ಕೊಡವ ಶ್ರೀಮಂತ ಸಂಸ್ಕೃತಿಯ ಅನಾವರಣಕ್ಕೆ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಸಾಕ್ಷಿಯಾದರು.
ಜಿಲ್ಲೆಯ ಮಂದಿ ಅದರಲ್ಲೂ ಕೊಡವ ಹಾಗೂ ಕೊಡವ ಭಾಷಿಕ ಜನಾಂಗ ಇಗ್ಗುತಪ್ಪ ದೇವರ ಪುತ್ತರಿ ದೇವ ಕಟ್ಟ್ ತಪ್ಪದೆ ಪಾಲನೆ ಮಾಡಲು ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಕರೆ ನೀಡಿದರು.
ಪೊನ್ನಂಪೇಟೆ ತಾಲ್ಲೂಕಿನ ಕುಂದಾ ಸಮೀಪದ ಬೊಟ್ಟಿಯತ್ ಮೂಂದ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡ್’ಗೆ ಸೇರಿದ “ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್”ನ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಪ್ರತಿವರ್ಷ ಪುತ್ತರಿ ನಮ್ಮೆಗೆ ಹದಿನೈದು ದಿವಸ ಮುಂಚಿತವಾಗಿ ಅಮಾವಾಸ್ಯೆಯ ದಿನದಂದು ಇಗ್ಗುತಪ್ಪ ದೇವರ ಮೂಲಸ್ಥಾನವಾದ “ಮಲ್ಮ” ಬೆಟ್ಟದಲ್ಲಿ ಅತ್ಯಂತ ಶೃದ್ಧಾ ಭಕ್ತಿಯಿಂದ ತಕ್ಕಮುಖ್ಯಸ್ಥರು ಸೇರಿ ಪುತ್ತರಿ ಹಬ್ಬದ “ದೇವ ಕಟ್ಟ್” ಅನ್ನು ಹಾಕಲಾಗುತ್ತದೆ. ಈ ಸಂದರ್ಭದಲ್ಲಿ ಜಿಲ್ಲೆಯ ಜನರಿಗೆ ಒಂದಷ್ಟು ಕಟ್ಟುಪಾಡುಗಳನ್ನು ಕೂಡ ವಿಧಿಸಲಾಗುತ್ತದೆ ಹಾಗೂ ಅದನ್ನು ದೇವರ ಮುಂದೆ ಒಪ್ಪಿಸಲಾಗುತ್ತದೆ. ಆದರೆ ಇದನ್ನು ಜಿಲ್ಲೆಯ ಮಂದಿ ಸರಿಯಾಗಿ ಪಾಲನೆ ಮಾಡುತ್ತಿಲ್ಲ, ಇದರಿಂದ ಜಿಲ್ಲೆಯಲ್ಲಿ ಅನಾದಿಕಾಲದಿಂದಲೂ ಬದುಕು ಕಟ್ಟಿಕೊಂಡಿರುವ ಕೊಡವ ಹಾಗೂ ಕೊಡವ ಭಾಷಿಕ ಸಮುದಾಯ ಅವರವರ ಸಂಸಾರದಲ್ಲಿ ಬಹಳಷ್ಟು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಆದರೆ ಇದು ಕೆಲವರಿಗೆ ಅರ್ಥ ಆಗುತ್ತಿಲ್ಲ ಮತ್ತೆ ಕೆಲವರಿಗೆ ಅರ್ಥ ಆಗಿದೆ ಎಂದು ಅವರು ಹೇಳಿದರು.
ಪುತ್ತರಿ ನಮ್ಮೆಗೆ ಹದಿನೈದು ದಿನಗಳ ಹಿಂದೆ ಇಗ್ಗುತಪ್ಪ ದೇವರ ಪುತ್ತರಿ ದೇವ ಕಟ್ಟ್ ಸಂದರ್ಭ ಹೇಳಲಾದ ಪ್ರತಿಯೊಂದು ವಾಕ್ಯಗಳು ದೇವರ ವಾಕ್ಯಗಳಂತೆ, ನಮ್ಮ ಹಿರಿಯರು ನಡೆಸಿಕೊಂಡು ಬಂದಿರುವ ಆಚಾರ ವಿಚಾರಗಳನ್ನು ಇದೀಗ ಮುಂದುವರಿಸಿಕೊಂಡು ಬರಲಾಗಿದೆ ಇದನ್ನು ತಪ್ಪದೆ ಪಾಲನೆ ಮಾಡಬೇಕು, ಪುತ್ತರಿ ದೇವ ಕಟ್ಟ್ ಸಮಯದಲ್ಲಿ ಮದುವೆ ಸೇರಿದಂತೆ ಯಾವುದೇ ಶುಭಕಾರ್ಯಗಳನ್ನು ಜನಾಂಗ ಮಾಡಬಾರದು, ಮಾಡಿದ್ದರೆ ಅವರು ಇಗ್ಗುತಪ್ಪನ ವಕ್ರ ದೃಷ್ಟಿಗೆ ಬಲಿಯಾಗುತ್ತಾರೆ ಎನ್ನುವುದು ನಂಬಿಕೆಯಾಗಿದ್ದು, ಇದಕ್ಕೆ ಹಲವಾರು ನಿದರ್ಶನಗಳು ನಮ್ಮ ಕಣ್ಣಿನ ಮುಂದೆ ಇದೆ. ಹೀಗೆ ಪುತ್ತರಿ ದೇವ ಕಟ್ಟ್ ಸಂದರ್ಭದಲ್ಲಿ ಹಿಂದಿನ ಕಾಲದಲ್ಲಿ ಬೇಟೆಗಳು ನಿಷೇಧವಾಗಿತ್ತು, ಪ್ರಾಣಿ ಹಿಂಸೆ ಮಾಡಬಾರದು, ಪುತ್ತರಿ ಕಳೆಯುವವರೆಗೂ ಭತ್ತದ ಕಟಾವು ಮಾಡುವಂತಿಲ್ಲ, ಹೀಗೆ ಹಲವಾರು ಕಟ್ಟುಪಾಡುಗಳನ್ನು ವಿಧಿಸಿ ಕಟ್ಟು ಹಾಕಿ ದೇವರ ಸನ್ನಿಧಿಯಲ್ಲಿ ದೇವರಿಗೆ ಒಪ್ಪಿಸಲಾಗಿರುತ್ತದೆ. ಇದಕ್ಕೆ ಬಹಳಷ್ಟು ಶಕ್ತಿ ಇದ್ದು ದಯವಿಟ್ಟು ಯಾರು ಪುತ್ತರಿ ದೇವ ಕಟ್ಟ್ ಉಲ್ಲಂಘನೆ ಮಾಡದೆ ಪರಿಪಾಲನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಮುಂದುವರಿದು ಮಾತನಾಡಿದ ಅವರು ಮಂದ್ ಮಾನಿಗಳು ಶೃದ್ಧಾ ಭಕ್ತಿಯ ಧಾರ್ಮಿಕ ಕೇಂದ್ರವಿದ್ದಂತೆ ಇದು ನಮಗೆ ದೇವಸ್ಥಾನವು ಹೌದು ನಮ್ಮ ಶ್ರೀಮಂತ ಸಂಸ್ಕೃತಿಯ ಅನಾವರಣ ಮಾಡುವ ಸ್ಥಳವು ಹೌದು ಎಂದ ಅವರು. ಈ ಹಿಂದೆ ನಮ್ಮ ಪೂರ್ವಿಕರು ಎಲ್ಲಿಯೂ ಇತ್ಯರ್ಥ ಆಗದೆ ಉಳಿರುವ ಬಹಳಷ್ಟು ವ್ಯಾಜ್ಯಗಳನ್ನು ಮಂದ್ ಮಾನಿಗಳಿಗೆ ತರುವ ಮೂಲಕ ಇಲ್ಲಿ ಇತ್ಯರ್ಥ ಮಾಡಿಕೊಳ್ಳುತ್ತಿದ್ದರು, ಕೋರ್ಟ್ ಕಛೇರಿಗೆ ವ್ಯಾಜ್ಯಗಳು ಹೋಗುತ್ತಿರಲಿಲ್ಲ, ಈ ಮಂದ್’ಗಳಿಗೆ ಅಷ್ಟೊಂದು ಹಿರಿಮೆ ಇದೆ. ಸಣ್ಣಪುಟ್ಟ ವಿಷಯಗಳಿಗೆ ಮಂದ್’ಗಳಲ್ಲಿ ವ್ಯಾಜ್ಯಗಳನ್ನು ನಡೆಸಬಾರದು, ಸಣ್ಣಪುಟ್ಟ ವಾಗ್ವಾದಗಳು ಮನಸ್ಥಾಪಗಳು ಆಗುವುದು ಸಹಜ ಇದನ್ನು ಜನಾಂಗ ಮುಂದುವರಿಸಿಕೊಂಡು ಹೋಗಬಾರದು. ಮಂದ್’ಗಳಿಗೆ ಅಗಾಧವಾದ ಶಕ್ತಿ ಇದೆ, ಇದಕ್ಕೆ ಅಗೌರವ ತೋರಿಸಬಾರದು ಎಂದು ಹೇಳಿದ್ದರು. ಈ ಕೈಮುಡಿಕೆ ಪುತ್ತರಿ ಕೋಲ್ ಮಂದ್’ನಲ್ಲಿ 10/04/1969ರಲ್ಲಿ ಅಂದಿನ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಉತ್ತಪ್ಪ ಹಾಗೂ ಕಾರ್ಯದರ್ಶಿ ಆಗಿದ್ದ ವಕೀಲ ಚಿಯಕ್’ಪೂವಂಡ ಭೀಮಯ್ಯ ನೇತೃತ್ವದಲ್ಲಿ ನಡೆದ ದೇಶಸಭೆಯನ್ನು ನೆನಪಿಸಿಕೊಂಡರು.
ಪ್ರತಿವರ್ಷ ಮೂಂದ್ ನಾಡ್ ವತಿಯಿಂದ ಸಾಧಕರೊಬ್ಬರಿಗೆ ಮಾಡಲಾಗುವ ಸನ್ಮಾನ ಸ್ವೀಕರಿಸಿದ ಗೋಣಿಕೊಪ್ಪ ಕಾವೇರಿ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಮಾತನಾಡಿ ನಮಗೆ ಜಿಲ್ಲೆ, ಹೊರಜಿಲ್ಲೆ, ದೇಶ ವಿದೇಶಗಳಲ್ಲಿ ಸಿಗುವ ಸನ್ಮಾನಕ್ಕಿಂತ ನಮ್ಮ ನಾಡಿನಲ್ಲಿ ನಮ್ಮ ಊರಿನಲ್ಲಿ ಸಿಗುವ ಸನ್ಮಾನಗಳು ಬಹಳ ದೊಡ್ಡದು ಎಂದ ಅವರು ಒಂದು ಡಾಕ್ಟರೇಟ್ ಪದವಿಯ ಹಿಂದೆ ಹಲವಾರು ವರ್ಷಗಳ ಕಠಿಣ ಪರಿಶ್ರಮವಿದೆ, ರಾತ್ರಿ ಹಗಲು ಎನ್ನದೆ ಓದಬೇಕು. ಇದ್ಯಾವುದೂ ದುಡ್ಡು ಕೊಟ್ಟರೆ ಸಿಗುವುದಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ದುಡ್ಡಿಗೆ ಪದವಿಗಳು ಡಾಕ್ಟರೇಟ್’ಗಳು ದೊರೆಯುತ್ತಿರುವುದು ದುರಾದೃಷ್ಟ ಎಂದ ಅವರು. ಸಂಶೋಧನೆಗೂ ಹಾಗೂ ಹಣಕೊಟ್ಟು ಪಡೆದ ಪದವಿಗೂ ವ್ಯತ್ಯಾಸವಿದೆ. ಸಂಶೋಧನೆ ಮಾಡಿದವರನ್ನು ಆ ವಿಷಯವಾಗಿ ಎಂತಹ ಪ್ರಶ್ನೆ ಕೇಳಿದರೂ ಕೂಡಲೇ ಅಲ್ಲಿ ಉತ್ತರ ಸಿಗುತ್ತದೆ. ಆದರೆ ಹಣಕೊಟ್ಟು ಅಥವಾ ಶಿಫಾರಸ್ಸು ಮಾಡಿ ಪಡೆಯುವ ಪದವಿ ಕೇವಲ ತೋರ್ಪಡಿಕೆಗೆ ಅಷ್ಟೇ ಸೀಮಿತ ಎಂದರು. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನ ಕೊಡಬೇಕು. ಓದು ಉತ್ತಮ ಭವಿಷ್ಯವನ್ನು ರೂಪಿಸುತ್ತದೆ ಎಂದು ಕಿವಿಮಾತು ಹೇಳಿದ್ದರು. ಹಾಗೇ ನಮ್ಮ ಪದ್ದತಿ ಸಂಸ್ಕೃತಿ, ಭಾಷೆ, ಮಂದ್, ಮುಂದ್ ಇದೆಲ್ಲವನ್ನು ಉಳಿಸಿದ್ದರೆ ಮಾತ್ರ ಕೊಡವಾಮೆ ಉಳಿವು ಸಾಧ್ಯ ಹಾಗೂ ಒಂದು ಜನಾಂಗದ ಉಳಿವು ಸಾಧ್ಯ, ಇದನ್ನು ಉಳಿಸಿ ಬೆಳೆಸುವಲ್ಲಿ ಯುವ ಜನಾಂಗ ಮುಂದೆ ಬರಬೇಕಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ಮೂರು ನಾಡಿನ ತಕ್ಕಮುಖ್ಯಸ್ಥರು ಹಾಗೂ ಬೊಟ್ಟಿಯತ್ ನಾಡ್ ತಕ್ಕರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಮಾತನಾಡಿ ಕೈಮುಡಿಕೆ ಮಂದ್ ಎನ್ನುವುದು ಕೊಡಗಿನಲ್ಲಿ ಪ್ರಸಿದ್ಧಿ ಪಡೆದಿರುವ ಮಂದ್ ಆಗಿದ್ದು, ಸೇನಾ ಮಹಾದಂಡನಾಯಕನಾಗಿದ್ದ ಫೀಲ್ಡ್ ಮಾರ್ಷಲ್ ಕೊಡಂದೇರ ಕಾರ್ಯಪ್ಪ ಅವರು ಕೋಲು ಹೊಡೆದ ಖ್ಯಾತಿಯನ್ನು ಹೊಂದಿದೆ ಎಂದರು. ಮುಂದಿನ ಪೀಳಿಗೆಗೂ ನಾವು ಈ ಮುಂದ್’ಗಳನ್ನು ಉಳಿಸಿ ಬೆಳೆಸಬೇಕಿದೆ ಎಂದರು. ವೇದಿಕೆಯಲ್ಲಿ ಕುತ್ತ್’ನಾಡ್ ತಕ್ಕ ಪಂದಿಮಾಡ ಅಚ್ಚಪ್ಪ, ಬೇರಳಿನಾಡ್ ತಕ್ಕ ಮಳವಂಡ ಭುವೇಶ್, ಗೌರವ ಕಾರ್ಯದರ್ಶಿ ನಾಳಿಯಮ್ಮನ ಉಮೇಶ್ ಕೇಚಮಯ್ಯ, ಸಹಕಾರ್ಯದರ್ಶಿ ಅಪ್ಪಂಡೇರಂಡ ಮನು ಮೋಹನ್ ಸೇರಿದಂತೆ ಮೂರು ನಾಡಿನ ಊರು ತಕ್ಕರು ಉಪಸ್ಥಿತರಿದ್ದರು.
ಬೆಳಿಗ್ಗೆ 10-00ಗಂಟೆಗೆ ಮೂರು ನಾಡಿನವರು ಆಯಾಯ ಕುಂಞ ಮಂದ್’ಗಳಲ್ಲಿ ಕೋಲ್ ಹೊಡೆದು ಬಳಿಕ ಪ್ರಮುಖ ಮಂದ್’ನಲ್ಲಿ ಸಾಂಪ್ರದಾಯಿಕ ಮಂದ್ ಹಿಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೂರು ನಾಡಿನವರು ಮೂರು ಕಡೆಯಿಂದ ಪಟ್ಟ್(ರೇಷ್ಮೆ ವಸ್ತ್ರ) ಹಿಡಿದು ಓಡಿಬಂದು ಮಂದ್ ಮಧ್ಯಭಾಗದಲ್ಲಿರುವ ಮರಕ್ಕೆ ಕೋಲ್ ಹೊಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಮೂರು ನಾಡಿನವರು ಒಂದು ಸುತ್ತಿನ ಸಾಮೂಹಿಕ ಪುತ್ತರಿ ಕೋಲಾಟ್ ನಡೆಸಿ ಸಾರ್ವಜನಿಕವಾಗಿ ವಿವಿಧ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಉಮ್ಮತಾಟ್, ಬೊಳಕಾಟ್, ಕತ್ತಿಯಾಟ್, ಪರೆಯಕಳಿ, ಬಾಳೋಪಾಟ್, ಪುತ್ತರಿ ಕೋಲಾಟ್, ವಾಲಗತ್ತಾಟ್, ಕೊಡವ ಪಾಟ್ ಪೈಪೋಟಿ, ಸಾಮೂಹಿಕ ನೃತ್ಯ ಸೇರಿದಂತೆ ಬುಡಕಟ್ಟು ಸಮುದಾಯದ ಯರವಾಟ್ ಹಾಗೂ ಚೀನಿದುಡಿ ನುಡಿಸುವ ಪೈಪೋಟಿ ಕಾರ್ಯಕ್ರಮ ನಡೆಯಿತು. ಮೂರು ನಾಡಿನವರಿಗೆ ಸೀಮಿತವಾಗಿ ಹಗ್ಗಜಗ್ಗಾಟ ಕಾರ್ಯಕ್ರಮ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಗಮನ ಸೆಳೆಯಿತು. ಮಧ್ಯಾಹ್ನ ಸಹಭೋಜನ ವ್ಯವಸ್ಥೆಯೊಂದಿಗೆ ಮೂರು ನಾಡಿನ ಕೈಮುಡಿಕೆ ಪುತ್ತರಿ ಕೋಲ್ ಮಂದ್’ನಲ್ಲಿ ಕೊಡವ ಶ್ರೀಮಂತ ಸಂಸ್ಕೃತಿಯ ಅನಾವರಣವಾಯಿತು. ಜಿಲ್ಲೆಯ ವಿವಿಧ ಶಾಲಾಕಾಲೇಜುಗಳು ಸೇರಿದಂತೆ ವಿವಿಧ ಮಂದ್ ಹಾಗೂ ಸಂಘಸಂಸ್ಥೆಗಳ ತಂಡಗಳು ಗಮನ ಸೆಳೆಯಿತು ಹಾಗೂ ಬಹುಮಾನಗಳನ್ನು ಪಡೆದರು.