ಅಖಿಲ ಕೊಡವ ಸಮಾಜದಿಂದ ಇದೇ ಜೂನ್ 10ರಂದು ಶನಿವಾರ ಹಾಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಆಗಿರುವ ಅಜ್ಜಿಕುಟ್ಟೀರ ಎಸ್ ಪೊನ್ನಣ್ಣ ಸೇರಿದಂತೆ ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅತ್ಯಂತ ಕಡಿಮೆ ಜನಸಂಖ್ಯೆಯಿರುವ ಕೊಡವ ಜನಾಂಗದಲ್ಲಿ ಈಗಾಗಲೇ ಹಲವಾರು ಸಾಧಕರು ವಿವಿಧ ಸಾಧನೆಗಳನ್ನು ಮಾಡಿದ್ದು, ಪುಟ್ಟದಾದ ಜನಾಂಗದ ಸಾಧನೆಯ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ಇತ್ತಿಚೆಗೆ ಸಾಧನೆ ಮಾಡಿದವರನ್ನು ಗಣನೆಗೆ ತೆಗೆದುಕೊಂಡು ಅವರನ್ನು ಇದೇ ಜೂನ್ 10ರಂದು ವಿರಾಜಪೇಟೆಯಲ್ಲಿರುವ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಸನ್ಮಾನಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಅಖಿಲ ಕೊಡವ ಸಮಾಜ ಹಾಗೂ ಅದರ ಅಂಗ ಸಂಸ್ಥೆಗಳಾದ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಸಹಕಾರದೊಂದಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಈ ಸಂದರ್ಭದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಆಗಿರುವ ಅಜ್ಜಿಕುಟ್ಟೀರ ಎಸ್ ಪೊನ್ನಣ್ಣ, ಕೊಡವ ಜನಾಂಗದಲ್ಲಿ ಆಧ್ಯಾತ್ಮಿಕ ಸಾಧಕರಾಗಿರುವ ವಿರಾಜಪೇಟೆ ಕಾವೇರಿ ಆಶ್ರಮದ ಹಿರಿಯ ಸ್ವಾಮೀಜಿಗಳಾದ ಶತಾಯುಷಿ
ಶ್ರೀ ಶ್ರೀ ಶ್ರೀ ವಿವೇಕಾನಂದ ಶರಣ ಸ್ವಾಮಿ (ಪಳಂಗಂಡ), ಹಿರಿಯ ಜಾನಪದ ಕಲಾವಿದೆ ಹಾಗೂ
ಪದ್ಮಶ್ರೀ ಪ್ರಶಸ್ತಿ ಪಡೆಯುವ ಮೂಲಕ ಜನಾಂಗದ ಹೆಮ್ಮೆಯಾಗಿರುವ ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ, ಹೆಸರಾಂತ ಹಿರಿಯ ಅಥ್ಲೀಟ್ ಸಹೋದರರಾದ ಪಾಲೆಕಂಡ ಬೋಪಯ್ಯ ಮತ್ತು ಪಾಲೇಕಂಡ ಬೆಳ್ಳಿಯಪ್ಪ , ಹೆಸರಾಂತ ಮಾಸ್ಟರ್ಸ್ ಅಥ್ಲೀಟ್ ಮಾರಮಾಡ ಮಾಚಮ್ಮ
ರವರನ್ನು ಸನ್ಮಾನಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದರು.