ನಾಪೋಕ್ಲು : ಗ್ರಾಮದ ಪರಿಸರಗಳು ಸ್ವಚ್ಛತೆಯಿಂದ ಕೂಡಿದಾಗ ಮಾತ್ರ ಪ್ರತಿಯೊಬ್ಬರು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲು ಸಾಧ್ಯ ಎಂದು ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಹೇಳಿದರು.
ಸಮೀಪದ ಕಲ್ಲುಮೊಟ್ಟೆಗ್ರಾಮದ ಸಮುದಾಯ ಭವನದಲ್ಲಿ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮದಲ್ಲಿ ಎಲ್ಲರೂ ಒಗ್ಗಟ್ಟಾಗಿ ಪ್ಲಾಸ್ಟಿಕ್ ಬಳಕೆಗೆ ಕಡಿವಣ ಹಾಕುವುದರ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ಅಭಿವೃದ್ಧಿ ಅಧಿಕಾರಿ ಚೊಂದಕ್ಕಿ ಮಾತನಾಡಿ ಗ್ರಾಮಸ್ಥರು ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಸಮಸ್ಯೆ ಬಂದಾಗ ಗ್ರಾಮಸಭೆಗೆ ಅಥವಾ ಪಂಚಾಯಿತಿ ಗಮನಕ್ಕೆ ತರುವಂತೆ ತಿಳಿಸಿದರು.
ಸದಸ್ಯ ಅರುಣ್ ಬೇಬ ಮಾತನಾಡಿ ಪಟ್ಟಣ ಸೇರಿದಂತೆ ಗ್ರಾಮಗಳಿಗೆ ಬರುವ ಕಸವಿಲೆವಾರಿ ವಾಹನಕ್ಕೆ ಹಸಿ ಕಸ ಒಣ ಕಸ ವಿಂಗಡಿಸಿ ನೀಡುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಸ್ವಚ್ಛತಾ ಪ್ರತಿಜ್ಞಾವಿಧಿ ಮಾಡಲಾಯಿತು. ಈ ಸಂದರ್ಭ ಪಂಚಾಯಿತಿ ಸದಸ್ಯರಾದ ಜಗದೀಶ್, ಶೌರ್ಯ ತಂಡದ ಬಾಳೆಯಡ ದಿವ್ಯಮಂದಪ್ಪ, ಅಂಗನವಾಡಿ, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಗ್ರಾಮಸ್ಥರು ಹಾಜರಿದ್ದರು. ಆಶಾಲತಾ ಸ್ವಾಗತಿಸಿ, ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ವಂದಿಸಿದರು. ಬಳಿಕ ಎಲ್ಲರು ಸೇರಿ ಸಮುದಾಯ ಭವನದ ಪರಿಸರವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು .
ವರದಿ: ಝಕರಿಯ ನಾಪೋಕ್ಲು