ಕೊಡವಾಮೆರ ಕೊಂಡಾಟ ಸಂಘಟನೆ ನಡೆಸುವ “ಬಾಳೋಪಾಟ್’ರ ಬಂಬಂಗ” ಕೊಡವ ಕೌಟುಂಬಿಕ ಎರಡನೇ ವಾರ್ಷಿಕ ಬಾಳೋ ಪಾಟ್ ಸ್ಪರ್ಧೆಯಲ್ಲಿ ಚೇನಂಡ ಪ್ರಥಮ ಕನ್ನಿಂಗಂಡ(ಕುಂಬಾರಗಡಿಗೆ) ದ್ವಿತೀಯ ಏಳ್‌ನಾಡ್ ಓಡಿಯಂಡ ತೃತೀಯ ಬಹುಮಾನ ಪಡೆಯಿತು.
ಮಡಿಕೇರಿಯ ಕಾಫಿ ಕೃಪ ಸಭಾಂಗಣದಲ್ಲಿ, ಕೊಡವಾಮೆರ ಕೊಂಡಾಟ ಸಂಘಟನೆಯ ಉಪಾಧ್ಯಕ್ಷ ಮಾಳೇಟಿರ ಅಜಿತ್ ಪೂವಣ್ಣ ಅಧ್ಯಕ್ಷತೆಯಲ್ಲಿ, ಸ್ಪರ್ಧಾ ಸಂಚಾಲಕ, ಸಂಘಟನೆಯ ಕಾರ್ಯದರ್ಶಿ ಕುಂಞಿರ ಗಿರೀಶ್ ಬೀಮಯ್ಯ ನೇತೃತ್ವದಲ್ಲಿ ನಡೆದ ತೀರ್ಪುಗಾರಿಕೆಯಲ್ಲಿ, ಮೊದಲಿಗೆ ಆಡಳಿತ ಮಂಡಳಿ ನಿರ್ದೇಶಕ ಅಜ್ಜಮಕ್ಕಡ ವಿನು ಕುಶಾಲಪ್ಪ ಅವರು ಗುರು ಕಾರೋಣರಿಗೆ ನೇರ್ಚೆ ಕಟ್ಟಿ ಅಕ್ಕಿ ಹಾಕುವ ಮೂಲಕ ಚಾಲನೆ ನೀಡಲಾಯಿತು.
ತೀರ್ಪುಗಾರರಾಗಿ ಬಾಳೋ ಪಾಟ್ ತಜ್ಞರಾದ ಕಾಳಿಮಾಡ ಮೋಟಯ್ಯ, ಮುದ್ದಂಡ ದೇವಯ್ಯ, ಚೀಯಕ್‌ಪೂವಂಡ ದೇವಯ್ಯ ಅವರು ಕಾರ್ಯ ನಿರ್ವಹಿಸಿದರು. ಎರಡನೇ ವರ್ಷದ ಸ್ಪರ್ಧೆಯ, ಆರಂಭದಲ್ಲಿ 19ಕುಟುಂಬಗಳು ಹೆಸರು ನೋಂದಾಯಿಸಿ ಕೊಂಡಿದ್ದರಾದರೂ, ಅಂತಿಮವಾಗಿ 7ಕುಟುಂಬಗಳು ಸ್ಪರ್ಧಾ ಕಣದಲ್ಲಿದ್ದವು.
‘ಕಾವೇರಿ ಪಾಟ್ ‘ ವಿಷಯವಾಗಿ 20ನಿಮಿಷಕ್ಕೆ ಮೀರದಂತೆ ಹಾಡಲು ನಿಗದಿ ಪಡಿಸಲಾಗಿತ್ತು. ಹಾಡಿನ ವಿಷಯ, ಶಿಸ್ತು, ಉಡುಪು, ಸಮಯ ಪಾಲನೆ, ದುಡಿಕೊಟ್ಟ್, ರಾಗ ಮತ್ತು ಹಾಡಿನ ನಿರರ್ಗಳತೆಯ ಆಧಾರದಲ್ಲಿ, ವೀಡಿಯೋವನ್ನು ಪ್ರೊಜೆಕ್ಟರ್ ಮೂಲಕ ವಿಕ್ಷಿಸಿ ವಿಜೇತರ ಆಯ್ಕೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡವಾಮೆರ ಕೊಂಡಾಟ ಸಂಘಟನೆ ಉಪಾಧ್ಯಕ್ಷ ಮಾಳೇಟಿರ ಅಜಿತ್ ಪೂವಣ್ಣ ಅವರು ಮಾತನಾಡಿ, ಕೊಡವರ ಐತಿಹಾಸಿಕ ಮೂಲ ಬೇರಾಗಿರುವ ಬಾಳೋಪಾಟ್ ಇಂದಿನ ಯುವ ಪೀಳಿಗೆಯ ಅರಿವಿಗೆ ಬರಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಪ್ರತೀ ಕೊಡವ ಕುಟುಂಬಗಳೂ ತಮ್ಮ ಸದಸ್ಯರಿಗೆ ಬಾಳೋ ಪಾಟ್ ಕಲಿಸಲು ಮುಂದಾಗಬೇಕೆಂಬ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ಪ್ರಾರಂಭಿಸಿದ ಈ ಸ್ಪರ್ಧೆಗೆ ಉತ್ತಮ ಸ್ಪಂದನೆ ದೊರೆತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಪರಿಣಾಮಕಾರಿಯಾಗಿ ಆಯೋಜನೆ ಮಾಡಲಾಗುವುದು ಎಂದರು.
ಸ್ಪರ್ಧೆಯಲ್ಲಿ ಭಾಗವಹಿಸಿ ನಂತರ ಅಕಾಲಿಕ ಮರಣ ಹೊಂದಿದ ಏಳ್ ನಾಡ್ ಓಡಿಯಂಡ ರಾಜು ಮಾಚಯ್ಯ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು. ಸ್ಪರ್ಧೆಯಲ್ಲಿ ಚೆಟ್ಟಿಯಾರಂಡ, ಕನ್ನಿಗಂಡ (ಹಮ್ಮಿಯಾಲ), ಪುದಿಯತಂಡ, ಓಡಿಯಂಡ, ಕನ್ನಿಗಂಡ (ಕುಂಬಾರಗಡಿಗೆ), ಚೇನಂಡ, ಮೊಣ್ಣಂಡ ತಂಡಗಳು ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆ ಸಹಕಾರ್ಯದರ್ಶಿ ಮಲ್ಲಂಡ ದರ್ಶನ್ ಮುತ್ತಪ್ಪ, ಸಂಘಟನಾ ಕಾರ್ಯದರ್ಶಿ ತೀತಿಮಾಡ ಸೋಮಣ್ಣ ಅವರುಗಳು ಹಾಜರಿದ್ದು ಯಶಸ್ವಿಗೊಳಿಸಿದರು.
ಈ ಬಾರಿಯ ಪ್ರಥಮ ಬಹುಮಾನವನ್ನು ಉದ್ಯಮಿ ಸರ್ಕಂಡ ದೊರೆಮಣಿ ಸೋಮಯ್ಯ, ದ್ವಿತೀಯ ಬಹುಮಾನವನ್ನು ಉದ್ಯಮಿ ಮುಲ್ಲೇಂಗಡ ಸುಧಾಮುತ್ತಣ್ಣ, ತೃತೀಯ ಬಹುಮಾನವನ್ನು ಉದ್ಯಮಿ ಅಂಜಪರವಂಡ ರಂದು ಮುತ್ತಪ್ಪ ಅವರು ಪ್ರಾಯೋಜಿಸಿದ್ದು, ಬಹುಮಾನ ವಿತರಣಾ ಸಮಾರಂಭವು ಸಧ್ಯದಲ್ಲಿಯೇ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ ಎಂದು ಸಂಘಟನೆ ತಿಳಿಸಿದೆ.