ಶನಿವಾರಸಂತೆ: ಮಡಿಕೇರಿ ಕಾಂಗ್ರೆಸ್ ಅಭ್ಯರ್ಥಿ ಬೆಳಿಗ್ಗೆ ಕಾಂಗ್ರೆಸ್, ಸಂಜೆ ಜೆಡಿಎಸ್, ಅವರ ತಂದೆ: ಅರಕಲಗೂಡು ಜೆಡಿಎಸ್ ಅಭ್ಯರ್ಥಿ ಬೆಳಿಗ್ಗೆ ಜೆಡಿಎಸ್, ಸಂಜೆ ಕಾಂಗ್ರೆಸ್, ಇವರು ಈ ಚುನಾವಣೆಯಲ್ಲಿ ಒಂದು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ, ಮುಂದಿನ ಚುನಾವಣೆಯಲ್ಲಿ ಇನ್ನೊಂದು ಕ್ಷೇತ್ರದಿಂದ ಬೇರೊಂದು ಪಕ್ಷದಿಂದ ಸ್ಪರ್ಧಿಸುತ್ತಾರೆ. ಇಂತಹ “ಪಿಕ್ನಿಕ್ ರಾಜಕಾರಣಿಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷೆ ಮಾಡುವಂತಿಲ್ಲ ಎಂದು ಮಡಿಕೇರಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂ. ಪಿ. ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಕೊಡಗಿನ ಜನ ಆಮದು ರಾಜಕಾರಣಿಗಳಿಗೆ ಮಣೆ ಹಾಕುವುದಿಲ್ಲ, ನಾನು ಕೊಡಗಿನ ಅಳಿಯ, ಸೊಸೆ ಎಂದ ಕೂಡಲೇ ಮತ ನೀಡುವುದಿಲ್ಲ. ಇಲ್ಲಿ ಈ ಮಣ್ಣಿನ ಮಕ್ಕಳಿಗಷ್ಟೇ ಪ್ರಾಶಸ್ತ್ಯ. ಆದ್ದರಿಂದ ಈ ಬಾರಿ ಕೂಡ ಕೊಡಗಿನಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಅಪ್ಪಚ್ಚು ರಂಜನ್ ಇಲ್ಲಿಗೆ ಸಮೀಪದ ದುಂಡಳ್ಳಿಯಲ್ಲಿ ಬೂತ್ ಸಭೆಯನ್ನು ಉದ್ದೇಶಸಿ ಮಾತಾನಾಡುತ್ತಾ ಹೇಳಿದರು.
ಅಭಿವೃದ್ದಿ ಕಾಮಗಾರಿಗಳ ಗುಣಮಟ್ಟದ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ ಎಂದ ಅಪ್ಪಚ್ಚು ರಂಜನ್, ಕಾಮಗಾರಿಗಳ ಗುಣಮಟ್ಟವನ್ನು ಇಂದಿಗೂ ಸ್ವತಹ ನಾನೇ ಪರೀಕ್ಷೆ ಮಾಡುತ್ತೇನೆ ಎಂದರು.
ಊರಿನ ಹಕ್ಕಿಗಳನ್ನು ಬಿಟ್ಟು ಊರೂರು ಹಾರುವ ಹಕ್ಕಿಗಳಿಂದ ಯಾವುದೇ ಪ್ರಯೋಜನವಿಲ್ಲ, ಜನಪ್ರತಿನಿಧಿಗಳು ಜನರ ಕೈಗೆಟಕುವಂತಿರಬೇಕು, ಅವರು ಪ್ರತಿನಿಧಿಗಿಂತ ಹೆಚ್ಚು ಜನೋಪಯೋಗಿ ಆಗಿರಬೇಕು ಎಂದರು.