ವಿದ್ಯಾರ್ಥಿಗಳು ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಿ- ಕೆ.ಎ.ಹಾರಿಸ್
ನಾಪೋಕ್ಲು: ವಿದ್ಯಾರ್ಥಿಗಳು ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ. ಎ.ಹಾರಿಸ್ ಹೇಳಿದರು.
ಮೂರ್ನಾಡು ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಒಂದು ವಾರಗಳಕಾಲ ನಡೆಯಲಿರುವ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಈ ರೀತಿಯ ಶಿಬಿರ ಅವಕಾಶ ಕಲ್ಪಿಸುತ್ತದೆ.ಸಮಾಜಕ್ಕೆ ಯುವ ಸಮೂಹದ ಸೇವೆ ಬಹಳ ಮುಖ್ಯವಾದುದ್ದು, ಶಿಬಿರಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಮೊದಲಿಗೆ ಮೂರ್ನಾಡು ವಿದ್ಯಾ ಸಂಸ್ಥೆಯ ನಿರ್ದೇಶಕರಾದ ರಾಜ ಮಾದಪ್ಪ ಧ್ವಜಾರೋಹಣವನ್ನು ನೆರವೇರಿಸಿ ಶಿಬಿರಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮೂರ್ನಾಡು ವಿದ್ಯಾ ಸಂಸ್ಥೆಯ ಉಪಾಧ್ಯಕ್ಷರಾದ ಪುದಿಯೊಕ್ಕಡ ಸುಬ್ರಮಣಿ ವಿದ್ಯಾರ್ಥಿಗಳಿಗೆ ಶಿಸ್ತು ಸಂಯಮ ಶ್ರಮದಾನದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಾವುದೇ ಹುದ್ದೆಯನ್ನು ಅಲಂಕರಿಸಲು ಜನಸೇವೆ ಬಹಳ ಮುಖ್ಯ ಎಂದರು.
ಸಂಸ್ಥೆಯ ಪ್ರಾಂಶುಪಾಲರಾದ ದೇವಕ್ಕಿ ಪ್ರಾಸ್ತಾವಿಕ ಭಾಷಣ ನಡೆಸಿ ರಾಷ್ಟ್ರೀಯ ಸೇವಾ ಯೋಜನೆಯ ಸಂಪೂರ್ಣ ಮಾಹಿತಿ ನೀಡಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ವೇಣು ಅಪ್ಪಣ್ಣ ಮಾತನಾಡಿ ಎನ್ಎಸ್ಎಸ್ ಶಿಬಿರದ ಸದುಪಯೋಗ ಮತ್ತು ಶಿಬಿರಾರ್ಥಿಗಳು ಯಾವ ರೀತಿಯಲ್ಲಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂಬ ಸಂಪೂರ್ಣ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ನಾಪೋಕ್ಲು ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಹೇಮಾವತಿ ಅರುಣ್,ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲರಾದ ಎಂ. ಎಸ್.ಶಿವಣ್ಣ, ಸಹ ಶಿಕ್ಷಕಿ ಕೆ. ಬಿ.ಉಷಾರಾಣಿ,ಆಡಳಿತ ಮಂಡಳಿ ಸದಸ್ಯ ಬೊಳ್ಳೆಪಂಡ ಹರೀಶ್,ಮೂರ್ನಾಡು ವಿದ್ಯಾ ಸಂಸ್ಥೆಯ ಉಪನ್ಯಾಸಕರು,ಸಿಬ್ಬಂದಿಗಳು ಪಾಲ್ಗೊಂಡಿದ್ದರು,
ಶಿಕ್ಷಕಿ ಕುಮುದಾ ಕಾರ್ಯಕ್ರಮವನ್ನು ನಿರೂಪಿಸಿದರು.ಶಿಕ್ಷಕಿ ದಮಯಂತಿ ಸ್ವಾಗತಿಸಿ,
ಉಪನ್ಯಾಸಕಿ ಮಾಲತಿ ವಂದಿಸಿದರು.
ವರದಿ: ಝಕರಿಯ ನಾಪೋಕ್ಲು