ಕೊಡಗಿನ ಆದಿಮೂಲ ನಿವಾಸಿಗಳಾಗಿ ಕೊಡವರೊಂದಿಗೆ ಬಾಳಿ ಬಂದಿರುವ, ಕೊಡವ(ಅರಮನೆ) ಪಾಲೆ ಜನಾಂಗದ ಸಾಮಾಜಿಕ ಮುನ್ನಲೆಗೆ ಸಹಕರಿಸುವಂತೆ ಮತ್ತು ಟ್ರೇಡ್ ಮಾರ್ಕ್ ಆಗಿ ನೋಂದಾಯಿಸಲ್ಪಟ್ಟಿರುವ ಕೊಡವ ಲೋಗೋವನ್ನು ಮೂಲತನದ ಆಧಾರದಲ್ಲಿ ಬಳಸಲು ಅನುವು ಮಾಡುವಂತೆ ಕೋರಿ, ಕೊಡವ ಪಾಲೆ ಸಮಾಜದ ಪ್ರಮುಖರು ಕೊಡವಾಮೆರ ಕೊಂಡಾಟ ಸಂಘಟನೆಗೆ ಲಿಖಿತ ಮನವಿ ಮಾಡಿ ಚರ್ಚಿಸಿದರು.
ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷರಾದ ಚಾಮೆರ ದಿನೇಶ್ ಬೆಳ್ಯಪ್ಪ ಅವರನ್ನು ಮೈಸೂರಿನಲ್ಲಿ ಭೇಟಿಯಾದ ಕೊಡವ ಪಾಲೆ ಜನಾಂಗದ ನಿಯೋಗವು, ಕೊಡವರೊಂದಿಗೆ ಪಾಲೆ ಜನಾಂಗದ ಸಂಬಂಧ, ಬೆಳೆದು ಬಂದ ಹಾದಿ, ಇತಿಹಾಸ ಈಗಿನ ಸ್ಥಿತಿಗತಿಯ ಕುರಿತು ಕೂಲಂಕುಶವಾಗಿ ಚರ್ಚಿಸಿದರು. ಅಲ್ಲದೆ ಮೂಲ ಕೊಡವ ಪದ್ದತಿ ಪರಂಪರೆಯನ್ನೇ ಅನುಸರಿಸುತ್ತಾ ಇಂದಿಗೂ ಕೊಡವರೊಂದಿಗೆ ಸಾಂಪ್ರದಾಯಿಕ ಮತ್ತು ಭಾವನಾತ್ಮಕ ಹಾಗೂ ದೈವಿಕ ಸಂಬಂಧಗಳನ್ನು ಇಟ್ಟುಕೊಂಡಿರುವ, ಕೊಡವ ಪಾಲೆ ಜನಾಂಗವು ಇಂದು ಅಳಿವಿನ ಅಂಚಿನಲ್ಲಿದ್ದು, ಹಿರಿಯಣ್ಣನಂತಿರುವ ಕೊಡವರು ನಮ್ಮ ಸಾಮಾಜಿಕ ರಕ್ಷಣೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಕೊಡವ ಪರಂಪರೆಯ ಹೆಗ್ಗುರುತಾಗಿರುವ, ತೋಕ್, ಒಡಿಕತ್ತಿ, ಪೀಚೆಕತ್ತಿ ಸೇರಿದ ಲೋಗೋವನ್ನ ಟ್ರೇಡ್ ಮಾರ್ಕ್ ಆಕ್ಟ್ ಪ್ರಕಾರ ನೋಂದಾಯಿಸಿರುವು ಕೊಡವಾಮೆರ ಕೊಂಡಾಟ ಸಂಘಟನೆಯ ಐತಿಹಾಸಿಕ ಸಾಧನೆಯಾಗಿದ್ದು ಇದಕ್ಕಾಗಿ ಸಂಘಟನೆಯ ಶ್ರಮವನ್ನು ಶ್ಲಾಗಿಸುತ್ತೆವೆ ಎಂದರು. ಇದೇ ಸಂಧರ್ಭದಲ್ಲಿ 23ಮೂಲ ನಿವಾಸಿಗಳು ಈ ಲೋಗೋವನ್ನು ಬಳಸಬಹುದು ಎಂದಿರುವಲ್ಲಿ, ಕೊಡವ (ಅರಮನೆ) ಪಾಲೆ ಜನಾಂಗ ಬಿಟ್ಟು ಹೋಗಿದ್ದು, ತಲೆತಲಾಂತರದಿಂದ ಕೊಡವ ಪರಂಪರೆಯೊಂದಿಗೆ ಬದುಕುತ್ತಿರುವ ನಮಗೂ ಬಳಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು. ಆದಿ ಬುಡಕಟ್ಟು ಜನಾಂಗವಾಗಿರುವ ಕೊಡವ ಪಾಲೆ ಜನಾಂಗವು, ಈ ಹಿಂದೆ ಸರ್ಕಾರದ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ್ದು, ಹಿಂದೆ ದಾಖಲೆಯಲ್ಲೂ ಉಲ್ಲೇಖವಿತ್ತು, ಆದರೆ ಇದೀಗ ತಾಂತ್ರಿಕ ಬದಲಾವಣೆಯಿಂದ ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಮರಳಿ ಬುಡಕಟ್ಟು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರ್ಕಾರ ಮತ್ತು ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದ್ದು, ತಾವೂ ಸಹಕರಿಸುವಂತೆ ಕೋರಿದರು.
ಈ ಸಂಧರ್ಭ ಮಾತನಾಡಿದ ಕೊಡವಾಮೆರ ಕೊಂಡಾಟ ಸಂಘಟನೆ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು, ಕೊಡವ ಪಾಲೆ ಜನಾಂಗದ ಕೊಡಗಿನ ಅಸ್ತಿತ್ವದ ಬಗ್ಗೆ ಹಲವು ಜಾನಪದ ಹಿನ್ನೆಲೆಯ ಆಧಾರಗಳಿದ್ದು, ಕೊಡವರೊಂದಿಗೆ ಹಲವು ಸಂಬಂಧಗಳು ಇಂದಿಗೂ ಇದೆ. ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಕೊಡವ ಪಾಲೆ ಜನಾಂಗದ ಶ್ರೇಯಕ್ಕೆ ನಮ್ಮ ಸಹಕಾರ ಇರಲಿದ್ದು, ಈ ಕುರಿತು ಹಿರಿಯರೊಂದಿಗೂ ಚರ್ಚಿಸಲಾಗುವುದು, ಪರಿಶಿಷ್ಟ ವರ್ಗದಿಂದ ಪರಿಶಿಷ್ಟ ಪಂಗಡಕ್ಕೆ ಮರಳಲು ಕಾನೂನಿನ ವ್ಯಾಪ್ತಿಯಲ್ಲಿ ಸಹಕರಿಸುತ್ತೇವೆ ಎಂದರು. ನೋಂದಾಯಿತ ಕೊಡವ ಲೋಗೋ ಬಳಕೆಯಲ್ಲಿ ಕೊಡವ ಪಾಲೆ ಜನಾಂಗದ ಹೆಸರು ಬಿಟ್ಟುಹೋಗಿದ್ದು, ಕಣ್ತಪ್ಪಿನಿಂದ ಆದ ವ್ಯತ್ಯಾಸವನ್ನು ಸರಿಪಡಿಸಲಾಗುವುದು, ಸದರಿ ಲೋಗೋವನ್ನು ಕೊಡವ ಪಾಲೆ ಜನಾಂಗ ಬಳಸಿಕೊಳ್ಳಲು ನಮ್ಮ ಸಮ್ಮತಿಯಿದ್ದು, ಈ ಕುರಿತು ಸಂಘಟನೆಯ ಪದಾಧಿಕಾರಿಗಳೊಂದಿಗೆ ಚರ್ಚಿಸಿ ದೃಡೀಕರಣ ನೀಡಲಾಗುವುದು ಎಂದು ಹಿಂಬರಹ ನೀಡಿದರು.
ಸಭೆಯಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆಯ ಆಡಳಿತ ಮಂಡಳಿ ನಿರ್ದೇಶಕ ಚಿರಿಯಪಂಡ ವಿಶುಕಾಳಪ್ಪ, ಕೊಡವ(ಅರಮನೆ) ಪಾಲೆ, ಜನಾಂಗದ ಸಂಘಟಕರಾದ ಕೊಡವ ಪಾಲೆ ಮಂದಣ್ಣ, ಕೊಡವಪಾಲೆ ದೇವಯ್ಯಕಕ್ಕಬ್ಬೆ, ಕೊಡವಪಾಲೆ ಗಣೇಶ್ ಕುಂಜಿಲ, ಕೊಡವ ಪಾಲೆ ಮಧುದೇವಯ್ಯ ಕುಂಜಿಲ ಅವರುಗಳು ಉಪಸ್ಥಿತರಿದ್ದರು.
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.