ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ವರ್ದೆಯಲ್ಲಿ ಚೇನಂಡ ಬೋಪಣ್ಣ ವಿನ್ನರ್
ಚೆಯ್ಯ0ಡಾಣೆ ಸೆ 25: ಜನಾಂಗದ ಆಚಾರ ವಿಚಾರ ಪದ್ಧತಿ ಪರಂಪರೆಗಳನ್ನು ರಕ್ಷಣೆ ಮಾಡಬೇಕಾದ ಜವಾಬ್ದಾರಿ ಕೊಡವ ಸಮಾಜ ಮತ್ತು ಇತರ ಸಂಘ-ಸಂಸ್ಥೆಗಳದ್ದು ಎಂದು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಹೇಳಿದರು.
ಚೆಯ್ಯಂಡಾಣೆ ಕೇಂದ್ರ ಕೊಡವ ಸಮಾಜದ ವತಿಯಿಂದ ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾದ ಕೈಲ್ ಮೂರ್ತ ಹಬ್ಬದ ಸಂತೋಷಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಒಂದು ಜನಾಂಗದ ಪರವಾಗಿ ಧ್ವನಿ ಎತ್ತುವ ಶಕ್ತಿ ಆಯಾ ಜನಾಂಗದ ಸಂಘಟನೆಗಳಿಗಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರು ಎಲ್ಲಾ ಸಮುದಾಯದ ಜನರನ್ನು ಒಟ್ಟಿಗೆ ಕರೆದೊಯ್ಯಬೇಕಾದ ಪರಿಸ್ಥಿತಿ ಇದೆ. ವಸ್ತ್ರಧಾರಣೆಯಿಂದ ಮಾತ್ರ ಜನಾಂಗವನ್ನು ಗುರುತಿಸಿಕೊಳ್ಳುವುದು ಸಾಧ್ಯವಿಲ್ಲ, ಜನಾಂಗದ ರಕ್ಷಣೆಯಾಗಬೇಕಾದರೆ ಪುರಾತನ ಕಾಲದಿಂದ ಬಂದಂತಹ ಆಚಾರ ವಿಚಾರ ಪದ್ಧತಿ ಪರಂಪರೆಗಳೊಂದಿಗೆ ನಮ್ಮ ಪರಿಸರದಲ್ಲಿರುವ ಮಣ್ಣು, ಜಲ, ನೆಲ ಹಾಗೂ ಜನರ ನಡುವೆ ಉತ್ತಮ ಬಾಂಧವ್ಯ ಹೊಂದಿದರೆ ಮಾತ್ರ ಸಾಧ್ಯ ಎಂದರು.
ಮತೋರ್ವ ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಮಾತನಾಡಿ ಕೊಡವ ಸಂಸ್ಕೃತಿ,ಆಚಾರ,ವಿಚಾರ, ಪದ್ದತಿಯ ಉಳಿವಿಗಾಗಿ ಶ್ರಮಿಸಬೇಕು ಮುಂದಿನ ಯುವ ಪೀಳಿಗೆಗೆ ನಾವು ಸಜ್ಜಾಗಬೇಕು,ಸಂಘ,ಸಂಸ್ಥೆಗಳಿಗೆ ಬರುವ ಅನುದಾನವನ್ನು ಸಂಘ ಸಂಸ್ಥೆಗಳ ಕಟ್ಟಡ ಮತಿತ್ತರ ಉಪಯೋಗಕ್ಕೆ ನೀಡಲಾಗುವುದು. ಚೆಯ್ಯ0ಡಾಣೆ ಕೊಡವ ಸಮಾಜದ ಕಟ್ಟಡಕ್ಕೆ ಸರಕಾರದಿಂದ ಅನುದಾನ ಒದಗಿಸುವ ಭರವಸೆ ನೀಡಿದರು.ಹಾಗೂ ಉಳಿದ ಸಮಾಜದ ಕಾರ್ಯಕ್ಕೆ ನನ್ನ ಪೂರ್ಣ ಸಹಕಾರ ಇದೇ ಎಂದರು. ಕರ್ನಲ್ ನೇರಪಂಡ ಸಾಗರ್ ಚಿಣ್ಣಪ್ಪ ಹಾಗೂ ಕೊಡವ ಸಮಾಜದ ಮಹಿಳಾ ವಿಭಾಗದ ಅಧ್ಯಕ್ಷೆ ರೀಟಾ ದೇಚಮ್ಮ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಆಟೋಟ,ಕ್ರೀಡಾಕೂಟ ಸ್ವರ್ದೆ ನಡೆಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ವರ್ದೆಯಲ್ಲಿ ಚೇನಂಡ ಬೋಪ್ಪಣ್ಣ ಪ್ರಥಮ,ಬೇಪುಡಿಯಂಡ ದಿನು ದ್ವಿತೀಯ,ಚೇರುವಾಳಂಡ ಕಿಶನ್ ಸೊಮಯ್ಯ ತೃತೀಯ ಸ್ಥಾನ ಪಡೆದರು. ಮಹಿಳೆಯರ ಬಾಂಬ್ ಇಂದ ಸಿಟಿ ಸ್ವರ್ದೆಯಲ್ಲಿ ಬುಟ್ಟೆಯಂಗಡ ಪೂವಮ್ಮ ಪ್ರಥಮ,ಮುಂಡಿಯೋಳಂಡ ದಿವ್ಯ ದ್ವಿತೀಯ,ರಾಣಿ ಗಣಪತಿ ತೃತೀಯ ಸ್ಥಾನ ಹಾಗೂ ಪುರುಷರ ಬಾಂಬ್ ಇಂದ ಸಿಟಿ ಸ್ವರ್ದೆಯಲ್ಲಿ ಬೇಪುಡಿಯಂಡ ರವಿ ಪ್ರಥಮ,ಬಿದ್ದಂಡ ಚರ್ಮಣ ದ್ವಿತೀಯ,ಕುಮ್ಮಂಡ ಗಣಪತಿ ತೃತೀಯ ಸ್ಥಾನ ಪಡೆದು ಕೊಂಡರು. ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಕೊಡವ ಸಮಾಜದ ಅಧ್ಯಕ್ಷ ಮುಂಡಿಯೋಳಂಡ ಬಿದ್ದಪ್ಪ ವಹಿಸಿದರು. ಈ ಸಂದರ್ಭ ಉಪಾಧ್ಯಕ್ಷ ನೇರಪಂಡ ಜಿಮ್ಮಿ ಚಂಗಪ್ಪ,ಕಾರ್ಯದರ್ಶಿ ಅಯ್ಯಪ್ಪ, ಕೋಶಾಧಿಕಾರಿ ಪುಟ್ಟ ಪೆಮ್ಮಯ್ಯ, ಭವ್ಯ, ಜೆಪ್ಪು ದೇವಯ್ಯ, ಬೋಪ್ಪಯ್ಯ, ಬಬ್ಬು ಮಾದಪ್ಪ, ಪ್ರಭು, ಜಿಮ್ಮ ಚೀಟ್ಯಪ್ಪ, ಮೊಣ್ಣಪ್ಪ,ರಾಯ್ ಸೋಮಣ್ಣ ಮತಿತ್ತರರು ಉಪಸ್ಥಿತರಿದ್ದರು. ಸುಜಲ ನಾಣಯ್ಯ ಪ್ರಾರ್ಥಿಸಿದರೆ,ನಿರೂಪಣೆಯನ್ನು ಅಯ್ಯಪ್ಪ,ಸ್ವಾಗತವನ್ನು ಬಿದ್ದಪ್ಪ ಹಾಗೂ ವಂದನೆಯನ್ನು ಜೆಪ್ಪು ದೇವಯ್ಯ ನಿರ್ವಹಿಸಿದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ