"ಫೀಲ್ಡ್ ಮಾರ್ಷಲ್" ನಮ್ಮೆಲ್ಲರಿಗೂ "ಭಾರತರತ್ನ"

“ಫೀಲ್ಡ್ ಮಾರ್ಷಲ್” ನಮ್ಮೆಲ್ಲರಿಗೂ “ಭಾರತರತ್ನ”

“ಯುದ್ಧವೆಂದರೆ ಏನೆಂದು ಸೈನಿಕರು ತಿಳಿದಿರುತ್ತಾರೆಯೇ ಹೊರತು ಯುದ್ಧವನ್ನು ನಿರ್ಮಿಸುವ ರಾಜಕಾರಿಣಿಗಳಲ್ಲ”
– ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ
ಭಾರತ ಸೇನಾ ಇತಿಹಾಸದ ಏಕೈಕ ಮಹಾ ದಂಡನಾಯಕ, ಕೊಡಗಿನ ವೀರ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ 121 ನೇ ಜನ್ಮದಿನದ ವಿಶೇಷ ಲೇಖನ:
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರು ಯಶಸ್ಸಿನ ವೃತ್ತಿ ಜೀವನದಲ್ಲಿ ಅನೇಕ ಪ್ರಥಮಗಳನ್ನು ಸಾಧಿಸಿದವರು. ಇಂದೂರಿನ ಡ್ಯಾಲಿ ಕಾಲೇಜಿನ ಭಾರತೀಯ ಸೈನಿಕ ಶಾಲೆಯ ವಿದ್ಯಾರ್ಥಿಗಳ ಪ್ರಥಮ ತಂಡಕ್ಕೆ ಬಂದು ಸೇರಿಕೊಂಡ ಹಾಗೂ ಅಲ್ಲಿಂದ ಸೇನಾ ಪದವಿಯನ್ನು ಪಡೆದುಕೊಂಡ ಮೊಟ್ಟಮೊದಲ ಕೊಡಗಿನವರಾಗಿದ್ದಾರೆ., ಕ್ವೆಟ್ಟಾದಲ್ಲಿನ ಸಿಬ್ಬಂದಿ ಕಾಲೇಜನ್ನು ಪ್ರವೇಶಿಸಿದ ಮೊಟ್ಟಮೊದಲ ಭಾರತೀಯ ಅಧಿಕಾರಿ, ಮೊಟ್ಟಮೊದಲ ಭಾರತೀಯ ಬ್ರಿಗೇಡಿಯರ್, ಮೊಟ್ಟಮೊದಲ ಭಾರತೀಯ ಮೇಜರ್ ಜನರಲ್, ಮೊಟ್ಟಮೊದಲ ಸರ್ವೋಚ್ಚ ಸೇನಾಧಿಪತಿಯೂ ಆಗಿದ್ದ ಕೆ.ಎಂ. ಕಾರ್ಯಪ್ಪ ಅವರಿಗೆ ಯೋಧರ ಬಗೆಗೆ ಅಪಾರವಾದ ಪ್ರೀತಿ ಇತ್ತು. ಅವರ ದೇಶ ಪ್ರೇಮ ಒಂದು ಐತಿಹ್ಯವೇ ಆಗಿ ಪರಿಣಮಿಸಿದೆ. ಇವರ ಸಾಧನೆಗೆ ಭಾರತ ಸರ್ಕಾರ ಫೀಲ್ಡ್ ಮಾರ್ಷಲ್ ಪದವಿಯನ್ನು ನೀಡಿ ಗೌರವಿಸಿದೆ.
ಪಾರುಪತ್ಯೆಗಾರರಾಗಿದ್ದ ಕೊಡಂದೇರ ಮಾದಪ್ಪ-ಕಾವೇರಮ್ಮ ದಂಪತಿಯ ಆರು ಮಂದಿ ಮಕ್ಕಳಲ್ಲಿ ದ್ವಿತೀಯ ಪುತ್ರನಾಗಿ 1899 ಜನವರಿ 28ರಂದು ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ಕಾರ್ಯಪ್ಪ ಜನಿಸಿದರು. ಇವರಿಗೆ ಅಣ್ಣ ಕೆ.ಎಂ. ಅಯ್ಯಣ್ಣ, ತಮ್ಮಂದಿರು ಕೆ.ಎಂ ನಂಜಪ್ಪ, ಕೆ.ಎಂ ಬೋಪಯ್ಯ, ಸೋದರಿಯರು ಕೆ.ಎಂ. ಪೂವಮ್ಮ ಹಾಗೂ ಕೆ.ಎಂ. ಬೊಳ್ಳಮ್ಮ ಇದ್ದರು. ಕಾರ್ಯಪ್ಪರವರು ಬಾಲ್ಯದಲ್ಲಿಯೇ ಸೇನೆಯಲ್ಲಿ ಕೆಲಸ ಮಾಡಬೇಕೆಂಬ ಕನಸು ಕಂಡಿದ್ದರು. ಹತ್ತಿರದಿಂದ ಅವರ ತುಂಟಾಟಗಳನ್ನು ನೋಡುತ್ತಾ ಖುಷಿ ಪಡುತ್ತಿದ್ದ ಬಂಧುವರ್ಗದವರು ಪ್ರೀತಿಯಿಂದ “ಚಿಮ್ಮ” ಎಂದೇ ಕರೆಯುತ್ತಿದ್ದರು.
ನಾವೆಲ್ಲರು ಮೊದಲಿಗೆ ‘ಭಾರತೀಯರು, ನಂತರವಷ್ಟೆ ನಮ್ಮ ಧರ್ಮ, ಜಾತಿ ಎನ್ನುವ ಉದಾತ್ತ ನಿಲುವನ್ನು ರಾಷ್ಟ್ರದ ಪ್ರಥಮ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹೊಂದಿದ್ದರಲ್ಲದೆ, ಯುವ ಸಮೂಹಕ್ಕೆ ಪ್ರೇರಣಾದಾಯಕರಾಗಿದ್ದರು. ತಮ್ಮ 18ನೇ ವಯಸ್ಸಿನಲ್ಲಿ ಸಿಮ್ಲಾದಲ್ಲಿ ಸೇನೆಯ ನೇಮಕಾತಿ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದರು. ಅಲ್ಲಿ ಅವರು ಸೇನೆಗೆ ನೇಮಕಗೊಂಡರು. 1917ರ ಪ್ರಥಮ ವಿಶ್ವ ಯುದ್ಧದ ವೇಳೆಗೆ ಅವರಿಗೆ ವೀರಯೋಧನಾಗಿ ಹೋರಾಡುವ ಅವಕಾಶ ಒದಗಿತು. 1918ರಲ್ಲಿ ಮೊದಲನೆಯ ವಿಶ್ವಯುದ್ಧ ಮುಗಿದಾಗ ಭಾರತದ ರಾಜಕೀಯ ನಾಯಕರು ಭಾರತೀಯರನ್ನೂ ಬ್ರಿಟಿಷ್ ಆಡಳಿದ ಕಿಂಗ್ಸ್ ಕಮಿಷನ್‍ನಲ್ಲಿ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸತೊಡಗಿದರು. ಆ ಸಂದರ್ಭ ನಡೆದ ಕಠಿಣ ಪರೀಕ್ಷೆಗಳ ಬಳಿಕ ಆಯ್ಕೆಯಾದ ಬೆರಳೆಣಿಕೆಯ ಮಂದಿಯಲ್ಲಿ ಕಾರ್ಯಪ್ಪ ಒಬ್ಬರಾಗಿದ್ದರು, ಅವರು ಸೇನೆಯ ಕಠಿಣ ತರಬೇತಿಯನ್ನು ಮುಗಿಸಿ ಇಂದೂರಿನ ಡೆಲಿ ಕೆಡೆಟ್ ಕಾಲೇಜಿನಲ್ಲಿ ಸೈನ್ಯಕ್ಕೆ ನಿಯುಕ್ತರಾದ ಭಾರತೀಯ ಅಧಿಕಾರಿಗಳ ಮೊದಲ ವರ್ಗಕ್ಕೆ ಸೇರಿಕೊಂಡರು ಮತ್ತು ಮುಂಬಯಿಯಲ್ಲಿದ್ದ ಕರ್ನಾಟಿಕ್ ಪದಾತಿದಳಕ್ಕೆ ನಿಯುಕ್ತಿಗೊಂಡರು.
ಸ್ವಾತಂತ್ರ್ಯಾನಂತರ ಕಾರ್ಯಪ್ಪನವರಿಗೆ ಮೇಜರ್ ಜನರಲ್ ಪದವಿಯನ್ನಿತ್ತು ಭಾರತೀಯ ಸೈನ್ಯದ ಉಪದಂಡನಾಯಕರನ್ನಾಗಿ ಮಾಡಲಾಯಿತು. ಬಳಿಕ ಲೆಫ್ಟಿನೆಂಟ್ ಜನರಲ್ ಎಂದು ಪದೋನ್ನತಿ ಮಾಡಿದಾಗ ಇವರು ಪೂರ್ವ ಸೈನ್ಯದ ಕಮಾಂಡರ್(Eastern Army Commander) ಆದರು. ೧೯೪೭ರಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ಪ್ರಾರಂಭವಾದಾಗ ಇವರನ್ನು ಪಶ್ಚಿಮ ಸೈನ್ಯದ ಮುಖ್ಯ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಝಿಲಾ, ದ್ರಾಸ್ ಮತ್ತು ಕಾರ್ಗಿಲನ್ನು ಹಿಂತಿರುಗಿ ಪಡೆಯುವದಕ್ಕೆ ಸೈನ್ಯಕ್ಕೆ ಕಾರ್ಯಪ್ಪನವರು ಮಾರ್ಗದರ್ಶನ ಮಾಡಿದರು. ಅಲ್ಲದೆ, ಲೆಹ್‌ಗೆ ಕಡಿದು ಹೋಗಿದ್ದ ಸಂಪರ್ಕವನ್ನು ಮಾಡಿಕೊಟ್ಟರು. ೧೯೪೯ರ ಜನವರಿ ೧೫ರಂದು ಜನರಲ್ ಆಗಿ ಬಡ್ತಿಯನ್ನು ಪಡೆದ ಕಾರ್ಯಪ್ಪನವರು ಭಾರತೀಯ ಸೈನ್ಯದ ಅತಿ ವರಿಷ್ಠ ನಾಯಕ(Commander-in-Chief)ರಾದರು.
ಭಾರತೀಯ ಸೈನ್ಯದಲ್ಲಿ ಕಾರ್ಯಪ್ಪನವರ ಸೇವೆ ಅಖಂಡವಾಗಿ ೨೯ವರ್ಷಗಳವರೆಗೆ ನಡೆಯಿತು. ೧೯೫೩ನೇ ಇಸವಿಯಲ್ಲಿ ಅವರು ಸೈನ್ಯದಿಂದ ನಿವೃತ್ತರಾದರು. ಆ ಬಳಿಕ ೧೯೫೬ರವರೆಗೆ ಆಸ್ಟ್ರೇಲಿಯಾ ಮತ್ತು ನ್ಯೂಜೀಲ್ಯಾಂಡ್‌ ದೇಶಗಳ ಹೈ ಕಮಿಶನರ್ ಆಗಿದ್ದರು. ಅವರು ಬಹಳ ದೇಶಗಳ ಸೈನ್ಯಗಳ ಪುನಾರಚನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದವರು. ಪ್ರಪಂಚವನ್ನೆಲ್ಲಾ ಸುತ್ತಿ ಬಂದ ಅನುಭವಿ. ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಹ್ಯಾರಿ ಟ್ರುಮನ್ ಇವರಿಗೆ ‘Order of the Chief Commander of the Legion of Merit’ ಬಿರುದನ್ನಿತ್ತರು. ನಮ್ಮ ಭಾರತ ಸರ್ಕಾರ ೧೯೮೬ನೇ ಇಸವಿ ಜನವರಿ ೧೪ರಂದು ಫೀಲ್ಡ್ ಮಾರ್ಷಲ್ ಪದವಿಯನ್ನು ಕೊಟ್ಟಾಗ ಅವರಿಗೆ ೮೭ ವರ್ಷ ಪ್ರಾಯವಾಗಿತ್ತು.
ಮೊದಲ ವಿಶ್ವ ಯುದ್ಧದ ನಂತರದ ದಿನಗಳಲ್ಲಿ ಸೈನ್ಯವನ್ನೂ ಸೇರಿಸಿ, ದೇಶದ ಎಷ್ಟೆಲ್ಲೋ ಸಂಸ್ಥೆಗಳಿಗೆ ಭಾರತೀಯರಿಗೆ ಪ್ರವೇಶವಿರುತ್ತಿರಲಿಲ್ಲ. ಅಂತಹ ಕಡೆಗಳಲೆಲ್ಲಾ ಛಲದಿಂದ ಮತ್ತು ದೃಢ ಪ್ರಯತ್ನದಿಂದ ಕಾರ್ಯಪ್ಪನವರು ಪ್ರವೇಶವನ್ನು ಪಡೆದ ಮೊದಲ ಭಾರತೀಯರಾಗಿದ್ದರು. ಹೀಗೆ ಭಾರತೀಯ ಬ್ರಿಟಿಷ್ ಸೈನ್ಯವನ್ನು ಸೇರಿದ ಬಳಿಕ ಕಾರ್ಯಪ್ಪನವರು ಆಂಗ್ಲ ಸೈನ್ಯಾಧಿಕಾರಿಗಳು ಮತ್ತವರ ಕುಟುಂಬಗಳೊಡನೆಯೂ ಬಹು ಆಪ್ತರಾಗಿದ್ದು, ಆ ವಲಯಗಳಲ್ಲಿ “ಕಿಪ್ಪರ್” (Kipper) ಎಂಬ ಹೆಸರಿನಲ್ಲಿ ಜನಪ್ರಿಯರಾಗಿದ್ದರು.
‘ದೇಶಕ್ಕಾಗಿ ತಾನು ಸತ್ತರೆ, ತನ್ನ ಸಂಸಾರವನ್ನು ದೇಶವು ಚೆನ್ನಾಗಿ ನೋಡಿಕೊಳ್ಳುತ್ತದೆ. ತಾನು ನಿವೃತ್ತನಾದ ನಂತರವೂ ಸರ್ಕಾರವು ತನ್ನನ್ನು ಕಡೆಗಣಿಸುವದಿಲ್ಲ’ ಎಂಬ ಭರವಸೆ ಸೈನಿಕನಿಗೆ ಬರಬೇಕು ಎಂಬುದು ಕಾರ್ಯಪ್ಪನವರ ನಿಲುವಾಗಿತ್ತು. ತಮ್ಮ ಸ್ನೇಹಿತರ ನೆರವಿನಿಂದ ಧನಸಂಗ್ರಹಿಸಿದ ಕಾರ್ಯಪ್ಪನವರು, ಪಾಟಿಯಾಲದ ಮಹಾರಾಜರು ದಾನವಿತ್ತ ಅರಮನೆಯನ್ನು ವೃದ್ಧ ಯೋಧರ ನಿವಾಸವನ್ನಾಗಿ ಪರಿವರ್ತಿಸಿದರು. ಸಿಯೆಟ್ ಕಂಪೆನಿಯವರು ಬೆಂಗಳೂರಿನಲ್ಲಿ ‘ಜನರಲ್ ಕಾರ್ಯಪ್ಪ ಭವನ’ವೆಂಬ ದೊಡ್ಡ ಕಟ್ಟಡವನ್ನು ಕಟ್ಟಿಸಿಕೊಟ್ಟರು. ಕಾರ್ಯಪ್ಪನವರು ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿಗೆ ಬಹಳಷ್ಟು ದುಡಿದರು. ೧೯೬೪ರಲ್ಲಿ ‘ಭಾರತೀಯ ಭೂತಪೂರ್ವ ಸೈನಿಕ ಸಂಘ’ವನ್ನು (Indian Ex-services League) ಜನರಲ್ ತಿಮ್ಮಯ್ಯನವರೊಡನೆ ಸ್ಥಾಪಿಸಿದರು. “ರಕ್ಷಣಾಬಲಗಳ ಸ್ಥೈರ್ಯ ಉಳಿದು ಬರಬೇಕಾದರೆ, ನಿವೃತ್ತ ಯೋಧರ ಸ್ಥೈರ್ಯವನ್ನು ಮರೆಯಬೇಡಿರಿ,” ಎಂಬ ಕಾರ್ಯಪ್ಪನವರ ಮಾತು ಎಷ್ಟೊಂದು ಅರ್ಥಗರ್ಭಿತ!
ಯುದ್ಧದ ಸಮಯದಲ್ಲಿ ಮುಂಚೂಣಿಯಲ್ಲಿ ತಾವೂ ಇದ್ದು ಸೈನಿಕರಲ್ಲಿ ಮನಃಸ್ಥೈರ್ಯವನ್ನು ತುಂಬಿಸುತ್ತಿದ್ದ ಕಾರ್ಯಪ್ಪನವರು, “ಯುದ್ಧವೆಂದರೆ ಏನೆಂದು ಸೈನಿಕರು ತಿಳಿದಿರುತ್ತಾರೆಯೇ ಹೊರತು ಯುದ್ಧವನ್ನು ನಿರ್ಮಿಸುವ ರಾಜಕಾರಿಣಿಗಳಲ್ಲ” ಎಂದೆನ್ನುತ್ತಿದ್ದರು, ಕಾರ್ಯಪ್ಪನವರು. “ಆಧುನಿಕ ಯುದ್ಧನೀತಿಯಲ್ಲಿ ದೊಡ್ಡ ಸೈನ್ಯಬಲವಲ್ಲ; ಔದ್ಯೋಗಿಕ ಶಕ್ತಿಯ ಬೆಂಬಲ ಮುಖ್ಯವಾದದ್ದು. ಮುಂಚೂಣಿಯಲ್ಲಿ ಸೈನ್ಯ ಇದ್ದಾಗ, ಅದರ ಬೆನ್ನಲ್ಲೇ ಕೈಗಾರಿಕೋದ್ಯಮದ ಆಧಾರ ಅತ್ಯವಶ್ಯ” ಎಂದು ಕಾರ್ಯಪ್ಪನವರ ಪ್ರತಿಪಾದನೆಯಾಗಿತ್ತು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಕೊಡಗಿನ ವೀರ ಯೋಧರು. ಅವರ ದಕ್ಷತೆಯ ಸೇನಾ ಸೇವೆ ಯಾರೂ ಮರೆಯುವಂತಿಲ್ಲ. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನ ಪ್ರಶಸ್ತಿಗೆ ಅವರು ಅರ್ಹರೂ ಕೂಡ. ಅವರಿಗೆ ಈ ಪ್ರಶಸ್ತಿ ಲಭಿಸಿದರೆ ಕನ್ನಡಿಗರು ಪಡೆದ ಮೂರನೇ ಭಾರತರತ್ನ ಪ್ರಶಸ್ತಿಯಾಗಲಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ, ವಿಜ್ಞಾನ ಕ್ಷೇತ್ರದಲ್ಲಿ ಸಿ.ಎನ್.ಆರ್.ರಾವ್ ಭಾರತರತ್ನ ಪ್ರಶಸ್ತಿ ಪಡೆದಿದ್ದಾರೆ. ಕಾರ್ಯಪ್ಪ ಅವರಿಗೆ ಭಾರತರತ್ನ ಪ್ರಶಸ್ತಿ ದೊರೆತರೆ 3ನೇ ಪ್ರಶಸ್ತಿ ಪಡೆದ ಕನ್ನಡಿಗರಾಗುತ್ತಾರೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ದೊರೆಯುವ ಎಲ್ಲಾ ಅರ್ಹತೆ ಇದೆ.
ಕೊನೆಯದಾಗಿ: ಕೊಡಗಿನ ವೀರಯೋಧ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರಿಗೆ ಭಾರತರತ್ನ ಪ್ರಶಸ್ತಿ ಲಭಿಸುವುದೇ…?

0 0 votes
Article Rating
Subscribe
Notify of
guest
0 Comments
Inline Feedbacks
View all comments