ನಾಪೋಕ್ಲು : ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದು ಆಟೋರಿಕ್ಷಾವೊಂದು ಪಲ್ಟಿಯಾಗಿ ಪ್ರಯಾಣಿಕರು ಗಾಯ ಗೊಂಡು ಆಸ್ಪತ್ರೆ ಸೇರಿರುವ ಘಟನೆ ನಾಪೋಕ್ಲುವಿನಲ್ಲಿ ಗುರುವಾರ ಸಂಜೆ ನಡೆದಿದೆ.
ನಾಪೋಕ್ಲು ಮಡಿಕೇರಿ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ತೋಟಗಾರಿಕಾ ಇಲಾಖೆಯ ಮುಂಭಾಗದ ರಸ್ತೆಯಲ್ಲಿರುವ ಗುಂಡಿಗೆ ಬಿದ್ದ ಆಟೋರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಹಂಚಿಗೆ ಪಲ್ಟಿ ಹೊಡೆದಿದೆ. ಇದರಿಂದ ಆಟೋದಲ್ಲಿದ್ದ 3 ಪ್ರಯಾಣಿಕರಿಗೆ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಅಪಘಾತದಿಂದ ಆಟೋರಿಕ್ಷಾದ ಒಂದು ಭಾಗ ಜಖಂಗೊಂಡಿದೆ.
ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಲು ರಸ್ತೆಯನ್ನು ಹಗೆದು ಹಾಕಲಾಗಿತ್ತು. ಆದರೆ ಸರಿಯಾದ ರೀತಿಯಲ್ಲಿ ಗುಂಡಿ ಮುಚ್ಚದೆ ಇರುವುದರಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ ಈ ಸ್ಥಳದಲ್ಲಿ ದ್ವಿಚಕ್ರ ವಾಹನ ಸೇರಿದಂತೆ ಹಲವು ವಾಹನಗಳು ಅಪಘಾತಕೀಡಾಗುತ್ತಿದ್ದು ಸಂಬಂಧಪಟ್ಟ ಇಲಾಖೆಯವರು ಕೂಡಲೇ ರಸ್ತೆಯ ಗುಂಡಿಯನ್ನು ಮುಚ್ಚಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಇಲಾಖೆಯವರೇ ನೇರಹೊಣೆ ಹೊರಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ವರದಿ: ಝಕರಿಯ ನಾಪೋಕ್ಲು