ಮಡಿಕೇರಿ ಏ.26: ವಿಧಾನಸಭಾ ಚುನಾವಣೆ ಸಂಬಂಧ ಈಗಾಗಲೇ 80 ವರ್ಷ ಮೇಲ್ಪಟ್ಟವರು ಅಂಚೆ ಮತಪತ್ರ ಮೂಲಕ ಮತದಾನ ಮಾಡುವಂತಾಗಲು ಗುರುತಿಸಲಾಗಿದ್ದು, ಈ ಸಂಬಂಧ ಏಪ್ರಿಲ್, 29 ರಿಂದ ಮೇ, 06 ರವರೆಗೆ ಮನೆ ಮನೆಗೆ ತೆರಳಿ ಅಂಚೆ ಮತಪತ್ರ ಮೂಲಕ ಮತದಾನ ಮಾಡಿಸುವಂತಾಗಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚಿಸಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ಮತ್ತು ಪೊಲಿಂಗ್ ಅಧಿಕಾರಿಗಳಿಗೆ ಬುಧವಾರ ನಡೆದ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕೊಡಗು ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟವರು 1992 ಮಂದಿ ಅಂಚೆ ಮತಪತ್ರ ಮೂಲಕ ಮತ ಚಲಾಯಿಸಲು ಮುಂದಾಗಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 1,010 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 982 ಮಂದಿ, ಹಾಗೆಯೇ ವಿಕಲಚೇತನರು(ಪಿಡಬ್ಲ್ಯುಡಿ) 482 ಮಂದಿ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 268 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 214 ಮಂದಿ ವಿಕಲಚೇತನರು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲಿದ್ದು, ಒಟ್ಟಾರೆ 2,474 ಮಂದಿ ಅಂಚೆ ಮತಪತ್ರ ಮೂಲಕ (ನಮೂನೆ-12 ಡಿ) ಮತ ಹಕ್ಕು ಚಲಾಯಿಸಲಿದ್ದಾರೆ ಎಂದರು.’
ಸೆಕ್ಟರ್ ಅಧಿಕಾರಿಗಳು ಮತ್ತು ಪೊಲಿಂಗ್ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ನಿಯಮಾನುಸಾರ ಅಂಚೆ ಮತಪತ್ರದ ಮೂಲಕ ಮತದಾನ ಮಾಡಿಸಿಕೊಂಡು ಬರಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಚುನಾವಣಾ ಆಯೋಗದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸ್ವಲ್ಪವೂ ಲೋಪ ಉಂಟಾಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಮಾತನಾಡಿ 80 ವರ್ಷ ಮೇಲ್ಪಟ್ಟ ಮತಗಟ್ಟೆಗೆ ತೆರಳಲು ಸಾಧ್ಯ ಇಲ್ಲದಿರುವವರಿಗೆ ಅಂಚೆ ಮತಪತ್ರವನ್ನು ನೀಡಿ ಮತ ಚಲಾಯಿಸಲು ಅಗತ್ಯ ಕ್ರಮವಹಿಸಬೇಕಿದೆ ಎಂದರು.
ಉಪ ವಿಭಾಗಾಧಿಕಾರಿ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಯತೀಶ್ ಉಲ್ಲಾಳ್ ಅವರು ಪಿಪಿಟಿ ಮೂಲಕ ಮಾಹಿತಿ ನೀಡಿ ಈಗಾಗಲೇ ನಮೂನೆ-12 ಡಿ ಯನ್ನು ಸಂಬಂಧಪಟ್ಟ ಬಿಎಲ್‍ಒಗಳ ಮೂಲಕ ವಿತರಿಸಲು ಕ್ರಮವಹಿಸಲಾಗಿದ್ದು, ಅದರಂತೆ ಅಂಚೆ ಮತಪತ್ರ ಮೂಲಕ ಮತದಾನ ಮಾಡಿಸಿಕೊಂಡು ಬರಬೇಕು ಎಂದರು.
ಪ್ರತಿಯೊಂದು ಮತದಾರರ ಮನೆ ತಲುಪಲು ಅನುಕೂಲವಾಗುವಂತೆ ರೂಟ್ ಮ್ಯಾಪ್ ತಯಾರಿಸಲಾಗಿದ್ದು, ಪ್ರತೀ ಮಾರ್ಗದಲ್ಲಿ ಇಬ್ಬರು ಪೋಲಿಂಗ್ ಅಧಿಕಾರಿಗಳು, ಒಬ್ಬ ಮೈಕ್ರೋ ವೀಕ್ಷಕರು, ಒಬ್ಬ ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬ ವಿಡಿಯೋ ಗ್ರಾಫರನ್ನು ನಿಯೋಜಿಸಲಾಗುತ್ತದೆ ಎಂದರು.
ಪೋಲಿಂಗ್ ಅಧಿಕಾರಿಗಳು ಅಂಚೆ ಮತಪತ್ರದ ಮತದಾರರ ಪಟ್ಟಿ, ಅಂಚೆ ಮತಪತ್ರ, ಎನ್ವಲಪ್ಸ್, ಪೆನ್, ಇಂಕ್, ಪ್ಯಾಡ್, ಬ್ಲೂಸ್ಟಿಕ್, ಕೌಂಟರ್ ಪೈಲ್‍ಗಳನ್ನು ಸಾಗಿಸುವ ಕ್ಯಾನ್ವಸ್ ಬ್ಯಾಗ್, ವೋಟಿಂಗ್ ಕಂಪಾರ್ಟ್‍ಮೆಂಟ್, ಪೋಸ್ಟಲ್ ಬ್ಯಾಲೆಟ್ ಟ್ರಂಕ್ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬೇಕಿದೆ ಎಂದರು.
ಪೋಲಿಂಗ್ ಅಧಿಕಾರಿಗಳು ಮತದಾರರು ನಮೂನೆ-12 ಡಿ ನಲ್ಲಿ ನಮೂದಿಸಿರುವ ವಿಳಾಸಕ್ಕೆ ಭೇಟಿ ನೀಡಬೇಕು. ಮತದಾನದ ಮುಂಚಿತವಾಗಿಯೇ ಬಿಎಲ್‍ಒಗಳ ಮೂಲಕ ಮಾಹಿತಿ ನೀಡಬೇಕು ಎಂದರು.
ಈಗಾಗಲೇ ನೀಡಿರುವ ವಿಳಾಸದಲ್ಲಿ ಭೇಟಿ ಸಮಯದಲ್ಲಿ ಲಭ್ಯವಾಗದಿದ್ದಲ್ಲಿ, ಎರಡನೇ ಬಾರಿ ಭೇಟಿ ನೀಡುವ ಬಗ್ಗೆ ಸಮಯ ಮತ್ತು ದಿನಾಂಕ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು.
ಅಂಚೆ ಮತಪತ್ರ ಮೂಲಕ ಮತದಾನ ಮಾಡುವ ಮತದಾರರ ಗುರುತಿನ ಬಗ್ಗೆ ದಾಖಲಿಸಬೇಕು. ಮತದಾರರ ಪಟ್ಟಿಯಲ್ಲಿ ವ್ಯಕ್ತಿಯು ಮತದಾನ ಮಾಡಿರುವ ಬಗ್ಗೆ ಸೂಕ್ತವಾಗಿ ಗುರುತಿಸಬೇಕು ಎಂದರು.
ಮತದಾರರ ಮನೆಯಲ್ಲಿಯೇ ವೋಟಿಂಗ್ ಕಂಪಾರ್ಟ್‍ಮೆಂಟನ್ನು ಸೂಕ್ತ ಸ್ಥಳದಲ್ಲಿ ಇರಿಸಲು ಕ್ರಮ ತೆಗೆದುಕೊಳ್ಳಬೇಕು. ಗೌಪ್ಯ ಮತದಾನದ ಕುರಿತು ಗಮನಹರಿಸಬೇಕು. ಈ ಎಲ್ಲಾ ಕಾರ್ಯಗಳ ಮೇಲ್ವಿಚಾರಣೆಯನ್ನು ಸೆಕ್ಟರ್ ಅಧಿಕಾರಿಗಳು ನಿರ್ವಹಿಸಬೇಕು ಎಂದು ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ಅವರು ತಿಳಿಸಿದರು.
ಮತದಾನ ಪ್ರಾರಂಭದಿಂದ ಪೂರ್ಣಗೊಳ್ಳುವವರೆಗೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಮತದಾನದ ಸಂಪೂರ್ಣ ಜವಾಬ್ದಾರಿಯನ್ನು ಸೆಕ್ಟರ್ ಅಧಿಕಾರಿಗಳು ನಿರ್ವಹಿಸಬೇಕು ಎಂದರು.
ಸಂಬಂಧಪಟ್ಟ ಮೈಕ್ರೋ ವೀಕ್ಷಕರು ಮತದಾನ ಸೂಕ್ತವಾಗಿ ನಡೆಯುತ್ತಿದೆ ಎಂಬ ಬಗ್ಗೆ ಹಾಗೂ ಯಾವುದೇ ರೀತಿಯ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ಖಾತರಿಪಡಿಸಿಕೊಂಡು ವರದಿ ನೀಡಬೇಕು ಎಂದು ಹೇಳಿದರು. ಚುನಾವಣಾಧಿಕಾರಿಗಳಾದ ಶಬಾನಾ ಎಂ.ಶೇಖ್, ತಹಶೀಲ್ದಾರರು, ಇತರರು ಇದ್ದರು.
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.