ಮೂರ್ನಾಡು: ಇಲ್ಲಿನ ನಂ.439ನೇ ಸಹಕಾರ ಸ್ಪೋರ್ಟ್ಸ್ ಕ್ಲಬ್‌ನ ವತಿಯಿಂದ 99ನೇ ವಾರ್ಷಿಕ ಕೈಲ್ ಮುಹೂರ್ತ ಹಬ್ಬದ ಆಟೋಟಗಳ ಕಾರ್ಯಕ್ರಮವನ್ನು ದಿನಾಂಕ 3ರಂದು ಆಯೋಜಿಸಲಾಗಿದೆ.
ಮೂರ್ನಾಡು ವಿದ್ಯಾಸಂಸ್ಥೆಯ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ ಆಟೋಟಗಳ ಕಾರ್ಯಕ್ರಮಗಳನ್ನು ಅಪರಾಹ್ನ 1.30 ಗಂಟೆಗೆ ಮೂರ್ನಾಡು ವಿದ್ಯಾಸಂಸ್ಥೆಯ ಗೌ. ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ ಉದ್ಘಾಟಿಸಲಿದ್ದಾರೆ. ಸಾರ್ವಜನಿಕರಿಗೆ ತೆಂಗಿನಕಾಯಿಗೆ ಗುಂಡುಹೊಡೆಯುವುದು, ಮಹನೀಯರಿಗೆ, ಮಹಿಳೆಯರಿಗೆ, ಶಾಲಾ-ಕಾಲೇಜು ಮಕ್ಕಳಿಗೆ ವಿವಿಧ ಓಟದ ಸ್ಪರ್ಧೆಗಳು, ಕಣ್ಣುಕಟ್ಟಿ ಮಡಿಕೆ ಹೊಡೆಯುವುದು, ಭಾರದ ಕಲ್ಲು ಎಸೆತ, ಸಂಗೀತ ಕುರ್ಚಿ, ನಿಂಬೆಹಣ್ಣು ಚಮಚ ಓಟ, ವಾದ್ಯದ ಕುಣಿತ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆಯಲಿದೆ.
ಅಪರಾಹ್ನ 4.30 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಡಾ. ಮಂಥರ್‌ಗೌಡ, ಪದ್ಮಶ್ರೀ ಪ್ರಶಸ್ತಿ ವಿಜೇತೆ ಐಮುಡಿಯಂಡ ರಾಣಿ ಮಾಚಯ್ಯ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಹಕಾರ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಮುಂಡಂಡ ಪವಿ ಸೋಮಣ್ಣ ವಹಿಸಲಿದ್ದು, ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಹಾಕಿ ಆಟಗಾರರು ಮತ್ತು ಏಕಲವ್ಯ ಪ್ರಶಸ್ತಿ ವಿಜೇತೆ ಕಂಬೀರಂಡ ಪೊನ್ನಮ್ಮ ಬೋಪಣ್ಣ ಅವರನ್ನು ಸನ್ಮಾನಿಸಲಾಗುವುದು.
ವರದಿ: ಟಿ.ಸಿ. ನಾಗರಾಜ್, ಮೂರ್ನಾಡು