ನಾಪೋಕ್ಲು: ಗೌರಿಗಣೇಶೋತ್ಸವದ ಅಂಗವಾಗಿ ನಾಪೋಕ್ಲು ಪಟ್ಟಣದ ವಿವಿಧ ಗಣೇಶ ಸೇವಾ ಸಮಿತಿಗಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿಗಣೇಶ ಮೂರ್ತಿಗಳ ವಿಸರ್ಜನೋತ್ಸವ ಅತ್ಯಂತ ವಿಜೃಂಭಣೆಯಿಂದ ಶನಿವಾರ ನಡೆಯಿತು.
ನಾಪೋಕ್ಲುವಿನ ವಿವೇಕಾನಂದ ಸೇವಾಸಮಿತಿ ವತಿಯಿಂದ ಇಂದಿರಾ ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ, ಶ್ರೀರಾಮಟ್ರಸ್ಟ್ ವತಿಯಿಂದ ಗುರುಪೊನ್ನಪ್ಪ ಸಭಾಂಗಣದಲ್ಲಿ ತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿ,ಪೊನ್ನುಮುತ್ತಪ್ಪ ದೇವಾಲಯದ ವಿನಾಯಕ ಸೇವಾ ಸಮಿತಿ ವತಿಯಿಂದ ಹಳೆ ತಾಲೂಕುವಿನ ಪೊನ್ನುಮುತ್ತಪ್ಪ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿ, . ನಾಪೋಕ್ಲುನಾಡು ಗೌರಿಗಣೇಶ ಸಮಿತಿ ವತಿಯಿಂದ ಹಳೆತಾಲೂಕಿನ ಭಗವತಿದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿಗಣೇಶಮೂರ್ತಿ ಹಾಗೂ ಕಕ್ಕುಂದಕಾಡಿನ ಗಣೇಶೋತ್ಸವ ಸೇವಾಸಮಿತಿ ವತಿಯಿಂದ ವೆಂಕಟೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿಗಳನ್ನು ನಾಪೋಕ್ಲು ಪಟ್ಟಣದಲ್ಲಿ ಅದ್ದೂರಿಮೆರವಣಿಗೆ ಮೂಲಕ ಅಲಂಕೃತವಾಹನಗಳಲ್ಲಿ ಕೊಂಡೊಯ್ದು ಕಾವೇರಿನದಿಯಲ್ಲಿ ವಿಸರ್ಜಿಸಲಾಯಿತು.
ಐದು ಮಂಟಪಗಳು ಒಂದಕ್ಕೊಂದು ಪೈಪೋಟಿ ನೀಡುವಮೂಲಕ ಜನ-ಮನ ರಂಜಿಸಿತು.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಮೆರವಣಿಗೆಯನ್ನು ವೀಕ್ಷಿಸಿ ಕಣ್ತುಂಬಿ ಕೊಂಡರು. ಮೆರವಣಿಗೆಯಲ್ಲಿ ವಾಲಗ ಡಿಜೆ, ಬ್ಯಾಂಡ್ ಮನರಂಜನೆಗೆ ಯುವ ಸಮೂಹ ಕುಣಿದು ಸಂಭ್ರ ಮಿಸಿದರು ಇದಕ್ಕೆ ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಸಾತ್ ನೀಡಿದ್ದು ವಿಶೇಷವಾಗಿತ್ತು.ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳ ಆಕರ್ಷಕ ನೃತ್ಯಗಳು ನೋಡುಗರಿಗೆ ಮೆರಗು ನೀಡಿತು.ಮಧ್ಯಾಹ್ನದಿಂದ ಆರಂಭವಾದ ಮೆರವಣಿಗೆ ತಡರಾತ್ರಿವರಿಗೂ ಸಾಗಿ ಕಾರೆಕ್ಕಾಡು ಬಳಿಯ ಕಾವೇರಿ ನದಿಯಲ್ಲಿ ಎಲ್ಲಾ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಮಡಿಕೇರಿ ವಿಭಾಗದ ಡಿವೈಎಸ್ಪಿ ಜಗದೀಶ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಸಿಬ್ಬಂದಿಗಳು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ವರದಿ: ಝಕರಿಯ ನಾಪೋಕ್ಲು