ನಾಪೋಕ್ಲು : ಇತಿಹಾಸ ಪ್ರಸಿದ್ಧ ನಾಪೋಕ್ಲು ಸಮೀಪದ ಬೇತು ಗ್ರಾಮದ ಶ್ರೀ ಮಕ್ಕಿಶಾಸ್ತಾವು ದೇವರ ವಾರ್ಷಿಕ ಉತ್ಸವವು ಎರಡು ದಿನಗಳ ಕಾಲ ವಿವಿಧ ದೇವರ ಕೋಲಗಳೊಂದಿಗೆ ಸಂಭ್ರಮ ಶ್ರದ್ಧಾ ಭಕ್ತಿಯಿಂದ ಜರುಗಿತು.
ಬೇತು ಗ್ರಾಮದ ಮಕ್ಕಿಶಾಸ್ತಾವು ಸನ್ನಿಧಿಯಲ್ಲಿ ಮಂಗಳವಾರ ಬೆಳಗ್ಗೆ ಅಜ್ಜಪ್ಪ ದೇವರ ಕೋಲ ಹಾಗೂ ಮಧ್ಯಾಹ್ನ ವಿಷ್ಣುಮೂರ್ತಿ ದೇವರ ಕೋಲಗಳು ತಮ್ಮ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಗಮನ ಸೆಳೆಯಿತು. ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ವೀಕ್ಷಿಸಿದರು. ಉತ್ಸವದಲ್ಲಿ ಭಕ್ತಾದಿಗಳು ದೇವರಿಗೆ ವಿವಿಧ ರೀತಿಯ ಹರಕೆಗಳನ್ನು ಸಲ್ಲಿಸಿದರು.ದೇವಾಲಯದ ವತಿಯಿಂದ ಉತ್ಸವ ವೀಕ್ಷಿಸಲು ಬಂದ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಿತು.
ಮಂಗಳವಾರ ಅಪರಾಹ್ನ ಜರುಗಿದ ವಿಷ್ಣುಮೂರ್ತಿ ದೇವರ ಕೋಲವನ್ನು ಭಕ್ತಾದಿಗಳು ಭಯ ಭಕ್ತಿಯಿಂದ ವೀಕ್ಷಿಸಿದರು. ಉತ್ಸವದ ಅಂಗವಾಗಿ ಸೋಮವಾರ ರಾತ್ರಿ ದೀಪಾರಾಧನೆ ನಡೆಯಿತು. ದೇವಾಲಯದ ಅರ್ಚಕರಾದ ದಿವಾಕರ್ ಅವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಉತ್ಸವದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್ ಪೊನ್ನಣ್ಣ ಅವರು ಪಾಲ್ಗೊಂಡು ದೇವರ ಆಶೀರ್ವಾದ ಪಡೆದರು.
ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು, ಅಧಿಕ ಸಂಖ್ಯೆಯಲ್ಲಿ ಊರಿನ ಪರಊರಿನ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿ ಪುನೀತರಾದರು.