ನಾಪೋಕ್ಲು : ಮಕ್ಕಳು ಬಾಲ್ಯದಲ್ಲಿಯೇ ಶಿಸ್ತು ಮತ್ತು ಮೌಲ್ಯಗಳನ್ನು ರೂಪಿಸಿಕೊಳ್ಳಲು ಶಿಬಿರಗಳು ಸಹಕಾರಿಯಾಗಿದೆ ಎಂದು ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಉಪ ಪ್ರಾಂಶುಪಾಲರಾದ ಎಂ.ಎಸ್. ಶಿವಣ್ಣ ಹೇಳಿದರು.
ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ಮತ್ತು ಪ್ರಾಥಮಿಕ ವಿಭಾಗ, ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ, ಎಕ್ಸೆಲ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಅಂಕುರ್ ಆಂಗ್ಲ ಮಾಧ್ಯಮ ಶಾಲೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಸ್ಥಳೀಯ ಸಂಸ್ಥೆ ಸಂಪಾಜೆ ಇದರ ವತಿಯಿಂದ ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾದ ಸನಿವಾಸ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಬೌದ್ಧಿಕ ಮತ್ತು ಮಾನಸಿಕ ಅರೋಗ್ಯ ಉತ್ತಮವಾಗಿದ್ದರೆ ಪ್ರತಿ ಮಗುವು ಉತ್ತಮ ನಾಗರೀಕನಾಗಲು ಸಾಧ್ಯ ಎಂದು ಶಿವಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸಂಪಾಜೆ ಇದರ ಅಧ್ಯಕ್ಷ ಎಂ ಧನಂಜಯ ಅವರು ವಹಿಸಿ ಮಾತನಾಡಿ ಇಂತಹ ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ರೂಪುಗೊಳ್ಳುವುದರೊಂದಿಗೆ ಜೀವನ ಕೌಶಲ್ಯಗಳನ್ನು ತಿಳಿದುಕೊಂಡು ಬಾಳಿನಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆ ಸಿಗುವಂತಾಗುತ್ತದೆ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಘಟಕಿ ದಮಯಂತಿ ದ್ವಿತೀಯ ಸೋಪಾನ ಮತ್ತು ತೃತೀಯ ಸೋಪಾನ ಪರೀಕ್ಷೆಗಳ ಕುರಿತು ಮಾಹಿತಿ ನೀಡಿಮಾತನಾಡಿದರು. ಸ್ಕೌಟ್ ಎಡಿಸಿ.ಕೆ.ಎ.ಹಾರಿಸ್ ಸ್ಕೌಟ್ ಮತ್ತು ಗೈಡ್ ನಲ್ಲಿ ತಮಗಾದ ಅತ್ಯುತ್ತಮ ಅನುಭವಗಳನ್ನು ಹಂಚಿಕೊಂಡರು.
ಈ ಸಂದರ್ಭ ವೀರ ಮರಣವನ್ನಪ್ಪಿದ ಕ್ಯಾಪ್ಟನ್ ಪ್ರಾಂಜಲ್ ಭಾವಚಿತ್ರಕ್ಕೆ ಹಣತೆ ಹಚ್ಚಿ, ಪುಷ್ಪ ನಮನ ಸಲ್ಲಿಸುವುದರೊಂದಿಗೆ ಸಾವನ್ನಪ್ಪಿದ ಅರ್ಜುನ ಆನೆ ಮತ್ತು ಕನ್ನಡದ ಹಿರಿಯ ನಟಿ ಲೀಲಾವತಿಯವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.
ಮೊದಲಿಗೆ ಶಾಲೆಯ ಸಭಾಂಗಣದಲ್ಲಿ ಧ್ವಜಾವರೋಹಣದ ಬಳಿಕ ನಾಪೋಕ್ಲು ಪಟ್ಟಣದ ಮುಖ್ಯ ಬೀದಿಗಳಲ್ಲಿ ಶಿಬಿರಾರ್ಥಿಗಳಿಂದ ಆಕರ್ಷಕ ಪತಸಂಚಲನ ನಡೆಯಿತು. ಶಿಬಿರದಲ್ಲಿ ಸುಮಾರು 125 ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಜಿಲ್ಲಾ ಗೈಡ್ ಆಯುಕ್ತೆ ಸುಲೋಚನಾ,ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಚಂದ್ರಕಲಾ, ಎಸ್ ಡಿಎಂಸಿ ಸದಸ್ಯೆ ಜ್ಯೋತಿ,ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತ ಮತ್ತು ಶಿಬಿರದ ನಾಯಕ ರಂಜಿತ್ ಕೆ. ಯು. ಕಾರ್ಯದರ್ಶಿ ಕೆ. ಬಿ.ಉಷಾರಾಣಿ ಉಪಸ್ಥಿತರಿದ್ದರು.
ಬಳಿಕ ರಾತ್ರಿ ನಡೆದ ಭವ್ಯ ಶಿಬಿರಾಗ್ನಿ ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ನಡೆದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರನ್ನು ರಂಜಿಸಿತು.
ಮರುದಿನ ಬೆಳಗ್ಗೆ ಬಿ.ಪಿ.ಸಿಕ್ಸ್ ವ್ಯಾಯಾಮ, ಸರ್ವಧರ್ಮ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ನಂತರ ಮಕ್ಕಳಿಂದಲೇ ಅಡುಗೆ ತಯಾರಿಸುವ ಕಾರ್ಯಕ್ರಮ ನಡೆಸಲಾಯಿತು. ಸೌದೆ ಒಲೆಯಲ್ಲಿ ಮಕ್ಕಳು ಸಿದ್ದಪಡಿಸಿದ ವಿವಿಧ ಬಗೆಯ ಭಕ್ಷ್ಯ ಭೋಜನ ಎಲ್ಲರ ಬಾಯಲ್ಲಿ ನೀರೂರಿಸಿ ಪ್ರಶಂಸಿಸುವಂತೆ ಮಾಡಿತು. ಬಳಿಕ ಮಕ್ಕಳು ಮನೋರಂಜನ ಆಟಗಳು ಮತ್ತು ಸಾಹಸಮಯ ಕ್ರೀಡೆಯಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸಿದರು. ನಾಯಕರಿಂದ ಧ್ವಜದ ನಿಯಮ, ಸಮವಸ್ತ್ರ, ಬ್ಯಾಡ್ಜ್ ಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎ. ಡಿ. ಸಿ. ಸ್ಕೌಟ್ ಮತ್ತು ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ. ಎ.ಹಾರಿಸ್ ವಹಿಸಿ ಶಿಬಿರದಲ್ಲಿ ನಡೆದ ಚಟುವಟಿಕೆಗಳ ಮಹತ್ವ, ಅವುಗಳನ್ನು ಅಳವಡಿಸಿಕೊಳ್ಳುವ ರೀತಿ, ಬದುಕಿನ ಪಾಠದ ಬಗ್ಗೆ ಮಾತನಾಡಿ,ಶಿಬಿರದ ನಾಯಕರ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ನಾಯಕರಾದ ರಂಜಿತ್ ಶಿಬಿರದ ವರದಿ ಮಂಡಿಸಿದರು. ಸಹ ನಾಯಕರಾದ ಸ್ಕೌಟ್ ಮಾಸ್ಟರ್ ಕುಮಾರಸ್ವಾಮಿ ಮತ್ತು ಗೈಡ್ ಕ್ಯಾಪ್ಟನ್ ಜಾಜಿ ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭದ ಶಾಲೆಯ ಪ್ರಭಾರ ಉಪ ಪ್ರಾಂಶುಪಾಲರಾದ ಶಿವಣ್ಣ, ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರಾದ ಸರಿತ, ಅಮಿತ, ಸೀತಮ್ಮ, ಸೋನಿಯಾ, ಚಂದ್ರಕಲಾ, ಗೀತ ಮತ್ತು ಖಜಾಂಚಿ ಗಂಗಮ್ಮ ಬಿ. ಕೆ. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವಿತರಿಸಲಾಯಿತು. ಬಳಿಕ ಧ್ವಜಾರೋಹಣದೊಂದಿಗೆ ಶಿಬಿರ ಸಮಾಪನಗೊಂಡಿತು. ಕಾರ್ಯಕ್ರಮವನ್ನು ಸ್ಥಳೀಯ ಸಂಪಾಜೆ ಸಂಸ್ಥೆಯ ಕಾರ್ಯದರ್ಶಿ ಕೆ. ಬಿ.ಉಷಾರಾಣಿ ಸ್ವಾಗತಿಸಿ, ನಿರೂಪಿಸಿ,ವಂದಿಸಿದರು.