ಅಧ್ಯಾತ್ಮ ಆತ್ಮಪ್ರಕಾಶದ "ಕಲ್ಪತರು" ಶ್ರೀರಾಮಕೃಷ್ಣ ಪರಮಹಂಸ

ಅಧ್ಯಾತ್ಮ ಆತ್ಮಪ್ರಕಾಶದ “ಕಲ್ಪತರು” ಶ್ರೀರಾಮಕೃಷ್ಣ ಪರಮಹಂಸ

‘ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳಿದಂತಾಗುವುದೋ’ ಅಂಥ ಜ್ಞಾನವನ್ನು ಪಡೆದವರು ಶ್ರೀ ರಾಮಕೃಷ್ಣ ಪರಮಹಂಸರು. ಜನವರಿ1 ಬಂತೆಂದರೆ, ಇಡೀ ಲೋಕವೆಲ್ಲ ಹೊಸವರ್ಷದ ಸಂಭ್ರಮದಲ್ಲಿರುತ್ತದೆ. ಆದರೆ ಜ.೧ ಪರಮಹಂಸರ ನೆನಪಿನಲ್ಲಿ ನಡೆವ ‘ಕಲ್ಪತರು ದಿನ’ವೂ ಹೌದು. ೧೮೮೬ರ ಜ.೧ರಂದು ಪರಮಹಂಸರು ತಮ್ಮ ಗೃಹಸ್ಥ ಭಕ್ತರಿಗೆಲ್ಲ ಅವರು ಕೇಳಿದ್ದನ್ನೆಲ್ಲ ಕೊಟ್ಟ ದಿನ. ಆದರೆ ಅದು ಸಂಭವಿಸಿದ್ದು ತೀರಾ ಅನಿರೀಕ್ಷಿತ. ಹೀಗಾಗಿಯೇ ಈ ದಿನ ಕೇಳಿದ್ದನ್ನೆಲ್ಲ ಕರುಣಿಸುವ ‘ಕಲ್ಪತರು ದಿನ’ವಾಗಿದೆ. ವಾಸ್ತವವಾಗಿ ಅವರ ಜನ್ಮದಿನ ಫೆಬ್ರವರಿಯಲ್ಲೇ ಇದ್ದರೂ (ಫೆ.೧೮, ೧೮೩೬) ಈಗ ‘ಕಲ್ಪತರು ದಿನ’ವೇ ಮಹತ್ವದ ಆಚರಣೆಯಾಗಿದೆ.
ಭಾರತದ ಬೆನ್ನೆಲುಬಾದ ಧರ್ಮವು ಕುಂಟುತ್ತಿದ್ದ ಕಾಲ. ಮಿಷನರಿಗಳ ಆಕ್ರಮಣ, ಇಂಗ್ಲೀಷ್ ಶಿಕ್ಷಣ ಪಡೆದ ಯುವಕರಿಂದಾಗಿ, ಅನೇಕ ಭಾರತೀಯರು ತಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಸಂಶಯಾತ್ಮಕ ದೃಷ್ಟಿಯಿಂದ ಕಾಣತೊಡಗಿದ್ದರು. ತಮ್ಮ ಧರ್ಮದಲ್ಲಿ ಶ್ರದ್ಧೆಯನ್ನು ಕಳೆದುಕೊಂಡಿದ್ದರು. ಸತತವಾಗಿ ಪರಕೀಯರ ಆಳ್ವಿಕೆಯಿಂದ ಜರ್ಜರಿತವಾಗಿ, ನಾವು ಭಾರತೀಯರು, ಹಿಂದೂಗಳು ಎಂದು ಆತ್ಮವಿಶ್ವಾಸದಿಂದ ಹೇಳಲು ಸಂಕೋಚಪಡುತ್ತಿದ್ದರು. ತಮ್ಮ ಹಿರಿಯರ ಕುರಿತು ಶ್ರದ್ಧಾಹೀನರಾಗಿದ್ದರು. ಅಂತಹ ವಿಷಮ ಪರಿಸ್ಥಿತಿಯಲ್ಲಿ ಅಮೃತ ಕಲಶವೆಂಬಂತೆ ಭಗವಾನ್ ಶ್ರೀರಾಮಕೃಷ್ಣರ ಅವತರಣವಾಯಿತು.

“ರಾಮಕೃಷ್ಣ ಪರಮಹಂಸರು ಪ್ರವರ್ಧಮಾನಕ್ಕೆ ಬರುವ ಮುಂಚಿನ ಕಾಲವಿದೆಯಲ್ಲ, ಅದು ಇಡೀ ಭರತಖಂಡವೇ ಶೋಚನೀಯ ಸ್ಥಿತಿಯಲ್ಲಿದ್ದ ಕಾಲ. ಆಗ ಭಾರತೀಯರು ಉಪನಿಷತ್ತುಗಳಿಂದಲೂ ಮಹರ್ಷಿಗಳಿಂದಲೂ ಆಚಾರ್ಯರಿಂದಲೂ ಪ್ರಣೀತವಾದ ಮಹಾಧರ್ಮದ ಅಂತರಾತ್ಮವನ್ನು ಸಂಪೂರ್ಣವಾಗಿ ಮರೆತು, ಅದರ ಶವದ ಹಂಚಿಕೆಗಾಗಿ ಕಚ್ಚಾಡುತ್ತಿದ್ದರು. ಆರ್ಯ ಧರ್ಮದ ಉದಾರ ಚಿರಜಾಜ್ವಲ್ಯಮಾನವಾಗಿದ್ದ ಪ್ರದೀಪತೆ ಜನರ ಭಾಗದಲ್ಲಿ ನಂದಿಹೋಗಿತ್ತು.” ಎನ್ನುವುದು ನಮ್ಮ ರಾಷ್ಟ್ರಕವಿಯೂ, ಪರಮಹಂಸರ ದಟ್ಟ ಪ್ರಭಾವಕ್ಕೆ ಒಳಗಾಗಿದ್ದವರೂ ಆದ ಕುವೆಂಪು ಅವರ ಮನಮಿಡಿಯುವ ಮಾತು. ಇಂಥ ಕಾಲದಲ್ಲಿ ನಮ್ಮ ಹುಡುಗ-ಹುಡುಗಿಯರಿಗೆ ಯೂರೋಪಿನಿಂದ ಬಂದಿದ್ದೆಲ್ಲ ಶಂಖದಿಂದ ಬಂದ ತೀರ್ಥದಂತೆ ಕಂಡಿದ್ದು ಸಹಜವಾಗಿತ್ತು.
ರಾಮಕೃಷ್ಣ ಪರಮಹಂಸರು ಹಿಂದೂಧರ್ಮದ ವಿವಿಧ ಮತಗಳಾದ ಶಾಕ್ತ, ವೈಷ್ಣವ, ತಂತ್ರ ಮುಂತಾದ ಮತಗಳ ಸಾಧನೆ ಮಾಡಿ ದೇವರ ದರ್ಶನವನ್ನು ಪಡೆದರು. ಶಾಸ್ತ್ರಗಳು ಬರಿಯ ಪುಸ್ತಕಗಳು, ಬೌದ್ಧಿಕ ವಿಚಾರಗಳಲ್ಲದೆ, ಋಷಿಮುನಿಗಳ ಅನುಭವಗಳು, ಅವು ಸತ್ಯ ಎಂದು ನಮಗೆ ಹಾಗೂ ವಿಶ್ವಕ್ಕೆ ಮನಗಾಣಿಸಿದರು. ಧರ್ಮ-ಅಧ್ಯಾತ್ಮಗಳಿಗೆ ತಮ್ಮ ಸಾಧನೆ-ತಪಸ್ಸಿನಿಂದ ನವಚೇತನವನ್ನು ತುಂಬಿದರು. ಅನ್ಯದೇಶದ ಧರ್ಮಗಳ ಸಾಧನೆಯನ್ನು ಮಾಡಿದರು ಶ್ರೀರಾಮಕೃಷ್ಣರು. ವಿವಿಧ ಕಠೋರ ಸಾಧನೆಗಳನ್ನು ಮಾಡಿ, ತಪಸ್ಸಿನ ಫಲವನ್ನು, ತಾವು ಕಂಡ ಸತ್ಯವನ್ನು ಆಧ್ಯಾತ್ಮಿಕ ಪಿಪಾಸುಗಳಿಗೆ ಉಣಬಡಿಸಿದರು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಯಾರು ಏನೇ ಹೇಳಲಿ, ಪರಮಹಂಸರು ಭಾರತೀಯ ಅಧ್ಯಾತ್ಮ ಪರಂಪರೆಯ ಅತಿ ವಿಶಿಷ್ಟ ಸೃಷ್ಟಿ. ಹೊಸಕಾಲದ ಶಿಕ್ಷಣ ಒಗ್ಗದಿದ್ದಾಗ ಅವರು ಜೀವನೋಪಾಯಕ್ಕಾಗಿ ಅರ್ಚಕರಾದರು. ಆದರೆ ಅಲ್ಲಿ ಅವರು ಹೊರಟಿದ್ದು ಪರಮಸತ್ಯದ ಶೋಧನೆಗೆ; ಇದಕ್ಕೆ ಅವರ ಅಂತರಂಗವೇ ಪ್ರಯೋಗಶಾಲೆ. ಅಂತಿಮವಾಗಿ ಅವರು ‘ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳಿದಂತಾಗುವುದೋ’ ಅಂಥ ಜ್ಞಾನವನ್ನು ಪಡೆದರು. ಇಷ್ಟೇ ಅಲ್ಲ, ಒಂದು ಇಡೀ ಯುಗ ಚಲಿಸುತ್ತಿದ್ದ ದಿಕ್ಕನ್ನೇ ಬದಲಿಸಿದರು; ಆ ಯುಗ ಬೆಳೆಸುತ್ತಿದ್ದ ಚಿಂತನೆಯನ್ನೇ ಬುಡಮೇಲು ಮಾಡಿದರು. ಭಕ್ತಿ, ಶ್ರದ್ಧೆ, ವ್ಯಾಕುಲತೆ ಇದ್ದರೆ ಎಲ್ಲವನ್ನೂ ಪಡೆಯಬಲ್ಲಿರಿ ಎಂದು ಸಾಧಿಸಿ ತೋರಿಸಿದರು. ಹೀಗಾಗಿಯೇ ಪರಮಹಂಸರು ನಿಜಾರ್ಥದಲ್ಲಿ ಯುಗಾವತಾರಿ.
ಬೆಳಗ್ಗೆ-ರಾತ್ರಿಯೆನ್ನದೆ ಬಂದು ನೂರಾರು ಭಕ್ತರಿಗೆ ಪ್ರತಿನಿತ್ಯ ಮಾರ್ಗದರ್ಶನ ನೀಡಿದವರು ಶ್ರೀ ರಾಮಕೃಷ್ಣ ಪರಮಹಂಸರು. ಅವರಿಗೆ ಮಂತ್ರೋಪದೇಶದ ಅನುಗ್ರಹ ಮಾಡಿದರು, ಭಕ್ತರ ಪಾಪಗಳನ್ನು ಸ್ವೀಕರಿಸಿದರು. ಪ್ರತಿಫಲವಾಗಿ ಅವರಿಗೆ ಗಂಟಲಿನಲ್ಲಿ ನೋವು ಕಾಣಲಾರಂಭಿಸಿತು. ವೈದ್ಯರು ಹೆಚ್ಚು ಮಾತನಾಡದಿರಲು ತಿಳಿಸಿದರು. ಭಕ್ತರು ಅವರ ಕಾಲುಗಳನ್ನು ಮುಟ್ಟಿ ನಮಸ್ಕಾರವನ್ನು ಮಾಡದಿದ್ದರೆ ಒಳಿತು ಎಂದು ವೈದ್ಯರು ನಿರ್ದೇಶನ ನೀಡಿದ್ದರು. ಆದರೆ ಶ್ರೀರಾಮಕೃಷ್ಣರು ʼನನ್ನಿಂದ ಒಬ್ಬ ವ್ಯಕ್ತಿಗೆ ಮುಕ್ತಿ ಸಿಗುವುದಾದರೆ, ಒಳ್ಳೆಯದಾಗುವುದಾದರೆ ಎಷ್ಟು ಜನ್ಮಗಳನ್ನು ಬೇಕಾದರೂ ಎತ್ತಿ ಬರುವೆ’ ಎಂದರು. ವ್ಯಭಿಚಾರಿ, ಕಳ್ಳ, ಬಡವ, ಶ್ರೀಮಂತ, ಕುಡುಕ ಎಂಬ ಭೇದಭಾವ ಮಾಡದೆ ಪ್ರತಿಯೊಬ್ಬ ಜೀವಿಗೂ ಅವರಿಗೆ ಬೇಕಾಗುವ ರೀತಿಯಲ್ಲಿ ನೆರವನ್ನು ನೀಡಿದರು. ಅವರ ಗಂಟಲುನೋವು ದಿನೇದಿನೆ ಹೆಚ್ಚಾಗುತ್ತಾ ಬಂದಿತು. ವೈದ್ಯಕೀಯ ತಪಾಸಣೆಗೆ ಅನುಕೂಲವಾಗಲೆಂದು ದಕ್ಷಿಣೇಶ್ವರದಿಂದ ಕಲ್ಕತ್ತೆಯ ಕಾಶೀಪುರದಲ್ಲಿದ್ದ ಒಂದು ಮನೆಗೆ ಶ್ರೀರಾಮಕೃಷ್ಣರನ್ನು ಕರೆತಂದರು. ಭಕ್ತರು ಹಗಲು-ರಾತ್ರಿ ಶ್ರದ್ಧೆಯಿಂದ ಸೇವೆ ಮಾಡುತ್ತಿದ್ದರು. ಗಂಟಲುನೋವಿನಿಂದ ಆಹಾರ ಸೇವಿಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಕ್ರಮೇಣ ಅವರ ಶರೀರವು ಕೃಶಗೊಂಡಿತು. ಅಂತಹ ಅನಾರೋಗ್ಯದ ಸಮಯದಲ್ಲೂ ಬಂದ ಭಕ್ತರಿಗೆ ಕೃಪೆಗೈಯುತ್ತಿದ್ದರು.

೧೮೮೬ರ ಜ.೧ ಪರಮಹಂಸರ ಆತ್ಮಪ್ರಕಾಶದ ದಿನ. ಅವತ್ತು ಅವರು ತಮ್ಮ ನಿಜಸ್ವರೂಪವನ್ನು ಪ್ರಕಟಿಸಿದರು. ಗುರುಕರುಣೆ, ಪತಿತ ಪಾವನರೆಂದು ತಾರತಮ್ಯ ಮಾಡದೆ ಪ್ರತಿಯೊಬ್ಬರಿಗೂ ಪರಮಾನುಗ್ರಹ ನೀಡಿದ ಅಪರೂಪದ ಸಂದರ್ಭವಿದು. ಇದರ ನೆನಪಿಗೆ ಅವರ ಶಿಷ್ಯರಲ್ಲಿ ಒಬ್ಬರಾದ ರಾಮಚಂದ್ರ ದತ್ತ ಮೊದಲಿಗೆ “ಕಲ್ಪತರು ದಿನ”ದ ಆಚರಣೆ ಆರಂಭಿಸಿದ. ಈಗ ಅದು ಬೃಹದಾಚರಣೆಯಾಗಿ ಬೆಳೆದಿದೆ. ರಾಮಕೃಷ್ಣರು ತಮ್ಮ ಈ ದಿವ್ಯತ್ವವನ್ನು ತೋರಿದ ಕಾಶೀಪುರದ ಉದ್ಯಾನದಲ್ಲಂತೂ ಈ ದಿವಸ ಬಂತೆಂದರೆ, ಲಕ್ಷಾಂತರ ಜನ ಸೇರುತ್ತಾರೆ. ಈಗ ಅಲ್ಲೊಂದು ರಾಮಕೃಷ್ಣ ಮಠವೂ ಇದೆ.
ಯಾವಾಗ ಎಲ್ಲೆಲ್ಲಿ ಧರ್ಮದ ಅವನತಿಯುಂಟಾಗುತ್ತದೆಯೋ ಮತ್ತು ಅಧರ್ಮವು ಹೆಚ್ಚುತ್ತದೆಯೋ ಅಂತಹ ಸಮಯದಲ್ಲಿ ನಾನೇ ಮತ್ತೆ ಅವತಾರ ಮಾಡುತ್ತೇನೆ’ ಎನ್ನುತ್ತಾನೆ ಭಗವಾನ್ ಶ್ರೀಕೃಷ್ಣ. ಕಲಿಯುಗದಲ್ಲಿ 19ನೆಯ ಶತಮಾನದಲ್ಲಿ ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ಜನ್ಮವೆತ್ತಿ ಧರ್ಮವನ್ನು ರಕ್ಷಿಸಿದರು. ಅವರ ಅವತಾರಕಾರ್ಯದಲ್ಲಿ ಕಲ್ಪತರುವಾಗಿ, (ಬೇಡಿದ್ದನ್ನು ಕೊಡುವುದು ಎಂದು) ಭಕ್ತರ ಮನೋಕಾಮನೆಗಳನ್ನು, ಆಧ್ಯಾತ್ಮಿಕ ಜಾಗೃತಿಯನ್ನು ಸಾರ್ವತ್ರಿಕವಾಗಿ ಕರುಣಿಸಿದ ಸುದಿನ, ಪುಣ್ಯದಿನ 1886ರ ಜನವರಿ 1. ಶ್ರೀರಾಮಕೃಷ್ಣ ಪರಮಹಂಸರೆಂದರೆ ಜೀವನದ ಗಾಢಾತಿಗಾಢವೂ ಗೂಢಾತಿಗೂಢವೂ ಆದ ಸಂಗತಿಗಳನ್ನು ವಿಸ್ಮಯದಿಂದಲೂ ತೀವ್ರ ಸಾಧನೆಗಳಿಂದಲೂ ಅರಿತುಕೊಳ್ಳುವ ದಾರಿ ತೋರಿಸಿದ ಮಹಾಚೇತನ. ಅವರದು ಕಂದಾಚಾರದ ಮಾರ್ಗವಲ್ಲ, ನಿಜವಾದ ಅಧ್ಯಾತ್ಮದ ಹಾದಿ.

✍. ಕಾನತ್ತಿಲ್ ರಾಣಿ ಅರುಣ್

admin

0 0 votes
Article Rating
Subscribe
Notify of
guest
0 Comments
Inline Feedbacks
View all comments