ನಾಪೋಕ್ಲು : ನಾಪೋಕ್ಲು ಪಟ್ಟಣದ ವಿವಿಧ ದೇವಾಲಯಗಳ ಸಮಿತಿ ವತಿಯಿಂದ ಆಚರಿಸಲ್ಪಡುವ ಗಣೇಶೋತ್ಸವದ ಅಲಂಕೃತ ಗಣೇಶ ಮೂರ್ತಿಗಳನ್ನು ಮೆರವಣಿಗೆಯ ಮೂಲಕ ಕೊಂಡೊಯ್ದು ದೇವಾಲಯಗಳಲ್ಲಿ ಮಂಗಳವಾರ ಪ್ರತಿಷ್ಠಾಪಿಸಲಾಯಿತು.
ನಾಪೋಕ್ಲುವಿನ ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಗಣೇಶೋತ್ಸವ ಸೇವಾ ಸಮಿತಿ, ಹಳೆ ತಾಲೂಕು ಶ್ರೀ ಭಗವತಿ ದೇವಾಲಯದ ಗಣೇಶೋತ್ಸವ ಸೇವಾ ಸಮಿತಿ, ಶ್ರೀ ರಾಮ ಮಂದಿರ ಗಣೇಶೋತ್ಸವ ಸೇವಾ ಸಮಿತಿ, ಇಂದಿರಾನಗರದ ವಿವೇಕಾನಂದ ಸಂಘದ ಗಣೇಶೋತ್ಸವ ಸೇವಾ ಸಮಿತಿ ಹಾಗೂ ಕಕ್ಕುಂದ ಕಾಡು ಶ್ರೀ ವೆಂಕಟರಮಣ ದೇವಾಲಯದ ಗಣಪತಿ ಸೇವಾ ಸಮಿತಿ ವತಿಯಿಂದ ಆಯೋಜಿಸಲಾದ ಗಣೇಶೋತ್ಸವದ ಅಲಂಕೃತ ಗಣೇಶ ಮೂರ್ತಿಯನ್ನು ನಾಫೋಕ್ಲು ಪಟ್ಟಣದ ಮಾರುಕಟ್ಟೆ ಬಳಿಯಿಂದ ಪಟ್ಟಣದ ಮುಖ್ಯಬೀದಿಯ ಮೂಲಕ ಮೆರವಣಿಗೆಯಲ್ಲಿ ಸಾಗಿ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಪ್ರತಿಷ್ಠಾಪಿಸಲಾಯಿತು.
ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು, ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.
ಗಣೇಶೋತ್ಸವದ ಅಂಗವಾಗಿ 5 ದಿನಗಳ ಕಾಲ ದೇವಾಲಯಗಳಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಪೂಜಾ ಕಾರ್ಯಕ್ರಮ ನಡೆಯಲಿದೆ. ಅದರಂತೆ ಪ್ರತಿದಿನ ವಿವಿಧ ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮ,ವಿವಿಧ ಕ್ರೀಡಾಕೂಟಗಳು ನಡೆಯಲಿದೆ. ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮತ್ತು ಅನ್ನದಾನ ಕಾರ್ಯಕ್ರಮ ಜರುಗಲಿದೆ.
ತಾ.23ರಂದು ಭವ್ಯ ಅಲಂಕೃತ ಮಂಟಪದಲ್ಲಿರಿಸಿದ ಗಣೇಶ ಮೂರ್ತಿಯನ್ನು ಕೇರಳದ ಚಂಡೆ ಮೇಳ ಹಾಗೂ ಡಿಜೆ ಮನರಂಜನೆಯೊಂದಿಗೆ ನಾಪೋಕ್ಲು ಪಟ್ಟಣದ ಮುಖ್ಯಬೀದಿಗಳಲ್ಲಿ ಮೆರವಣಿಗೆಯ ಮೂಲಕ ಕೊಂಡೊಯ್ದು ಪವಿತ್ರ ಕಾವೇರಿ ನದಿಯಲ್ಲಿ ಸಂಜೆ ವಿಸರ್ಜಿಸಲಾಗುವುದು ಎಂದು ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ತಿಳಿಸಿದರು.
ವರದಿ: ಝಕರಿಯ ನಾಪೋಕ್ಲು