ಮಡಿಕೇರಿ: ಕೊಡಗಿನಲ್ಲಿ ಕೃಷಿ ಮತ್ತು ಕಾಫಿ ಆಧಾರಿತ ವ್ಯವಸ್ಥೆಯಲ್ಲಿ ಕಾರ್ಬನ್ ಕ್ರೆಡಿಟ್ ನಿಂದ ಆರ್ಥಿಕ ಲಾಭಗಳಿಸಲು ಇರುವ ಅವಕಾಶಗಳ ಕುರಿತು ರೈತರು ಮತ್ತು ಕಾಫಿ ಬೆಳೆಗಾರರಲ್ಲಿ ಅರಿವು ಮೂಡಿಸುವ ಸಲುವಾಗಿ ಮೇ 23 ರಂದು ಪೊನ್ನಂಪೇಟೆಯಲ್ಲಿ ಕಾರ್ಯಾಗಾರ ನಡೆಯಲಿದೆ ಎಂದು ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ನಂದಾ ಬೆಳ್ಯಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಮತ್ತು ಪೊನ್ನಂಪೇಟೆಯ ಅರಣ್ಯ ಕಾಲೇಜಿನ ಸಹಯೋಗದಲ್ಲಿ ಬೆಳಿಗ್ಗೆ 9.30 ಗಂಟೆಗೆ ಕಾಲೇಜಿನ ಆವರಣದಲ್ಲಿ ಕಾರ್ಯಾಗಾರ ನಡೆಯಲಿದ್ದು, ಜಿಲ್ಲೆಯ ರೈತರು ಮತ್ತು ಬೆಳೆಗಾರರು ಈ ಉಪಯುಕ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಾಗಾರವನ್ನು ಅರಣ್ಯ ಮತ್ತು ಪರಿಸರ ವಿಜ್ಞಾನ ಇಲಾಖೆಯ ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಕ್ತರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಅರಣ್ಯ ಕಾಲೇಜಿನ ಮುಖ್ಯಸ್ಥರಾದ ಡಾ.ಸಿ.ಜಿ.ಕುಶಾಲಪ್ಪ, ಉಪನ್ಯಾಸಕ ಮತ್ತು ವಿಭಾಗದ ಮುಖ್ಯಸ್ಥ ಡಾ.ಜಿ.ಎಂ.ದೇವಗಿರಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕಾರ್ಬನ್ ಕ್ರೆಡಿಟ್ ಬಗ್ಗೆ ಐಎಸ್‍ಇಸಿಯ ವಿಜ್ಞಾನಿಗಳಾದ ಡಾ.ಬಾಲಸುಬ್ರಮಣಿಯನ್, ಡಾ.ಜೇಮ್ಸ್ ಜೇಕಬ್ ಮತ್ತು ಡಾ.ಅಜ್ಜಿಕುಟ್ಟೀರ ಆದಿತ್ ಕಾರ್ಯಪ್ಪ ತಾಂತ್ರಿಕ ಭಾಷಣ ಮತ್ತು ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ದೇಶಿಯ ಕಾರ್ಬನ್ ಮಾರುಕಟ್ಟೆಯನ್ನು ಪ್ರಾರಂಭಿಸಲು ಸರ್ಕಾರವು ಸಜ್ಜಾಗಿದ್ದು, ಇದರ ಪ್ರಾರಂಭ ಮತ್ತು ಉಡಾವಣೆಗಾಗಿ ಸಮಯ ನಿಗಧಿಯಾಗಲಿಲ್ಲ. ಕಾರ್ಬನ್ ಕ್ರೆಡಿಟ್ ಕಾರ್ಯಕ್ರಮಗಳ ಅಸ್ತಿತ್ವ ಮತ್ತು ಪ್ರಯೋಜನಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವ ಅಗತ್ಯವಿದೆ. ಆದ್ದರಿಂದ ಎಲ್ಲಾ ರೈತರು ಪುನರುತ್ಪಾದಕ ಕೃಷಿಯನ್ನು ಅಭ್ಯಾಸ ಮಾಡುವ ಮೂಲಕ ಪ್ರಯೋಜನ ಪಡೆಯಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್‍ನ ಅಧ್ಯಕ್ಷ ಚೇನಂಡ ಅಶೋಕ್, ಕಾರ್ಯದರ್ಶಿ ಪಿ.ಕೆ.ಬೆಳ್ಯಪ್ಪ, ಸದಸ್ಯ ಎಂ.ಪಿ.ಕಾರ್ಯಪ್ಪ ಉಪಸ್ಥಿತರಿದ್ದರು.