ಅನನಾಸ್

ಅನನಾಸ್

Ananas comosus Fam:Bromiliaceae)

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಬ್ರೇಜಿಲ್ ಮೂಲದ ಅನನಾಸ್ ಹಣ್ಣನ್ನು ಭಾರತದಲ್ಲಿ ಸಾಕಷ್ಟು ಬೆಳೆಯುತ್ತಾರೆ. ಇದು ಉಷ್ಣವಲಯದ ಒಂದು ಪ್ರಮುಖ ಹಣ್ಣಾಗಿದೆ. ವಿಟಮಿನ್ ಎ ಮತ್ತು ಬಿ ಹೆಚ್ಚಾಗಿದ್ದರೂ ವಿಟಮಿನ್ ಸಿ, ಕ್ಯಾಲ್ಸಿಯಂ, ಮೆಗ್ನೇಸಿಯಂ, ಪೊಟಾಸಿಯಂ ಮತ್ತು ಕಬ್ಬಿಣದ ಅಂಶಗಳನ್ನು ಒಳಗೊಂಡಿದೆ. ಇದಲ್ಲದೆ ಬ್ರೊಮಾಲಿನ್ ಎಂಬ ಪಚನಕಾರಿ ಕಿಣ್ವವನ್ನು ಹೊಂದಿದೆ.
ಭಾರತದಲ್ಲಿ ಅನನಾಸ್ ಬೆಳೆಯನ್ನು ಅಧಿಕ ಮಳೆಯಾಗುವ ಮತ್ತು ಆದ್ರ್ರತೆಯುಳ್ಳ ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಹೆಚ್ಚು ಮಳೆ ಬೀಳದ ಒಳನಾಡು ಮತ್ತು ಉತ್ತರ ಈಶಾನ್ಯ ರಾಜ್ಯಗಳಲ್ಲೂ ಅನನಾಸಿನ ಕೃಷಿ ಜನಪ್ರಿಯವಾಗಿದೆ. ಅಧಿಕ ಉಷ್ಣಾಂಶ ಬೆಳೆಗೆ ಒಳ್ಳೆಯದಲ್ಲ. ಸಮುದ್ರ ಮಟ್ಟದಿಂದ 1100 ಮೀ. ಎತ್ತರದ ಪ್ರದೇಶ ಮತ್ತು 100-150 ಸೆ. ಮೀ. ಮಳೆಯಾಗುವ ಪ್ರದೇಶದಲ್ಲೂ ಉತ್ತಮ ಇಳುವರಿಯನ್ನು ಪಡೆಯಬಹುದು. ಮಳೆ ಕಡಿಮೆ ಇರುವೆಡೆ ನೀರಾವರಿ ವ್ಯವಸ್ಥೆ ಹೊಂದಿರಬೇಕು.

ತಳಿಗಳು
ಕ್ಯೂ, ಕ್ವೀನ್ ಮತ್ತು ಮೌರಿಸಿಯಸ್ ಪ್ರಮುಖ ತಳಿಗಳು. ಕ್ಯೂ ತಳಿಯನ್ನು ವಾಣಿಜ್ಯವಾಗಿ ಹೆಚ್ಚಾಗಿ ಬೆಳೆಯುತ್ತಾರೆ. ಸಾಧಾರಣವಾಗಿ ಹಣ್ಣುಗಳು 1.5-2.5 ಕಿಲೋ ತೂಕದಷ್ಟಿದ್ದು ಹಳದಿ ಬಣ್ಣದ್ದಾಗಿರುತ್ತವೆ. ನಾರನ್ನು ಒಳಗೊಂಡಿರುವುದಿಲ್ಲ. ಹಣ್ಣುಗಳನ್ನು ಕ್ಯಾನಿಂಗಿನಲ್ಲಿ ಹೆಚ್ಚಾಗಿ ಬಳಸುತ್ತಾರೆ.
ಕ್ವೀನ್ ತಳಿಯನ್ನು ಹೆಚ್ಚಾಗಿ ಉತ್ತರ ಈಶಾನ್ಯ ರಾಜ್ಯಗಳಾದ ಅಸ್ಸಾಂ, ತ್ರಿಪುರ ಮತ್ತು ಮೇಘಾಲಯಗಳಲ್ಲಿ ಬೆಳೆಯುತ್ತಾರೆ. ಸಣ್ಣಗಾತ್ರದ ಹಣ್ಣಾಗಿದ್ದು 0.8-1.3 ಕಿಲೋದಷ್ಟಿದ್ದು ಕಡುಹಳದಿ ಬಣ್ಣ ಹೊಂದಿದೆ. ತಿರುಳು ಸಹ ಹಳದಿ ಬಣ್ಣದಾಗಿದ್ದು ಕ್ಯೂ ಹಣ್ಣಿಗಿಂತ ಹೆಚ್ಚಿನ ರಸವನ್ನು ಹೊಂದಿದೆ. ರಸವು ಪರಿಮಳದಿಂದ ಕೂಡಿದ್ದು ಸ್ವಾದಭರಿತವಾಗಿದೆ. ಚಿಕ್ಕ ಎಲೆಗಳು ಅತ್ಯಂತ ಹೆಚ್ಚಿನ ಮುಳ್ಳುಗಳನ್ನು ಹೊಂದಿದೆ.
ಮಧ್ಯಮ ಗಾತ್ರದ ಹಣ್ಣಿನ ಮೌರಿಸಿಯಸ್ ತಳಿಯನ್ನು ಕೇರಳದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಕೆಂಪು ಹಳದಿ ಬಣ್ಣದ ಸಾಧಾರಣ ರುಚಿ ಹೊಂದಿದ ಹಣ್ಣು ನಾರನ್ನು ಒಳಗೊಂಡಿದೆ.
ಅನನಾಸನ್ನು ಎಲ್ಲಾ ರೀತಿಯ ಮಣ್ಣಿನಲ್ಲಿ ಬೆಳೆಯಬಹುದಾದರೂ ಮರಳು ಮಿಶ್ರಿತ ಜೇಡಿಮಣ್ಣು ಸೂಕ್ತವಾದುದು. ಜಮೀನನ್ನು 30-40 ಸೆ.ಮೀ ಆಳದವರೆಗೆ ಉಳುಮೆ ಅಥವಾ ಅಗತೆ ಮಾಡಬೇಕು. ಸಾವಯವ ಅಂಶ ಮಣ್ಣಿನಲ್ಲಿ ಕಡಿಮೆ ಇದ್ದರೆ ಒಂದು ಹೆಕ್ಟೇರಿಗೆ 10-15 ಟನ್ ಕೊಟ್ಟಿಗೆ ಗೊಬ್ಬರವನ್ನು ಮಣ್ಣು ಪುಡಿ ಮಾಡುವ ಸಮಯದಲ್ಲಿ ಹರಡಬೇಕು. 22-30 ಸೆ.ಮೀ ಆಳದ 90 ಸೆ.ಮೀ ಅಗಲದ ಪಾತಿಗಳನ್ನು ಮಾಡಬೇಕು. ಪಾತಿಯಿಂದ ಪಾತಿಗೆ 60 ಸೆ.ಮೀ ಅಂತರವಿರಬೇಕು.

ಸಸಿಗಳ ಆಯ್ಕೆ
ಅನನಾಸ್ ಬೇಸಾಯದಲ್ಲಿ ಸಸಿಗಳ ಆಯ್ಕೆ ಅತ್ಯಂತ ಪ್ರಾಮುಖ್ಯವಾದುದು. ಸಸಿಗಳ ಗಾತ್ರ ಮತ್ತು ಮಾದರಿಯಲ್ಲಿ ವ್ಯತ್ಯಾಸವಾದರೆ ಇಳುವರಿಯಲ್ಲಿ ಏರುಪೇರಾಗುತ್ತದೆ. ‘ಸ್ಲಿಪ್’ ಆಯ್ಕೆ ಮಾಡಿದರೆ ಅದರ ತೂಕ 350-400 ಗ್ರಾಂ ಇರಬೇಕು. ‘ಸಕ್ಕರ್ಸ್’ ಗಳಾದರೆ ಅವು 450-500 ಗ್ರಾಂನಷ್ಟಿದ್ದರೆ ಅತ್ಯಂತ ಹುಲುಸಾಗಿ ಬೆಳೆಯುತ್ತದೆ.

ಗಿಡೋಪಚಾರ
ಸಸಿಗಳ ಆಯ್ಕೆ ಮಾಡಿದ ನಂತರ ಗಿಡದ ಬುಡದಲ್ಲಿರುವ ಒಣಗಿದ ಎಲೆಗಳನ್ನು ತೆಗೆಯಬೇಕು. ಹಿಟ್ಟಿನ ತಿಗಣೆ ಮತ್ತು ‘ಹಾರ್ಟ್‍ರಾಟ್’ ತಡೆಗಟ್ಟಲು ಗಿಡಗಳನ್ನು ಇಕಲಾಕ್ಸ್ (0.05%) ಮತ್ತು ಡೈಥೇನ್ ಜೆಡ್-78 (0.2%) ನ ದ್ರಾವಣದಲ್ಲಿ ಅನುಕ್ರಮವಾಗಿ ಅದ್ದಿ ತೆಗೆಯಬೇಕು.

ನಾಟಿ ಸಮಯ
ಕೊಡಗಿನ ಹವಾಮಾನದಲ್ಲಿ ಅನನಾಸ್ ನೈಸರ್ಗಿಕವಾಗಿ ಡಿಸೆಂಬರ್-ಮಾರ್ಚ್ ತಿಂಗಳಿನಲ್ಲಿ ಹೂ ಬಿಡುತ್ತದೆ. ಆದ್ದರಿಂದ ಗಿಡನೆಡಲು ಏಪ್ರಿಲ್-ಮೇ ಅಂದರೆ ಮುಂಗಾರಿಗಿಂತ ಸ್ವಲ್ಪ ಮೊದಲು ಸೂಕ್ತ ಸಮಯ.

ಗಿಡಗಳ ಸಾಂದ್ರತೆ ಮತ್ತು ಅಂತರ
ಕೃಷಿ ಚಟುವಟಿಕೆಗಳ ಅನುಕೂಲಕ್ಕಾಗಿ ಮತ್ತು ಅಧಿಕ ಇಳುವರಿಗಾಗಿ ಹೆಕ್ಟೇರಿಗೆ 43,000-53,000 ಗಿಡ ನೆಡುವುದು ಸೂಕ್ತ. 30-60-90 ಸೆ.ಮೀ. ಅಂತರದಲ್ಲಿ 43,000 ಗಿಡಗಳನ್ನು ನೆಡಬಹುದಾದರೆ, 25-60-90 ಸೆ.ಮೀ. ಅಂತರದಲ್ಲಿ 53,000 ಗಿಡಗಳನ್ನು ನೆಡಬಹುದು. ಇದರಿಂದ ಒಂದು ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 70-100 ಟನ್ನ್ ಇಳುವರಿ ಪಡೆಯಬಹುದು. ಪಾತಿಯಿಂದ ಪಾತಿಯಲ್ಲಿರುವ ಗಿಡಗಳಿಗೆ 90 ಸೆ.ಮೀ. ಅಂತರ ಕಾಪಾಡಬೇಕು.

ಪೋಷಕಾಂಶಗಳ ನಿರ್ವಹಣೆ
ಬೇರುಗಳು ಮೇಲ್ಮಟ್ಟದಲಿರುತ್ತವೆ. ಹಾಗಾಗಿ ಸಾರಜನಕ ಮತ್ತು ಪೊಟಾಷ್‍ನ ಅಗತ್ಯತೆ ಜಾಸ್ತಿಯಿರುತ್ತದೆ. ರಂಜಕ ಇಳುವರಿಯ ಮೇಲೆ ಯಾವ ಪರಿಣಾಮವನ್ನು ಬೀರುವುದಿಲ್ಲವಾದ್ದರಿಂದ ರಂಜಕವನ್ನು ಗಿಡಗಳಿಗೆ ಕೊಡುವ ಅಗತ್ಯತೆಯಿಲ್ಲ. ಯಾವ ಮಣ್ಣಿನಲ್ಲಿ ರಂಜಕದ ಕೊರತೆಯಿದೆಯೋ ಅಲ್ಲಿ ಗಿಡವೊಂದಕ್ಕೆ 4 ಗ್ರಾಂ ರಂಜಕವನ್ನು ನೀಡಬಹುದು. ಸಾರಜನಕ ಮತ್ತು ಪೊಟಾಷನ್ನು ಪ್ರತೀ ಗಿಡಕ್ಕೆ 12 ಗ್ರಾಂ. ನಂತೆ ನೀಡಬೇಕು. ಸಾರಜನಕವನ್ನು 4-6 ಬಾರಿ ವಿಂಗಡಿಸಿ ಕೊಡಬೇಕು. ಪ್ರಥಮವಾಗಿ ಗಿಡನೆಟ್ಟ 2 ತಿಂಗಳ ನಂತರ ಕೊಟ್ಟರೆ ಕೊನೆಯದಾಗಿ ಗಿಡನೆಟ್ಟ 12 ತಿಂಗಳ ನಂತರ ಕೊಡಬೇಕಾಗುತ್ತದೆ. ಆದರೆ ಪೊಟಾಷನ್ನು ಎರಡೇ ಬಾರಿ ಕೊಡಬೇಕಾಗುತ್ತದೆ. ಮೊದಲನೆಯದಾಗಿ ಗಿಡನೆಡುವ ಸಮಯದಲ್ಲಿ ಮತ್ತು ಕೊನೆಯದಾಗಿ ಗಿಡನಟ್ಟ 6 ತಿಂಗಳನಂತರ. ಗೊಬ್ಬರವನ್ನು ಎರಡು ಸಾಲಿನ ಮಧ್ಯೆ ಪಟ್ಟಿಯಂತೆ ಹರಡಬೇಕು.

ಮಣ್ಣು ಕೂಡುವಿಕೆ
ಅನನಾಸಿನ ಗಿಡಗಳ ಬೇರುಗಳು ಮೇಲ್ಮಟ್ಟದಲ್ಲಿರುವುದರಿಂದ ಗಿಡಗಳು ಮಣ್ಣಿನಲ್ಲಿ ಭದ್ರವಾಗಿ ಕುಳಿತಿರುವುದಿಲ್ಲ. ಆದ್ದರಿಂದ ಎರಡು ಪಾತಿಗಳ ನಡುವೆ ಇರುವ ಸ್ಥಳದಿಂದ ಮಣ್ಣನ್ನು ಕೂಡಿಸಬೇಕು. ಇದರಿಂದ ಗಿಡಗಳು ಚೆನ್ನಾಗಿ ಬೆಳೆದು ಉತ್ತಮ ಇಳುವರಿ ಕೊಡುತ್ತವೆ.

ಕಳೆ ನಿರ್ವಹಣೆ
ಪಾತಿ ಮಾಡಿದ ನಂತರ ಕಳೆ ಬೀಜಗಳು ಮೊಳಕಯೊಡೆಯುವುದನ್ನು ತಡೆಯುವ ಕಳೆನಾಶಕಗಳನ್ನು ಬಳಸಬೇಕು. ಇದರಿಂದ ಸುಮಾರು ಮೂರು ತಿಂಗಳಿನವರೆಗೆ ಕಳೆಯನ್ನು ಹತೋಟಿಯಲ್ಲಿಡಬಹುದು. ಒಣಗಿದ ಎಲೆಗಳನ್ನು ಪಾತಿಯಲ್ಲಿ ಹರಡುವುದರಿಂದ ಮಣ್ಣಿನ ತೇವಾಂಶವನ್ನು ಕಾಪಾಡಬಹುದು ಮತ್ತು ಸ್ವಲ್ಪಮಟ್ಟಿಗೆ ಕಳೆಯ ಬೆಳವಣಿಗೆಯನ್ನು ನಿಯಂತ್ರಿಸಬಹುದು. ಎರಡು ಪಾತಿಗಳ ನಡುವೆ ಬೆಳೆಯುವ ಕಳೆಯನ್ನು ಎಚ್ಚರಿಕೆಯಿಂದ ಕಳೆನಾಶಕ ಸಿಂಪಡಣೆ ಮಾಡುವುದರಿಂದ ಹತೋಟಿಯಲ್ಲಿಡಬಹುದು.

ನೀರಾವರಿ
ಮಳೆಯಾದಾರಿತ ಪ್ರದೇಶದಲ್ಲೂ ಬೇಸಿಗೆಯಲ್ಲಿ ಗಿಡಗಳಿಗೆ ನೀರನ್ನು ಒದಗಿಸಬೇಕಾಗುತ್ತದೆ. ಇದು ಗಿಡಗಳ ಬೆಳವಣಿಗೆಗೆ ಸಹಕಾರಿ. ತುಂತುರು ಯಾ ಹನಿ ನೀರಾವರಿ ಉತ್ತಮವೆಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಹೂ ಪ್ರಚೋದಕಗಳ ಬಳಕೆ
10-20 ಪಿಪಿಎಂ ಎನ್‍ಎಎ ಅಥವಾ ಎನ್‍ಎಎ ಯುಕ್ತ ಪ್ಲಾನೋಫಿಕ್ಸ್ ಬಳಕೆಯಿಂದ ಗಿಡವು ಹೂ ಬಿಡುವಂತೆ ಪ್ರಚೋದಿಸಬಹುದು. ಅನಾನುಕೂಲ ಋತುಮಾನದಲ್ಲಿ ಎನ್‍ಎಎ ಬಳಕೆಯಿಂದ ಉತ್ತಮ ಪಲಿತಾಂಶ ಕಂಡು ಬಂದಿಲ್ಲ. ಎಥೆರಾಲ್ 100 ಪಿಪಿಎಂ ಬಳಕೆಯಿಂದ ಕ್ಯೂ ಅನನಾಸ್ ತಳಿಯಲ್ಲಿ ಏಕ ಕಾಲದಲ್ಲಿ ಹೂಗಳು ಕಂಡುಬಂದವು. ಯೂರಿಯ 2%, ಸೋಡಿಯಂ ಕಾರ್ಬೋನೇಟ್ 0.04% ಮಿಶ್ರಣ ಮಾಡುವುದರಿಂದ ಎಥೆರಾಲ್ ಪ್ರಬಲತೆಯನ್ನು 25 ಪಿಪಿಎಂ ಗೆ ಇಳಿಸಬಹುದು. ಪ್ರತೀ ಗಿಡಕ್ಕೆ 50 ಮಿಲಿ ದ್ರಾವಣವನ್ನು ಬಳಸಬೇಕು. ಗಿಡಗಳಲ್ಲಿ 35-40 ಎಲೆಗಳು ಕಂಡುಬಂದಾಗ ಪ್ರಚೋದಕಗಳನ್ನು ಬಳಸಿದರೆ ಗಿಡಗಳಲ್ಲಿ ಸಹಜವಾದ ಹಣ್ಣುಗಳನ್ನು ಪಡೆಯಬಹುದು. ಫಲಬಿಟ್ಟು 2-3 ತಿಂಗಳ ನಂತರ 200-300 ಪಿಪಿಎಂ ಎನ್‍ಎಎ ಬಳಸಿದರೆ ಹಣ್ಣಿನ ಗಾತ್ರ 15-20% ಹೆಚ್ಚಾಗುತ್ತದೆ. ಆಗಾಗ ಗಿಡಗಳ ನೆಡುವಿಕೆ ಮತ್ತು ಹೂ ಪ್ರಚೋದಕಗಳ ಉಪಯೋಗದಿಂದ ವರ್ಷದ ಪ್ರತೀ ತಿಂಗಳು ಹಣ್ಣುಗಳನ್ನು ಪಡೆಯಲು ಸಾಧ್ಯವಿದೆ.

 

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments