ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು

ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು

ಜೂನ್‌ 5 ವಿಶ್ವ ಪರಿಸರ ದಿನ ವಿಶೇಷ ಲೇಖನ:

ಪರಿಸರ ಮಾಲಿನ್ಯವನ್ನು ಸಂಪೂರ್ಣವಾಗಿ ನಿವಾರಿಸಿ, ಸುಂದರವಾದ ಭೂಮಿಯನ್ನು ಸಮಗ್ರ ಹಿತಾಸಕ್ತಿಯ ರಕ್ಷಣೆಗಾಗಿ ರೂಪಿಸಲು ಈ ವಿಶ್ವ ಪರಿಸರ ದಿನ ಆಚರಣೆಯು ಪ್ರೇರೇಪಿಸುತ್ತದೆ.

ವಿಶ್ವ ಪರಿಸರ ದಿನಾಚರಣೆ ಯನ್ನು 1972 ರಲ್ಲಿ ಯು.ಎನ್. ಜನರಲ್ ಅಸೆಂಬ್ಲಿಯಿಂದ ಮಾನವ ಪರಿಸರಕ್ಕೆ ಸಂಬಂಧಿಸಿದ ಸ್ಟಾಕ್ಹೋಮ್ ಸಮ್ಮೇಳನದ ಮೊದಲ ದಿನದಂದು ಸ್ಥಾಪಿಸಲಾಯಿತು, ಇದರ ಪರಿಣಾಮವಾಗಿ ಮಾನವ ಸಂವಹನ ಮತ್ತು ವಾತಾವರಣದ ಏಕೀಕರಣದ ಬಗ್ಗೆ ಚರ್ಚೆಗಳು ನಡೆದವು. ಎರಡು ವರ್ಷಗಳ ನಂತರ, 1974 ರಲ್ಲಿ “ವೆನ್ ಒನ್ ಅರ್ಥ್” ಎಂಬ ಥೀಮ್‌ನೋಂದಿಗೆ ಮೊದಲ ನಡೆಯಿತು. 1974 ರಿಂದ ಆಚರಣೆಯನ್ನು ವಾರ್ಷಿಕವಾಗಿ ನಡೆಸಲಾಗಿದ್ದರೂ, 1987 ರಲ್ಲಿ ವಿವಿಧ ಆತಿಥೇಯ ರಾಷ್ಟ್ರಗಳು ಆಯ್ಕೆ ಮಾಡುವ ಮೂಲಕ ಈ ಚಟುವಟಿಕೆಯ ಕೇಂದ್ರವನ್ನು ತಿರುಗಿಸುವ ಉದ್ದೇಶವು ಪ್ರಾರಂಭವಾಯಿತು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ವಿಶ್ವದಲ್ಲಿ ಮನುಷ್ಯ ಜೀವಿ ಏಕಾಂಗಿಯಲ್ಲ, ಈ ಸೃಷ್ಟಿ ಮನುಷ್ಯನ ಸ್ವತ್ತು ಅಲ್ಲವೇ ಅಲ್ಲಾ, ನಮ್ಮ ಸುತ್ತ-ಮುತ್ತ ಪ್ರಾಣಿ-ಪಕ್ಷಿ, ಕಾಡು ಮರ, ಬೆಟ್ಟ-ಗುಡ್ಡಗಳು, ಕ್ರೀಮಿ ಕೀಟ ನದಿ, ಹಳ್ಳ-ಕೊಳ್ಳ ಸರೋವರ, ಸಮುದ್ರ ಸಾಗರ, ಗಾಳಿ, ಮಳೆ, ನೀರು, ಮಣ್ಣು ಕಲ್ಲು, ಆಕಾಶ ಬೆಳಕು ಇವೆಲ್ಲವುಗಳು ಇವೆ. ಇವುಗಳೆಲ್ಲವನ್ನು ಒಳಗೊಂಡ ಸಮೂಹವೇ ಪರಿಸರ ಎನ್ನಬಹುದು.

ನಾವು ವಾಸಿಸುತ್ತಿರುವ ಸುತ್ತ ಮುತ್ತಲಿನ ವಾತಾವರಣವೇ ನಮ್ಮ ಪರಿಸರ. ಇದು ಮಾನವನ ಸಾಮಾಜಿಕ, ಮಾನಸಿಕ, ದೈಹಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಸ್ವಚ್ಛವಾಗಿರಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ. ಆದರೆ ಅದು ನಮ್ಮಿಂದ ಸಾಧ್ಯವಾಗದೆ ಹೋಗುತ್ತಿರುವುದು ಒಂದು ಶೋಚನೀಯ ಸಂಗತಿ. ಇಂದಿನ ದಿನಗಳಲ್ಲಿ ನಾವು ಎದುರಿಸುತ್ತಿರುವ ಮೂರು ಮುಖ್ಯವಾದ ಪರಿಸರ ಮಾಲಿನ್ಯಗಳೆಂದರೆ ವಾಯು ಮಾಲಿನ್ಯ, ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ.

ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ, ವಿಜ್ಞಾನ, ತಂತ್ರಜ್ಞಾನದ‌ ಅಭಿವೃದ್ಧಿ ಎಂಬ ಹತ್ತು ಹಲವು ಕಾರಣಗಳಿಂದ ಇಂದು ಪರಿಸರಕ್ಕೆ ತೀವ್ರ ಧಕ್ಕೆಯುಂಟಾಗಿದ್ದು, ಪರಿಸರವನ್ನು ರಕ್ಷಿಸುವ, ಸಂರಕ್ಷಿಸುವ ಕರ್ತವ್ಯ ಪ್ರತಿಯೊಬ್ಬರದೂ ಆಗಿದ್ದು, ಈ ಕರ್ತವ್ಯವನ್ನು ನಮಗೆಲ್ಲರಿಗೂ ನೆನಪಿಸುವ ಮಹತ್ವದ ಉದ್ದೇಶ ಕೂಡಾ ಈ ಪರಿಸರ ದಿನಾಚರಣೆಯಲ್ಲಿ ಅಡಗಿದೆ. ಪರಿಸರ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮ ಮೇಲೆ ಪರಿಸರ ಸಂರಕ್ಷಣೆಯ ಜವಾಬ್ದಾರಿ ತುಸು ಹೆಚ್ಚಾಗಿಯೇ ಇದೆ. ಇಂದಿನ ಪರಿಸರ ಮಾಲಿನ್ಯದ ಗೂಡಾಗಿದ್ದು, ನಮ್ಮ ಇರುವಿಕೆಗೆ ಅರ್ಥ ನೀಡಿದ ಪರಿಸರ ಮಾತೆಯನ್ನು ನಾವು, ನಮ್ಮ ಕಾರ್ಯಗಳಿಂದ ಕಲುಷಿತಗೊಳಿಸಿ, ಅದರ ದುಷ್ಪರಿಣಾಮಗಳನ್ನು ಈಗಾಗಲೇ ಎದುರಿಸುತ್ತಿದ್ದೇವೆ.

ನಿಸರ್ಗದ ಜೊತೆ ಸಮಾನ್ಯ ಜೀವಿಯಂತೆ ಬೆರೆತು ಬಾಳಬೇಕಾದ ಮಾನವ ಅಭಿವೃದ್ದಿ ಎನ್ನುವ ಮಾನದಂಡದಿಂದ ಸಂಪೂರ್ಣ ಕುರುಡಾಗಿದ್ದಾನೆ. ತನ್ನ ಸ್ವಾರ್ಥ ಬದುಕಿಗಾಗಿ ಇಂದು ಪರಿಸರ ನಾಶಮಾಡುತ್ತಿರುವುದರಿಂದ ವನ್ಯ ಜೀವಸಂಕುಲಗಳ ನಾಶ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನುಷ್ಯ ತಾನು ಸಕಲ ಜೀವ ಸಂಕುಲಗಳಂತೆ ಒಂದು ಜೀವಿ ಎನ್ನುವುದನ್ನು ಮರೆತು ಇಡೀ ಜೀವ ಸಂಕುಲ, ಅರಣ್ಯ ಸಂಪತ್ತನ್ನು ನಾಶ ಮಾಡಲು ಹೊರಟಿದ್ದಾನೆ. ನೈಸರ್ಗಿಕ ಪ್ರದೇಶಗಳನ್ನು ಹಾಗೂ ಅಳಿವಿನಂಚಿನಲ್ಲಿರುವ ಜೀವ ಸಂಕುಲವನ್ನು ರಕ್ಷಿಸಿ ಉಳಿಸಬೇಕಾದ ಮನುಷ್ಯನೇ ಇಂದು ಅಧಿಕಾರ ಮತ್ತು ಸಂಪತ್ತಿನ ಆಸೆ ಆಮಿಷಗಳಿಗೆ ಬಲಿಯಾಗಿ ಪರಿಸರ ನಾಶಕ್ಕೆ ಮುಂದಾಗಿರುವುದು ದುರಾದೃಷ್ಟಕರ ಸಂಗತಿ.

ಜೂನ್ ತಿಂಗಳಿಗೆ ಒಂದು ವಿಶೇಷತೆ ಇದೆ. ಇದು ವಿಶ್ವ ಪರಿಸರ ದಿನಾಚರಣೆಯ ತಿಂಗಳು. ಇದು ನಾವು ನಮ್ಮ‌ ಪರಿಸರದ ಬಗ್ಗೆ ತಿಳಿಯುವ, ಮಹತ್ವವನ್ನು ಅರಿಯುವ ಹಾಗೂ ಈ ದಿನಗಳಲ್ಲಿ ನಮ್ಮ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅರಿತು, ಅದರ ಸಂರಕ್ಷಣೆಯ ಬಗ್ಗೆಯೂ ಆಲೋಚಿಸಬೇಕಾದದ್ದನ್ನು ನೆನಪಿಸುವ ಮಹತ್ತರವಾದ ದಿನ. ಪರಿಸರವಿಲ್ಲದೆ ನಮ್ಮ ಅಸ್ತಿತ್ವಕ್ಕೆ ಯಾವುದೇ ರೀತಿಯ ಬೆಲೆಯಿರುವುದಿಲ್ಲ. ಪುರಾಣ ಕಾಲದಿಂದಲೂ ರಾಜಕುಮಾರರೂ ಋಷಿಗಳ ಆಶ್ರಮದಲ್ಲಿಯೇ ಇದ್ದುಕೊಂಡೇ ಈ ಸಹಜ ಪ್ರಕೃತಿಯ ಮಡಿಲಲ್ಲಿಯೇ ವಿದ್ಯೆ ಕಲಿತರು. ಪರಿಸರವನ್ನು ಕಾಪಾಡಿಕೊಳ್ಳುವುದರ ಮಹತ್ವವನ್ನು ಅರಿತರು. ಇಂದೂ ಕೂಡ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯಬೇಕಾದ ಅವಶ್ಯಕತೆ, ಅನಿವಾರ್ಯತೆ ಎರಡೂ ಇದೆ.

ಜಾಗತಿಕ ಮಟ್ಟದಲ್ಲಿ ಸುಮಾರು ನೂರಕ್ಕಿಂತ ಹೆಚ್ಚಿನ ರಾಷ್ಟ್ರಗಳು ಜೂನ್ ಐದನ್ನು ಪರಿಸರ ದಿನವನ್ನಾಗಿ ಆಚರಿಸುವುದರಿಂದಲೇ ಇದು ವಿಶ್ವ ಪರಿಸರ ದಿನಾಚರಣೆ ಎನಿಸಿಕೊಂಡಿದೆ. ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಬೇಕು. ಕೇವಲ‌ ವರ್ಷಕ್ಕೆ ಒಂದು ದಿನ ಪರಿಸರ ರಕ್ಷಣೆಯೆಂಬುದು ಸೀಮಿತವಾಗಬಾರದು. ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು. ಏಕೆಂದರೆ ಪರಿಸರ ನಮ್ಮ‌ ಜೀವನದ ಅವಿಭಾಜ್ಯ ಅಂಗ.

ನಮ್ಮ ಸುತ್ತಲಿನ ಪರಿಸರ ನಮ್ಮ ಸಂಪಾದನೆಯಲ್ಲ, ಅದು ನಮಗೆ ಹಿರಿಯರು ನೀಡಿದ ಉಡುಗೊರೆ. ಅದನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ದಾಟಿಸುವುದು ನಮ್ಮ ಕರ್ತವ್ಯ. ಇದರಲ್ಲಿ ವಿಫಲವಾದರೆ ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸುವುದಿಲ್ಲ. ಪರಿಸರದ ರಕ್ಷಣೆಯಲ್ಲಿಯೇ ನಮ್ಮ ರಕ್ಷಣೆ ಇದೆ. ಪ್ರತಿ ವ್ಯಕ್ತಿಯೂ ಸಸಿಗಳನ್ನು ನೆಟ್ಟು ಬೆಳೆಸುವ ಬಗ್ಗೆ ಪ್ರತಿಜ್ಞೆ ಮಾಡಬೇಕು. ಏಕೆಂದರೆ ಪರಿಸರ ಉಳಿದರೆ ಮಾನವ ಇರಲು ಸಾಧ್ಯ. ಇಲ್ಲದಿದ್ದರೆ, ಜೀವಸಂಕುಲವೇ ನಾಶವಾಗಲಿದೆ ಎಂಬುದನ್ನು ಅರಿಯಬೇಕು ಆದ್ದರಿಂದ ಪರಿಸರ ಮಹತ್ವ ಅರಿತು ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಭಾಗಿಯಾಗುವ ಮೂಲಕ, ಪರಿಸರವು ಪ್ರತಿದಿನದ ಪ್ರತಿಯೊಬ್ಬರ ಅವಿಭಾಜ್ಯ ಅಂಗವಾಗಬೇಕಾಗಿದೆ.

 

✍. ಕಾನತ್ತಿಲ್ ರಾಣಿ ಅರುಣ್

ಕಾನತ್ತಿಲ್‌ ರಾಣಿ ಅರುಣ್‌

0 0 votes
Article Rating
Subscribe
Notify of
guest
0 Comments
Inline Feedbacks
View all comments