ನೋಡುಗರನ್ನು ರಂಜಿಸಿದ ಪುಟಾಣಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
ನಾಪೋಕ್ಲು : ನಾಪೋಕ್ಲುಗ್ರಾಮ ಪಂಚಾಯಿತಿ ಹಾಗೂ ಬಲ್ಲಮಾವಟಿ ವೃತ್ತ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಹಯೋಗದಲ್ಲಿ ಹಳೇ ತಾಲೂಕಿನ ಶ್ರೀ ಭಗವತಿ ಸಮುದಾಯ ಭವನದಲ್ಲಿ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾ ಅಧ್ಯಕ್ಷ ಕೆ.ಎ ಹಾರಿಸ್ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಮಕ್ಕಳ ಹಕ್ಕು ಹಾರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅವರ ನೆನಪಿಗಾಗಿ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತದೆ.ನೆಹರು ಅವರಿಗೆ ಮಕ್ಕಳೆಂದರೆ ಹಚ್ಚು ಮೆಚ್ಚು ಹಾಗೂ ಪ್ರೀತಿ ಅದರಿಂದ ಮಕ್ಕಳು ಅವರನ್ನು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯುತ್ತಿದ್ದರು.
ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಪೂರೈಸಬೇಕು ಎಂಬುದು ಅವರ ಮುಖ್ಯ ಉದ್ದೇಶವಾಗಿತ್ತು ಎಂದ ಅವರು ಅಂಗನವಾಡಿಗಳಲ್ಲಿ ಪುಟ್ಟ ಮಕ್ಕಳ ನಿರ್ವಹಣೆ ಹಾಗೂ ಸಮುದಾಯದಲ್ಲಿ ಸೇವಾ ಕಾರ್ಯ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ನಿಜಕ್ಕೂ ಶ್ಲಾಘನೀಯ.ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಸರ್ಕಾರ ದುಡಿಮೆಗೆ ತಕ್ಕ ವೇತನ ನೀಡುವಂತಾಗಬೇಕು.ಪುಟಾಣಿ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಇಂತಹ ಕಾರ್ಯಕ್ರಮದ ವೇದಿಕೆ ಸಹಕಾರಿ. ಪೋಷಕರು ಇದಕ್ಕೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ನಡೆದ ಪುಟಾಣಿಗಳ ವಿವಿಧ ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರನ್ನು ರಂಜಿಸಿದರೆ,ಅಂಗನವಾಡಿ ಶಿಕ್ಷಕಿಯರ ನೃತ್ಯ ಗಮನ ಸೆಳೆಯಿತು. ಬಳಿಕ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದ ಪುಟಾಣಿಗಳಿಗೆ ಸ್ಕೈ ಗೋಲ್ಡ್ ಮತ್ತು ಪಂಚಾಯಿಂದ ನೀಡಿದ ಉಡುಗೊರೆ ಹಾಗೂ ಬಹುಮಾನವನ್ನು ಅತಿಥಿಗಳು ವಿತರಿಸಿದರು. ಅದರಂತೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಪುಟಾಣಿಗಳಿಗು ಸಮಾಧಾನಕರ ಬಹುಮಾನವನ್ನು ನೀಡಲಾಯಿತು. ಇದೇ ಸಂದರ್ಭ ಉತ್ತಮ ಅಂಗನವಾಡಿ ಶಿಕ್ಷಕಿ ಪ್ರಶಸ್ತಿ ಪಡೆದ ಹಳೇ ತಾಲೂಕು ಅಂಗನವಾಡಿ ಕೇಂದ್ರ ಶಿಕ್ಷಕಿ ಭಾಗ್ಯವತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹೇಮಾವತಿ ಅರುಣ್, ಸದಸ್ಯರಾದ ಪುಷ್ಪಾವತಿ, ಅರುಣ್ ಬೇಬ ಟಿ. ಎ.ಮೊಹಮ್ಮದ್, ಬಿ. ಎಂ.ಪ್ರತೀಪ ,ಕೆ. ವೈ.ಅಶ್ರಫ್,ಕೋಟೆರ ನೀಲಮ್ಮ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಸೀತಾ ಲಕ್ಷ್ಮಿ, ಮೇಲ್ವಿಚಾರಕಿ ಶೀಲಾ , ಸಂಘಟನಾ ಅಧ್ಯಕ್ಷೆ ಪವಿತ್ರ, ಕಾರ್ಯದರ್ಶಿ ಆಶಾಲತಾ,ಸ್ತ್ರೀ ಶಕ್ತಿ ಸಂಘದ ಯಶೋಧ, ಬಲ್ಲಮಾವಟಿ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಮತ್ತು ಮಕ್ಕಳ ಪೋಷಕರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಭಾಗ್ಯ ನಿರೂಪಿಸಿದರು.ಸುಜಾತ ಸ್ವಾಗತಿಸಿ,ಪವಿತ್ರ ವಂದಿಸಿದರು.