ಕೊಡವ ಪಾಲೆ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಬದ್ದ: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ.ಎಸ್.ಪೊನ್ನಣ್ಣ
ಮೂರ್ನಾಡು: ಅನಾದಿ ಕಾಲದಿಂದಲೂ ಕೊಡವ ಸಂಸ್ಕೃತಿಯನ್ನು ಆಚರಿಸುತ್ತ, ಕೊಡಗಿನ ಮೂಲನಿವಾಸಿಗಳಾಗಿ ಬಾಳುತ್ತಿರುವ ಕೊಡವ ಪಾಲೆ ಜನಾಂಗದ ಸರ್ವತೋಮುಖ ಅಭಿವೃದ್ದಿಗೆ ಕಟಿಬದ್ದನಾಗಿದ್ದು, ಹಿಂದೆ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಇದೀಗ ಪರಿಶಿಷ್ಟ ಜಾತಿ ಎಂದು ತಪ್ಪಾಗಿ ಪರಿಗಣನೆ ಆಗಿರುವುದು ತನ್ನ ಗಮನಕ್ಕೆ ಬಂದಿದ್ದು, ಕೆಲವೇ ದಿನಗಳಲ್ಲಿ ಆಗಿರುವ ತಾಂತ್ರಿಕ ಅಡಚಣೆಯನ್ನು ಸರಿಪಡಿಸಿ, ಅಧಿಕೃತವಾಗಿ ಪರಿಶಿಷ್ಟ ಪಂಗಡ ಎಂದು ಮರು ಆದೇಶ ಮಾಡಿಸಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಭರವಸೆ ನೀಡಿದರು.
ಮೂರ್ನಾಡುವಿನಲ್ಲಿ ನಡೆದ ಕೊಡವ ಪಾಲೆ ಜನಾಂಗದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊಡವ ಪಾಲೆ ಅಥವಾ ಅರಮನೆಪಾಲೆ ಜನಾಂಗವು ಕೊಡವ ಸಂಸ್ಕೃತಿಯನ್ನು ಪಾಲಿಸುತಿದ್ದು, ಅವರದ್ದೇ ಶೈಲಿಯ ಶ್ರಮದಿಂದ ಶಾಂತಿಯುತವಾಗಿ ಬಾಳುತ್ತಿರುವ ಜನಾಂಗ, ಇತ್ತೀಚೆಗೆ ತೀವ್ರ ಜನಸಂಖ್ಯೆ ಕುಸಿತ ಆಗುತ್ತಿದ್ದು, ಈ ಜನಾಂಗದ ರಕ್ಷಣೆ ನಮ್ಮ ಸರ್ಕಾರದ ಹೊಣೆಯಾಗಿದೆ ಅದನ್ನು ತಾವು ಪಾಲಿಸುತ್ತೇನೆ ಎಂದರು. ಈ ಹಿಂದೆ ಸರ್ಕಾರಿ ದಾಖಲೆಗಳಲ್ಲಿ ಪರಿಶಿಷ್ಟ ಪಂಗಡ ಎಂದಿದ್ದು, ಇತ್ತೀಚೆಗೆ ಪರಿಶಿಷ್ಟ ಜಾತಿ ಎಂದು ಬದಲಾಗಿದ್ದು ಆಗಿರುವ ತೊಂದರೆಯನ್ನು ಕಾನೂನು ವ್ಯಾಪ್ತಿಯಲ್ಲಿ ಸರಿಪಡಿಸುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಖಿಲಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಅವರು ಮಾತನಾಡಿ ಕೊಡವ ಪಾಲೆ ಜನಾಂಗವು ಅನಾದಿಕಾಲದೊಂದಿಗೆ ಕೊಡವ ಸಂಸ್ಕೃತಿಯನ್ನು ಪಾಲಿಸುತ್ತಾ, ನಿಷ್ಟೆ ಮತ್ತು ಪ್ರಾಮಾಣಿಕ ಜನಾಂಗವಾಗಿ ಬಾಳುತ್ತಿದ್ದು, ಅವರ ಮೂಲ ಕಸುಬನ್ನು ತಪ್ಪದೇ ಪಾಲಿಸುತ್ತಿದ್ದಾರೆ. ಕೊಡಗಿನ ಎಲ್ಲಾ ಮೂಲ ನಿವಾಸಿ ಜನಾಂಗಗಳು ಅವರವರ ಕುಲ ಮತ್ತು ಸಂಪ್ರದಾಯಕ್ಕೆ ಬದ್ಧರಾಗಿ ಒಗ್ಗಟ್ಟಿನಿಂದ ಬಾಳುವಂತೆ ಆಗಬೇಕು ಎಂದರು.
ಕೊಡವ ಭಾಷಿಕ ಮೂಲನಿವಾಸಿ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಶ್ ನಾಣಯ್ಯ ಅವರು ಮಾತನಾಡಿ, ಸರ್ವ ಕೊಡವ ಭಾಷಿಕ ಜನಾಂಗಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಸಂಸ್ಕೃತಿಯನ್ನು ಬೆಳೆಸುವತ್ತ ಒಟ್ಟಾಗಿ ಸಾಗಬೇಕಾಗಿದೆ, ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳು ನಡೆಯಬೇಕು ಎಂದರು.
ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು ಮಾತನಾಡಿ, ಕೊಡವ ಪಾಲೆ ಜನಾಂಗ ತಮ್ಮ ಮೂಲತನದ ಅಸ್ತಿತ್ವದ ಅನ್ವೇಷಣೆಗೆ ಮುಂದಾಗಿ ಜನಾಂಗೀಯ ದಾಖಲೆ ರಚಿಸಬೇಕು, ತಮ್ಮ ಮೂಲತನವನ್ನ ಉಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಲಿ, ಇಂತ ಕಾರ್ಯಕ್ರಮಗಳಲ್ಲಿ ಎಲ್ಲರೂ ಪಾಲ್ಗೊಳ್ಳುವಿಕೆಯಿಂದ ಸಹಬಾಳ್ವೆಗೆ ನಾಂದಿಯಾಗಲಿ ಎಂದರು.
ಜನಾಂಗದ ಹಿರಿಯ ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜದ ಅಧ್ಯಕ್ಷರಾದ ಜಿ.ಚೆನಿಯ ನಾಪೋಕ್ಲು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ,ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಮಂಞಿರ ಸಾಬು ತಿಮ್ಮಯ್ಯ, ಕೊಡಗು ಹೆಗ್ಗಡೆ ಸಮಾಜದ ಕಾರ್ಯದರ್ಶಿ ಪಡಿಞಾರಂಡ ಪ್ರಭುಕುಮಾರ್, ಕೊಡಗು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ, ಅಹಿಂದ ಅಧ್ಯಕ್ಷ ತೋರೆರ ಮುದ್ದಯ್ಯ, ಕೊಡವ ಭಾಷಿಕ ಸಮುದಾಯ ಕೂಟದ ಕಾರ್ಯದರ್ಶಿ ಮೊಳ್ಳೆಕುಟ್ಟಡ ದಿನುಬೋಜಪ್ಪ, ಪೊಲೀಸ್ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ,ಬೆಳ್ಯಪ್ಪ ಚೇಲಾವರ, ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ಯತೀಶ್ ಕುಮಾರ್ ಸಂಘಟಕರಾದ ರಾಜೇಶ್ವರಿ ಕಾಲೇಜಿನ ಪ್ರಿನ್ಸಿಪಾಲ್ ಸಿ.ಕೆ. ಮಂದಣ್ಣ ಸೇರಿದಂತೆ ಕೊಡವ ಪಾಲೆ ಜನಾಂಗದ ಪ್ರಮುಖರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಎಲ್ಲಾ ಅತಿಥಿ ಗಳನ್ನು ಸಮಾಜದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಮಾಜದ ಸದಸ್ಯರಿಗಾಗಿ ನಡೆದ ಕ್ರೀಡಾಕೂಟದ ಪುರುಷರ ಕ್ರಿಕೆಟ್ ಪಂದ್ಯಾಟದಲ್ಲಿ ಅಂಜಿಕೂಟ್ ವಾರಿಯರ್ಸ್ ಕಂಡಿಮಕ್ಕಿ ವಿನ್ನರ್ಸ್ ಹಾಗಿ ಹೊರಹೋಮ್ಮಿದರೆ,ಜಿಲ್ಲಾ ಸಮಿತಿ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡರು.
ಮಹಿಳೆಯರ ಥ್ರೋಬಾಲ್‌ನಲ್ಲಿ ಅಂಜಿಕೂಟ್ ವಾರಿಯರ್ಸ್ ಕಂಡಿಮಕ್ಕಿ ತಂಡ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿ ಪಡೆದರೆ,ನಾಪೋಕ್ಲುವಿನ ಪೇರೂರು ತಂಡ ದ್ವಿತೀಯ ಸ್ಥಾನ ಪಡೆಯಿತು. ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಮತ್ತು ವಯಸ್ಕರಿಗೆ ವಿವಿಧ ಆಟೊಟ ಸ್ವರ್ದೆಗಳನ್ನು ಆಯೋಜಿಸಲಾಗಿತ್ತು ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.