ಕಾವೇರಿ ಚಂಗ್ರಾಂದಿಯ ತೀರ್ಥೋದ್ಭವ ಸಂದರ್ಭ ಭಾಗಮಂಡಲದಿಂದ ತಲಕಾವೇರಿಗೆ ಪಾದಯಾತ್ರೆ ಮೂಲಕ ಬರುವವರಿಗೆ ಪೊನ್ನಂಪೇಟೆಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಹಾಗೂ ಕೊಡವ ರೈಡರ್ಸ್ ಕ್ಲಬ್ ತಿಳಿಸಿದ್ದಾರೆ.
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅಖಿಲ ಕೊಡವ ಸಮಾಜ ಯೂತ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಗೂ ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ ಅ.10ರ ಒಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕಾಗಿದ್ದು, ಅ.17ರ ತೀರ್ಥೋದ್ಭವದ ಸಂದರ್ಭದಲ್ಲಿ ಕಾಲ್ನಡಿಗೆಯಲ್ಲಿ ಪಾಲ್ಗೊಳ್ಳುವವರಿಗೆ ಪೊನ್ನಂಪೇಟೆಯಿಂದ ಭಾಗಮಂಡಲದವರೆಗೆ ಉಚಿತ ಬಸ್ಸಿನ ವ್ಯವಸ್ಥೆ ಏರ್ಪಡಿಸಲಾಗಿದೆ. ಕೊಡವ ಸಮುದಾಯದ ಮಂದಿ ನಮ್ಮ ಕುಲಮಾತೆಯಾದ ಕಾವೇರಿ ಮಾತೆಯನ್ನು ಬರಮಾಡಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಿದೆ ಎಂದು ಅವರು ಕೇಳಿಕೊಂಡಿದ್ದಾರೆ.
ಪ್ರತಿವರ್ಷ ಕೊಡವ ಯುವಕ ಯುವತಿಯರನ್ನು ಮಾತ್ರವಲ್ಲ ಅವರ ಪೋಷಕರನ್ನು ಸೇರಿದಂತೆ ಭಾಗಮಂಡಲದಿಂದ ತಲಕಾವೇರಿಗೆ ನಡೆಯಲು ಆಸಕ್ತಿ ಇರುವವರನ್ನು ಉಚಿತವಾಗಿ ಕರೆದುಕೊಂಡು ಹೋಗುತ್ತಿದ್ದು, ತಲಕಾವೇರಿಯಲ್ಲಿ ಕರೆದುಕೊಂಡು ಹೋಗಿ ಬರುವವರೆಗೂ ಅವರ ಬಸ್ ವ್ಯವಸ್ಥೆ ಮಾತ್ರವಲ್ಲ ಊಟ, ತಿಂಡಿ, ಕಾಫಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ನಾವೇ ನೋಡಿಕೊಳ್ಳುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನಾಂಗ ಹಾಗೂ ಕೊಡುವ ಜನಾಂಗ ಆಗಮಿಸುವ ಮೂಲಕ ಕಾವೇರಿ ಮಾತೆಯ ಸೇವೆ ಮಾಡಬೇಕಿದೆ ಎಂದರು.
ಹುಟ್ಟಿನಿಂದ ಸಾವಿನವರೆಗೂ ಕೊಡವ ಜನಾಂಗದ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಕಾವೇರಿ ಮಾತೆಯನ್ನು ಗೌರವ ಪೂರ್ವಕವಾಗಿ ಬರಮಾಡಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯ ಎಂದಿರುವ ಅವರು ಆಸಕ್ತಿ ಇರುವವರು ಸಂಪರ್ಕಿಸಬಹುದಾಗಿದೆ. ಪ್ರತಿವರ್ಷ ಜಿಲ್ಲೆಯ ವಿವಿಧೆಡೆಯಿಂದ ವಿವಿಧ ಕೊಡವ ಸಮಾಜ ಸೇರಿದಂತೆ ಕೊಡವ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಭಾಗಮಂಡಲದಲ್ಲಿ ಯಾವುದೇ ಒಂದು ಸಂಘಟನೆಯ ಹೆಸರಿನಲ್ಲಿ ಪಾದಯಾತ್ರೆ ಕೈಗೊಳ್ಳದೆ, ಕೇವಲ ಕೊಡವ ಜನಾಂಗ ಎಂಬ ಧ್ಯೇಯ ವಾಕ್ಯದೊಂದಿಗೆ ದುಡಿಕೊಟ್ಟ್ ಹಾಡಿನೊಂದಿಗೆ ತಳಿಯತಕ್ಕಿ ಬೊಳಕಾಯಿ ಭಾಗಮಂಡಲದಿಂದ ತಲಕಾವೇರಿಗೆ ಹೆಜ್ಜೆ ಹಾಕುತ್ತೇವೆ. ಇಲ್ಲಿ ಯಾವುದೇ ರಾಜಕೀಯ ಬೆರಸದೆ ರಾಜಕೀಯ ರಹಿತವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಪೊನ್ನಂಪೇಟೆ, ಗೋಣಿಕೊಪ್ಪ ಹಾಗೂ ವಿರಾಜಪೇಟೆ ಭಾಗದಿಂದ ಬರುವ ಭಕ್ತರು ನಮಗೆ ಕರೆ ಮಾಡಿ ತಿಳಿಸಬೇಕಿದೆ ಎಂದು ತಿಳಿಸಿದರು.
ಪೊನ್ನಂಪೇಟೆ ಬಸ್ಸು ನಿಲ್ದಾಣದಿಂದ 17ರಂದು ಮಧ್ಯಾಹ್ನ 1.30 ರಿಂದ 2 ಗಂಟೆ ಸಮಯದಲ್ಲಿ ಬಸ್ಸು ಹೊರಡಲಿದ್ದು, ವಾಹನ ಸೌಕರ್ಯ ಇರುವವರು ಕೂಡ ನಮ್ಮೊಂದಿಗೆ ಸೇರಿಕೊಳ್ಳಬಹುದಾಗಿದೆ. ಈಗಾಗಲೇ ಮೂರು ಬಸ್ಸಿನ ವ್ಯವಸ್ಥೆ ಮಾಡಲಾಗಿದ್ದು, ಭಕ್ತರ ಬೇಡಿಕೆಗೆ ಅನುಗುಣವಾಗಿ ದಾನಿಗಳ ಸಹಾಯದಿಂದ ಹೆಚ್ಚುವರಿ ಬಸ್ಸಿನ ವ್ಯವಸ್ಥೆ ಮಾಡಲಾಗುತ್ತದೆ. ಬಸ್ ಪೊನ್ನಂಪೇಟೆ, ಗೋಣಿಕೊಪ್ಪ, ವಿರಾಜಪೇಟೆ, ಕದನೂರ್ ಮಾರ್ಗವಾಗಿ ತೆರಳಿ ಭಾಗಮಂಡಲ ತಲುಪಲಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ: 9880967573, 9972332821, 9945883080 ಸಂಪರ್ಕಿಸಬಹುದಾಗಿದ್ದು, ಬರುವವರು ಮೊದಲೇ ತಿಳಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕಾಗಿದೆ ಎಂದರು.