ವಾಟೇರಿರ ಪಿ. ಬೋಪಣ್ಣ, ಸಹಕಾರಿಗಳು: ಚೆಂಬೆಬೆಳ್ಳೂರು. Chambebellur

Reading Time: 10 minutes

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯ ಮಗ್ಗುಲ ಗ್ರಾಮದಲ್ಲಿ ನೆಲೆಸಿರುವ ಶ್ರೀ ವಾಟೇರಿರ ಬೋಪಣ್ಣರವರು ಕೊಡಗಿನ ಪ್ರತಿಷ್ಠಿತ ಸಹಕಾರ ಸಂಘವಾದ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ನಿಯಮಿತ(ಫೆಡರೇಶನ್) ಇದರ ಅಧ್ಯಕ್ಷರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಇವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ”ವು ಪ್ರಸ್ತುತ ಪಡಿಸಿರುವ “ಕೊಡಗು ಸಹಕಾರ ದರ್ಶನ” ಎಂಬ ಕೊಡಗಿನ ಸಹಕಾರ ಚಳುವಳಿಯ ಡಿಜಿಟಲ್‌ ದಾಖಲೆಗೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಶ್ರೀ ವಾಟೇರಿರ ಬೋಪಣ್ಣರವರು, ನಾನು ಈ ಮೊದಲು ವಿರಾಜಪೇಟೆ ತಾಲೂಕು ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾದೆ, ಅಲ್ಲದೆ ಸುಮಾರು 7 ತಿಂಗಳ ಕಾಲ ವಿರಾಜಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷನಾಗಿ ಕೂಡಾ ಕಾರ್ಯನಿರ್ವಹಿಸಿದೆ. ತದ ನಂತರ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ನಿಯಮಿತ(ಫೆಡರೇಶನ್) ನ ಆಡಳಿತ ಮಂಡಳಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ನಾನು ಅಧ್ಯಕ್ಷನಾದ ಬಳಿಕ ಸದಸ್ಯರಲ್ಲಿ ನಮ್ಮ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಪಾರದರ್ಶಕವಾದ ಮಾಹಿತಿಯನ್ನು ನೀಡಲು ಪ್ರಯತ್ನಿಸಿದ್ದೇನೆ ಹಾಗೂ ಪಾರದರ್ಶಕ ಆಡಳಿತದಿಂದ ನಮ್ಮ ಸದಸ್ಯರು ಸಂಘವನ್ನು ನೋಡುವ ರೀತಿಯೇ ಬದಲಾಗಿದೆ. ಸಂಘದ ವ್ಯವಹಾರಗಳ ಬಗ್ಗೆ ನಂಬಿಕೆ ಹೆಚ್ಚಾಗಿದೆ. 

 ಸಂಘದ ಈ ಹಿಂದಿನ ವ್ಯವಹಾರಗಳ ದಾಖಲೆಗಳನ್ನು ನಾವು ಪರಿಶೀಲಿಸಿದಾಗ ದಾಖಲೆಗಳು ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು ಕಂಡು ಬಂದಿದ್ದು, ನಮ್ಮ ಅಧಿಕಾರ ಅವಧಿಯಲ್ಲಿ ವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ಸಂಘದ ವ್ಯವಹಾರಗಳ ದಾಖಲೆಗಳನ್ನು ನಿರ್ವಹಣೆ ಮಾಡುತ್ತಾ ಬರುತ್ತಿದ್ದೇವೆ. 

 ನಮ್ಮ ಸಂಘ ಕೊಡಗು ಜಿಲ್ಲೆಗೆ ಏಕೈಕ ಸಂಘವಾಗಿದ್ದು, ಇದರಲ್ಲಿ ಆರ್‌.ಟಿ.ಸಿ ಹೊಂದಿರುವ ರೈತರು ಮಾತ್ರ ಸದಸ್ಯರಾಗಲು ಅವಕಾಶವಿದ್ದು, ರೂ. 2000/- ಶೇರು ಮೌಲ್ಯವನ್ನು ನಿಗದಿ ಪಡಿಸಲಾಗಿದೆ.

 ಸಂಘವು 2022-23ರ  ಸಾಲಿನಲ್ಲಿ ರೂ.990.56ಲಕ್ಷ ಗೊಬ್ಬರವನ್ನು ಖರೀದಿಸಿ ಸಂಘದ ಸದಸ್ಯರಿಗೆ ಹಾಗೂ ಗ್ರಾಹಕರಿಗೆ ರೂ.1018,73ಲಕ್ಷ ಗೊಬ್ಬರವನ್ನು ಮಾರಾಟ ಮಾಡಲಾಗಿದೆ. ಕೃಷಿ ಉಪಕರಣ, ಕೀಟನಾಶಕ ಹಾಗೂ ಇತರೆ ವಸ್ತುಗಳನ್ನು ರೂ.381.15ಲಕ್ಷ ಖರೀದಿಸಿದ್ದು ರೂ.399.48ಗಳಷ್ಟು ಮಾರಾಟ ಮಾಡಲಾಗಿದೆ. ಸಂಘದ 2022-23ನೇ ಸಾಲಿನ ವಾರ್ಷಿಕ ವ್ಯಾಪಾರ ವಹಿವಾಟು ರೂ.1418.21 ಲಕ್ಷಗಳಾಗಿರುತ್ತದೆ. ಮತ್ತು ವ್ಯಾಪಾರ ಲಾಭ ರೂ.69.03ಲಕ್ಷ ಗಳು ಆಗಿರುತ್ತದೆ. ವರದಿ ಸಾಲಿನಲ್ಲಿ ಒಟ್ಟು4448 ಮೆಟ್ರಿಕ್‌ ಟನ್ ಗೊಬ್ಬರವನ್ನು ಮಾರಾಟ ಮಾಡಲಾಗಿದೆ. 

 ಸಂಘವು 2022-23 ನೇ ಸಾಲಿನಲ್ಲಿ ಒಟ್ಟು ರೂ.69.03 ಲಕ್ಷ ವ್ಯಾಪಾರ ಲಾಭಗಳಿಸಿದ್ದು ಆರ್ಥಿಕ ತಖ್ತೆಯಂತೆ ಒಟ್ಟು ರೂ.24.90ಲಕ್ಷ ನಿವ್ವಳ ಲಾಭಗಳಿಸಿರುತ್ತದೆ. ನಿವ್ವಳ ಲಾಭವನ್ನು ಉಪನಿಯಮದಂತೆ ಹಂಚಿಕೆ ಮಾಡಲಾಗಿದೆ. ಲಾಭಾಂಶದಲ್ಲಿ ಶೇಕಡ 15ರಂತೆ ಸದಸ್ಯರಿಗೆ ಒಟ್ಟು ರೂ.5.21ಲಕ್ಷಗಳನ್ನು ಡಿವಿಡೆಂಡ್ ಆಗಿ ಘೋಷಿಸಲಾಗಿದೆ.

 ವಿರಾಜಪೇಟೆಯ ಮುಖ್ಯ ರಸ್ತೆಯ ಹತ್ಯಾರು ವಿಭಾಗದಲ್ಲಿ ನೂತನ ವಾಣಿಜ್ಯ ಸಂಕೀರ್ಣ ಕಟ್ಟಡದಿಂದ ಮಾಸಿಕ ರೂ.79412/-, ಮುಖ್ಯ ಕಛೇರಿ ಕಟ್ಟಡ ಬಾಡಿಗೆ ರೂ.55,000/- ಆರ್ಜಿ ಗೋದಾಮು ವಿಭಾಗದಿಂದ ರೂ.12000/- ಹಾಗೂ ಅಕ್ಕಿಗಿರಣಿ ವಿಭಾಗದಿಂದ ರೂ.18500/- ಒಟ್ಟು ರೂ.164912/- ಮಾಸಿಕ ಬಾಡಿಗೆ ಸಂಗ್ರಹಿಸಲಾಗುತ್ತಿದೆ. ಮತ್ತು ಹೆಚ್ಚುವರಿಯಾಗಿ ಜಿ.ಎಸ್.ಟಿ 18% ವಸೂಲಿ ಮಾಡಲಾಗಿದೆ. ಕರಾರು ಪತ್ರದ ನವೀಕರಣದ ವೇಳೆ ಬಾಡಿಗೆಯನ್ನು ಪರಿಷ್ಕರಿಸಲಾಗುತ್ತಿದೆ.

 ಸಂಘದ ಬ್ಯಾಂಕಿಂಗ್ ವಿಭಾಗದಲ್ಲಿ ಸದಸ್ಯರಿಂದ ಹಾಗೂ ನಾಮಿನಲ್‌ ಸದಸ್ಯರಿಂದ ಒಟ್ಟು ರೂ.161.10ಲಕ್ಷ ನಿರಖು ಠೇವಣಿ ಹಾಗೂ ಇತರ ಠೇವಣಿ ರೂ.35.28ಲಕ್ಷ ಸಂಗ್ರಹಿಸಲಾಗಿದ್ದು ಇದರಲ್ಲಿ ಆಭರಣ ಆಡಾವು ಸಾಲ ಹಾಗೂ ಇತರ ಸಾಲದ ರೂಪದಲ್ಲಿ ಒಟ್ಟು ರೂ.142.82ಲಕ್ಷ ಗಳನ್ನು ವಿತರಿಸಲಾಗಿದೆ. ಬಡ್ಡಿ ರೂ.19.85ಲಕ್ಷ ಹಾಗೂ ಇತರ ಆದಾಯ ರೂ.2.23 ಲಕ್ಷ ಸಂಗ್ರಹಣೆಯಾಗಿರುತ್ತದೆ. ಠೇವಣಿಗಳ ಮೇಲಿನ ಬಡ್ಡಿ ರೂ.6.76 ಲಕ್ಷ ಕಾದಿರಿಸಲಾಗಿದ್ದು, ಈ ವಿಭಾಗದಲ್ಲಿ ರೂ.70927,00 ನಿವ್ವಳ ಲಾಭಗಳಿಸಿರುತ್ತದೆ. ನಿರಖು ಠೇವಣಿ ಹಾಗೂ ಆಭರಣ ಸಾಲದ ಮೇಲಿನ ಬಡ್ಡಿಯ ದರವನ್ನು ಪರಿಷ್ಕರಿಸಲಾಗಿದ್ದು, ಆಭರಣ ಸಾಲಕ್ಕೆ ವಾರ್ಷಿಕ ಬಡ್ಡಿ ಶೇಕಡಾ 11% ವಿಧಿಸಲಾಗಿದೆ. ಹಾಗೂ ನಿರಖು ಠೇವಣಿ ಮೇಲೆ ಶೇಕಡಾ 7.5% ಮತ್ತು ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಶೇಕಡಾ 0.50% ಬಡ್ಡಿ ನೀಡಲಾಗುತ್ತಿದೆ.

 ಅಕ್ಕಿ ಗಿರಣಿ ವಿಭಾಗದಲ್ಲಿ ಸದಸ್ಯರ ಅನುಕೂಲಕ್ಕಾಗಿ ತಾವು ಬೆಳೆದ ಉತ್ಪನ್ನಗಳಿಗೆ ಗೋದಾಮಿನ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಒಟ್ಟು 2137 ಕ್ವಿಂಟಾಲ್‌ ಭತ್ತವನ್ನು ಸಂಘದ ಗೋದಾಮಿನಲ್ಲಿ ಶೇಖರಿಸಲಾಗಿ ರೂ.2.13 ಲಕ್ಷ ಗೋದಾಮು ಬಾಡಿಗೆ ರೂಪದಲ್ಲಿ ಸಂಗ್ರಹಿಸಲಾಗಿದೆ. ಭತ್ತದ ಹೊಟ್ಟು ಮಾರಾಟದಿಂದ ರೂ.2.75 ಲಕ್ಷ ಮತ್ತು ಅಕ್ಕಿ ಪರಿವರ್ತನಾ ಉತ್ಪತ್ತಿ ರೂ.6.83ಲಕ್ಷ ಸಂಗ್ರಹಣೆಯಾಗಿದ್ದು ಈ ವಿಭಾಗದಲ್ಲಿ ರೂ.467917.00 ನಿವ್ವಳ ಲಾಭಗಳಿಸಿರುತ್ತದೆ.

 ಸಂಘದ ಆರ್ಜಿಯಲ್ಲಿರುವ ಜಾಗದಲ್ಲಿ ನೂತನವಾಗಿ ಅಂಗಡಿ ಮಳಿಗೆಯನ್ನು ನಿರ್ಮಿಸಿ ಸದಸ್ಯರಿಗೆ ಬೇಕಾದಂತಹ ಗೊಬ್ಬರ, ಕೀಟನಾಶಕ, ಕೃಷಿ ಉಪಕರಣಗಳು ಹಾಗೂ ಹತ್ಯಾರು ಸಾಮಾಗ್ರಿಗಳನ್ನು ಮಾರಾಟಮಾಡುತ್ತಿದ್ದು,ಹಾಗೇ ಸಂಘದ ಆರ್ಜಿಯಲ್ಲಿರುವ ನಿವೇಶನದಲ್ಲಿ ನೂತನವಾಗಿ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಘಟಕವನ್ನು ಸ್ಥಾಪಿಸಿದ್ದು, ಸದಸ್ಯರು ಹಾಗೂ ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಈ ಸಂದರ್ಭದಲ್ಲಿ ಕೋರುತ್ತಿದ್ದೇನೆ. ಸಂಘದ ಅರ್ಜಿಯಲ್ಲಿರುವ ನಿವೇಶನದಲ್ಲಿ ನೂತನವಾಗಿ ಪೆಟ್ರೋಲ್‌ ಬಂಕನ್ನು ನಿರ್ಮಿಸಲು ಪ್ರಯತ್ನವು ಸಾಗುತ್ತಿದೆ. ಶೀಘ್ರದಲ್ಲೇ ಅಲ್ಲಿ ಪೆಟ್ರೋಲ್‌ ಬಂಕ್‌ ಕಾರ್ಯಾರಂಭಗೊಳ್ಳುತ್ತದೆ. ಎಂದು ಈ ಸಂದರ್ಭದಲ್ಲಿ ತಿಳಿಸುತ್ತಿದ್ದೇನೆ. 

 ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ನಿಯಮಿತ(ಫೆಡರೇಶನ್) ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರುಗಳು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲು‌ ಹರ್ಷ ವ್ಯಕ್ತಪಡಿಸುತ್ತಿದ್ದೇನೆ.

 ನಮ್ಮ ಕೊಡಗು ಜಿಲ್ಲೆಯ ಹಿರಿಯ ರೈತರುಗಳ ಸಹಕಾರ ಮನೋಭಾವದ ಹಾಗೂ ದೂರದೃಷ್ಟಿಯ ಪರವಾಗಿ ನಮ್ಮ ಜಿಲ್ಲೆಯು ಏಷ್ಯಾದಲ್ಲೇ 2ನೇ ಸಹಕಾರ ಸಂಘವು ಪ್ರಾರಂಭವಾದ ಹೆಗ್ಗಳಿಕೆಯನ್ನು ಹೊಂದಿದೆ. ಅವರ ಈ ಶ್ರಮವನ್ನು ಗೌರವಿಸಿ ಅವರು ಹಾಕಿಕೊಟ್ಟ ಸಹಕಾರ ಕ್ಷೇತ್ರದ ಅಡಿಗಲ್ಲಿನ ಮೇಲೆ  ಪಾರದರ್ಶಕವಾಗಿ ಹಾಗೂ ನ್ಯಾಯಯುತವಾಗಿ  ಎಲ್ಲ ರೈತರನ್ನು  ಒಂದುಗೂಡಿಸಿ ನಾವು ನಡೆಯಬೇಕು. ಅಲ್ಲದೆ ಕೊಡಗಿನ ಪ್ರತೀ ಗ್ರಾಮ ಗ್ರಾಮಗಳಲ್ಲಿ ಧವಸ ಭಂಡಾರಗಳಂತಹ ಸಹಕಾರಿ ಕ್ಷೇತ್ರಗಳಲ್ಲಿ ಗ್ರಾಮಗಳಲ್ಲಿನ ರೈತರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದು, ಸಹಕಾರಿ ಮನೋಭಾವನೆಯನ್ನು ಹೊಂದಿದ್ದರ ಫಲವಾಗಿ ಉತ್ತಮವಾಗಿ ನಡೆಯುತ್ತಿದೆ.  ಅಲ್ಲದೆ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘಗಳು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತಿದೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸದಸ್ಯರ ಸಹಕಾರ ತುಂಬಾ ಅಗತ್ಯವಿದೆ. ಈ ಕಾರಣದಿಂದ ರಾಜಕೀಯ ಬದಿಗೊತ್ತಿ ಒಂದಾಗಿ ಶ್ರಮಿಸಬೇಕಾಗಿದೆ. ಸುಮಾರು 100 ರಿಂದ 200 ವರ್ಷಗಳಷ್ಟು  ಕೊಡಗಿನಲ್ಲಿನ ಸಹಕಾರ ಸಂಘಗಳ ಇತಿಹಾಸವಿದ್ದು, ಸಹಕಾರ ಮನೋಭಾವ ಕೊಡಗಿನವರಲ್ಲಿ ರಕ್ತಗತವಾಗಿ ಬಂದಿದೆ. ಈ ಕಾರಣದ ಫಲವಾಗಿ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಉತ್ತಮವಾಗಿ ಇಲ್ಲಿಯವರೆಗೆ ಬೆಳೆಯಲು ಕಾರಣವಾಗಿದೆ ಎಂಬುವುದು ನನ್ನ ಅಭಿಮತವಾಗಿದೆ.

 ಇಲ್ಲಿಯವರೆಗೆ ಸಹಕಾರ ಸಂಘಗಳ ಮೇಲೆ ಸರ್ಕಾರವು ಯಾವ ರೀತಿಯಲ್ಲಿ ಗಮನ ಹರಿಸುತ್ತಿದೆಯೋ ಅಷ್ಟರ ಮಟ್ಟಿಗೆ ಇದ್ದರೆ ಒಳಿತು, ಇನ್ನೂ ಹೆಚ್ಚಾದರೆ ಅದು ಸಹಕಾರ ಕ್ಷೇತ್ರಕ್ಕೆ ಮಾರಕವಾಗಿ ಪರಿಣಮಿಸಬಹುದು. ಕಾರಣ ಸರಕಾರದ ಹಸ್ತಕ್ಷೇಪ ಸಹಕಾರ ಕ್ಷೇತ್ರದಲ್ಲಿ ಪೂರ್ಣ ಮಟ್ಟದಲ್ಲಿ ಆದ  ಸಂದರ್ಭ ಬಂದರೆ ಚುನಾಯಿತ ನಿರ್ದೇಶಕರುಗಳ ವ್ಯಾಪ್ತಿಗೆ ಯಾವುದೇ ರೀತಿಯ ಅಧಿಕಾರ ಬರುವುದಿಲ್ಲ. ಜೊತೆಗೆ ರೈತರ ಹಾಗೂ ಸದಸ್ಯರ ಅಭಿಪ್ರಾಯಗಳನ್ನು ಕಡೆಗಣಿಸಬಹುದು. ಇದರಿಂದ ಸಹಕಾರ ಸಂಘದ ಅಭಿವೃದ್ದಿ ಮಾತ್ರವಲ್ಲದೆ ರೈತರಿಗೂ ಹಣಕಾಸಿನ ವ್ಯವಹಾರಗಳಲ್ಲಿ ಅಡಚಣೆ ಆಗುವ ಸಂದರ್ಭ ಹೆಚ್ಚಾಗುವುದು ಎಂಬುವುದು ನನ್ನ ಅನಿಸಿಕೆಯಾಗಿದೆ.

 ಯಾವುದೇ ಒಂದು ವೃತ್ತಿಯಾಗಲಿ ಅಥವಾ ಕ್ಷೇತ್ರವಾಗಲಿ ಅಲ್ಲಿ ಹಳೇ ಬೇರು ಹೊಸ ಚಿಗುರು ಎಂಬ ವ್ಯವಸ್ಥೆ ಬೇಕೇ ಬೇಕು, ಹಿರಿಯರು ಹಾಗು ಯುವಶಕ್ತಿ ಜೊತೆಗೂಡಿ ಮುಂದುವರೆಯಬೇಕು. ಸಹಕಾರ ಕ್ಷೇತ್ರದಲ್ಲಿ ಯುವಶಕ್ತಿಯಿಂದ ಹೊಸ ಹೊಸ ಸೃಜನಶೀಲ ಚಿಂತನೆಗಳು ಮಾರ್ಗಗಳನ್ನು ಪರೀಕ್ಷಿಸಲು ಹಾಗೂ ಅದನ್ನು ಪ್ರಯೋಗಿಕವಾಗಿ ಜಾರಿಗೆ ತರಲು ಸಾಧ್ಯವಿದೆ, ಆದರಿಂದ ಯುವಶಕ್ತಿಯು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗಿದೆ ಎಂದು ಈ ಸಂದರ್ಭದಲ್ಲಿ ಹೇಳ ಬಯಸುತ್ತಿದ್ದೇನೆ.

 ರಾಜಕೀಯ ಕ್ಷೇತ್ರದಲ್ಲಿ ನನ್ನ ರಾಜಕೀಯ ಜೀವನದ ಪ್ರಾರಂಭದ ವರ್ಷಗಳೆಂದರೆ ನಾನು ವಿದ್ಯಾರ್ಥಿಯಾಗಿದ್ದಾಗ ಗೊಣಿಕೊಪ್ಪಲುವಿನ ಕಾವೇರಿ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಕಾಲೇಜಿನ ಉಪಾಧ್ಯಕ್ಷನಾಗಿ ಆಯ್ಕೆಯಾದೆ, ಜೊತೆಗೆ ಎ.ಬಿ.ವಿ.ಪಿ. ಯ ಸಕ್ರಿಯ ಕಾರ್ಯಕರ್ತನಾಗಿದ್ದು, ನಂತರ ಕುಟ್ಟಂಡ ಗೋಪಿ ಅವರ ಮಾರ್ಗದರ್ಶನದೊಂದಿಗೆ ನಾನು ಬಿ.ಜೆ.ಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡೆ ಅಲ್ಲಿಂದ ಇಲ್ಲಿಯವರೆಗೂ ಪಕ್ಷಕ್ಕೆ ದುಡಿಯುತ್ತಿದ್ದೇನೆ. ಆ ವರ್ಷಗಳಲ್ಲಿ ನಾನು ವಿರಾಜಪೇಟೆ ತಾಲೂಕು ಬಿ.ಜೆ.ಪಿ. ಯುವ ಮೋರ್ಚಾದ ಉಪಾಧ್ಯಕ್ಷನಾಗಿ ಹಾಗು 2007-2008ರ ಸಾಲಿನಲ್ಲಿ ಕೊಡಗು ಜಿಲ್ಲಾ ಬಿ.ಜೆ.ಪಿ. ಯುವ ಮೋರ್ಚಾದ ಕಾರ್ಯದರ್ಶಿಯಾಗಿ ನಂತರ ವಿರಾಜಪೇಟೆ ತಾಲೂಕು ಬಿ.ಜೆ.ಪಿ ಕಾರ್ಯದರ್ಶಿಯಾಗಿ ಪ್ರಸ್ತುತ ವಿರಾಜಪೇಟೆ ಮಂಡಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ಮೊದಲು ವಿರಾಜಪೇಟೆ ತಾಲೂಕು ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾದೆ, ಅಲ್ಲದೆ ಸುಮಾರು 7 ತಿಂಗಳ ಕಾಲ ವಿರಾಜಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷನಾಗಿ ಕೂಡಾ ಕಾರ್ಯನಿರ್ವಹಿಸಿದೆ. 

 ಸಾಮಾಜಿಕ ಕ್ಷೇತ್ರದಲ್ಲಿ ವಿರಾಜಪೇಟೆ ಗೌರಿ ಗಣೇಶ ಸಮಿತಿಗಳಲ್ಲಿ ಹಾಗೂ ಗ್ರಾಮದ ಎಲ್ಲಾ ಸಮಾಜ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. 

 ಧಾರ್ಮಿಕ ಕ್ಷೇತ್ರದಲ್ಲಿ ನನ್ನ ಗ್ರಾಮದ ದೇವಾಲಯವಾದ ಮಗ್ಗುಲ ಭದ್ರಕಾಳಿ ದೇವಾಲಯ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಹಾಗೂ ನನ್ನ ತಂದೆಯವರಾದ ವಾಟೇರಿರ ಶಂಕರೀ ಪೂವಯ್ಯನವರು ಮಲೆತಿರಿಕೆ  ಈಶ್ವರ ದೇವಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 ಶೈಕ್ಷಣಿಕ ಕ್ಷೇತ್ರದಲ್ಲಿ ಈ ಮೊದಲು ವಿರಾಜಪೇಟೆ ನಗರದಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ  ಪದವಿ ಕಾಲೇಜಿನ ಅಭಾವವಿದ್ದ ಸಂದರ್ಭ ಬೋಸ್‌ ದೇವಯ್ಯನವರ ನೇತೃತ್ವದಲ್ಲಿ 5 ಜನ ಸೇರಿ ದೇಣಿಗೆ ಹಾಕಿ ವಿರಾಜಪೇಟೆ ಸೀನಿಯರ್‌ ಕಾಲೇಜನ್ನು ಪ್ರಾರಂಭಿಸಿದೆವು ನಂತರ  ವಿರಾಜಪೇಟೆ ಸೀನಿಯರ್‌ ಕಾಲೇಜಿನ ಸ್ಥಾಪಕ ನಿರ್ದೇಶಕನಾಗಿ ಹಾಗು ಸರ್ಕಾರದ ನಾಮ ನಿರ್ದೇಶಿತ ನಿರ್ದೇಶಕನಾಗಿ ಸುಮಾರು 18 ವರ್ಷಗಳ ಕಾಲ ಕಾಲೇಜಿನ ಅಭಿವೃಧ್ಧಿಗೆ ಶ್ರಮಿಸಿದ್ದೇನೆ. 

 ಮೂಲತ: ಕೃಷಿಕರಾಗಿರುವ ಶ್ರೀ ವಾಟೇರಿರ ಬೋಪಣ್ಣರವರ ತಂದೆ: ವಾಟೇರಿರ ಶಂಕರೀ ಪೂವಯ್ಯ, ತಾಯಿ: ಮಚ್ಚಮಾಡ.ಎಂ. ನಂಜಮ್ಮ, ಪತ್ನಿ: ವಿ.ಬಿ.  ಅಕ್ಕಮ್ಮ (ರಮ್ಯ) ಗೃಹಿಣಿ, ಹಿರಿಯ ಪುತ್ರ: ಕೆವೆನ್‌ ಕಾರ್ಯಪ್ಪ, ಕಿರಿಯ ಪುತ್ರಿ ದಿಶಾ ದೇಚಮ್ಮ ವ್ಯಾಸಂಗ ನಿರತರಾಗಿದ್ದಾರೆ. ಪ್ರಸ್ತುತ ಇವರು ಚೆಂಬೆಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯ ಮಗ್ಗುಲ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ಸಹಕಾರ, ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.

ಸಂದರ್ಶನ ದಿನಾಂಕ: 12-09-2023

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments