ಮೂರ್ನಾಡು: ಎಸ್ ಎಸ್ ಎಲ್ ಸಿ ಫಲಿತಾಂಶ ಉತ್ತಮ ಪಡಿಸಲು ಶಿಕ್ಷಕರು ವಿಶೇಷ ಶ್ರಮ ವಹಿಸಬೇಕೆಂದು ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಹೇಳಿದರು.
ಮೂರ್ನಾಡಿನ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಪ್ರೌಢಶಾಲಾ ವಿಷಯ ಶಿಕ್ಷಕರ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಉತ್ತಮಪಡಿಸಲು ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ನಿವಾರಣೆಗೆ ಸಂಬಂಧಿಸಿದಂತೆ ಕಾರ್ಯಗಾರ ,ತಾಯಂದಿರ ಸಭೆ, ವಿಷಯ ಶಿಕ್ಷಕರ ಕಾರ್ಯಗಾರಗಳನ್ನು ಹಮ್ಮಿಕೊಂಡು ಉತ್ತಮ ಫಲಿತಾಂಶ ತರಲು ಶ್ರಮಿಸಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಂತಸದಿಂದ ಬರೆಯುವಂತಾಗಬೇಕು. ಅದಕ್ಕಾಗಿ ಪೂರ್ವ ತಯಾರಿ ಅಗತ್ಯ.ಶಿಕ್ಷಕರು ಫಲಿತಾಂಶ ಸುಧಾರಣೆಗೆ ವಿನೂತನ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿಶೇಷ ಪ್ರಯತ್ನ ವಹಿಸಬೇಕು. ಮಕ್ಕಳಿಗೆ ಪಾಸಿಂಗ್ ಪ್ಯಾಕೇಜ್ ಹಾಗೂ ಸ್ಕೋರಿಂಗ್ ಪ್ಯಾಕೇಜ್ ಗಳನ್ನು ಪರಿಚಯ ಮಾಡಿಸಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಲು ಪ್ರೇರೇಪಿಸಬೇಕು ಎಂದರು.
ಮೂರ್ನಾಡು ಪ್ರೌಢಶಾಲಾ ಮುಖ್ಯ ಶಿಕ್ಷಕಿ ರಶ್ಮಿ ಮಾತನಾಡಿ ಕಾರ್ಯಗಾರದ ಪ್ರಯೋಜನವನ್ನು ಎಲ್ಲಾ ಶಿಕ್ಷಕರು ಪಡೆದುಕೊಂಡು ಮಕ್ಕಳ ಜ್ಞಾನವನ್ನು ಬೆಳಗುವ ದೀವಿಗೆಗಳಾಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮುರ್ನಾಡು ಪ್ರೌಢಶಾಲೆಯ ಕನ್ನಡ ಶಿಕ್ಷಕ ಎಸ್.ಡಿ.ಪ್ರಶಾಂತ್, ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಕೆ.ಬಿ ಉಷಾರಾಣಿ ಹಾಗೂ ಡಾ.ಯೋಗೇಶ್ ಸೇರಿದಂತೆ ಮಡಿಕೇರಿ ತಾಲೂಕಿನ ವಿವಿಧ ಪ್ರೌಢಶಾಲೆಗಳ ಕನ್ನಡ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.