ಬೋರ್ಡೊ ದ್ರಾವಣ ಅಪಾಯಕಾರಿಯಲ್ಲದ ಬಹಳ ಉಪಯುಕ್ತವಾದ ಶಿಲೀಂದ್ರ್ರನಾಶಕ. ಆದರೆ ಇದನ್ನು ವೈಜ್ಞಾನಿಕವಾಗಿ ತಯಾರಿಸುವ ವಿಧಾನದಲ್ಲಿ ತಪ್ಪುಗಳಾದರೆ ರಸಸಾರದಲ್ಲಾಗುವ ವ್ಯತ್ಯಾಸದಿಂದ ಸಸ್ಯ ರೋಗಗಳು ಸಮರ್ಪಕವಾಗಿ ನಿರ್ವಹಣೆಯಾಗುವುದಿಲ್ಲ. ಆದುದರಿಂದ ವೈಜ್ಞಾನಿಕ ಪದ್ಧತಿಯಲ್ಲಿ ಬೋರ್ಡೊ ದ್ರಾವಣವನ್ನು ತಯಾರಿಸಿ ಸಿಂಪರಣೆ ಕೈಗೂಳ್ಳುವುದು ಪ್ರಸ್ತುತದಲ್ಲಿ ಅವಶ್ಯಕವಾಗಿದೆ.
ಶೇ. 1 ರ ಬೋರ್ಡೊ ದ್ರಾವಣ ತಯಾರಿಸಲು ಬೇಕಾದ ವಸ್ತುಗಳು (100 ಲೀಟರ್ ನೀರು):
1. ಮೈಲುತುತ್ತ 1 ಕೆ.ಜಿ.
2. ಸುಣ್ಣ 1 ಕೆ.ಜಿ.
3. ನೀರು 100 ಲೀಟರ್
4. ಸ್ವಚ್ಛವಾದ ಕಬ್ಬಿಣದ ತುಂಡು/ಚಾಕು/ಪಿ.ಹೆಚ್.ಪೇಪರ್
5. 10 ಲೀ. ಸಾಮರ್ಥ್ಯದ 2 ಪ್ಲಾಸ್ಟಿಕ್ ಬಕೆಟ್
6. 100 ಲೀ. ಸಾಮರ್ಥ್ಯದ 1 ಪ್ಲಾಸ್ಟಿಕ್ ಡ್ರಮ್/ಬ್ಯಾರಲ್
ತಯಾರಿಕೆ ವಿಧಾನ:
* ಒಂದು ಕೆ.ಜಿ. ಮೈಲುತುತ್ತವನ್ನು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟಿನಲ್ಲಿ ಸಂಪೂರ್ಣವಾಗಿ ಕರಗಿಸಬೇಕು.
* ಇನ್ನೊಂದು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟ್‍ನಲ್ಲಿ 1 ಕೆ.ಜಿ. ಸುಣ್ಣವನ್ನು ಸಂಪೂರ್ಣವಾಗಿ ಕರಗಿಸಬೇಕು.
* ಕರಗಿದ 10 ಲೀಟರ್ ಸುಣ್ಣದ ದ್ರಾವಣದಲ್ಲಿ ಸ್ವಲ್ಪ ಪ್ರಮಾಣದ ಸುಣ್ಣದ ದ್ರಾವಣವನ್ನು 80 ಲೀ. ನೀರಿರುವ 1 ಪ್ಲಾಸ್ಟಿಕ್ ಡ್ರಮ್‍ಗೆ ಸುರಿಯಬೇಕು. ನಂತರ 10 ಲೀಟರ್ ಮೈಲುತುತ್ತದ ದ್ರಾವಣವನ್ನು ನಿಧಾನವಾಗಿ ಸುರಿದು ಚೆನ್ನಾಗಿ ಕಲಸಬೇಕು. ನಂತರ ರಸಸಾರವನ್ನು ಪರೀಕ್ಷೆ ಮಾಡುತ್ತ ಸ್ವಲ್ಪ ಸ್ವಲ್ಪ ಉಳಿದ ಸುಣ್ಣದ ದ್ರಾವಣವನ್ನು ಸುರಿಯಬೇಕಾಗುತ್ತದೆ. ಕೆಲವು ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಸುಣ್ಣವನ್ನು ಉಪಯೋಗಿಸಿದರೆ 100 ಲೀಟರ್ ದ್ರಾವಾಣಕ್ಕೆ 500 ಗ್ರಾಂ ಸುಣ್ಣ ಸಾಕಾಗುತ್ತದೆ. ಆದರೆ ಸುಣ್ಣದ ಪ್ರಮಾಣವನ್ನು ರಸಸಾರವನ್ನು ಪರಿಕ್ಷೇ ಮಾಡುತ್ತಾ ಸುರಿಯಬೇಕು. ಅಂದಾಜಿನ ಮೂಲಕ ಸುಣ್ಣವನ್ನು ಸುರಿಯಬಾರದು. ಸರಿಯಾದ ಶೇ.1 ರ ಬೋರ್ಡೊ ದ್ರಾವಣದ ಮಿಶ್ರಣವು ತಿಳಿ ನೀಲಿ ಬಣ್ಣದಾಗಿರುತ್ತದೆ.
ಬೋರ್ಡೊ ದ್ರಾವಣದ ಪರೀಕ್ಷೆ:
* ಕೆಂಪು ಬಣ್ಣದ ಲಿಟ್ಮಸ್ ಕಾಗದವನ್ನು ಬೋರ್ಡೊ ದ್ರಾವಣದಲ್ಲಿ ಅದ್ದಿ ತೆಗೆದಾಗ ಕೆಂಪು ಬಣ್ಣದ ಲಿಟ್‍ಮಸ್ ಕಾಗದ ನೀಲಿ ಬಣ್ಣಕ್ಕೆ ತಿರುಗಿದರೆ ಬೋರ್ಡೊ ದ್ರಾವಣ ಸರಿಯಾಗಿದೆ ಎಂದು ತಿಳಿಯುವುದು.
* ಬೋರ್ಡೋ ದ್ರಾವಾಣದ ರಸಸಾರ 8 ರಿಂದ 10 ಇರುವ ಹಾಗೆ ನೋಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಐ.ಸಿ.ಎ.ಆರ್ – ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ಕೊಡಗು ಜಿಲ್ಲೆ, ದೂರವಾಣಿ: 08274-247274 ನ್ನು ಸಂಪರ್ಕಿಸಬಹುದು.