ನಾಪೋಕ್ಲು : ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪ್ಪೆಂಡಡಿ ಇವರ ಸಂಯುಕ್ತ ಆಶ್ರಯದಲ್ಲಿ ನಾಪೋಕ್ಲುವಿನ ಕೆಪಿಎಸ್ ಪ್ರಾಥಮಿಕ ಶಾಲಾ ಮೈದಾನದಲ್ಲಿ 2023-24ನೇ ಸಾಲಿನ ತಾಲೂಕು ಮಟ್ಟದ ಅಂತರ ಪ್ರಾರ್ಥಮಿಕ ಹಾಗೂ ಪ್ರೌಢಶಾಲಾ ಬಾಲಕ, ಬಾಲಕಿಯರ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು.
ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ತಾಲೂಕು ತಹಶೀಲ್ದಾರ್ ಪ್ರವೀಣ್ ಕುಮಾರ್ ಸರ್ಕಾರಿ ಶಾಲೆಯ ಸ್ಥಿತಿಗತಿ ಆ ಮಕ್ಕಳ ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ. ಸಾರ್ವಜನಿಕರೊಂದಿಗೆ ಬೆರೆಯುದರಲ್ಲೂ ಮಕ್ಕಳೊಂದಿಗೆ ಬೆರೆಯುವುದರಲ್ಲಿ ವ್ಯತ್ಯಾಸ ಇದೆ. ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆ ನಿರ್ದಿಷ್ಟವಾಗಿ ಇಂತಹದೇ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು. ಆದರೆ ಮಾತ್ರ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ಅನುಕೂಲವಾಗಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಮಾತನಾಡಿ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆಗೆ ಪ್ರೋತ್ಸಾಹವಾಗುತ್ತದೆ. ದೈಹಿಕ ಮಾನಸಿಕ ಸಮತೋಲನ ವಿಕಸನಕ್ಕೆ ಕ್ರೀಡೆ ಬಹಳ ಮುಖ್ಯವಾಗಿದೆ. ನಮ್ಮ ತಾಲೂಕಿನಲ್ಲಿ ಅತ್ಯುತ್ತಮವಾದ ದೈಹಿಕ ಶಿಕ್ಷಕರ ತಂಡ ಕಾರ್ಯಾಚರಿಸುತ್ತಿದೆ ಎಲ್ಲಾ ಕ್ರೀಡೆಗಳಿಗೆ ಉತ್ತಮವಾದ ಪ್ರೋತ್ಸಾಹ ದೊರೆಯುತ್ತಿದೆ ಇದರ ಸದುಪಯೋಗ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಕ್ರೀಡೆ ಜೀವನದ ಪಾಠ, ಇದರಲ್ಲಿ ಸೋಲು ಗೆಲುವು ಅಡಗಿರುತ್ತದೆ. ಜೀವನದಲ್ಲಿ ವ್ಯಕ್ತಿ ಯಶಸ್ವಿಯಾಗಿ ಬದುಕಬೇಕು ಅವನು ಸಂಪೂರ್ಣ ಬಾಳನ್ನು ಹೊಂದಬೇಕು ಎಂದರು.
ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಎ. ಹಾರಿಸ್ ಕ್ರೀಡಾ ಜ್ಯೋತಿ ಬೆಳಗಿಸಿದರು. ನಾಪೋಕ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾವತಿ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿದರು. ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ ಪ್ರಾಸ್ತಾವಿಕ ನುಡಿಗಳ ನಾಡಿ ಶುಭ ಹಾರೈಸಿದರು.
ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪೂರ್ಣೇಶ್, ಸಿ.ಕೆ. ತಿಮ್ಮಯ್ಯ,ನಿವೃತ ದೈಹಿಕ ಶಿಕ್ಷಕಿ ಪೊನ್ನಮ್ಮ,ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶಿಕ್ಷಕಿ ಚಂದ್ರಕಲಾ,ಶಿಕ್ಷಕಿ ಲಲಿತಾ, ಸಮಾಜ ಸೇವಕ ಕನ್ನಡಿಯಂಡ ಹಸೈನಾರ್ ಕೊಟ್ಟಮುಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ಹಾಗೂ ಎಕ್ಸೆಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ನಡೆದ ನೃತ್ಯ ನೋಡುಗರ ಗಮನ ಸೆಳೆಯಿತು.
ಕ್ರೀಡಾಕೂಟದಲ್ಲಿ ನಾಪೋಕ್ಲು, ಭಾಗಮಂಡಲ, ಮಡಿಕೇರಿ ಮುರ್ನಾಡು ವಲಯದ ವಿವಿಧ ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನಪಡೆದ ವಿದ್ಯಾರ್ಥಿಗನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಯಿತು.
ಈ ಸಂದರ್ಭ ಚಪ್ಪೆಂಡಡಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಂ. ಅಬ್ಬಾಸ್,ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಉಪ ಪ್ರಾಂಶುಪಾಲ ಎಂ.ಎಸ್. ಶಿವಣ್ಣ,ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವಯ್ಯಪಲ್ಲೇದ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಗುರುರಾಜ,ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪೊನ್ನಚನ ಶ್ರೀನಿವಾಸ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶುಕ್ರುವುದೇವ್ ಗೌಡ, ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮೋಹನ್ ಪೆರಾಜೆ, ರಾಜ್ಯ ಅನುದಾನಿತ ಶಾಲಾ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಪ್ರಸಾದ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್, ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕಿರಣ್ ಸೇರಿದಂತೆ ಮತ್ತಿತರ ಪ್ರಮುಖರು, ಕ್ರೀಡಾಕೂಟದಲ್ಲಿ ಪಾಲ್ಗೊಂಡ ವಿವಿಧ ಶಾಲೆಯ ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಅಶೋಕ್ ನಿರೂಪಿಸಿದರು. ಶಿಕ್ಷಕಿ ಕೆ.ಬಿ. ಉಷಾರಾಣಿ ಸ್ವಾಗತಿಸಿ, ಶಿಕ್ಷಕ ತಿಮ್ಮಯ್ಯ ವಂದಿಸಿದರು.
ವರದಿ: ಝಕರಿಯ ನಾಪೋಕ್ಲು