ನಾಪೋಕ್ಲು : ಕೊಡಗು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತ್ ,ನಾಪೋಕ್ಲು ಗ್ರಾಮ ಪಂಚಾಯತ್, ಪಶುಪಾಲನಾ ವೈದ್ಯಕೀಯ ಸೇವಾ ಇಲಾಖೆ ಕೊಡಗು ಹಾಗೂ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ಸೇವಾ ಕಾರ್ಯ ಪಡೆ ಇವರ ಸಂಯುಕ್ತ ಆಶ್ರಯದಲ್ಲಿ ಬೇತು ಗ್ರಾಮದ ಊರ್ ಮಂದ್ ನಲ್ಲಿ ನಡೆದ ಉಚಿತ ಪಶು ಚಿಕಿತ್ಸಾ ಶಿಬಿರ ಮತ್ತು ಸಾಕು ನಾಯಿಗಳಿಗೆ ರೇಬೀಸ್ ಮುಂಜಾಗ್ರತಾ ಲಸಿಕಾ ಶಿಬಿರವು ಯಶಸ್ವಿಯಾಗಿ ನಡೆಯಿತು.
ಶಿಬಿರದಲ್ಲಿ ನಾಪೋಕ್ಲುವಿನ ವಿವಿಧ ಗ್ರಾಮಗಳ ಗ್ರಾಮಸ್ಥರು ತಮ್ಮ ಮನೆಯಲ್ಲಿ ಸಾಕುವ ಸಾಕು ಪ್ರಾಣಿಗಳನ್ನು ತಂದು ಶಿಬಿರದ ಪ್ರಯೋಜನಗಳನ್ನು ಪಡೆದುಕೊಂಡರು.
ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಸಾಬಾ ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಉದ್ಘಾಟಿಸಿದರು.
ಕೊಡಗುಜಿಲ್ಲಾ ಪಶುಪಾಲನಾ ಪಶು ವೈದ್ಯಕೀಯ ಸೇವಾ ಇಲಾಖೆಯ ತಾಲೂಕು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಡಾ. ಪ್ರಸನ್ನ ಅವರು ಜಾನುವಾರುಗಳ ವೈಜ್ಞಾನಿಕ ಸಾಕಾಣಿಕೆ ಬಗ್ಗೆ ಹಾಗೂ ಇಲಾಖೆಯ ವಿವಿಧ ಹೊಸ ಕಾರ್ಯಕ್ರಮಗಳ ಕುರಿತು ಶಿಬಿರದಲ್ಲಿ ಮಾಹಿತಿ ನೀಡಿದರು.
ಶಿಬಿರದಲ್ಲಿ ಉಚಿತ ಪಶು ಆರೋಗ್ಯ ತಪಾಸಣೆ,ಹಸುಗಳ ಗರ್ಭ ಪರೀಕ್ಷೆ, ಬಂಜೆ ರಾಸುಗಳ ಪರೀಕ್ಷೆ, ಅವರ್ಣಿತ ಹೋರಿಗಳ ಕಸಿ ಮಾಡಲಾಯಿತು.
ಶಿಬಿರದಲ್ಲಿ 65 ನಾಯಿಗಳಿಗೆ ರೇಬಿಸ್ ಮುಂಜಾಗ್ರತಾ ಲಸಿಕೆ, 35 ಹಸುಗಳಿಗೆ ಮತ್ತು 4ಬೆಕ್ಕುಗಳಿಗೆ ಉಚಿತ ಆರೋಗ್ಯ ತಪಾಸಣೆ, ಹಾಗೂ 13 ಉತ್ತಮ ರಾಸುಗಳಿಗೆ ಪ್ರೋತ್ಸಾಹಕ ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭ ನಾಪೋಕ್ಲು ಪಶು ಆಸ್ಪತ್ರೆಯ ವೈದ್ಯರಾದ ಡಾ. ಶಿಲ್ಪಾ, ಸಿಬ್ಬಂದಿಗಳಾದ ನವೀನ್, ಸುನಿಲ್, ಗುರುರಾಜ್ ಹಾಗೂ ಮಕ್ಕಿ ಶಾಸ್ತಾವು ಸೇವಾ ಕಾರ್ಯಪಡೆಯ ಸದಸ್ಯರು,ಗ್ರಾಮಸ್ಥರು ಹಾಜರಿದ್ದರು.