ನರಿಯಂದಡ ಗ್ರಾಮ ಪಂಚಾಯಿತಿ ಗ್ರಾಮ ಸಭೆ

Reading Time: 6 minutes

ಕಾಡಾನೆ,ಆಸ್ಪತ್ರೆ,ವಿದ್ಯುತ್, ಸ್ಮಶಾನ ಜಾಗ ಸಮಸ್ಯೆ ಬಗ್ಗೆ ಸಾರ್ವಜನಿಕರ ಅಸಮಾಧಾನ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಅಟ್ಟದಲ್ಲಿ ಒಂದು ಕಛೇರಿ, ಬೆಟ್ಟದಲ್ಲಿ ಒಂದು ಕಛೇರಿ; ಚಂಡೀರ ಮುದ್ದಪ್ಪ

ಚೆಯ್ಯ0ಡಾಣೆ, ಸೆ 16: ನರಿಯಂದಡ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪೆಮ್ಮಂಡ ಕೌಶಿ ಕಾವೇರಮ್ಮ ಅಧ್ಯಕ್ಷತೆಯಲ್ಲಿ ಸ್ಥಳೀಯ ಲಕ್ಷ್ಮಿ ಮಹಿಳಾ ಸಮಾಜದಲ್ಲಿ ನಡೆಯಿತು.

ಸಾರ್ವಜನಿಕರ ಪರವಾಗಿ ಪಟ್ರಪಂಡ ಜಗದೀಶ್ ಮಾತನಾಡಿ ಕಾಡಾನೆ ಹಾವಳಿ ಒಂದು ಕಡೆಯಾದರೆ ಇದೀಗ ಕೀಮಲೆ ಕಾಡಿನಲ್ಲಿ ಚಿರತೆ ಕೂಡ ಪ್ರತ್ಯಕ್ಷ ಗೊಂಡಿದ್ದು ಭಯದ ವಾತಾವರಣ ಸೃಷ್ಟಿಯಾಗಿದೆ,ಹಲವು ವರ್ಷದಿಂದ ನೀರಿನ ಸಮಸ್ಯೆ ತಲೆದೋರಿದ್ದು ಕೂಡಲೇ ನೀರಿನ ವ್ಯವಸ್ಥೆ ಸರಿಪಡಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅರಣ್ಯ ಇಲಾಖೆಯ ಪ್ರತಿನಿಧಿಗಳು ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನೀರಿನ ಸಮಸ್ಯೆಗೆ ಜೆಜೆಎಂ ನಾ ತೌಸೀಫ್ ಮಾತನಾಡಿ ಶೇಕಡಾ 90 % ಕಾಮಗಾರಿ ಪೂರ್ಣಗೊಂಡಿದ್ದು ಕೆಲವು ಜಾಗದಲ್ಲಿ ಟ್ಯಾಂಕ್ ನಿರ್ಮಿಸಲು ಸ್ಥಳವಕಾಶದ ಕೊರೆತೆ ಇದ್ದು ಕೂಡಲೇ ಸ್ಥಳವಕಾಶ ಕಲ್ಪಿಸಿದರೆ ಕಾಮಗಾರಿ ಪೂರ್ಣಗೊಂಡು ನೀರಿನ ಸಮಸ್ಯೆ ಬಗ್ಗೆ ಹರಿಯಲಿದೆ ಎಂದರು.

ಚಂಡೀರ ಮುದ್ದಪ್ಪ ಮಾತನಾಡಿ ವಿದ್ಯುತ್ ಸಮಸ್ಯೆ ಒಂದು ಕಡೆಯಾದರೆ ಬತ್ತ ಬೆಳೆಯುವ ಕೃಷಿಕರಿಗೆ ಮಳೆ ಇಲ್ಲದೆ ನೀರಿನ ಸಮಸ್ಶೆ ತಲೆದೋರಿದೆ,ಮಡಿಕೇರಿಯಲ್ಲಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ತೆರಳಿದರೆ ಒಂದು ಕಛೇರಿ ಅಟ್ಟದಲ್ಲಿದೆ ಇನೊಂದು ಕಛೇರಿ ಬೆಟ್ಟದ ಮೇಲಿದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದರು ಕೂಡಲೇ ಎಲ್ಲಾ ಸೌಲಭ್ಯ ನಮ್ಮ ಗ್ರಾಮಪಂಚಾಯಿತಿಯಲ್ಲೇ ದೊರೆಯುವಂತೆ ಮಾಡಿ ಎಂದರು.
ಇದಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೌಶಿ ಕಾವೇರಮ್ಮ ಪ್ರತಿಕ್ರಿಹಿಸಿ ಮುಂದಿನ ದಿನದಲ್ಲಿ ಸೌಲಭ್ಯ ದೊರೆಯುವಂತೆ ಇಲಾಖೆಯ ಅಧಿಕಾರಿಗಳಲ್ಲಿ ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.
ಗ್ರಾಮಸ್ಥರ ಪರವಾಗಿ ಮುಂಡಿಯೋಳಂಡ ರವಿ ಸೋಮಯ್ಯ ಮಾತನಾಡಿ ಕಂದಾಯ ಇಲಾಖೆಯ ಅಧಿಕಾರಿಗಳು ವಾರಕ್ಕೆ 2 ದಿನವಾದರೂ ನಮ್ಮ ಗ್ರಾಮಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸಬೇಕು, ಒಂದು ಅರ್ಜಿ ನೀಡಲು ನಾಪೋಕ್ಲು,ಮಡಿಕೇರಿ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ ಕೂಡಲೇ ಸಂಬಂಧ ಪಟ್ಟವರ ಗಮನಕ್ಕೆ ತರಲು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷರು ಇಂದಿನ ಗ್ರಾಮ ಸಭೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದಾರೆ. ಇದರ ಬಗ್ಗೆ ಕೂಡಲೇ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ನಿಕಟ ಪೂರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಮಾತನಾಡಿ ಕಾಡಾನೆ ಹಾವಳಿಯಿಂದ ಜನರು ತತ್ತರಿಸಿದ್ದು ಅರಣ್ಯ ಇಲಾಖೆ ಆಸ್ಪತ್ರೆ,ಶಾಲೆ, ಸರಕಾರಿ ಕಛೇರಿಗಳ ಅಂಗಳದಲ್ಲಿ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸುದನ್ನು ಕೈ ಬಿಟ್ಟು ಬೆಟ್ಟಪ್ರದೇಶ,ಅರಣ್ಯ ಪ್ರದೇಶದಲ್ಲಿ ಬಾಳೆ ಗಿಡಗಳನ್ನು ನೆಟ್ಟು ಆನೆಗಳಿಗೆ ತಿನ್ನಲು ಆಹಾರಕ್ಕೆ ಅನುವು ಮಾಡಿಕೊಡಿ ,ಬಾಳೆ ಗೆಡ್ಡೆ ಬೇಕಾದರೆ ಒಂದು ಲೋಡ್ ನಾನೇ ನೀವು ಹೇಳುವ ಸ್ಥಳಕ್ಕೆ ತಂದು ಕೊಡುತ್ತೆನೆ ಎಂದು ಅರಣ್ಯ ಇಲಾಖೆಯ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದರು. ಇದಕ್ಕೆ ಪ್ರತಿಕ್ರಿಹಿಸಿದ ವಿರಾಜಪೇಟೆ ಅರಣ್ಯ ಇಲಾಖೆಯ ಅರಣ್ಯಧಿಕಾರಿ ಅನಿಲ್ ಮಾತನಾಡಿ ಮುಂದಿನ ದಿನಗಳಲ್ಲಿ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು,ತೋಟಗಳಲ್ಲಿಬೀಡು ಬಿಟ್ಟ 50 ಕಾಡಾನೆಗಳನ್ನು ಹಿಡಿಯಲು ಅನುಮತಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಕೂಡಲೇ ಕಾಡಾನೆ ಹಿಡಿಯುವ ಕಾರ್ಯಾಚರಣೆ ಆರಂಬಿಸುವ ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕೋಡಿರ ವಿನೋದ್ ನಾಣಯ್ಯ ಮಾತನಾಡಿ ಕಡಂಗ ಅರಪಟ್ಟುವಿನಲ್ಲಿ ಪಶು ವೈದ್ಯಾಶಾಲೆ ಇದೆ.
ಆದರೆ ಅಲ್ಲಿಯ ವೈಧ್ಯಾಧಿಕಾರಿ ಅರಪಟ್ಟು ಗ್ರಾಮದಲ್ಲಿರುವ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಕಾರ್ಯಚರಿಸುತಿಲ್ಲ ವೈದ್ಯಾ ಶಾಲೆ ಕಟ್ಟಡ ಇರುದು ಅರಪಟ್ಟು ಗ್ರಾಮದಲ್ಲಿ ವಿದ್ಯುತ್ ಉಪಯೋಗಿಸುದು ಅರಪಟ್ಟು ವಿನದ್ದು ಆದರೆ ಸೌಲಭ್ಯ ದೊರಕುದು ಬೇರೆ ಗ್ರಾಮಕ್ಕೆ ಎಂದು ಪಶು ಇಲಾಖೆಯ ಅಧಿಕಾರಿಗೆ ಸೂಕ್ತ ಮಾಹಿತಿ ನೀಡುವಂತೆ ಪ್ರಸ್ತಾಪಿಸಿದರು. ಇದಕ್ಕೆ ಪಶು ಇಲಾಖೆಯ ಅಧಿಕಾರಿ ಗುರುರಾಜ್ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕರಡ ಗ್ರಾಮದಲ್ಲಿ 3 ತಿಂಗಳಿನಿಂದ ವಿದ್ಯುತ್ ಬಿಲ್ ನೀಡಿಲ್ಲ ಎಂದು ಗ್ರಾಮಸ್ಥೆ ಈಶ್ವರಿ ಚೆಸ್ಕಾಂ ವಿರುದ್ದ ಆಕ್ರೋಶ ಹೊರಹಾಕಿದರು.
ಇದಕ್ಕೆ ಪ್ರತಿಕ್ರಿಯೆ ನೀಡಲು ಚೆಸ್ಕಾಂ ಇಲಾಖೆಯಿಂದ ಆಗಮಿಸಿದ ಪ್ರತಿನಿಧಿಗೆ ಯಾವುದೇ ಮಾಹಿತಿ ಇಲ್ಲ ಗ್ರಾಮ ಸಭೆಗೆ ಉನ್ನತ ಅಧಿಕಾರಿಗಳು ಬಂದು ಮಾಹಿತಿ ನೀಡಬೇಕು ಕಾಟಾಚಾರಕ್ಕೆ ಇಲಾಖೆಯಿಂದ ಬಿಲ್ ಕಲಕ್ಟರ್ ಗಳನ್ನು ಗ್ರಾಮ ಸಭೆಗೆ ಕಳಿಸುತ್ತಾರೆ ಇವರಿಗೆ ಯಾವುದೆ ಮಾಹಿತಿ ಇರಲ್ಲ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು.

ಚೆಯ್ಯ0ಡಾಣೆ ಅರೋಗ್ಯ ಕೇಂದ್ರದ ಸಹಾಯಕಿ ರೋಹಿಣಿ ಮಾತನಾಡಿ ನಮ್ಮ ನೆರೆ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಅಧಿಕವಾಗುತ್ತಿದ್ದು ಮರಣ ಪ್ರಮಾಣ ಹೆಚ್ಚಾಗುತ್ತಿದೆ. ನಿಫಾ ವೈರಸ್ ನಾ ಯಾವುದೇ ಲಕ್ಷಣಗಳು ಕಂಡರೆ ಕೂಡಲೇ ರಕ್ತ ಪರೀಕ್ಷೆ ಮಾಡಿಸಿ ಹಾಗೂ ನೆರೆ ರಾಜ್ಯಕ್ಕೆ ತೆರಳಿದವರು ಹಾಗೂ ಅಲ್ಲಿಂದ ಬಂದವರು ಪರೀಕ್ಷೆ ಮಾಡಿಸಿ ರೋಗ ಹರಡದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕೆಂದರು.

ಗ್ರಾಮಸ್ಥರಾದ ಮುಂಡಿಯೋಳಂಡ ಮಾಚಮ್ಮ,ಶೀತಾರಾಂ,ಲಿಖಿನ್, ಪುಷ್ಪವತಿ ಮತಿತ್ತರರು ವಿವಿಧ ಕಾಮಗಾರಿ ಹಾಗೂ ಸೌಲಭ್ಯದ ಬಗ್ಗೆ ಮಾಹಿತಿ ಕೋರಿದರು. ಇದಕ್ಕೆ ಅಧ್ಯಕ್ಷರು ಹಾಗೂ ಇಲಾಖೆಯ ಪ್ರತಿನಿಧಿಗಳು ಸಮರ್ಪಕ ಮಾಹಿತಿ ನೀಡಿದರು.

ಪಶು ಇಲಾಖೆಯ ಬಗ್ಗೆ ಪಶು ವೈಧ್ಯಾಧಿಕಾರಿ ಗುರುರಾಜ್, ಶಿಶು ಇಲಾಖೆಯ ಬಗ್ಗೆ ಸೀತಾಲಕ್ಷ್ಮಿ, ಶಿಕ್ಷಣ ಇಲಾಖೆಯ ಬಗ್ಗೆ ಸಿ ಆರ್ ಪಿ ಉಷಾ, ಆರಕ್ಷಕ ಇಲಾಖೆಯ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಸಹಾಯಕ ಠಾಣಾಧಿಕಾರಿ ಶಾದುಲಿ,ಆಯುಷ್ ಅರೋಗ್ಯ ಆಸ್ಪತ್ರೆಯ ಬಗ್ಗೆ ಡಾ ಶೈಲಜಾ, ಕರ್ನಾಟಕ ಬ್ಯಾಂಕ್ ಬಗ್ಗೆ ವ್ಯವಸ್ಥಾಪಕರಾದ ಬಾಲಕೃಷ್ಣ, ಕೃಷಿ ಇಲಾಖೆ ಹಾಗೂ ವಿವಿಧ ಇಲಾಖೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದರು.

ಈ ಸಂದರ್ಭ ನೋಡೆಲ್ ಅಧಿಕಾರಿಯಾಗಿ ಆಗಮಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾ ಲಕ್ಷ್ಮಿ,ಗ್ರಾಮ ಪಂಚಾಯಿತಿ ಸದಸ್ಯರು,ಸಂಜೀವಿನಿ ಒಕ್ಕೂಟದ ಸದಸ್ಯರು,ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು,ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ವನಜಾ, ಸ್ವಾಗತವನ್ನು ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಬಿದ್ದಪ್ಪ ವಂದನೆಯನ್ನು ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ನೆರವೇರಿಸಿದರು.

ವರದಿ:  ಸಿ.ಎ. ಅಶ್ರಫ್, ಚೆಯ್ಯಂಡಾಣೆ

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments