ಅಯೋಧ್ಯ ಮಂತ್ರಾಕ್ಷತೆ ಸ್ವೀಕಾರ ಕಾರ್ಯಕ್ರಮಕ್ಕೆ ಮಡಿಕೇರಿ ಗ್ರಾಮಾಂತರ ಮಂಡಲದಲ್ಲಿ ಕ್ಕಿಕ್ಕಿರಿದು ಸೇರಿದ ರಾಮಭಕ್ತರು
ಅಯೋಧ್ಯೆಯಿಂದ ತರಲಾಗಿರುವ ಪವಿತ್ರವಾದ ಮಂತ್ರಾಕ್ಷತೆಯನ್ನು ಮಡಿಕೇರಿ ಗ್ರಾಮಾಂತರ ತಾಲ್ಲೂಕಿನ ಪ್ರತೀ ಬೂತ್ ಗಳಿಗೂ ತಲುಪಿಸುವ ಕಾರ್ಯಕ್ರಮವು ದಿನಾಂಕ: 12-12-2023ರಂದು ಮಡಿಕೇರಿ ಗ್ರಾಮಾಂತರ ತಾಲ್ಲೂಕಿನ ಮೂರ್ನಾಡು ಸಮೀಪದ ಕೋಡಂಬೂರು ಶ್ರೀ ಭದ್ರಕಾಳಿ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ಬೆಳಿಗ್ಗೆ 9 ಗಂಟೆಗೆ ಮಂತ್ರಾಕ್ಷತೆಯು ದೇವಾಲಯಕ್ಕೆ ಆಗಮಿಸುತ್ತಿದ್ದಂತೆ ಚಂಡೆ ವಾದ್ಯ ಸಮೇತ ಗ್ರಾಮಸ್ಥರು, ಮಾತೆಯರು ಪೂರ್ಣಕುಂಭ ಸ್ವಾಗತ ಕೋರಿದರು. ಮಂತ್ರಾಕ್ಷತೆಗೆ ದೇವಾಲಯದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ನಂತರ ಮಧ್ಯಾಹ್ನ ದೇವಾಲಯ ಸಮಿತಿಯಿಂದ ಅನ್ನಸಂತರ್ಪಣೆ ನಡೆದು ಮಧ್ಯಾಹ್ನ 2 ಗಂಟೆಗೆ ನಡೆದ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಬಜರಂಗದಳದ ವಿಭಾಗ ಸಹ ಸಂಯೋಜಕ್ ಮುರುಳಿಕೃಷ್ಣರವರು 500 ವರ್ಷಗಳ ಅಯೋಧ್ಯ ಶ್ರೀರಾಮ ಮಂದಿರದ ಹೋರಾಟ ಹಾಗೂ ತ್ಯಾಗ ಬಲಿದಾನಗಳನ್ನು ಎಳೆಎಳೆಯಾಗಿ ವಿವರಿಸಿದರು. ಆರ್.ಎಸ್.ಎಸ್. ನ ಮಂಗಳೂರು ವಿಭಾಗ ಸಹ ಕಾರ್ಯವಾಹರಾಗಿರುವ ಶ್ರೀ ಹರಿಕೃಷ್ಣರವರು ಮಾತನಾಡಿ ಅಯೋಧ್ಯಪತಿ ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಹಾಗೂ ಪ್ರಾಣಪ್ರತಿಷ್ಠೆಯು ನಮ್ಮ ಜೀವಿತಾವಧಿಯಲ್ಲಿ ನಡೆಯುತ್ತಿರುವುದು ಹಾಗೂ ಶ್ರೀರಾಮನ ಕಾರ್ಯದಲ್ಲಿ ನಮಗೆಲ್ಲರಿಗೂ ಭಾಗಿಗಳಾಗಲು ಅವಕಾಶ ಸಿಕ್ಕಿರುವುದನ್ನು ನಾವೆಲ್ಲರೂ ಶ್ರದ್ಧಾಭಕ್ತಿಯಿಂದ ಮಾಡುವಂತಾಗಬೇಕೆಂದರು. ಇಡೀ ಸಮಾಜವನ್ನು ಒಂದುಗೂಡಿಸಿಕೊಂಡು ಪ್ರತೀ ಮನೆಗಳಿಗೂ ಅಯೋಧ್ಯ ಮಂತ್ರಾಕ್ಷತೆಯನ್ನು ತಲುಪಿಸುವುದು ಹಾಗೂ ಇದೇ ಮುಂಬರುವ ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆ ಪೂಜಾವಿಧಿವಿಧಾನಗಳನ್ನು ನಾವೆಲ್ಲರೂ ಕಣ್ತುಂಬಿಕೊಂಡು ನಾಡಿನ ಎಲ್ಲಾ ದೇವಾಲಯಗಳಲ್ಲಿ ಹಾಗೂ ಮನೆಗಳಲ್ಲಿ ಪೂಜಾಕಾರ್ಯಗಳನ್ನು ಶ್ರದ್ಧಾಭಕ್ತಿಯಿಂದ ನಡೆಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಶಿವರಾಜ್ ಹಾಗೂ ವಿ.ಹೆಚ್.ಪಿ. ಯ ಚಿ.ನಾ.ಸೋಮೇಶ್ ರವರು ಕಾರ್ಯಕ್ರಮ ನಿರೂಪಿಸಿದರು.ವಿಶ್ವ ಹಿಂದು ಪರಿಷತ್ – ಬಜರಂಗದಳ , ಹಿಂದು ಜಾಗರಣ ವೇದಿಕೆ, ಬಿ.ಜೆ.ಪಿ. ಸೇರಿದಂತೆ 500 ಕ್ಕೂ ಅಧಿಕ ರಾಮಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಯೋಧ್ಯೆ ಶ್ರೀರಾಮ ಮಂತ್ರಾಕ್ಷತೆಯನ್ನು ತಮ್ಮ ತಮ್ಮ ಗ್ರಾಮದ ಪ್ರತೀ ಮನೆಗಳಿಗೆ ತಲುಪಿಸಲು ದೇವಾಲಯದ ಅರ್ಚಕರಿಂದ ಸ್ವೀಕರಿಸಿದರು.