ನಾಪೋಕ್ಲು: ಮಹಿಳೆಯರು ಇಂದು ಸಾಹಿತ್ಯ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಮೊದಲಿಗರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷೆ ಮೊಣ್ಣಂಡ ಶೋಭಾ ಸುಬ್ಬಯ್ಯ ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕ ಪದವಿ ಪೂರ್ವ ಕಾಲೇಜು ಮುರ್ನಾಡು ಇವರ ಸಂಯುಕ್ತ ಆಶ್ರಯದಲ್ಲಿ ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ 2022- 23ನೇ ಸಾಲಿನ ಮಂಡೇಪಂಡ ಅಕ್ಕಮ್ಮ ಗಣಪತಿ ದತ್ತಿನಿಧಿ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ “ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆ “ಈ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ನಾಪೋಕ್ಲು ಕಸಾಪ ಹೋಬಳಿ ಘಟಕದ ಅಧ್ಯಕ್ಷ ನೆರವಂಡ ಉಮೇಶ್ ಮಾತನಾಡಿ ಹೆಣ್ಣಿಗೆ ಸಮಾಜದಲ್ಲಿ ಸಮಾನ ಹಕ್ಕುಗಳಿದ್ದು ಅಪ್ರತಿಮ ಸಾಧಕಿಯರನ್ನು ಈ ನಾಡು ಹೊಂದಿದೆ ಎಂದರು. ಕರ್ನಾಟಕ ಪಬ್ಲಿಕ್ ಶಾಲೆಯ ಉಪಾಧ್ಯಕ್ಷ ಕೆ. ಎ. ಹಾರಿಸ್ ಮತ್ತು ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಎಸ್.ಡಿ.ದಮಯಂತಿ ಜಂಟಿಯಾಗಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಕೆ. ಎ.ಹಾರಿಸ್ ಕುಟುಂಬ ಹಾಗೂ ಸಮಾಜದಲ್ಲಿ ಮಹಿಳೆಯ ಪಾತ್ರ ಅಗಾಧವಾದದ್ದು. ಮಹಿಳೆ ಸಹನಾಮಯಿ ಬಹುಮುಖ ಪ್ರತಿಭೆ ಎಂದರು. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ 2022- 23ನೇ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಮಡಿಕೇರಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಕರಿಕೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ. ಎಂ.ಮಿನ್ನು ಮೋಳ್ ಇವರಿಗೆ ರಘುರಾಮ ಅಸ್ರಣ್ಣ ಮತ್ತು ಶ್ರೀಮತಿ ಲೀಲಾ ಅಸ್ರಣ್ಣ ದತ್ತಿ ಪುರಸ್ಕಾರ ನೀಡಿ ಗೌರಸಲಾಯಿತು.
ಶ್ರೀಮತಿ ಗೌರಮ್ಮ ಮಾದಮ್ಮಯ್ಯ ಅವರ ಸಂಪೂರ್ಣ ಮಹಾಭಾರತ ಪ್ರಶ್ನೋತ್ತರ ಪುಸ್ತಕವನ್ನು ಮೂರ್ನಾಡು ಪದವಿ ಪೂರ್ವ ಕಾಲೇಜು ಹಾಗೂ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಗ್ರಂಥಾಲಯಕ್ಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಮೂರ್ನಾಡು ಎನ್ ಎಸ್ ಎಸ್ ಶಿಬಿರಾರ್ಥಿಗಳಿಂದ ನಾಡಗೀತೆ ಹಾಗೂ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮಗಳು ನಡೆದವು.
ನಾಪೋಕ್ಲು ಗ್ರಾಮಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ,ಉಪನ್ಯಾಸಕರು ಶಿಕ್ಷಕವೃಂದದವರು ಭಾಗವಹಿಸಿದ್ದರು. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಬಾಳೆಯಡ ದಿವ್ಯಾಮಂದಪ್ಪ ಸ್ವಾಗತಿಸಿದರು. ಗೌರವ ಕೋಶಾಧಿಕಾರಿ ಸಿದ್ದರಾಜು ಬೆಳ್ಳಯ್ಯ ಕಾರ್ಯಕ್ರಮ ನಿರೂಪಿಸಿದರು.ಕರ್ನಾಟಕ ಪಬ್ಲಿಕ್ ಶಾಲೆಯ ಸಹ ಶಿಕ್ಷಕಿ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಕೆ.ಬಿ.ಉಷಾರಾಣಿ ವಂದಿಸಿದರು.
ವರದಿ: ಝಕರಿಯ ನಾಪೋಕ್ಲು