ನಾಪೋಕ್ಲು : ಕೊಡವ ಕುಟುಂಬಗಳ ನಡುವೆ 2024ರಲ್ಲಿ ನಡೆಯಲಿರುವ ಕುಂಡ್ಯೋಳಂಡ ಹಾಕಿ ನಮ್ಮೆಯ ಲಾಂಛನ ಬಿಡುಗಡೆ ಸಮಾರಂಭ ನಾಪೋಕ್ಲುವಿನ ಕೊಡವ ಸಮಾಜದ ಅಪ್ಪಚ್ಚಕವಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಕುಂಡ್ಯೋಳಂಡ ಕುಟುಂಬದ ಪಟ್ಟೆದಾರ ಕುಂಡ್ಯೋಳಂಡ ನಾಣಿ ನಾಣಯ್ಯ ಹಾಗೂ ಹಾಕಿ ನಮ್ಮೆಯ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಹಾಗೂ ಹಾಕಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಒಲಂಪಿಯನ್ ಡಾ.ಅಂಜಪರವಂಡ ಬಿ.ಸುಬ್ಬಯ್ಯ ಕುಂಡ್ಯೋಳಂಡ ಹಾಕಿ ನಮ್ಮೆಯ ಲಾಂಛನ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಅವರು, ಹಾಕಿ ಹಬ್ಬ ನಡೆಸಲು ಸರ್ವರ ಸಹಕಾರ ಅಗತ್ಯ, ಪ್ರತಿಯೊಬ್ಬರು ಕೂಡ ಆಯೋಜಕರೊಂದಿಗೆ ಕೈ ಜೋಡಿಸಬೇಕೆಂದರು.
ಹಾಕಿ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಹಾಗೂ ಒಲಂಪಿಯನ್ ಡಾ.ಅಂಜಪರವಂಡ ಬಿ.ಸುಬ್ಬಯ್ಯ ಮಾತನಾಡಿ, ಹಾಕಿ ಹಬ್ಬ ಆಯೋಜನೆ ಸುಲಭದ ಮಾತಲ್ಲ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟಕ್ಕಿಂತಲೂ ಹೆಚ್ಚಿನ ತಂಡಗಳು ಪಾಲ್ಗೋಳುವ ಪಂದ್ಯ ಆಯೋಜನೆ ಸವಾಲು ಕೂಡ ಹೌದು. ಕುಂಡ್ಯೋಳಂಡ ತಂಡ ಯಶಶ್ವಿಯಾಗಿ ಈ ಸವಾಲನ್ನು ಗೆಲ್ಲಲ್ಲಿ ಎಂದು ಶುಭ ಹಾರೈಸಿದರು.
ಹಾಕಿ ಉತ್ಸವದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ, ಈ ವರ್ಷ ಕೂಡ ಹಾಕಿ ಹಬ್ಬ ಯಶಸ್ವಿಯಾಗಲಿ. ಹಾಕಿ ಹಬ್ಬಕ್ಕೆ ನಮ್ಮ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಂದರ್ಭ ಒಂದು ಕೋಟಿ ಅನುದಾನ ಒದಗಿಸಿಕೊಟ್ಟಿದೆ. ಈ ಬಾರಿ ನಮ್ಮ ಸರಕಾರ ಅಧಿಕಾರದಲ್ಲಿ ಇಲ್ಲ. ಆದರೂ ಕೂಡ ನಾನು ಒಬ್ಬ ಸಂಸದನಾಗಿ ದಾನಿಗಳಿಂದ ಹಾಗೂ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಅತೀ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸುದಾಗಿ ಭರವಸೆ ನೀಡಿದರು.
ಹಾಕಿ ನಮ್ಮೆಯ ಲಾಟರಿ ಟಿಕೆಟ್ ಬಿಡುಗಡೆ ಮಾಡಿ ಮಾತನಾಡಿದ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ, ಹಾಕಿ ನಮ್ಮೆ ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದೆ. ಮುಂದೆ ಈ ಹಾಕಿ ಹಬ್ಬ ಗಿನ್ನಿಸ್ ದಾಖಲೆ ಕೂಡ ಆಗಲಿ ಎಂದು ಹಾರೈಸಿದರು.
:ಸನ್ಮಾನ
ಕಾರ್ಯಕ್ರಮದಲ್ಲಿ ಕಳೆದ ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ವ್ಯಕ್ತಿಗಳ ಅಂತ್ಯ ಸಂಸ್ಕಾರ ಸೇರಿದಂತೆ ವಿವಿಧ ಸೇವಾಕಾರ್ಯದಲ್ಲಿ ತೊಡಗಿಸಿ ಜನರಿಗೆ ಆಪತ್ಬಾಂಧವರಾಗಿ ಕಾರ್ಯನಿರ್ವಹಿಸಿದ ನಾಪೋಕ್ಲುವಿನ ಸೇವಾ ಭಾರತಿ ಸಂಘದ ಸದಸ್ಯರನ್ನು ಶಾಸಕ ಪೊನ್ನಣ್ಣ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ನಾಪೋಕ್ಲು ಕೊಡವ ಸಮಾಜದ ಮಾಜಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಬಿದ್ದಾಟಂಡ ಎಸ್. ತಮ್ಮಯ್ಯ, ಕುಲ್ಲೇಟಿರ ಅರುಣ್ ಬೇಬ,ಯುಕೋ ಸಂಘಟನೆ ಸಂಚಾಲಕ ಕೊಕ್ಕಲೆ ಮಾಡ ಮಂಜು ಚಿಣ್ಣಪ್ಪ,ವೆಸ್ಟ್ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷ ಕೇಟೋಳಿರ ಎಸ್.ಕುಟ್ಟಪ್ಪ, ಮುದ್ದಂಡ ದೇವಯ್ಯ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ಕುಂದ್ಯೋಳಂಡ ಹಾಕಿ ನಮ್ಮೆ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಹಾಕಿ ಕುರ್ಗ್ ನ ಪಳಂಗಂಡ ಲವಕುಮಾರ್, ಕಾವೇರಿ ಸೇನೆಯ ರವಿಚಂಗಪ್ಪ, ಎಂ.ಪಿ. ದೇವಯ್ಯ, ಕುಂಡ್ಯೋಳಂಡ ಸುಬ್ಬಯ್ಯ, ಹಾಕಿ ನಮ್ಮೆಯ ಸಂಚಾಲಕ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಕಾರ್ಯದರ್ಶಿ ಬಿಪಿನ್ ಬೆಳ್ಯಪ್ಪ, ಖಜಾಂಚಿ ವಿಶು ಪೂವಯ್ಯ, ಕುಂಡ್ಯೋಳಂಡ ಕುಟುಂಬದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.