ಹಳ್ಳಿಗಟ್ಟು ಬೋಡ್ ನಮ್ಮೆ.. ಕೆಸರು ಎರಚಾಟ ಇಲ್ಲಿನ ಆಕರ್ಷಣೆ… ಪರ ಊರಿನವರಿಗೆ ಎರಚುವಂತಿಲ್ಲ.!!!

ಮೇ 20 ಹಾಗೂ 21 ಶನಿವಾರ ಭಾನುವಾರ ಹಳ್ಳಿಗಟ್ಟು ಬೋಡ್ ನಮ್ಮೆ..

ಕೆಸರು ಎರಚಾಟ ಇಲ್ಲಿನ ಆಕರ್ಷಣೆ… ಪರ ಊರಿನವರಿಗೆ ಎರಚುವಂತಿಲ್ಲ.!!!

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಸಾವಿರಾರು ವರ್ಷಗಳಿಗೂ ಹಿಂದಿನ ಇತಿಹಾಸವಿರುವ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು “ಶ್ರೀ ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್ ನಮ್ಮೆ” ಶನಿವಾರ ಭಾನುವಾರ (ಮೇ20 ಹಾಗೂ 21ರಂದು) ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ, ಭದ್ರಕಾಳಿ ಹಾಗೂ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ತಿಳಿಸಿದ್ದು ಈ ಬಾರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲು ಕೋರಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ತಕ್ಕಮುಖ್ಯಸ್ಥರು ಹಾಗೂ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಮ್ಮಟೀರ ಸುಗುಣ ಮುತ್ತಣ್ಣ ಹಾಗೂ ಕಾರ್ಯದರ್ಶಿ ಮೂಕಳೇರ ರಮೇಶ್ ಮಾತನಾಡಿ ವಾರದ ಹಿಂದೆ ಶನಿವಾರ ಸಂಜೆ ಊರಿನ ಅಂಬಲದಲ್ಲಿ “ದೇವ ಕಟ್ಟ್” ಬೀಳುವ ಮೂಲಕ ಊರಿನಲ್ಲಿ ವಿವಿಧ ಕಟ್ಟುಪಾಡುಗಳಿಗೆ ಚಾಲನೆ ನೀಡಲಾಗಿದ್ದು. ಈ ಮೂಲಕ ಮೇ 20 ಹಾಗೂ 21ರಂದು ಶನಿವಾರ ಭಾನುವಾರ ಶ್ರೀ ಗುಂಡಿಯತ್ ಅಯ್ಯಪ್ಪ ಹಾಗೂ ಶ್ರೀ ಭದ್ರಕಾಳಿ ದೇವರ ವಾರ್ಷಿಕ ಬೇಡು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು. ಮೇ 20ರಂದು ಶನಿವಾರ ಅಪರಾಹ್ನ 2-00ರಿಂದ 2-30ಗಂಟೆಗೆ ಊರು ತಕ್ಕರಾದ ಚಮ್ಮಟೀರ ಕುಟುಂಬಸ್ಥರ ಬಲ್ಯಮನೆಯಿಂದ “ಪೊಲವಂದೆರೆ” ಹೊರಡುವ ಮೂಲಕ ಹಬ್ಬಕ್ಕೆ ಚಾಲನೆ ದೊರೆಯಲ್ಲಿದೆ. ನಂತರ ಊರಿನ ನಿಗದಿತ ಅಂಬಲಗಳಲ್ಲಿ ವಿವಿಧ ಕಟ್ಟುಪಾಡಿನೊಂದಿಗೆ ಸಾಂಪ್ರದಾಯಿಕ ಆಚರಣೆಗಳು ನಡೆದು ಅಪರಾಹ್ನ 3-30ರ ಸುಮಾರಿಗೆ ಊರಿನ ಪ್ರಮುಖ ದೇವಾಲಯಗಳಲ್ಲೊಂದಾದ “ಪೊಲವಪ್ಪಂಡ ಕೋಟ”ದಲ್ಲಿ ಜಿಲ್ಲೆಯ ಮೂಲನಿವಾಸಿಗಳಲ್ಲೊಬ್ಬರಾದ ಪಣಿಕ ಜನಾಂಗದ ವ್ಯಕ್ತಿಯೊಬ್ಬರಿಗೆ ಪೊಲಂದೆರೆ ಆವೇಶ ಬರುವ ಮೂಲಕ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ.

ಇದಕ್ಕೂ ಮೊದಲು ಊರಿನ ಎರಡು ಪ್ರಮುಖ ಕುಟುಂಬಗಳಾದ ಚಮ್ಮಟೀರ ಹಾಗೂ ಮೂಕಳೇರ ಮನೆತನದಿಂದ ಇಬ್ಬರು ಪೂಜಾರಿಗಳು ಬೆಳಿಗ್ಗೆಯಿಂದಲೇ ಅತ್ಯಂತ ಶುದ್ಧಮುದ್ರಿಕೆಯಲ್ಲಿ ಉಪವಾಸವಿದ್ದು ವಿವಿಧ ಕಟ್ಟುಪಾಡುಗಳನ್ನು ಆಚರಿಸಿ ಪೊಲವಪ್ಪಂಡ ಕೋಟಕ್ಕೆ(ದೇವಸ್ಥಾನ) ಆಗಮಿಸುತ್ತಾರೆ. ಇದಕ್ಕೂ ಮೊದಲು ಅವರು ಊರಿನಲ್ಲಿರುವ ಗುಂಡಿಯತ್ ಅಯ್ಯಪ್ಪ ದೇವರ ಕೆರೆಯಲ್ಲಿ ಸ್ನಾನಮಾಡಿ ಭಂಡಾರ ಶುದ್ಧಗೊಳಿಸಿ ದೇವರ ಕೆರೆಯ ಸಮೀಪದಲ್ಲಿಯೇ ಕಲ್ಲಿನ ಒಲೆ ಸೇರಿಸಿ ಬೆಂಕಿ ಹಾಕಿ ಮಣ್ಣಿನ ಮಡಿಕೆಯಲ್ಲಿ ಕೆರೆಯ ನೀರನ್ನು ಬಳಸಿ ಭತ್ತವನ್ನು ಬೇಯಿಸಿ ಅದನ್ನು ಹದಗೊಳಿಸಿ ಇನ್ನೊಂದು ಮಣ್ಣಿನ ಪಾತ್ರೆಯಲ್ಲಿ ಹುರಿದು ಅದನ್ನು ಅಲ್ಲಿಯೇ ಒನಕೆಯಿಂದ ಕುಟ್ಟಿ ಅವಲಕ್ಕಿಯನ್ನು ತೆಗೆಯಲಾಗುತ್ತದೆ. ಈ ಸಂದರ್ಭದಲ್ಲಿ ಎಂಜಲು ಹಾರಬಾರದೆಂದು ಬಾಯಿಗೆ ಬಟ್ಟೆಯನ್ನು ಕಟ್ಟಿಕೊಂಡು ಅವಲಕ್ಕಿಯನ್ನು ತೆಗೆದು ಶುಚಿಗೊಳಿಸಿ ಬಿದಿರಿನ ಸಣ್ಣ ಬುಟ್ಟಿಯಲ್ಲಿ ತುಂಬಿಸಿಟ್ಟುಕೊಳ್ಳುತ್ತಾರೆ. ನಂತರ ಒಂದಿಷ್ಟು ಅಕ್ಕಿಯ ಹಿಟ್ಟನ್ನು ಬೇಯಿಸಿ ಅದಕ್ಕೆ ಉಪ್ಪನ್ನು ಕೂಡ ಬೆರೆಸದೆ ಕೇವಲ ಒಂದಿಷ್ಟು ಬೆಲ್ಲವನ್ನು ಕಚ್ಚಿಕೊಂಡು ಪಲಹಾರವನ್ನು ಸೇವಿಸುತ್ತಾರೆ ಅಥವಾ ಹಣ್ಣು ಹಂಪಲನ್ನು ಮಾತ್ರ ಸೇವಿಸಿ ಕೆರೆಯ ನೀರನ್ನು ಕುಡಿಯುತ್ತಾರೆ, ತದನಂತರ ಸಂಜೆಯವರೆಗೂ ಯಾವುದೇ ಪಲಹಾರ ಹೋಗಲಿ ಹನಿ ನೀರನ್ನು ಕುಡಿಯುವಂತಿಲ್ಲ ಇದು ಹಬ್ಬದ ಕಟ್ಟುಪಾಡುಗಳು.

ಚಮ್ಮಟೀರ ಕುಟುಂಬದಿಂದ ಹೊರಟ ಪೊಲವಪ್ಪ ತೆರೆ ಊರಿನ ನಿಗದಿತ ಅಂಬಲಗಳಲ್ಲಿ ವಿವಿಧ ಆಚರಣೆ ಬಳಿಕ ಪೊಲವಪ್ಪಂಡ ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ಬೆಳಿಗ್ಗೆಯಿಂದ ವಿವಿಧ ಕಟ್ಟುಪಾಡುಗಳನ್ನು ಆಚರಿಸುವ ಈ ಎರಡು ಕೊಡವ ಜನಾಂಗದ ಪೂಜಾರಿಗಳು ತಲೆಯಮೇಲೆ ಮುಖ ಮುಚ್ಚಿಕೊಂಡಂತೆ ಬಿಳಿ ಬಟ್ಟೆಯನ್ನು ಹಾಕಿಕೊಂಡು ದೇವಸ್ಥಾನಕ್ಕೆ ಬರುತ್ತಾರೆ, ಇವರು ಹೆಂಗಸರೊಂದಿಗೆ ಮಾತನಾಡುವುದಿಲ್ಲ ಹಾಗೂ ಗಂಡಸರೊಂದಿಗೂ ಕೂಡ ಹೆಚ್ಚಾಗಿ ಮಾತನಾಡುವಂತಿಲ್ಲ. ಅಲ್ಲಿ ವಿವಿಧ ಕಟ್ಟುಪಾಡುಗಳ ಪ್ರಕಾರ ಪೂಜೆ ನಡೆಸುತ್ತಿದ್ದರೆ ಪೊಲಂದೆರೆ ಕಟ್ಟಿದ ವ್ಯಕ್ತಿಯ ಮೇಲೆ ಪೊಲವಪ್ಪ ದೇವರ ಆವೇಶ ಹಾಗೂ ಮಚ್ಚಿಯಂಡ ಕುಟುಂಬದ ವ್ಯಕ್ತಿಯೊಬ್ಬರ ಮೇಲೆ ಭದ್ರಕಾಳಿ ದೇವರ ಆವೇಶ ಆವರಿಸಿಕೊಂಡು ಭಕ್ತರಿಗೆ ಆಶೀರ್ವಚನ ನೀಡುತ್ತದೆ. ನಂತರ ವಿವಿಧ ಕಟ್ಟುಪಾಡುಗಳೊಂದಿಗೆ ಪೂಜೆ ಪುನಸ್ಕಾರ ನಡೆದು ಮಣ್ಣಿನಲ್ಲಿ ಮಾಡಲಾದ ಬೋಟೆಕಾರ (ನಾಯಿಯ ರೂಪ) ದೇವರಿಗೆ ಅರ್ಪಿಸುತ್ತಾರೆ ಈ ಜಾಗದಲ್ಲಿ ಹೆಚ್ಚಾಗಿ ಹೆಂಗಸರು ಮಕ್ಕಳು ಸೇರುತ್ತಾರೆ ಆದರೆ ಇಲ್ಲಿ ಬ್ರಾಹ್ಮಣ ಸಮುದಾಯದ ಅರ್ಚಕರ ಪೂಜೆ ನಿಷಿದ್ಧವಾಗಿದೆ.

ಇಲ್ಲಿ ಪೂಜೆಯ ಬಳಿಕ ಸರಿಸುಮಾರು 4-30 ಅಥವಾ 5-00 ಗಂಟೆಯ ಸಮಯದಲ್ಲಿ ಊರಿನ ಮತ್ತೊಂದು ಪ್ರಮುಖ ದೇವಸ್ಥಾನವಾದ ಶ್ರೀ ಗುಂಡಿಯತ್ ಅಯ್ಯಪ್ಪ ದೇವಸ್ಥಾನಕ್ಕೆ( ಪೊನ್ನಂಪೇಟೆ ಗೋಣಿಕೊಪ್ಪ ಮಧ್ಯಭಾಗದ ಜೋಡುಬೀಟಿಯಲ್ಲಿರುವ ದೇವಸ್ಥಾನ) ತೆರಳುತ್ತಾರೆ. ಇಲ್ಲಿ ಕೂಡ ವಿವಿಧ ಆಚರಣೆಯನ್ನು ವಿಭಿನ್ನವಾಗಿ ಮಾಡಲಾಗುತ್ತದೆ. ಆದರೆ ಇಲ್ಲಿಗೆ ಸ್ತ್ರೀಯರುಬರುವಂತಿಲ್ಲ ಹಾಗೂ ಇಲ್ಲಿ ಕೂಡ ಬ್ರಾಹ್ಮಣರ ಪೂಜೆ ನಿಷೇಧವಾಗಿದ್ದು, ಚಮ್ಮಟೀರ ಹಾಗೂ ಮೂಕಳೇರ ಮನೆತನದ ಇಬ್ಬರು ಪೂಜಾರಿಗಳು ಮಾತ್ರ ಈ ಎರಡು ದೇವಸ್ಥಾನಗಳಲ್ಲಿ ಅತ್ಯಂತ ಕಟ್ಟುನಿಟ್ಟಿನಲ್ಲಿ ಪೂಜಾ ಕಾರ್ಯಗಳನ್ನು ಮಾಡುತ್ತಾರೆ. ಈ ಎರಡು ಕುಟುಂಬದಲ್ಲಿ ಯಾವುದಾದರೊಂದು ಕುಟುಂಬಕ್ಕೆ ಸೂತಕ ಅಂದರೆ ಕುಟುಂಬದಲ್ಲಿ ಯಾರಾದರೂ ಸತ್ತರೆ ಅಥವಾ ಹೆರಿಗೆಯಾದರೆ ಊರಿನ ಮತ್ತೊಂದು ಪ್ರಮುಖ ಮನೆತನವಾದ ಮಚ್ಚಿಯಂಡ ಕುಟುಂಬ ಈ ಕಾರ್ಯವನ್ನು ಮಾಡುತ್ತದೆ.

ಕಾಡಿನೊಳಗಿರುವ ಗುಂಡಿಯತ್ ಅಯ್ಯಪ್ಪ ದೇವಸ್ಥಾನಕ್ಕೆ ಅತ್ಯಂತ ಹೆಚ್ಚಿನ ಕಟ್ಟುಪಾಡುಗಳೊಂದಿಗೆ ಪೂಜಾರಿಗಳ ಜೊತೆಯಲ್ಲಿ ಆಗಮಿಸುವ ಜನರು ಆ ಸಮಯದಲ್ಲೇ ದೇವಸ್ಥಾನದ ಹೊರಗೆ ಸ್ವಚ್ಛ ಗೊಳಿಸಿದ್ದರೆ ಎರಡು ಪೂಜಾರಿಗಳು ಇಲ್ಲಿನ ಎರಡು ದೇವಸ್ಥಾನದೊಳಗೆ ಶುಚಿಗೊಳಿಸಿ “ಅವುಲ್” ಹಾಕಲು ಮುಂದಾಗುತ್ತಾರೆ. ಅವುಲ್ ಎಂದರೆ ಅದಾಗಲೆ ಕುಟ್ಟಿ ಮಾಡಿದ ಅವಲಕ್ಕಿಗೆ ದೇವರ ಕಟ್ಟುಬೀಳುವ ದಿವಸ ಕಡಿಯಲಾದ ಬಾಳೆ ಗೊನೆಯಲ್ಲಿ(ಪೊಂಗೊಲೆ) ಒಂದಷ್ಟು ಬಾಳೆಹಣ್ಣುಗಳನ್ನು ಸಣ್ಣದಾಗಿ ಕತ್ತರಿಸಿ, ಅವಲಕ್ಕಿ ಬುಟ್ಟಿಗೆ ಹಾಕಿ ಜೊತೆಗೆ ಒಂದಿಷ್ಟು ಬೆಲ್ಲವನ್ನು ಸೇರಿಸಿ ಅದನ್ನು ಚೆನ್ನಾಗಿ ಬೆರೆಸಿ ಅವುಲ್ ತಯಾರು ಮಾಡಿ ಇಟ್ಟುಕೊಳ್ಳುತ್ತಾರೆ.

ನಂತರ ಭಕ್ತರು ಹಣ್ಣುಕಾಯಿ ರೂಪದಲ್ಲಿ ತಂದಿರುವ ನೂರಾರು ತೆಂಗಿನ ಕಾಯಿಗಳನ್ನು ಒಡೆದು ಊದುಬತ್ತಿ ತೋರಿಸಿ, ನರುಮರ(ಕೊಡವ ಭಾಷೆಯಲ್ಲಿ) ವಿಭಿನ್ನವಾದ ಜಾತಿಯ ಮರದ ಎಲೆಗಳನ್ನು ನಿಯಮದಂತೆ ಕುಯ್ದು (ಇಂತಿಷ್ಟು ಎಂದು ಲೆಕ್ಕವಿದೆ) ಒಂದು ಎಲೆಗೆ ಒಂದು ಚೊಳ್ಳೆ ಎಂದು ಇಟ್ಟು ಎಲೆಗೆ ಅವುಲ್ ಅನ್ನು ಹಾಗೂ ಚೊಳ್ಳೆಗೆ ಎಳನೀರನ್ನು ಹಾಕುತ್ತಾರೆ. ಇದು ಮಾಡುವಾಗ ಊರಿನವರು ದೇವರನ್ನು ಕರೆಯುವುದು ವಿಶೇಷ. ವಿವಿಧ ವಿಧಿವಿಧಾನದಲ್ಲಿ ಪೂಜೆ ಪುನಸ್ಕಾರ ಬಳಿಕ ಭಕ್ತರು ತಮ್ಮ ಇಷ್ಟಾರ್ಥಗಳ ಸಿದ್ಧಿಗೆ ಹರಕೆ ಮಾಡಿಕೊಂಡ ಸಾವಿರಾರು ತೆಂಗಿನಕಾಯಿಯನ್ನು ದೇವಸ್ಥಾನದ ಮುಂದೆ ಈಡುಕಾಯಿ ರೂಪದಲ್ಲಿ ಒಡೆಯುತ್ತಾರೆ. ನಂತರ ದೇವಸ್ಥಾನದಿಂದ ಹೊರಡಲು ತಯಾರಾಗಿ ನಿಗದಿತ ಜಾಗದಲ್ಲಿ ಬೆಳಿಗ್ಗೆಯಿಂದ ಉಪವಾಸವಿದ್ದ ಇಬ್ಬರು ಪೂಜಾರಿಗಳು ಎಳನೀರು ಬಾಳೆಹಣ್ಣು ಸೇವಿಸುವ ಮೂಲಕ ಉಪವಾಸವನ್ನು ಅಂತ್ಯಗೊಳಿಸುತ್ತಾರೆ.

ನಂತರ ಅವರವರ ಮನೆಗೆ ತೆರಳುವ ಊರಿನವರು ಅದೇ ದಿನ ರಾತ್ರಿ ಹನ್ನೆರಡು ಗಂಟೆಯ ಒಳಗೆ ಊರು ತಕ್ಕರಾದ ಚಮ್ಮಟೀರ ಕುಟುಂಬಸ್ಥರ ಬಲ್ಯಮನೆಯಲ್ಲಿ ಸೇರಿ ವಿವಿಧ ವೇಷಭೂಷಣ ಹಾಗೂ ಸಾಂಪ್ರದಾಯಿಕವಾದ ಬೇಡು ಹಬ್ಬದ ಒಂದಷ್ಟು ವೇಷವನ್ನು ಹಾಕಿ ಸಾಂಪ್ರದಾಯಿಕ ವಾಲಗದೊಂದಿಗೆ ಬೇಡು ಹಬ್ಬದ ದೋಳು ಬಾರಿಸುತ್ತಾ ಹಬ್ಬದ ಹಾಡನ್ನು ಹೇಳುತ್ತಾ ಊರಿನ ಮನೆ ಮನೆ ತೆರಳುತ್ತಿದ್ದರು. ಈ ಹಿಂದೆ ಊರಿನ ಎಲ್ಲಾ ಮನೆಗೆ ಹೋಗುತ್ತಿದ್ದರು. ಇದೀಗ ಊರಿನ ಮೂರು ಪ್ರಮುಖ ಕುಟುಂಬಗಳಾದ ಚಮ್ಮಟೀರ, ಮಚ್ಚಿಯಂಡ ಹಾಗೂ ಮೂಕಳೇರ ಬಲ್ಯಮನೆಗಳಿಗೆ ಮಾತ್ರ ತೆರಳಿ ಮರುದಿನ ಮುಂಜಾನೆ ಊರಿನ ಅಂಬಲದಲ್ಲಿ ಸೇರಿ ತಾವುಗಳು ಹಾಕಲಾದ ಎಲ್ಲಾ ವೇಷಗಳನ್ನು ಬಿಚ್ಚುತ್ತಾರೆ ಈ ಮೂಲಕ ರಾತ್ರಿಯ ಮನೆಕಳಿ ಅಲ್ಲಿಗೆ ಮುಕ್ತಾಯಗೊಳ್ಳುತ್ತದೆ.

ನಂತರ 21ರಂದು ಭಾನುವಾರ ಬೆಳಿಗ್ಗೆಯಿಂದಲೇ ಚಮ್ಮಟೀರ ಬಲ್ಯಮನೆಯಲ್ಲಿ ಎಲ್ಲಾರು ಸೇರಿ ದೇವರ ಭಂಡಾರ ಪೆಟ್ಟಿಗೆಯನ್ನು ಶುದ್ಧಗೊಳಿಸಿ ಕೃತಕವಾಗಿ ಬೆತ್ತದಿಂದ ತಯಾರಿಸಲಾದ ಒಂದು ಕುದುರೆ ಹಾಗೂ ಮೊಗವನ್ನು (ಪೂಮೊಗ) ಶುದ್ಧಗೊಳಿಸಿ ಶೃಂಗರಿಸುತ್ತಾರೆ ಹಾಗೇ ಮೂಕಳೇರ ಬಲ್ಯಮನೆಯಲ್ಲಿ ಕೂಡ ಮತ್ತೊಂದು ಕುದುರೆ ಹಾಗೂ ಮೊಗವನ್ನು ಶೃಂಗರಿಸಿ ಇಡುತ್ತಾರೆ. ಅಂದು ಅಪರಾಹ್ನ ಸುಮಾರು 2-30 ಗಂಟೆಯ ಸಮಯದಲ್ಲಿ ಮೊದಲು ಚಮ್ಮಟೀರ ಬಲ್ಯಮನೆಯಿಂದ ಊರಿನವರೆಲ್ಲಾರು ಸೇರಿ ಕೃತಕವಾಗಿ ಶೃಂಗರಿಸಲಾದ ಒಂದು ಕುದುರೆ ಹಾಗೂ ಮೊಗ(ಪೂಮೊಗ)ದೊಂದಿಗೆ ಹೊರಟು ಚಮ್ಮಟೀರ ಕುಟುಂಬದ ಕೈಮಡದಲ್ಲಿ ಮೂರು ಪ್ರದಕ್ಷಿಣೆ ಹಾಕಿ ಸುಮಾರು 3-30ರ ಸಮಯಕ್ಕೆ ಭದ್ರಕಾಳಿ ದೇವಸ್ಥಾನದ ಹತ್ತಿರದ ಅಂಬಲಕ್ಕೆ ತಲಪುತ್ತಾರೆ. ಈ ಸಂದರ್ಭದಲ್ಲಿ ಕೊಡವ ಸಾಂಪ್ರದಾಯಿಕ ವಾಲಗ ಹಾಗೂ ಬೇಡು ಹಬ್ಬದ ದೋಳಿನೊಂದಿಗೆ ಬೇಡು ಹಬ್ಬದ ಹಾಡನ್ನು ಹಾಡುತ್ತಾ ವಿವಿಧ ವೇಷಧಾರಿಗಳು ಗಮನ ಸೆಳೆಯುತ್ತಾರೆ. ನಂತರ ಒಂದಷ್ಟು ಮಂದಿ ಮೂಕಳೇರ ಬಲ್ಯಮನೆಗೆ ತೆರಳಿದ ಸಾಂಪ್ರದಾಯಿಕ ವಾಲಗದೊಂದಿಗೆ ಮೂಕಳೇರ ಬಲ್ಯಮನೆಯಿಂದ ಸುಮಾರು 4-00ಗಂಟೆಗೆ ಮತ್ತೊಂದು ಕುದುರೆ ಮತ್ತು ಮೊಗವನ್ನು ಹೊತ್ತುತಂದು ಎರೆಡೆರಡು ಕುದುರೆ ಹಾಗೂ ಮೊಗ ನಿಗದಿತ ಜಾಗಕ್ಕೆ ಬರುತ್ತಿದ್ದಂತೆ ಎರಡು ಭಾಗದಿಂದ ಮುಖಾಮುಖಿ ಎದುರುಬದುರು ಮೂರು ಸುತ್ತು ಓಡಿ ಬಂದು ನಿಲ್ಲುತ್ತದೆ. ಈ ಸಂದರ್ಭದಲ್ಲಿ ಊರಿನವರು ಪರಸ್ಪರ ಅಲಂಗಿಸಿಕೊಂಡು ವಾಲಗದ ನಾದಕ್ಕೆ ಹೆಜ್ಜೆ ಹಾಕುತ್ತಾ ಹತ್ತಿರದ ಕೆರೆಯಿಂದ ಕೆಸರನ್ನು ತಂದು ಪರಸ್ಪರ ಕೆಸರು ಎರಚಾಡಿ ಅಲಂಗಿಸಿಕೊಳ್ಳುತ್ತಾರೆ. ಊರಿನ ಗಂಡಸರನ್ನು ಹುಡುಕಿಕೊಂಡು ಹೋಗಿ ಕೆಸರು ಎರಚುವುದು ಇಲ್ಲಿನ ಹಬ್ಬದ ವಿಶೇಷವಾಗಿದ್ದು. ಪರ ಊರಿನವರಿಗೆ ಅಥವಾ ನೆಂಟರಿಗೆ ಕೆಸರು ಹಾಕುವಂತಿಲ್ಲ, ಒಂದು ಸಮಯ ಕೆಸರು ಹಾಕಿದ್ದರೆ ಅವರಿಗೆ ದಂಡ ಹಾಕಲಾಗುತ್ತದೆ. ಇನ್ನು ಹೊರ ಊರು ಅಥವಾ ನೆಂಟರಿಗೆ ಹಬ್ಬದಲ್ಲಿ ಮುಕ್ತವಾಗಿ ಸಂಭ್ರಮಿಸಲು ಅವಕಾಶವಿದ್ದು, ಮೈಮೇಲೆ ಆವೇಶ ಬರುವ ದೇವರು ಅವರಿಗೆ ಒಂದೊಂದು ಬೆತ್ತದ ಕೋಲು ನೀಡುತ್ತದೆ, ಅವರು ಅದನ್ನು ಹಿಡಿದುಕೊಂಡು ಎಲ್ಲಾರೊಂದಿಗೆ ಸಂಭ್ರಮಿಸಬಹುದು ಅಂತಹವರಿಗೆ ಯಾರೂ ಕೆಸರು ಹಾಕುವಂತಿಲ್ಲ. ಅಲ್ಲಿ ಸಂಭ್ರಮಿಸಿದ ಬಳಿಕ ಹತ್ತಿರದ ಭದ್ರಕಾಳಿ ದೇವಸ್ಥಾನಕ್ಕೆ ತೆರಳಿ ದೇವಸ್ಥಾನದ ಮೂರು ಸುತ್ತು ಹಾಕಿ ಸಂಭ್ರಮಿಸುತ್ತಾರೆ. ನಂತರ ವಿವಿಧ ಪೂಜಾ ವಿಧಿವಿಧಾನಗಳು ನಡೆಯುತ್ತದೆ ಮತ್ತು ಎರೆಡೆರಡು ಕುದುರೆ ಹಾಗೂ ಮೊಗಗಳನ್ನು ಹೊತ್ತವರು ದೇವಸ್ಥಾನದ ಎದುರು ಬದುರಾಗಿ ಓಡುತ್ತಾರೆ ಹೀಗೆ ನಡೆಯುವ ಹಬ್ಬದ ಆಚರಣೆ ವಾರದ ಹಿಂದೆ ಕಟ್ಟುಬೀಳುತ್ತದೆ.

ವಾರದ ಹಿಂದೆ ಹಾಕಲಾದ ದೇವರ ಕಟ್ಟು ಕಟ್ಟಳೆಯ ಸಂದರ್ಭ ಊರಿನಲ್ಲಿದ್ದ ಊರಿನ ಜನರು ಊರುಬಿಟ್ಟು ಹೊರ ಊರು ಅಥವಾ ಹೊರ ಜಿಲ್ಲೆಯಲ್ಲಿ ಉಳಿಯುವಂತಿಲ್ಲ. ಹೊರ ಜಿಲ್ಲೆ , ಹೊರ ರಾಜ್ಯ ಸೇರಿದಂತೆ ಊರು ಬಿಟ್ಟು ಎಲ್ಲಿಯಾದರೂ ಹೋದರೆ ರಾತ್ರಿ ವೇಳೆ ಮನೆಗೆ ವಾಪಸ್ಸು ಬರಲೇಬೇಕು. ಹಬ್ಬದ ಕಟ್ಟುಬೀಳುವುದಕ್ಕೆ ಮುಂಚೆ ಹೊರಗೆ ಇದ್ದವರಿಗೆ ಇದು ಅನ್ವಯಿಸುವುದಿಲ್ಲ. ಹಾಗೇ ಹಬ್ಬದ ಕಟ್ಟಿನಲ್ಲಿ ಊರಿನೊಳಗೆ ಮರಗಿಡಗಳನ್ನು ಕಡಿಯುವಂತಿಲ್ಲ, ಪ್ರಾಣಿ ಹಿಂಸೆ ಮಾಡುವಂತಿಲ್ಲ. ರೊಟ್ಟಿ, ದೋಸೆ ಮಾಡುವಂತಿಲ್ಲ. ಇದರ ಜೊತೆಗೆ ಮನೆಯಲ್ಲಿ ಮಾಡುವ ಸಾಂಬಾರಿಗೆ ಒಗ್ಗರಣೆ ಹಾಕಬಾರದು ವಿಶೇಷವಾಗಿ ಸಾಸುವೆ ಸಿಡಿಯಬಾರದು. ಹೀಗೆ ಹಲವಾರು ಕಟ್ಟುಪಾಡುಗಳನ್ನು ಹಬ್ಬದ ಕಟ್ಟು ಹಾಕುವಾಗ ಹೇಳಿ ಹಾಕಲಾಗುತ್ತದೆ. ಇದನ್ನು ಮೀರಿ ಹೊರ ಊರಿನಲ್ಲಿ ಉಳಿಯಲೇ ಬೇಕಾದ ಅನಿವಾರ್ಯ ಬಂದರೆ ಊರಿನ ತಕ್ಕಮುಖ್ಯಸ್ಥರಿಗೆ ತಿಳಿಸಿ ಉಳಿಯಬೇಕು ಅದು ಅನಿವಾರ್ಯವಾದರೆ ಮಾತ್ರ, ಅದಕ್ಕೂ ತಪ್ಪುಹಣ(ತಪ್ಪು ಕಾಣಿಕೆ)ವೆಂದು ವಿಧಿಸುತ್ತಾರೇ ಅದನ್ನು ಕಟ್ಟಬೇಕು. ಹೀಗೆ ಹಲವಾರು ವಿಭಿನ್ನ ಹಾಗೂ ವಿಶೇಷ ಕಟ್ಟುಪಾಡುಗಳೊಂದಿಗೆ ನಡೆಯುವ ಹಳ್ಳಿಗಟ್ಟು ಬೋಡ್ ನಮ್ಮೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಇಲ್ಲಿನ ಭದ್ರಕಾಳಿ ದೇವಸ್ಥಾನದಲ್ಲಿರುವ ಕಲ್ಲಿನ ಆನೆ ದೇವಸ್ಥಾನಕ್ಕೆ ಮುಖಮಾಡಿಕೊಂಡಿರುವುದು ವಿಶೇಷ ಎನ್ನಬಹುದು. ಒಂದು ಮೂಲದ ಪ್ರಕಾರ ಕಲ್ಲಿನ ಆನೆ ಇರುವ ದೇವಸ್ಥಾನ ಕೊಡಗಿನಲ್ಲಿ ಮಾತ್ರವಲ್ಲ ಕರ್ನಾಟಕದಲ್ಲಿಯೇ ವಿರಳ ಎನ್ನಬಹುದು. ಪೊನ್ನಂಪೇಟೆಯಿಂದ ಸರಿ ಸುಮಾರು ಒಂದು ಕಿ.ಮಿ ದೂರದಲ್ಲಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನಕ್ಕೆ ಪೊನ್ನಂಪೇಟೆಯಿಂದ ಬರುವವರು ಕುಂದಾ ರಸ್ತೆ ಮೂಲಕ, ವಿರಾಜಪೇಟೆ ಕಡೆಯಿಂದ ಬರುವವರು ಹಾತೂರು ಕುಂದಾ ಮಾರ್ಗದಲ್ಲಿ ಅಥವಾ ಗೋಣಿಕೊಪ್ಪ ಭಾಗದಿಂದ ಬರುವವರು ಪರ್ಯಾಯ ಮಾರ್ಗವಾಗಿ ಜೋಡುಬೀಟಿಯಿಂದ ಒಳರಸ್ತೆ ಮೂಲಕ ಬರಬಹುದಾಗಿದೆ ಎಂದು ತಕ್ಕಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ತಿಳಿಸಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments