ನಡುವೆ ಮರೆಯಾಗುವ ಸೂರ್ಯ, ತಣ್ಣಗೆ ಮೈಮನವೆಲ್ಲಾ ಆವರಿಸುವ ತಂಪಾದ ಗಾಳಿ, ಇವೆಲ್ಲಕ್ಕೂ ಮತ್ತಷ್ಟು ಮೆರುಗನ್ನು ನೀಡುವ ಹೂಗಳ ಸುಗಂಧ ಪರಿಮಳದ ಮಧ್ಯೆ ನೀವು ಕೆಲಹೊತ್ತು ಸಮಯ ಕಳೆಯಬೇಕೆಂದಿದ್ದರೆ ತಪ್ಪದೆ ನೆಹರೂ ಮಂಟಪಕ್ಕೊಮ್ಮೆ ಭೇಟಿ ನೀಡಿ.
ಸಂಜೆಯ ಸಮಯವನ್ನು ಕಳೆಯಲು ಹಾಗೂ ವಿಶ್ರಾಂತಿಯನ್ನು ಪಡೆಯಲು ಒಂದು ಪ್ರಶಾಂತವಾದ ಸ್ಥಳವಾಗಿದೆ. ಮಡಿಕೇರಿಯ ಸೌಂದರ್ಯ ಹಾಗೂ ಪ್ರಕೃತಿಯ ಸೋಬಗನ್ನು ಸವಿಯಲು ಒಂದು ಉತ್ತಮ ಜಾಗವಾಗಿದೆ ಮತ್ತು ಪ್ರವಾಸಿಗರಿಗೆ ವಿಶ್ರಾಂತಿಯನ್ನು ಪಡೆಯಲು ಸಹಕಾರಿಯಾಗಿದೆ.

0 0 votes
Article Rating
Subscribe
Notify of
guest
0 Comments
Inline Feedbacks
View all comments