ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹ

Reading Time: 6 minutes

ಕರಿಕೆ: ಒಂದು ಗ್ರಾಮದಲ್ಲಿ ಒಂದು ಸಹಕಾರ ಸಂಘ ಸ್ಥಾಪನೆಯಾಗಬೇಕೆಂಬುದು ಸರ್ಕಾರದ ಆಶಯವಾಗಿದ್ದು, ಆ ಮೂಲಕ ಸ್ಥಳೀಯ ರೈತರಿಗೆ ಗೊಬ್ಬರ, ಉತ್ಪನ್ನಗಳಿಗೆ ಗೋದಾಮು, ಶಿಕ್ಷಣ ನೀಡುವಂತಹ ಕಾರ್ಯಗಳನ್ನು ಕೈಗೊಂಡು ರೈತರ ಆರ್ಥಿಕತೆಯನ್ನು ವೃದ್ಧಿಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕರಿಕೆ ಸಹಕಾರ ಸಂಘದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮಡಿಕೇರಿ, ಸಹಕಾರ ಇಲಾಖೆ, ಕೊಡಗು ಜಿಲ್ಲೆ, ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಕರಿಕೆ ಸಹಕಾರ ‘ಸಹಕಾರ ಸಂಸ್ಥೆಗಳಲ್ಲಿ ಸರಳ ವ್ಯಾಪಾರ ಪ್ರಕ್ರಿಯೆ ಮತ್ತು ಉದಯೋನ್ಮುಖ ವಲಯಗಳ’ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದೆ ಕೊಡಗು ಜಿಲ್ಲೆಯ ಕರಿಕೆ ಭಾಗದಲ್ಲಿ ಅಪ್ಪಿಕೊ ಚಳುವಳಿಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕರಿಕೆ ಪ್ಯಾಕ್ಸ್‍ನ ಸಣ್ಣ ಕೊಠಡಿಯಲ್ಲಿ ಉಳಿದುಕೊಂಡು ಚಳುವಳಿಯಲ್ಲಿ ಭಾಗವಹಿಸಿದ ಘಟನೆಯನ್ನು ನೆನೆಯುತ್ತಾ ಇಂದು ಪ್ಯಾಕ್ಸ್ ಉತ್ತಮ ಕಟ್ಟಡ ನಿರ್ಮಾಣ ಮಾಡಿದ್ದು, ಸ್ಥಳೀಯ ಉತ್ಪನ್ನಗಳ ಖರೀದಿಯಂತಹ ಮಹಾತ್ಕಾರ್ಯವನ್ನು ಕೈಗೊಳ್ಳುತ್ತಾ ಉತ್ತಮವಾಗಿ ಬೆಳೆಯುತ್ತಿದೆ. ಒಂದು ಗ್ರಾಮದಲ್ಲಿ ಒಂದು ಸಹಕಾರ ಸಂಘ ಸ್ಥಾಪನೆಯಾಗಬೇಕೆಂಬುದು ಸರ್ಕಾರದ ಆಶಯವಾಗಿದ್ದು ಆ ಮೂಲಕ ಸ್ಥಳೀಯ ರೈತರಿಗೆ ಗೊಬ್ಬರ, ಉತ್ಪನ್ನಗಳಿಗೆ ಗೋದಾಮು, ಶಿಕ್ಷಣ ನೀಡುವಂತಹ ಕಾರ್ಯಗಳನ್ನು ಕೈಗೊಂಡು ರೈತರ ಆರ್ಥಿಕತೆಯನ್ನು ವೃದ್ಧಿಗೊಳಿಸಲು ಪ್ರಯತ್ನಿಸುತ್ತಿದೆ. ಈ ಮೂಲಕ ದೇಶದ ಆರ್ಥಿಕತೆಯನ್ನು ವೃದ್ಧಿಗೊಳಿಸಬಹುದೆಂಬ ಚಿಂತನೆಯೊಂದಿಗೆ 5 ಟ್ರಿಲಿಯನ್ ಡಾಲರ್‍ಗೆ ದೇಶದ ಆರ್ಥಿಕತೆಯನ್ನು ಕೊಂಡೊಯ್ಯಬೇಕೆನ್ನುವ ಉದ್ದೇಶದೊಂದಿಗೆ ಸಹಕಾರ ಕ್ಷೇತ್ರದ ಮೂಲಕ ಈ ಸಾಧನೆಯನ್ನು ಕೈಗೊಳ್ಳಬಹುದೆಂದು ಚಿಂತಿಸಿ ಯೋಜನೆ ರೂಪಿಸಲಾಗಿದೆ ಎಂದರು.

ಈ ದಿಸೆಯಲ್ಲಿಯೇ 12 ಅಂಶಗಳ ಯೋಜನೆಯನ್ನು ಜಾರಿಗೊಳಿಸಿದ್ದು, ಸಹಕಾರ ಸಂಘಗಳು, ಜನೌಷಧಿ ಕೇಂದ್ರ ಸ್ಥಾಪನೆ, ಪೆಟ್ರೋಲ್ ಬಂಕ್ / ಚಾರ್ಚಿಂಗ್ ಘಟಕ, ಕುಡಿಯುವ ನೀರಿನ ಘಟಕ, ಗೋದಾಮು ನಿರ್ಮಾಣ ಇತ್ಯಾದಿ ಯೋಜನೆಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ. ಸಹಕಾರ ಕ್ಷೇತ್ರಕ್ಕೆ 119 ವರ್ಷಗಳ ಇತಿಹಾಸವಿದ್ದು, ಅನೇಕ ಹಿರಿಯ ಸಹಕಾರಿಗಳ ತ್ಯಾಗ, ನಿಸ್ವಾರ್ಥ ಸೇವೆ, ಉತ್ತಮ ಆಡಳಿತದ ಫಲವಾಗಿ ಇದೆಲ್ಲಾ ಸಾಧಿಸಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಕರಿಕೆ ಗ್ರಾ.ಪಂ ಅಧ್ಯಕ್ಷ ಬಾಲಚಂದ್ರ ನಾಯರ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಬೆಳವಣಿಗೆ ಉತ್ತಮವಾಗಿದ್ದು, ಎಲ್ಲಾ ಕ್ಷೇತ್ರಕ್ಕೂ ಸಂಘಗಳ ಕಾರ್ಯವ್ಯಾಪ್ತಿ ಹಬ್ಬಿದೆ. ಕ್ಯಾಂಪ್ಕೋ, ಮ್ಯಾಂಮ್ಕೋ, ನಂದಿನಿ, ಅಮೂಲ್ ಇತ್ಯಾದಿ ಬ್ರಾಂಡ್‍ಗಳೇ ಇದಕ್ಕೆ ಸಾಕ್ಷಿಯಾಗಿದ್ದು ಸಂಘಗಳು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಎಚ್.ಜೆ.ಸತೀಶ್ ಕುಮಾರ್ ಮಾತನಾಡಿ, ಇಂಗ್ಲೆಂಡ್‍ನಲ್ಲಿ ಪ್ರಪ್ರಥಮ ಸಹಕಾರ ಸಂಘ ಪ್ರಾರಂಭವಾದ ನಂತರದಲ್ಲಿ ಭಾರತದಲ್ಲಿ 1905 ರಲ್ಲಿ ಗದಗ್ ಜಿಲ್ಲೆಯಲ್ಲಿ ಸ್ಥಾಪನೆಯಾಯಿತು. ತದನಂತರದಲ್ಲಿ ಕೊಡಗು ಜಿಲ್ಲೆಯಲ್ಲಿ ಕೇವಲ 12 ದಿನಗಳ ಅಂತರದಲ್ಲಿ ತಲ್ತರೆ ಶೆಟ್ಟಳ್ಳಿಯಲ್ಲಿ ಪತ್ತಿನ ಸಹಕಾರ ಸಂಘ ಸ್ಥಾಪನೆಯಾಯಿತು. ನಂತರದಲ್ಲಿ ಭಾಗಮಂಡಲ ಪ್ಯಾಕ್ಸ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ, ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘ, ಜೇನು ಬೆಳೆಗಾರರ ಸಹಕಾರ ಸಂಘ, ಹೀಗೆ ಹಲವು ಸಂಘಗಳು ಇಂದು ಶತಮಾನೋತ್ಸವವನ್ನು ಕಂಡು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಅಂದಿನ ಕಾಲದಲ್ಲಿ ಸಹಕಾರಿಗಳ ದೂರದೃಷ್ಟಿಯ ಫಲವಾಗಿ ಸ್ಥಳಿಯವಾಗಿ ಬೆಳೆಯುವಂತಹ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ದೊರಕಿಸುವ ಉದ್ದೇಶದೊಂದಿಗೆ ಹಲವು ಸಂಘಗಳು ಪ್ರಾರಂಭವಾದವು. ಇಂದು ಪ್ಯಾಕ್ಸ್, ಪತ್ತಿನ ಸಹಕಾರ ಸಂಘಗಳು ವಾಣಿಜ್ಯ ಬ್ಯಾಂಕ್‍ಗಳಿಗೆ ಪೈಪೋಟಿಯನ್ನು ನೀಡುತ್ತಿದ್ದು, ಸಂಘಗಳ ತ್ವರಿತ ಕಾರ್ಯನಿರ್ವಹಣೆಯು ಶ್ಲಾಘನಾರ್ಹ ಎಂದರು.

ರಾಜ್ಯದಲ್ಲಿಯೇ ಹಲವು ವಿಧದ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಸಹಕಾರ ಆಸ್ಪತ್ರೆ, ಸಹಕಾರ ಸಾರಿಗೆ, ಸಹಕಾರ ಸೂಪರ್ ಮಾರ್ಕೆಟ್ ಇತ್ಯಾದಿ ಎಲ್ಲಾ ರಂಗಗಳಲ್ಲೂ ಸಹಕಾರ ಕ್ಷೇತ್ರ ವ್ಯಾಪಿಸಿದೆ ಎಂದು ಹೇಳಿದರು. ಅಂತೆಯೇ ಡಿ.ಸಿ.ಸಿ. ಬ್ಯಾಂಕ್ ವತಿಯಿಂದ ರೈತರಿಗೆ ಪಿಕ್‍ಅಪ್ ವಾಹನ ಖರೀದಿಗೆ, ಶಿಕ್ಷಣ ಪಡೆಯಲು ಸಾಲ ನೀಡುವಂತಹ ಯೋಜನೆಯನ್ನು ಹೊಸದಾಗಿ ಪ್ರಾರಂಭಿಸಲಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಪ್ರಗತಿ ಹೊಂದುತ್ತಿದೆ ಎಂದು ಹೇಳಿದರು.

ಸಂಘದ ಮಾಜಿ ಅಧ್ಯಕ್ಷರುಗಳಾದ ಬೇಕಲ್ ಸಿ.ಜಯರಾಮ, ಕೋಡಿ ಕೆ.ಪೊನ್ನಪ್ಪ, ಕೋಡಿ ಕೆ.ಸೀತಾರಾಮ, ಎಸ್.ವೆಂಕಪ್ಪಗೌಡ, ಬಿ.ಪಿ. ನಿರ್ಮಲಾನಂದ, ಎಚ್.ಎ.ಹರೀಶ, ಕೆ.ಬಿ.ರಾಘವ, ಬಿ.ಎ.ನಾರಾಯಣ, ಪಿ.ಟಿ.ಐಸಾಕ್, ಪಿ.ಎಂ.ನಂಜುಂಡ, ಬೇಕಲ್ ಡಿ.ದೇವರಾಜ, ಕೆ.ಪಿ.ರಘುರಾಮ, ಬೇಕಲ್ ಜೆ.ಶರಣ್ ಕುಮಾರ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗಾಧರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರಿಕೆ ಪ್ಯಾಕ್ಸ್ ಅಧ್ಯಕ್ಷ ಬೇಕಲ್ ದೇವರಾಜ್, ಕರಿಕೆ ಪ್ಯಾಕ್ಸ್ ಬೆಳೆದು ಬಂದ ದಾರಿಯ ಕುರಿತು ಸಂಘದ ಮುಂದಿನ ಯೋಜನೆಗಳು, ಸಂಘವು ಮೇಲೆ ಹೇಳಿದಂತೆ ಪೆಟ್ರೋಲ್ ಬಂಕ್ ನಿರ್ಮಾಣ, ಜನೌಷಧಿ ಕೇಂದ್ರ ಸ್ಥಾಪನೆಯಂತಹ ಯೋಜನೆ ರೂಪಿಸುತ್ತಿದೆ ಎಂದು ಹೇಳಿದರು. ಅಲ್ಲದೆ ಈಗಾಗಲೇ ಕ್ಯಾಂಪ್ಕೋದ ಸಂಯುಕ್ತಾಶ್ರಯದಲ್ಲಿ ಸಂಘದಲ್ಲಿ ಅಡಿಕೆ ಖರೀದಿ ಘಟಕವನ್ನು ಸಹ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು. ದಿನದ ಮಹತ್ವದ ಕುರಿತು ಕೆ.ಐ.ಸಿ.ಎಂ.ನ ನಿವೃತ್ತ ಪ್ರಾಂಶುಪಾಲರಾದ ಎಂ.ಎಂ. ಶ್ಯಾಮಲಾ ಉಪನ್ಯಾಸ ನೀಡಿದರು.
ಸಪ್ತಾಹದ ಅಂಗವಾಗಿ ಮೇರಿ ಬಾಪ್ಟಿಸ್ ಆಯುರ್ವೇದ ಆಸ್ಪತ್ರೆಯಿಂದ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.

ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎನ್.ಎ.ರವಿ ಬಸಪ್ಪ, ಕೆ.ಎಸ್.ಗಣಪತಿ, ಕೆ.ಎಂ.ತಮ್ಮಯ್ಯ, ಸಹಕಾರ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮೋಹನ್, ಕರಿಕೆ ಪ್ಯಾಕ್ಸ್‍ನ ಉಪಾಧ್ಯಕ್ಷ ಎಂ.ಎಂ.ರೆಲ್ಸನ್ ಹಾಜರಿದ್ದರು. ಕಾರ್ಯಕ್ರಮದ ಪ್ರಾರ್ಥನೆಯನ್ನು ಸಂಘದ ನಿರ್ದೇಶಕರುಗಳಾದ ಧನ್ಯಶ್ರೀ ಕುಮಾರ್ ಹಾಗೂ ಕೆ.ಪಿ. ಸರಸ್ವತಿ ನೆರವೇರಿಸಿದರು. ನಿರೂಪಣೆಯನ್ನು ಯೂನಿಯನ್‍ನ ವ್ಯವಸ್ಥಾಪಕಿ ಆರ್.ಮಂಜುಳ ನಿರೂಪಿಸಿದರು. ಕಾರ್ಯಕ್ರಮ ನಿರ್ವಹಣೆಗೆ ಯೂನಿಯನ್ ಸಿಬ್ಬಂದಿಗಳು ಹಾಗೂ ಪ್ಯಾಕ್ಸ್‍ನ ಸಿಬ್ಬಂದಿಗಳು ಸಹಕರಿಸಿದರು.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments