ಚೆಯ್ಯ0ಡಾಣೆ, ಅ 3. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಮಕ್ಕಳು ಓದುವುದರಲ್ಲಿ ಮತ್ತು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಓದುವ ಬೆಳಕು ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಇದರ ಅಂಗವಾಗಿ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ಕರಡ ಗ್ರಂಥಾಲಯದಲ್ಲಿ ‘ಸೆಪ್ಟೆಂಬರ್’ ತಿಂಗಳಲ್ಲಿ ನಾನು ಓದುವ ಪುಸ್ತಕ’ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ವಹಿಸಿದರು.
ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಆಶಾಕುಮಾರಿ ಮಾತನಾಡಿ ವಿದ್ಯಾರ್ಥಿಗಳು ಪುಸ್ತಕ ಹಾಗೂ ಪತ್ರಿಕೆಗಳನ್ನು ಹೆಚ್ಚಾಗಿ ಓದಬೇಕು,ಸಾಮಾನ್ಯ ಜ್ಞಾನ ಹೆಚ್ಚಾಗಲು ಇದು ಸಹಕಾರಿ ಯಾಗಲಿದೆ ಹಾಗೂ ಗ್ರಂಥಾಲಯದ ಸದುಪಯೋಗ ಎಲ್ಲರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯೆ ನೇತ್ರವತಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು. ಇದೆ ಸಂದರ್ಭದಲ್ಲಿ ತಿಂಗಳ ಕೊನೆಯಲ್ಲಿ ಅತೀ ಹೆಚ್ಚು ಪುಸ್ತಕ ಓದಿದ ವಿದ್ಯಾರ್ಥಿ ಡಯಾನಾ ಪಿ.ಎಸ್. ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಲೀಲಾವತಿ,ಕರಡ ಗ್ರಾಮದ ಅಂಗನವಾಡಿ,ಆಶಾ ಕಾರ್ಯಕರ್ತೆ, ಗ್ರಾಮಸ್ಥರು,ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಸ್ಥಳೀಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಡೆಸಿದರೆ, ಸ್ವಾಗತ ಹಾಗೂ ವಂದನೆಯನ್ನು ಗ್ರಂಥಾಪಾಲಕಿ ರೆನಿ ನೆರವೇರಿಸಿದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ