ಕೊಡವ ಸಾಂಪ್ರದಾಯಿಕ ವಾಲಗಕ್ಕೆ ಹಬ್ಬದ ಮೆರುಗು ನೀಡಿದ ತೂಕ್ ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿ

Reading Time: 5 minutes

ಯಶಸ್ವಿಯಾಗಿ ನಡೆದ ಎರಡನೇ ವರ್ಷದ ಕೊಡವ ವಾಲಗತ್ತಾಟ್ ನಮ್ಮೆ-2023

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/Ln5WiyAJxApLbTxD0ttgcU ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕೊಡವ ಸಾಂಪ್ರದಾಯಿಕ ವಾಲಗಕ್ಕೆ ಅದರದೇಯಾದ ಹಿನ್ನಲೆ ಹಾಗೂ ಗೌರವ ಸ್ಥಾನಮಾನಗಳಿವೆ. ಕೊಡವ ವಾಲಗದ ನಾದಕ್ಕೆ ಕೈ ಕಾಲು ಆಡಿಸದವರೇ ಇಲ್ಲ. ತೊಟ್ಟಿಲ ಮಗುವಿನಿಂದ ಹಿಡಿದು ಹಾಸಿಗೆಯಲ್ಲಿ ಮಲಗಿರುವ ವಯೋವೃದ್ಧರು ಕೂಡ ಕೊಡವ ವಾಲಗದ ಸದ್ದಿಗೆ ಕಾಲು ಕೈ ಆಡಿಸುತ್ತಾರೆ, ಕುಣಿಯಲು ಪ್ರಯತ್ನಿಸುತ್ತಾರೆ. ಹಬ್ಬಹರಿದಿನಗಳಲ್ಲಿ, ಮದುವೆ ಸೇರಿದಂತೆ ಇತರ ಸಮಾರಂಭಗಳಲ್ಲಿ ಕೊಡವ ಸಾಂಪ್ರದಾಯಿಕ ವಾಲಗ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಇಂತಹ ವಿಭಿನ್ನವಾದ ಸಂಗೀತ ಪರಿಕರದ ವಾದ್ಯಕ್ಕೆ ಹಬ್ಬದ ಮೆರುಗು ನೀಡಿದವರು ವಿರಾಜಪೇಟೆಯ ತೂಕ್ ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ ಎಂದರೆ ತಪ್ಪಲ್ಲ. ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಕೊಡವ ವಾಲಗತ್ತಾಟ್ ನಮ್ಮೆ ಜನರನ್ನು ತನ್ನತ್ತ ಸೆಳೆಯುತ್ತಿದೆ ಎನ್ನುವುದು ಗಮನಾರ್ಹ ಸಂಗತಿ.

ಖ್ಯಾತ ಸಾಹಿತಿ ದಿವಂಗತ ಮುಲ್ಲೇಂಗಡ ಬೇಬಿ ಚೋಂದಮ್ಮನವರ ಸ್ಮರಣಾರ್ಥ ತೂಕ್ ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ ಅಮ್ಮತ್ತಿ ಕೊಡವ ಸಮಾಜದಲ್ಲಿ ನಡೆಸಿದ ಎರಡನೇ ವರ್ಷದ “ಕೊಡವ ವಾಲಗತ್ತಾಟ್ ನಮ್ಮೆ-2023” ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪುಟ್ಟ ಮಕ್ಕಳು, ವಯೋವೃದ್ಧರು ಸೇರಿದಂತೆ ಪುರುಷರು, ಮಹಿಳೆಯರು ಹಾಗೂ ಶಾಲಾಕಾಲೇಜುಗಳ ವಿದ್ಯಾರ್ಥಿ, ವಿಧ್ಯಾರ್ಥಿನಿಯರು ಈ ವಾಲಗತ್ತಾಟ್ ನಮ್ಮೆಯ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನಗಳನ್ನು ಪಡೆದುಕೊಂಡರು. ಸುಮಾರು 270ಕ್ಕೂ ಅಧಿಕ ವಾಲಗತ್ತಾಟ್ ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ಕುಣಿಕುಪ್ಪಳಿಸಿದ್ದರು.

ಜಿಲ್ಲೆಯ ಖ್ಯಾತ ವಾಲಗ ತಂಡ ಎಂದು ಹೆಸರಾದ ಅಮ್ಮತ್ತಿಯ ನರಸ ಮತ್ತು ತಂಡ ಪ್ರಾರ್ಥನೆಯ ಮೂಲಕ ಕೊಡವ ವಾಲಗ ನುಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ವಾಲಗತ್ತಾಟ್ ನಮ್ಮೆಗೆ ಜನರು ಕುತೂಹಲದಿಂದ ಸೇರಿದ್ದರು. ಪೈಪೋಟಿಗೆ ಮೊದಲು ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ತೂಕ್ ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ವಹಿಸಿ ಮಾತನಾಡಿದರೆ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೇಯಂಡ ವೀಣಾ ಅಚ್ಚಯ್ಯ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷರಾದ ಐನಂಡ ಪ್ರಕಾಶ್ ಗಣಪತಿ, ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ, ವಿರಾಜಪೇಟೆ ಹಿರಿಯ ನಾಗರಿಕರ ವೇದಿಕೆಯ ಕಾರ್ಯದರ್ಶಿ ಪಾರುವಂಗಡ ಸನ್ನಿ ಮೊಣ್ಣಪ್ಪ, ವಿರಾಜಪೇಟೆಯ ಖಾಸಗಿ ವೈದ್ಯರಾದ ಚೇಂದಿರ ಬೋಪಣ್ಣ, ಹಿರಿಯ ಸಿನಿಮಾ ಕಲಾವಿದರಾದ ಮಂಡೀರ ಪದ್ಮ ಬೋಪಯ್ಯ ಭಾಗವಹಿಸಿ ಮಾತನಾಡಿದ್ದರೆ. ತೀರ್ಪುಗಾರರಾಗಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ನಾಣಮಂಡ ವೇಣು ಮಾಚಯ್ಯ, ತೀತಿಮಾಡ ಬೋಸು ಅಯ್ಯಪ್ಪ, ಚಿಯಕಪೂವಂಡ ದೇವಯ್ಯ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸಂಚಾಲಕ ಮುಲ್ಲೇಂಗಡ ಮಧೋಶ್ ಪೂವಯ್ಯ ಸ್ವಾಗತಿಸಿ ನಿರೂಪಿಸಿದರು.

ಕೊಡವ ವಾಲಗತ್ತಾಟ್ ಪೈಪೋಟಿ ತಲಾ ಆರು ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಸಣ್ಣ ಮಕ್ಕಳಿಗೆ ಪ್ರತ್ಯೇಕ ವಿಭಾಗ ಸೇರಿದಂತೆ, ಒಂದರಿಂದ 7ನೇ ತರಗತಿಯವರೆಗೆ ಪ್ರಾಥಮಿಕ ವಿಭಾಗ, 8ನೇ ತರಗತಿಯಿಂದ 10ನೇ ತರಗತಿಯವರೆಗೆ ಹೈಸ್ಕೂಲ್ ವಿಭಾಗ, ಒಂದನೇ ಪಿಯುಸಿಯಿಂದ 3ನೇ ಪದವಿಯವರೆಗೆ ಕಾಲೇಜು ವಿಭಾಗ, ಕಾಲೇಜಿನ ನಂತರ 60 ವಯಸ್ಸಿನವರೆಗೆ ಮತ್ತೊಂದು ವಿಭಾಗ, 60 ವಯಸ್ಸಿನ ಮೇಲ್ಪಟ್ಟು ಹಿರಿಯ ನಾಗರಿಕರ ವಿಭಾಗ ಹೀಗೆ ಆರು ವಿಭಾಗಗಳಲ್ಲಿ ಪುರುಷರು ಹಾಗೂ ಮಹಿಳೆಯರು ಎಂದು ತಲಾ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಇದೇ ಸಂದರ್ಭದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಅಗಲಿದ ಖ್ಯಾತ ಸಾಹಿತಿ ಮುಲ್ಲೇಂಗಡ ಬೇಬಿ ಚೋಂದಮ್ಮ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಕಣ್ಣು ದಾನ ಮತ್ತು ದೇಹ ದಾನದ ನೋಂದಣಿ ನಡೆಯಿತು. ನೆರೆದವರಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ವಾಲಗತ್ತಾಟ್ ನಮ್ಮೆ-2೦23 ಪೈಪೋಟಿ ಬಹುಮಾನ ವಿಜೇತರು:

ಪುಟ್ಟ ಮಕ್ಕಳ ವಿಭಾಗ: ತೀತಿಮಾಡ ಶಿಯಾ ಬೋಜಮ್ಮ(ಪ್ರ), ಚೇಂದ್ರಿಮಾಡ ಇಹಾನಿ ದೇಚಮ್ಮ(ದ್ವಿ), ಕೇಚಂಡ ನೈರುತ್ ನಾಚಪ್ಪ(ತೃ)

1ರಿಂದ 7ನೇ ತರಗತಿ ಬಾಲಕರ ವಿಭಾಗ: ಬಲ್ಲಾರಂಡ ನೀಲ್ ನಾಚಪ್ಪ (ಪ್ರ), ಕುಂಞಂಗಡ ಜಸ್ವಿನ್(ದ್ವಿ), ಮಂಡೇಪಂಡ ಅನೂಪ್ ಕರುಂಬಯ್ಯ(ತೃ),
1ರಿಂದ 7ನೇ ತರಗತಿ ಬಾಲಕಿಯರ ವಿಭಾಗ: ನೆಲ್ಲಚಂಡ ಪೊನ್ನಮ್ಮ ನಾಚಪ್ಪ(ಪ್ರ), ಮಾಳೇಟೀರ ತಾಷ್ಯ ತಂಗಮ್ಮ(ದ್ವಿ), ಮೂಕೊಂಡ ಕಾವೇರಮ್ಮ(ತೃ).

ಹೈಸ್ಕೂಲ್ ಬಾಲಕರ ವಿಭಾಗ: ಪೂವಣ್ಣ (ಪ್ರ), ತಾಣಚೀರ ನಂಜಪ್ಪ (ತೃ).
ಹೈಸ್ಕೂಲ್ ಬಾಲಕಿಯರ ವಿಭಾಗ: ಕಿರಿಯಕಮಾಡ ನಿಶಾ ಬೋಜಮ್ಮ (ಪ್ರ), ತಾತಂಡ ಶ್ರೇಯಾ ಸೋಮಣ್ಣ(ದ್ವಿ), ಎಂ.ಪಿ ಪೊನ್ನಮ್ಮ(ತೃ).

ಕಾಲೇಜು ಬಾಲಕರ ವಿಭಾಗ: ಕಳ್ಳಂಗಡ ಶೌರ್ಯ ಸೋಮಣ್ಣ(ಪ್ರ), ಮಿದೇರೀರ ದಿಲ್ಲನ್ ದೇವಯ್ಯ(ದ್ವಿ), ಕಡೇಮಾಡ ರಚನ್ ಮೊಣ್ಣಪ್ಪ(ತೃ).
ಕಾಲೇಜು ಬಾಲಕಿಯರ ವಿಭಾಗ: ನಾಪಂಡ ಡೀನಾ ಭೀಮಯ್ಯ(ಪ್ರ), ಮಾಚಂಗಡ ಭೂಮಿಕಾ(ದ್ವಿ), ಪರದಂಡ ಪ್ರತ್ಯಕ್ಷ ಪೂವಮ್ಮ(ತೃ),

ಸಾರ್ವಜನಿಕ ಪುರುಷರ ವಿಭಾಗ: ಮತ್ರಂಡ ಹರ್ಷಿತ್(ಪ್ರ), ಚೆಟ್ಟೋಳಿರ ಶರತ್ ಸೋಮಣ್ಣ(ದ್ವಿ), ಕೊಣಿಯಂಡ ಮಾದಯ್ಯ(ತೃ),
ಸಾರ್ವಜನಿಕ ಮಹಿಳೆಯರ ವಿಭಾಗ: ಮುಕ್ಕಾಟೀರ ರಚನ ಸೋಮಣ್ಣ(ಪ್ರ), ಚೇಂದ್ರಿಮಾಡ ದರ್ಶಿನಿ ಕರುಣ್(ದ್ವಿ), ಮತ್ರಂಡ ಜ್ಯೋತಿ(ತೃ).

ಹಿರಿಯ ನಾಗರಿಕರು ಪುರುಷರ ವಿಭಾಗ: ನಂದಿನೆರವಂಡ ಟಿಪ್ಪು ಬಿದ್ದಪ್ಪ (ಪ್ರ), ಕೂತಂಡ ಧನೇಶ್ ಮೊಣ್ಣಪ್ಪ(ದ್ವಿ), ಮಾಚಿಮಾಡ ಡಾಲಿ ಮಂದಣ್ಣ(ತೃ),
ಹಿರಿಯರ ನಾಗರಿಕ ಮಹಿಳೆಯರ ವಿಭಾಗ: ಮುಲ್ಲೇರ ಪೊನ್ನಮ್ಮ(ಪ್ರ), ಕಂಬೀರಂಡ ಮುತ್ತಮ್ಮ(ದ್ವಿ), ರುಕ್ಮಿಣಿ ಮುತ್ತಮ್ಮ(ತೃ),

ವರದಿ: ಚಮ್ಮಟೀರ ಪ್ರವೀಣ್ ಉತ್ತಪ್ಪ

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x