ಪೊನ್ನಂಪೇಟೆ ತಾಲ್ಲೂಕಿನ ಹಳ್ಳಿಗಟ್ಟು ಊರು ತಕ್ಕರಾದ “ಚಮ್ಮಟೀರ” ಕುಟುಂಬದ ಬಲ್ಯಮನೆಯಲ್ಲಿ ಐದು ವರ್ಷಗಳಿಗೊಮ್ಮೆ ನಡೆಯುವ “ಬಲ್ಯಯಿಂಗಕ್ ಕಟ್ಟುವ ಕಾರ್ಬಾರ್” (ಪತ್ತ್ ಕೂಟ ಮಂದಣ ಮೂರ್ತಿ ತೆರೆ) ಭಾನುವಾರ ಹಾಗೂ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಭಾನುವಾರ ಸಂಜೆ ಸಾಂಪ್ರದಾಯಿಕ ವಾಲಗದೊಂದಿಗೆ ಆರಂಭವಾದ “ಪೂತೆರೆ” ಎರಡು ದಿನಗಳ ಹಬ್ಬದ ಆಚರಣೆಗೆ ಚಾಲನೆ ನೀಡಿತು. ನಂತರ ರಾತ್ರಿ ಪೂರ್ತಿ ವಿವಿಧ ತೆರೆಗಳು ವಿವಿಧ ವ್ಯಕ್ತಿಗಳ ಮೇಲೆ ಆವಾಹನೆಗೊಂಡು ಸೇರಿದ್ದ ಭಕ್ತರಿಗೆ ಆಶೀರ್ವಚನ ನೀಡಲಾಯಿತು. ಮೂಲನಿವಾಸಿಗಳಲ್ಲಿ ಒಬ್ಬರಾದ ಪಣಿಕ ಜನಾಂಗದ ವ್ಯಕ್ತಿಯಿಂದ ವಿವಿಧ ತೆರೆಗಳು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನಡೆಯಿತು. ರಾತ್ರಿಯಿಡೀ ವಿವಿಧ ತೆರೆಗಳು ಗಮನ ಸೆಳೆದು ಬೆಳಿಗ್ಗೆ ಸುಮಾರು ಹತ್ತು ಘಂಟೆಯ ಸಮಯದಲ್ಲಿ ಆರಂಭಗೊಂಡ “ಪಾತಾಳ ಪತ್ತ್ ಕೂಟ ಮಂದಣ ಮೂರ್ತಿ ತೆರೆ” ವಿಶೇಷ ಗಮನ ಸೆಳೆಯಿತು ಹಾಗೂ ತವರುಮನೆ ಹುಡುಗಿಯರು ವಿವಿಧ ಹರಕೆಗಳನ್ನು ಈ ಸಂದರ್ಭದಲ್ಲಿ ನೀಡಿದ್ದರು. ಭಾನುವಾರ ಸಂಜೆ ಆರಂಭಗೊಂಡ ವಿವಿಧ ತೆರೆಗಳಲ್ಲಿ ಪೂತೆರೆ, ಚಾವುಂಡಿ ತೆರೆ, ಕುಳಿಯ(ಭೂಮಿ ಗುಳಿಗ), ಕಾಳಿ ಪೊಲ್ತಿ, ನುಚ್ಚುಟ್ಟೆ, ಸಾರ್ಥಾವು ಹೀಗೆ ಹಲವಾರು ತೆರೆಗಳು ತೆರೆ ಕಟ್ಟುವ ವ್ಯಕ್ತಿಗಳ ಮೇಲೆ ಆವಾಹನೆಗೊಂಡು ಚೆಂಡೆ ಮದ್ದಳೆ ಹಾಗೂ ಸಾಂಪ್ರದಾಯಿಕ ವಾಲಗದ ನಾದಕ್ಕೆ ಹೆಜ್ಜೆ ಹಾಕಿದರು. ಭಾನುವಾರ ಸಂಜೆಯಿಂದ ಸೋಮವಾರ ರಾತ್ರಿಯವರೆಗೂ ನಡೆದ ಕಾರ್ಯಕ್ರಮದಲ್ಲಿ ಚಮ್ಮಟೀರ ಕುಟುಂಬದಿಂದ ಮದುವೆಯಾಗಿ ಹೋದ ತವರು ಮನೆ ಹುಡುಗಿಯರು ಹಾಗೂ ಅವರ ಸಂಸಾರ ಸೇರಿದಂತೆ ಹಳ್ಳಿಗಟ್ಟು ಊರಿನ ಗ್ರಾಮಸ್ಥರು, ನೆರೆ ಊರಿನವರು, ನೆಂಟರು ಹಾಗೂ ವಿವಿಧ ಭಕ್ತರು ಉಪಸ್ಥಿತರಿದ್ದರು.