ಚೆಯ್ಯ0ಡಾಣೆ: ಕೊಡಗು ಸುನ್ನೀವೆಲ್ಫೇರ್ ಅಸೋಸಿಯೆಷನ್ ಕತಾರ್ ಸಮಿತಿಯ ವತಿಯಿಂದ ಮಹ್ಮೂದ್ ಮುಸ್ಲಿಯಾರ್ (ಎಡಪಾಲ) ಅವರ ಅನುಸ್ಮರಣೆ ಮತ್ತು ಸ್ವಲಾತ್ ಮಜ್ಲಿಸ್ ಕಾರ್ಯಕ್ರಮವು ಕತಾರ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹಾಫಿಲ್ ಉಮರುಲ್ ಫಾರೂಖ್ ಸಖಾಫಿ ಜೀವನದಲ್ಲಿ ಅತಿಯಾದ ಸೂಕ್ಷ್ಮತೆಯನ್ನು ಪಾಲಿಸುತ್ತಿದ್ದ ಮಹ್ಮೂದ್ ಮುಸ್ಲಿಯಾರ್ ಕೊಡಗಿನ ಸುನ್ನೀ ಸಮೂಹದ ಏಳಿಗೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಒಬ್ಬ ಮಹಾನ್ ಸಾತ್ವಿಕ ಪಂಡಿತರಾಗಿದ್ದರು ಎಂದು ತಮ್ಮ ಅನುಭವಗಳನ್ನು ಸ್ಮರಿಸಿದರು.
ಸಮಿತಿಯ ಪ್ರಧಾನ ನಿರ್ದೇಶಕರಾದ ಯೂಸುಫ್ ಸಖಾಫಿ ಅಯ್ಯಂಗೇರಿ ಮಾತನಾಡಿ ಮಹ್ಮೂದ್ ಮುಸ್ಲಿಯಾರ್ ಸಹನೆ, ವಿನಯ ಮತ್ತು ತಾಳ್ಮೆಯಿಂದ ಕೊಡಗಿನ ಸುನ್ನೀ ಸಂಘ ಸಂಸ್ಥೆಗಳನ್ನು ಬೆಳೆಸುವುದರಲ್ಲಿ ಪ್ರಮುಖ ಪಾತ್ರವಹಿಸಿದ ಮಹಾನ್ ಪಂಡಿತ ಶ್ರೇಷ್ಠರಾಗಿದ್ದರು. ಜಿಲ್ಲೆಯ ಮುಸ್ಲಿಂ ಮತ್ತು ಮುಸ್ಲಿಮೇತರರ ನಡುವೆ ಸರ್ವ ಸಮ್ಮತರು ಹಾಗೂ ಅಪಾರವಾಗಿ ಗೌರವಿಸಲ್ಪಡುವ ಉಲಮಾ ಕಣ್ಮಣಿ ಗಳಾಗಿದ್ದರು ಎಂದರು.
ಮಹ್ಮೂದ್ ಮುಸ್ಲಿಯಾರ್ ಮತ್ತು ಅಲಿ ಮುಸ್ಲಿಯಾರ್ ಅವರ ಧನ್ಯ ಜೀವನದ ಕೆಲವು ಘಟನೆಗಳನ್ನು ಸ್ಮರಿಸುತ್ತಾ ಸಭೆಯಲ್ಲಿದ್ದ ನವ ಯುವ ಮಿತ್ರರಿಗೆ ನಝೀರ್ ಮೂರ್ನಾಡು ಪರಿಚಯಿಸಿದರು.
ಮೊದಲಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಬ್ಬಾಸ್ ಸಖಾಫಿ ನಾನು ಕೊಟ್ಟಮುಡಿ ಮರ್ಕಜ್ ನಲ್ಲಿದ್ದಾಗ ಮಹ್ಮೂದ್ ಮುಸ್ಲಿಯಾರ್ ರೊಂದಿಗೆ ಕಳೆದ ಗತಕಾಲದ ನೆನಪುಗಳನ್ನು ನೊಂದ ಮನದೊಂದಿಗೆ ಸಭೆಯ ಮುಂದಿಟ್ಟರು.
ಕಾರ್ಯಕ್ರಮದಲ್ಲಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಕತಾರ್ ಸಮಿತಿಯ ಕಾರ್ಯದರ್ಶಿ ಅಝರ್ ಕೊಂಡಂಗೇರಿ,ಜಬ್ಬಾರ್ ಕೊಳಕೇರಿ ಸೇರಿದಂತೆ ಮತ್ತಿತರ ಪ್ರಮುಖರು ಹಾಜರಿದ್ದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ