ಪೊನ್ನಂಪೇಟೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಬೊಟ್ಟಿಯತ್ ನಾಡಿನ ಶ್ರೀ ದಬ್ಬೆಚಮ್ಮ ಜನಸಾಮಾನ್ಯರ ಸೇವಾ ಸಂಘ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಶ್ರೀ ದಬ್ಬೆಚಮ್ಮ ಜನಸಾಮಾನ್ಯರ ಸೇವಾ ಸಂಘದ ಅಧ್ಯಕ್ಷ ಪಟ್ರಂಗಡ ಜಿ ಬೋಸ್ ಕೊಡಗು ಜಿಲ್ಲೆಯಲ್ಲಿ ಮೂರು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಅತ್ಯಂತ ಕಡಿಮೆ ಮಳೆಯಾಗಿರುವ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಕ್ಷೇತ್ರದ ಶಾಸಕರು ಆಗಿರುವ ಎ.ಎಸ್ ಪೊನ್ನಣ್ಣನವರ ಹುಟ್ಟೂರಾದ ಪೊನ್ನಂಪೇಟೆ ತಾಲೂಕನ್ನು ಬರಪೀಡಿತ ಪ್ರದೇಶದಿಂದ ಕೈಬಿಟ್ಟಿರುವುದು ಸರಿಯಲ್ಲ, ಈ ಕೂಡಲೇ ಪೊನ್ನಂಪೇಟೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಅವರು ಒತ್ತಾಯಿಸಿದ್ದಾರೆ.
ಪೊನ್ನಂಪೇಟೆ ತಾಲೂಕಿನಲ್ಲಿ 90ರಿಂದ 130 ಇಂಚು ಮಳೆಯಾಗಬೇಕಿದ್ದ ಭಾಗಗಳಲ್ಲಿ ಕೇವಲ 40ರಿಂದ 60 ಇಂಚು ಮಳೆಯಾಗಿದೆ. ಮಳೆಗಾಲದಲ್ಲಿ ಸರಿಯಾದ ಮಳೆ ಇಲ್ಲದೆ ತಾಲ್ಲೂಕಿನ ಬಹುತೇಕ ಬತ್ತದ ಗದ್ದೆಗಳು ಪಾಳು ಬಿದ್ದಿವೆ. ಇದೀಗ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕಾಫಿಯ ಫಸಲು ಉದುರುತ್ತಿದೆ, ಕರಿಮೆಣಸು ಈಗಾಗಲೇ ನಾಶವಾಗಿದೆ, ಅಡಿಕೆಯ ಪರಿಸ್ಥಿತಿ ಹೇಳುವುದೆ ಬೇಡ ಮುಂದಿನ ದಾರಿ ಕಾಣದೆ ಇಲ್ಲಿನ ರೈತ ಪರಿತಪಿಸುತ್ತಿದ್ದು, ಇದೀಗ ಬರಪೀಡಿತ ಪ್ರದೇಶದಿಂದ ಪೊನ್ನಂಪೇಟೆ ತಾಲೂಕನ್ನು ಕೈ ಬಿಟ್ಟಿರುವುದು ಖಂಡನೀಯ. ಅಧಿಕಾರಿಗಳು ತಮ್ಮ ಕಛೇರಿಯಲ್ಲಿ ಕುರಿತು ಸರ್ವೆ ಮಾಡುವ ಬದಲು ಹಳ್ಳಿಗಳಿಗೆ ಬರಬೇಕಿತ್ತು.
ಜೂನ್ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಮಳೆ ಇಲ್ಲದೆ ಇಲ್ಲಿನ ಕೆರೆ ಕಟ್ಟೆ ಬಾವಿಗಳು ಭರ್ತಿಯಾಗಿಲ್ಲ, ಮುಂದಿನ ಬೇಸಿಗೆಗೂ ಮುನ್ನ ಕುಡಿಯುವ ನೀರಿನ ಅಭಾವ ಎದುರಾಗಲಿದೆ, ಹವಾಮಾನ ವೈಪರಿತ್ಯದಿಂದ ತತ್ತರಿಸಿರುವ ಪೊನ್ನಂಪೇಟೆ ತಾಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.