ಮೂರ್ನಾಡು ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭ
ಮೂರ್ನಾಡು: ಓದುವುದರ ಜೊತೆಗೆ ಇತರೆ ಚಟುವಟಿಕೆಗಳು ಇದ್ದಾಗ ಮಾತ್ರ ದೈಹಿಕ ಮತ್ತು ಮಾನಸಿಕವಾಗಿ ಉತ್ಸುಕತೆಯಿಂದ ಇರಲು ಸಾಧ್ಯ ಎಂದು ಕೊಡಗು ಜಿಲ್ಲಾ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದರು.
ಮೂರ್ನಾಡು ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜ್ಞಾನ ಜ್ಯೋತಿ ಶಾಲಾ ವಾರ್ಷಿಕೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಮಟ್ಟದಲ್ಲಿರುವ ಈ ಶಾಲೆಯ ಶೈಕ್ಷಣಿಕ ವ್ಯವಸ್ಥೆಯನ್ನು ನಗರಗಳಲ್ಲಿರುವ ಅಂತರಾಷ್ಟಿçÃಯ ಮಟ್ಟದ ಶೈಕ್ಷಣಿಕ ವ್ಯವಸ್ಥೆಯನ್ನು ಮೀರಿಸುವಂತಿದೆ. ಕ್ರೀಡೆಯು ಜೀವನದಲ್ಲಿ ಹೆಚ್ಚು ಚಟುವಟಿಕೆಯಿಂದರಲು ಸಹಾಯ ಮಾಡುತ್ತದೆ. ಹಾಗಾಗಿ ಶಾಲೆಗಳಲ್ಲಿ ಕ್ರೀಡೆಗೆ ಹೆಚ್ಚು ಆದ್ಯತೆ ನೀಡಬೇಕು. ಕ್ರೀಡೆಗಳಲ್ಲಿ ಸೋಲು ಧೈರ್ಯ ತುಂಬುತ್ತದೆ. ತರಗತಿಗಳಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದು ಮಾತ್ರ ಶಾಲಾ ಜೀವನವಾಗದೆ, ಅದಕ್ಕೂ ಮೀರಿ ಸಮುದಾಯದ ಬಗ್ಗೆ ಅರಿವು ಮೂಡಿಸುವ ವ್ಯವಸ್ಥೆಯನ್ನು ಶಾಲಾ ಶಿಕ್ಷಣವು ಒಳಗೊಂಡಿರಬೇಕು. ಈ ಶಾಲೆಯಲ್ಲಿ ಶಿಕ್ಷಕರು ಮತ್ತು ಆಡಳಿತ ಮಂಡಳಿ ಮಕ್ಕಳಿಗೆ ಉತ್ತಮ ರೀತಿಯ ಪ್ರೋತ್ಸಾಹ ನೀಡುತ್ತಿದೆ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಮುಕ್ಕಾಟೀರ ರವಿ ಚೀಯಣ್ಣ ವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ರೂಪಿಸಿಕೊಳ್ಳಬೇಕು. ಪೋಷಕರು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳು ಶಾಲಾ ಜೀವನದಲ್ಲಿ ಯಾವುದೆ ದುಶ್ಚಟಗಳಿಗೆ ಬಲಿಯಾಬಾರದು ಎಂದು ತಿಳಿಸಿದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಬಡುವಂಡ ಬೆಲ್ಲು ಚಿಣ್ಣಪ್ಪ, ಕಾರ್ಯದರ್ಶಿ ಬಡುವಂಡ ಬೋಪಣ್ಣ, ಖಜಾಂಚಿ ಎನ್.ಒ. ಮ್ಯಾಥ್ಯು, ನಿರ್ದೇಶಕರಾದ ಮಾಳೇಟಿರ ನವೀನ್ ಕಾರ್ಯಪ್ಪ, ಡಾ. ಜೆ.ಎ. ಕುಂಞ ಅಬ್ದುಲ್ಲಾ, ಬಡುವಂಡ ವಿಜಯ, ಅವರೆಮಾದಂಡ ಸುಗುಣ ಸುಬ್ಬಯ್ಯ ಮತ್ತು ಶಾಲಾ ಮುಖ್ಯ ಶಿಕ್ಷಕಿ ಶೀಲಾ ಅಬ್ದುಲ್ಲಾ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ರೀತಿಯ ವಿಜ್ಞಾನ ಮಾದರಿಗಳು, ಕರಕುಶಲ ವಸ್ತುಗಳು, ಚಿತ್ರಕಲೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇವುಗಳನ್ನು ಪೋಷಕರು ಮತ್ತು ಅತಿಥಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪಾರಿತೋಷಕ ಮತ್ತು ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ಬಹುಮಾನಗಳನ್ನು ಅತಿಥಿಗಳು ವಿತರಿಸಿದರು. ವಿದ್ಯಾರ್ಥಿನಿ ಕೆ.ಆರ್. ಸ್ನೇಹ ಸ್ವಾಗತಿಸಿ, ಎಂ.ಬಿ. ಯಶ್ಮಿತ ಕಾರ್ಯಕ್ರಮ ನಿರೂಪಿಸಿ, ಮುಖ್ಯ ಶಿಕ್ಷಕಿ ಶೀಲಾ ಅಬ್ದುಲ್ಲಾ ಶಾಲಾ ವರದಿ ವಾಚಿಸಿ, ಪ್ರಜ್ವಲ್ ಪೊನ್ನಣ್ಣ ವಂದಿಸಿದರು. ಸಮಾರಂಭದ ನಂತರ ಜರುಗಿದ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ಆಕರ್ಷಣೀಯವಾಗಿದ್ದವು.
ಚಿತ್ರ ಮತ್ತು ವರದಿ: ಟಿ.ಸಿ. ನಾಗರಾಜ್, ಮೂರ್ನಾಡು.