ರಾಮಮಂದಿರ ಇದು ರಾಷ್ಟ್ರಮಂದಿರ
22-01-2024ರಂದು ನಡೆಯುವ ಅಯೋಧ್ಯೆ ಶ್ರೀ ರಾಮಲಲ್ಲಾ(ಬಾಲರಾಮ)ನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಂದರ್ಭದ ವಿಶೇಷ ಸಂಚಿಕೆ
ಶ್ರೀರಾಮ ನಮ್ಮ ರಾಷ್ಟ್ರೀಯ ಐಕ್ಯತೆಯ ಸಂಕೇತ. ರಾಮ ನಡೆದ ಹಾದಿ ರಾಮಾಯಣ ಎನ್ನುವುದು ಕಾಲ್ಪನಿಕವಲ್ಲ, ಅದು ಇತಿಹಾಸ. ನಮ್ಮ ಇತಿಹಾಸವನ್ನು ಸುಳ್ಳೆಂದು ನಿರೂಪಿಸುವ ಮತ್ತು ಇತಿಹಾಸವನ್ನೂ ಮಾರ್ಪಡಿಸುವ ಅಸತ್ಯದ ಕಥನಗಳನ್ನು ಅರಹುವ ಕೆಲಸಗಳು ಕಾಲಾಂತರಗಳಿಂದ ಆಗುತ್ತಿದೆ. ಅವುಗಳನ್ನೆಲ್ಲ ಬದಿಗಿರಿಸಿ, ರಾಷ್ಟ್ರೀಯತೆಯ ನವಜಾಗರಣಕ್ಕೆ ರಾಮಮಂದಿರ ನಿರ್ಮಾಣ ಸಾಕ್ಷಿಯಾಗುತ್ತಿದೆ. ರಾಮಭಕ್ತಿ ಎಂದರೆ ಅದು ರಾಷ್ಟ್ರಭಕ್ತಿ. ರಾಮಮಂದಿರ ಎಂದರೆ ಅದು ರಾಷ್ಟ್ರಮಂದಿರ.
ರಾಷ್ಟ್ರೀಯ ಅಸ್ಮಿತೆಯ ಬಹುದೊಡ್ಡ ಆಂದೋಲನ ಅಯೋಧ್ಯೆಯ ರಾಮಮಂದಿರ ನಿರ್ಮಾಣ ನಮ್ಮ ಜೀವನದಲ್ಲಿ ನಡೆದಿದೆ. ಪ್ರಸ್ತುತ ಮಂದಿರ ನಿರ್ಮಾಣದ ಕಾರ‍್ಯ ಸಂಪನ್ನಗೊಳ್ಳಲ್ಲಿದ್ದು, ಜನವರಿ 22, 2024 ರಂದು ಪ್ರಾಣಪ್ರತಿಷ್ಠೆ ನಡೆಯಲಿದೆ. ಶ್ರೀರಾಮ ಜನ್ಮಭೂಮಿ ಟ್ರಸ್ಟ್ ನ ವತಿಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(RSS) ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಲಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರು ಪೂರ್ಣ ಆಂದೋಲನದಲ್ಲಿ ಹಿಂದೂ ಸಮಾಜವನ್ನು ಜೋಡಿಸುವ ಕಾರ್ಯ ಮಾಡುತ್ತಿದ್ದಾರೆ. ದೇಶದ ಮೂಲೆ ಮೂಲೆಯ ಜನರು ಇದರಲ್ಲಿ ಜೋಡಿಸಿಕೊಂಡಿದ್ದಾರೆ. ಹಾಗಾಗಿ ಬಂದಿರುವ ಐತಿಹಾಸಿಕ ಕ್ಷಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಜನವರಿ 1 – 15, 2024ರವರೆಗೆ ವ್ಯಾಪಕ ಜನಸಂಪರ್ಕ ಅಭಿಯಾನ ಮಾಡುವ ಮೂಲಕ ರಾಮಲಲ್ಲಾನ ಭಾವಚಿತ್ರ ಮತ್ತು ಮಂದಿರದ ಅಕ್ಷತೆಯನ್ನು ಪ್ರತಿ ಗ್ರಾಮದ ಮನೆ ಮನೆಗೆ ತಲುಪಿಸಿದೆ. ಈ ರೀತಿಯಾಗಿ ಈ ಪುಣ್ಯಕಾರ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಯೋಗವಿರುತ್ತದೆ.
ಶ್ರೀರಾಮ ಸಕಲ ಸದ್ಗುಣಗಳ ಮೇಲ್ಪಂಕ್ತಿ:
ಶ್ರೀರಾಮ ನಮ್ಮ ಧರ್ಮದ ನೈಜ ವಿಗ್ರಹ. ಸಕಲ ಸದ್ಗುಣಗಳ ಮೇಲ್ಪಂಕ್ತಿ. ಅಂತಹ ರಾಮ ಜನಿಸಿದ ಅಯೋಧ್ಯೆ ರಾಮನಿಗೇ ಸಲ್ಲಬೇಕು ಎನ್ನುವುದಕ್ಕಾಗಿ ಅನೇಕ ಮಂದಿ ಪ್ರಾಣಾರ್ಪಣೆ ಮಾಡಿದ್ದಾರೆ. ರಾಮನಿಗಾಗಿ ನಡೆದ ಆಂದೋಲನಗಳ ಪ್ರತಿಫಲವಾಗಿ ಇಂದು ನಿರ್ಮಾಣಗೊಳ್ಳುತ್ತಿರುವ ರಾಮಮಂದಿರ ನಮ್ಮ ಇತಿಹಾಸದಲ್ಲಿ ನಿಜವಾದ ರಾಷ್ಟ್ರೀಯ ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ಪಡೆದ ಸಂತಸವನ್ನು ಜನಮಾನಸದಲ್ಲಿ ಉಂಟು ಮಾಡಿದೆ.
25 ಪೀಳಿಗೆಗಳಿಂದ ನಾವು ಒಂದು ರಾಷ್ಟ್ರವಾಗಿ ರಾಮಜನ್ಮಭೂಮಿಯ ವಿಷಯದಲ್ಲಿ ಅತ್ಯಂತ ಸಂಕಟವನ್ನು ಅನುಭವಿಸಿದ್ದೇವೆ. ಇದೀಗ ರಾಮಮಂದಿರ ನಿರ್ಮಾಣದಿಂದಾಗಿ ನಾವು ಅನುಭವಿಸಿದ ಸಾಮೂಹಿಕ ಸಂಕಟವನ್ನು ಸಾಮೂಹಿಕ ಗರಿಮೆಯಾಗುವಂತೆ ಮಾಡಿದೆ. ಶತಮಾನಗಳ ಕಾಲ ಒಂದು ರಾಷ್ಟ್ರೀಯ ಆಂದೋಲನವೆಂಬಂತೆ ರಾಮಮಂದಿರ ನಿರ್ಮಾಣ ರಾಮಜನ್ಮಭೂಮಿಯಲ್ಲೆ ಆಗಬೇಕು ಎಂದು ಹೋರಾಡಿದ ಹಿಂದುಗಳ ಪ್ರಯತ್ನ ಇಂದು ಫಲಕೊಟ್ಟಿದೆ.
ರಾಮಮಂದಿರ ನಿರ್ಮಾಣವು ವಸಾಹತುಶಾಹಿತ್ವದ ಕುರುಹುಗಳನ್ನು ಅಳಿಸಿದೆ. ರಾಷ್ಟ್ರೀಯ ಗರಿಮೆ ಮತ್ತು ಗತವೈಭವದ ಸಾಕ್ಷಿಮಂದಿರವಾಗಿ ರಾಮಮಂದಿರ ಲೋಕಾರ್ಪಣೆಗೊಳ್ಳಲಿದೆ. ಭಾರತದ ಅಮೃತಕಾಲದ ಆರಂಭಕ್ಕೆ ಶುಭಾರಂಭದಂತಿದೆ. ರಾಮನ ಜನ್ಮಭೂಮಿಯನ್ನು ಮರಳಿ ಪಡೆದಿದ್ದೇವೆ ಎನ್ನುವುದು ನಮ್ಮ ಸ್ವತ್ವವನ್ನು ಮರಳಿ ಪಡೆದಿರುವುದಾಗಿದೆ.
“ಅಯೋಧ್ಯೆಯ ವಿಜಯಧ್ವನಿ”
500 ವರ್ಷದ ಭಾರತೀಯರ ಕನಸು ರಾಮ ಮಂದಿರದ ಮೂಲಕ ನನಸಾಗಿದೆ. ಜೀವನದಲ್ಲಿ ರಾಮನ ನಡೆಯನ್ನು ಮತ್ತು ಕೃಷ್ಣನ ನುಡಿಯನ್ನು ನಾವು ಪಾಲಿಸಬೇಕು. ರಾಮಜನ್ಮ ಭೂಮಿ ಹೋರಾಟವನ್ನು ಮೆಲುಕು ಹಾಕಬೇಕು. ಜನ್ಮ ಭೂಮಿ ಹೋರಾಟ ದೇಶದ ಚಿಂತನೆಯನ್ನು ಬದಲಾವಣೆ ಮಾಡಿದೆ. ಭಾರತೀಯರಿಗೆ ಅವರ ಇರುವಿಕೆಯನ್ನು ತೋರಿಸಿಕೊಟ್ಟಿರುವುದು ರಾಮಜನ್ಮ ಭೂಮಿ ಹೋರಾಟ.
ಭಾರತೀಯ ಸಮಾಜ ದೇವಾನು ದೇವತೆಗಳನ್ನು ರಾಮನಲ್ಲಿ ಕಾಣುತ್ತಾರೆ. ಮರ್ಯಾದ ಪುರುಷೋತ್ತಮ ಶ್ರೀ ರಾಮ ರಾಜನಾಗಿ, ಮಗನಾಗಿ, ಪತಿಯಾಗಿ, ಸ್ನೇಹಿತನಾಗಿ ಪರಿಪೂರ್ಣ ವ್ಯಕ್ತಿತ್ವದ ಸಾಕಾರ ಮೂರ್ತಿ.
ಶ್ರೀರಾಮ ರಾಷ್ಟ್ರ ಪುರುಷ. ಅವನ ಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣ ರಾಮರಾಜ್ಯ ಸ್ಥಾಪನೆಯ ಒಂದು ಮೈಲಿಗಲ್ಲು. ರಾಮ ಜನ್ಮಭೂಮಿ ಹೋರಾಟ ಅದು ಪ್ರತಿ ರಾಷ್ಟ್ರ ಭಕ್ತನ ಸಂಕಲ್ಪ ಹಾಗೂ ಅದರ ವಿಜಯ ಸತ್ಯದ ವಿಜಯ.
ರಾಮಮಂದಿರ ನಿರ್ಮಾಣಕ್ಕೆ ರಾಜ ಮಹಾರಾಜರ ಕೊಡುಗೆ ಅಪಾರ. ರಾಜರ ಮಡದಿಯರು ಮಂದಿರದ ನಿರ್ಮಾಣಕ್ಕೆ ಹೋರಾಟವನ್ನು ಮಾಡಿದ ಕುರುಹುವಿದೆ. 1986 ರಲ್ಲಿ ‘ರಾಮ್ ಜಾನಕಿ ರಥ ಯಾತ್ರೆಯ’ ಮೂಲಕ ಇಡೀ ದೇಶದಲ್ಲಿ ರಾಮನ ಅಲೆಯನ್ನು ಸೃಷ್ಟಿ ಮಾಡಿತ್ತು.
ಅಯೋಧ್ಯೆ ಪುಣ್ಯ ಭೂಮಿಯ ಮೇಲೆ ಮೊಘಲರು, ಮುಸ್ಲಿಂರಿಂದ ನಿರಂತರ ದಾಳಿಯನ್ನು ಕಂಡರೂ ಸುಮಾರು 500 ವರ್ಷದ ನಂತರ 2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೋಟ್ಯಂತರ ಹಿಂದೂಗಳ ಕನಸಿನ ರಾಮ ಮಂದಿರವನ್ನು ಲೋಕಾರ್ಪಣೆ ಮಾಡುವ ಮೂಲಕ ನನಸು ಮಾಡಿದ್ದಾರೆ.
ರಾಮಜನ್ಮಭೂಮಿಗಾಗಿ ರಾಷ್ಟ್ರವ್ಯಾಪಿ ಆಂದೋಲನ
ರಾಮಜನ್ಮಭೂಮಿಗಾಗಿಯ ಹೋರಾಟ ರಾಷ್ಟçವ್ಯಾಪಿ ಆಂದೋಲನ ರೂಪವನ್ನು ಪಡೆದಿದ್ದು 1980ರ ದಶಕದಲ್ಲಿ.
- 1984ರ ಅಕ್ಟೋಬರ್ 10ರಂದು ಸರಯೂ ನದಿ ತಟದಲ್ಲಿ 10000ಕ್ಕೂ ಹೆಚ್ಚು ಮಂದಿ ರಾಮಭಕ್ತರು ನದಿಯ ಜಲವನ್ನು ಬೊಗಸೆಯಲ್ಲಿ ಹಿಡಿದು ರಾಮಜನ್ಮಭೂಮಿಯ ಬಿಡುಗಡೆಗೆ ಸಾಮೂಹಿಕ ಸಂಕಲ್ಪ ಸ್ವೀಕರಿಸಿದರು.
- 1984ರ ರಾಮಜಾನಕಿ ರಥಯಾತ್ರೆಗಳು ಜನಜಾಗೃತಿಯಲ್ಲಿ ಪ್ರಧಾನ ಪಾತ್ರವಹಿಸಿದವು. –
- 1985ರಲ್ಲಿ ಉಡುಪಿಯಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ದೇವಸ್ಥಾನಕ್ಕೆ ಹಾಕಲಾಗಿದ್ದ ಬೀಗವನ್ನು ತೆರೆಯದಿದ್ದರೆ ಸಂತರು ಆಮರಣಾಂತ ಉಪವಾಸವನ್ನು ಕೈಗೊಳ್ಳುವ ನಿರ್ಧಾರ ಪ್ರಕಟಿಸುತ್ತದೆ.
- 1986ರ ಫೆಬ್ರವರಿ 1 ರಂದು ತಾತ್ಕಾಲಿಕವಾಗಿದ್ದ ರಾಮಮಂದಿರಕ್ಕೆ ಹಾಕಲಾಗಿದ್ದ ಬೀಗವನ್ನು ತೆಗೆಯಬೇಕೆಂದೂ, ಪ್ರತಿದಿನವೂ ಅಲ್ಲಿ ಒಂದು ಗಂಟೆಯ ಕಾಲ ಶ್ರೀರಾಮನ ಪೂಜೆ ನಡೆಯಬೇಕೆಂದೂ ಜಿಲ್ಲಾ ನ್ಯಾಯಾಲಯವು ಆದೇಶಿಸಿತು. ನವೆಂಬರ್ 9, 1989ರಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಕಾಮೇಶ್ವರ ಚೌಪಾಲರು ಅಯೋಧ್ಯೆಯ ರಾಮಮಂದಿರಕ್ಕೆ ಅಡಿಗಲ್ಲನ್ನಿಟ್ಟರು.
ಅಯೋಧ್ಯೆಯಿಂದ ರಾಮೇಶ್ವರದವರೆಗೂ ಆತ ಸರ್ವರ ರಾಮನಾಗಿ ಪೂಜಿಸಲ್ಪಡುತ್ತಾನೆ. ಪ್ರತಿ ಹಳ್ಳಿಯೂ ರಾಮ ಮತ್ತು ರಾಮಾಯಣದ ಕುರಿತಾದ ಐತಿಹ್ಯವನ್ನು ಹೇಳುತ್ತದೆ. ಒಟ್ಟಿನಲ್ಲಿ ಜನ, ಮನ, ಮನೆಯನ್ನು ರಾಮ ಆವರಿಸಿಕೊಂಡಿದ್ದಾನೆ. ಸಾಂಸ್ಕೃತಿಕವಾಗಿ ರಾಷ್ಟ್ರವನ್ನು ಐಕ್ಯಗೊಳಿಸಿದ್ದಾನೆ.
ಶ್ರೀರಾಮ ಸಾಮರಸ್ಯದ ಅಗ್ರಗಣ್ಯ ಮೇಲ್ಪಂಕ್ತಿ. ಸಾರ್ವಕಾಲಿಕವಾಗಿ ಮನುಕುಲದಲ್ಲಿ ನೆಲೆಸಬೇಕಾದ ಸಾಮರಸ್ಯಕ್ಕೆ ಅತ್ಯಂತ ಔಚಿತ್ಯಪೂರ್ಣ ಆದರ್ಶವಾಗಿ ರಾಮ ಗುರುತಿಸಿಕೊಳ್ಳುತ್ತಾನೆ. ತನ್ನ ಇಡೀ ಜೀವಿತಾವಧಿಯಲ್ಲಿ ಆತ ಭೇಟಿಯಾದ ಎಲ್ಲಾ ವ್ಯಕ್ತಿಗಳಿಗೂ ಆತ ಅತ್ಯಂತ ಆಪ್ತನಾಗಿದ್ದಾನೆ, ತನ್ನ ವ್ಯಕ್ತಿತ್ವದ ಕಾರಣಕ್ಕಾಗಿ ದೇವರೂ ಆಗಿದ್ದಾನೆ.
ಅಹಲ್ಯೆಯ ಶಾಪ ವಿಮೋಚನೆಯಲ್ಲಿ, ಗುಹಾನೆಂಬ ಅಡವಿರಾಜನ ಸ್ನೇಹವನ್ನು ಬಿಗಿದಪ್ಪಿಕೊಳ್ಳುವಲ್ಲಿ, ಶಬರಿಯ ವಾತ್ಸಲ್ಯವನ್ನು ಸವಿಯುವಲ್ಲಿ, ಸುಗ್ರೀವನಿಗೆ ಆಪದ್ಬಾಂಧವನಾಗುವಲ್ಲಿ, ಜಾಂಬವಂತನ ಗೌರವವನ್ನು ಪಡೆಯುವಲ್ಲಿ, ವಾಲಿಯ ಮಗ ಅಂಗಧನಿಗೂ ಮಾದರಿಯಾಗುವಲ್ಲಿ, ಶತ್ರುವಾದ ರಾವಣನ ತಮ್ಮ ವಿಭೀಷಣನ ಮಿತ್ರನಾಗುವಲ್ಲಿ, ಎಲ್ಲದಕ್ಕಿಂತ ಮಿಗಿಲಾಗಿ ಸಕಲ ಸದ್ಗುಣಗಳ ಸಾಕಾರಮೂರ್ತಿಯಾದ ಹನುಮನ ಹೃದಯವೇ ಆಗುವುದರಲ್ಲಿ ಶ್ರೀರಾಮ ಗೆಲ್ಲುತ್ತಾನೆ.
ಭಾರತದ ಕ್ಷಾತ್ರಪರಂಪರೆ ಅನುಸರಿಸಬೇಕಾದ ನೀತಿಯನ್ನು ಬಹಳ ಸ್ಪಷ್ಟವಾಗಿ ತಿಳಿಸಿದ ಮೊದಲ ಅರಸ ಶ್ರೀರಾಮ. ನಮ್ಮ ‘ರಾಷ್ಟ್ರಧರ್ಮ’ಕ್ಕೆ ವಿರೋಧಿಯಾಗಿ ನಿಲ್ಲುವಂತಹ ಯಾವುದೇ ದುಷ್ಟಶಕ್ತಿ ಯಾವುದೇ ರೂಪದಲ್ಲಿದ್ದರೂ ಕನಿಕರ ತೋರಿಸದೆ ಸಂಹರಿಸಬೇಕು ಎನ್ನುವುದನ್ನು ತಿಳಿಸುವವನು ಶ್ರೀರಾಮ.
ಈ ನೆಲದ ಸತ್ವಕ್ಕೆ ಹಾನಿಯನ್ನುಂಟು ಮಾಡುವವರು ಯಾರೇ ಆಗಿರಲಿ, ಅದು ಮಹಿಳೆಯೇ ಆಗಿದ್ದರೂ ಧರ್ಮಕ್ಕೆ ಘಾತವನ್ನುಂಟು ಮಾಡಿದರೆ ಅವರನ್ನು ಶಿಕ್ಷಿಸಬೇಕು ಎನ್ನುವುದನ್ನು ರಾಮಾವತಾರದಲ್ಲಿನ ತಾಟಕೀವಧೆ, ಶೂರ್ಪನಖಿ ಸಂಹಾರ, ಲಂಕಿಣಿಯನ್ನು ಪರಾಭವಗೊಳಿಸುವರೆಗಿನ ಅನೇಕ ನಿದರ್ಶನಗಳು ತಿಳಿಸುತ್ತವೆ.
ರಾಮ ವ್ಯಕ್ತಿಯಲ್ಲ ಜಗತ್ತಿನ ಶಾಂತಿಯನ್ನು ಕಾಪಾಡಬಲ್ಲ ಶಕ್ತಿಯೆನ್ನುವುದನ್ನು ಎಂದೋ ಜಗತ್ತು ಅರಿತುಕೊಂಡಿದೆ. ರಾಮಮಂದಿರ ನಿರ್ಮಾಣವಾಗುತ್ತಿರುವ ಈ ಸುಸಂದರ್ಭದಲ್ಲಿ ಮತ್ತೊಮ್ಮೆ ಅದು ವ್ಯಕ್ತವಾಗುತ್ತಿದೆ. ಇದುವರೆಗೂ ರಾಮನನ್ನು ತನ್ನವನನ್ನಾಗಿಸಿಕೊಳ್ಳುವ ಪ್ರಯತ್ನದಿಂದ ರಚಿತಗೊಂಡಿರುವ ನೂರಾರು ಪ್ರಕಾರದ ರಾಮಾಯಣಗಳು ಇದಕ್ಕೆ ಸಾಕ್ಷಿ.
ಇಂದಿಗೂ ಅನರ್ಥದ ಸಿದ್ಧಾಂತಗಳ ಮೂಲಕ ಕಾಡು-ನಾಡಿನ ಬಂಧವನ್ನು ಕಳಚುವ ಪ್ರಯತ್ನಗಳು ವಿಫಲವಾಗುತ್ತಿದೆ ಏಕೆಂದರೆ ಶ್ರೀರಾಮನ ವ್ಯಕ್ತಿತ್ವವೆಂಬ ದೃಢವಾದ ಬಂಧ ಕಾಡು-ನಾಡನ್ನು ದೃಢವಾಗಿ ಬೆಸೆದಿದೆ. ಒಂದೇ ಸಂಸ್ಕೃತಿಯ ಅಡಿಯಲ್ಲಿ ಉಳಿಸಿದೆ. ಹಾಗಾಗಿಯೇ ರಾಮನನ್ನು ಎಲ್ಲರ ರಾಮ ಎಂದು ಸಂಬೋಧಿಸಿರುವುದು.
ಪ್ರತಿ ಊರಿನಿಂದ ಮಣ್ಣು ಮತ್ತು ನದಿಗಳ ನೀರನ್ನು ಸಂಗ್ರಹಿಸಿ ಸಾಂಕೇತಿಕವಾಗಿ ಒಟ್ಟು ಭಾರತವನ್ನೊಳಗೊಂಡು ಈ ನಾಡಿನ ಶ್ರದ್ಧಾಕೇಂದ್ರವಾಗಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಪ್ರತಿ ಭಾರತೀಯನೂ ತನು, ಮನ, ಧನ ಸಹಕಾರದಿಂದ ರಾಮಮಂದಿರ ನಿರ್ಮಾಣದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವುದು ಭಾರತದ ಅಖಂಡತೆಯ ಸಂಕೇತವಾಗಿದೆ.
ರಾಮನ ಅಸ್ತಿತ್ವವೆನ್ನುವುದು ಈ ನಾಡಿನ ಸಂಸ್ಕೃತಿಯ ಅಸ್ತಿತ್ವವೇ ಆಗಿದೆ. ಇದನ್ನು ಅರಿತು ಪರಂಪರೆಯಿಂದ ಪರಂಪರೆಗೆ, ಪೀಳಿಗೆಯಿಂದ ಪೀಳಿಗೆಗೆ ಸಾಂಸ್ಕೃತಿಕ ಮಹತ್ವವನ್ನು ಸಾರುವ ಮತ್ತು ಸದಾ ಸಾಂಸ್ಕೃತಿಕ ಜಾಗೃತಿಯನ್ನು ಕಾಯ್ದುಕೊಳ್ಳುವ ಕಾಯಕವನ್ನು ನಮ್ಮ ಪೂರ್ವಜರು ಮಾಡಿಕೊಂಡು ಬಂದಿದ್ದಾರೆ. ಇಂದು ಹೊಸತೊಂದು ಸಾಂಸ್ಕೃತಿಕ ಪುನರುತ್ಥಾನಕ್ಕೆ ನಾವೆಲ್ಲರೂ ಸಾಕ್ಷಿಯಾಗುವಂತೆ ರಾಮಮಂದಿರದ ನಿರ್ಮಾಣವಾಗುತ್ತಿದೆ.
ರಾಮಮಂದಿರದ ನಿರ್ಮಾಣ ಯಾವುದೋ ಒಂದು ಮತದ ವಿರುದ್ಧವಾದದಲ್ಲ. ರಾಮ ಮಂದಿರವನ್ನು ಧ್ವಂಸಗೊಳಿಸಿದವನು ಬಾಬರ್ ಅನ್ನುವ ಕಾರಣಕ್ಕೆ ಆತನ ಮತದವರನ್ನೆಲ್ಲಾ ದ್ವೇಷಿಸುವ ಮನೋಭಾವವನ್ನು ಹಿಂದೂ ಸಂಸ್ಕೃತಿ ಒಳಗೊಂಡಿಲ್ಲ. ಸತ್ಯವನ್ನು ನೋಡುವಾಗ ಜಾತಿ, ಮತ, ಪಂಥದ ಸುಳಿಗೆ ನಾವು ಸಿಲುಕಿದರೆ ಅನಗತ್ಯವಾದ ಗೊಂದಲಗಳ ನಿರ್ಮಾಣವಾಗುತ್ತದೆ.
ರಾಮ ಈ ರಾಷ್ಟ್ರದ ರಾಷ್ಟ್ರೀಯ ಪುರುಷ ಎನ್ನುವುದನ್ನು ಸಂವಿಧಾನವೂ ತಿಳಿಸುತ್ತದೆ. ಈ ರಾಷ್ಟ್ರದ ಎಲ್ಲಾ ಮಹಾನ್ ಪುರುಷರನ್ನು ಗೌರವಿಸಬೇಕೆನ್ನುವುದನ್ನು ನಮ್ಮ ಮೂಲಭೂತ ಕರ್ತವ್ಯಗಳು ಸಾರುತ್ತವೆ. ಬಾಬರ್ ಈ ರಾಷ್ಟ್ರದ ಮೇಲಿನ ಆಕ್ರಮಣಕಾರ ಎನ್ನುವ ಕಾರಣಕ್ಕೆ ಆತನನ್ನು ವಿರೋಧಿಸತಕ್ಕದೇ ಹೊರತು ಆತನ ಮತದ ಕಾರಣಕ್ಕಾಗಿ ಅಲ್ಲ ಎನ್ನುವುದು ನಮಗೆ ಸ್ಪಷ್ಟತೆ ಇದೆ. ಹಾಗಾಗಿ ಇದು ರಾಷ್ಟ್ರೀಯತೆ ಮತ್ತು ಅರಾಷ್ಟ್ರೀಯತೆಯು ನಡುವಿನ ಸಂಘರ್ಷ ಎನ್ನುವುದನ್ನು ಅರಿಯುವ ಅಗತ್ಯತೆ ಇದೆ.
ತ್ರೇತಾ ಯುಗದಲ್ಲಿ ಇಡೀ ಭಾರತವನ್ನು ತನ್ನ ಪ್ರೀತಿಯ ಮೂಲಕ ಬೆಸೆದ ರಾಮ ಇನ್ನುಮುಂದೆ “ರಾಮಮಂದಿರ – ರಾಷ್ಟ್ರಮಂದಿರ” ಎನ್ನುವ ಶ್ರದ್ಧೆಯ ಮೂಲಕ ಈ ರಾಷ್ಟ್ರವನ್ನು ಒಗ್ಗೂಡಿಸುತ್ತಾನೆ. ಸಮಾಜವನ್ನು ವಿಘಟಿಸಲು ಪ್ರಯತ್ನಿಸುತ್ತಿರುವ ಮಂತ್ರ-ವಿಪ್ಲವಗಳಿಗೆ ಶ್ರೀರಾಮನ ಕ್ಷಾತ್ರತೇಜದ ಮಂತ್ರ ಉತ್ತರವಾಗಲಿದೆ. ಜನವರಿ 22, 2024ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯೊಂದಿಗೆ ಈ ರಾಷ್ಟ್ರದ ಸಾಂಸ್ಕೃತಿಕ ಪುನರುತ್ಥಾನದ ಪ್ರತಿಷ್ಠಾಪನೆಯೂ ಆಗಲಿದೆ.
ಐದು ಶತಮಾನಗಳ ಹೋರಾಟ
ಪ್ರಭು ಶ್ರೀರಾಮಚಂದ್ರ ಕೋಟ್ಯಾಂತರ ಭಾರತೀಯರ ಆರಾಧ್ಯದೈವ. ಭಾರತದ ಅಸ್ಮಿತೆ. ಈ ಅಸ್ಮಿತೆಯನ್ನು ಉಳಿಸಿಕೊಳ್ಳಲು ನಡೆದ ಯುದ್ಧಗಳು, ಹೋರಾಟಗಳು, ಆಂದೋಲನಗಳು ಅಸಂಖ್ಯಾತ. ಅವೆಲ್ಲದರ ಪರಿಣಾಮವಾಗಿ ಇಂದು ಭವ್ಯವಾದ ರಾಮಮಂದಿರ ಹಿಂದುಗಳ ನಂಬಿಕೆಯಂತೆ ಆತನ ಜನ್ಮಸ್ಥಳವಾದ ಅಯೋಧ್ಯೆಯಲ್ಲೇ ನಿರ್ಮಾಣಗೊಂಡು ಲೋಕಾರ್ಪಣೆಯಾಗುವ ಸಮಯ ಕೂಡಿಬಂದಿದೆ.
ಶ್ರೀರಾಮ ಈ ನೆಲದ ಸಂಸ್ಕೃತಿಯ ಆದರ್ಶಗಳ ಮೂರ್ತರೂಪ. ರಾಮನ ಜನ್ಮಭೂಮಿಯಲ್ಲೇ ರಾಮಮಂದಿರದ ನಿರ್ಮಾಣಕ್ಕಾಗಿ ನಡೆದಂತಹ ಐದು ಶತಮಾನಗಳ ಹೋರಾಟ, ಸಾಂವಿಧಾನಾತ್ಮಕ ಪ್ರಕ್ರಿಯೆಗಳೆಲ್ಲವೂ ಶ್ರೀರಾಮ ಎಂಬ ಮೌಲ್ಯ ಈ ನಾಡಿನ ಸಂಸ್ಕೃತಿಯೊಂದಿಗೆ ಬೆಸೆದ ಪರಿಯನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಆಗಿದೆ. ಶ್ರೀರಾಮನ ಮಂದಿರ ಪ್ರಪಂಚದ ಜನರ ಸಂತಸಕ್ಕೆ ಕಾರಣವಾಗಿರಬೇಕಾದರೆ ರಾಮ ಸಾಂಸ್ಕೃತಿಕವಾಗಿ ಜಗದ್ವ್ಯಾಪಿಯಾಗಿದ್ದಾನೆ ಎಂದೇ ಅರ್ಥ.
ಶ್ರೀರಾಮ ಜಗತ್ತಿನ ಎಲ್ಲಾ ಸಾತ್ವಿಕತೆಗೂ ಪರಮೋಚ್ಛ ನಿದರ್ಶನವಾಗಬಲ್ಲ ಆದರ್ಶ. ಮಗನಾಗಿ, ಪತಿಯಾಗಿ, ಪ್ರಿಯತಮನಾಗಿ, ಸಹೋದರನಾಗಿ, ಸ್ನೇಹಿತನಾಗಿ, ತಂದೆಯಾಗಿ ಎಲ್ಲದಕ್ಕಿಂತ ಮಿಗಿಲಾಗಿ ಮನುಷ್ಯ ಜನ್ಮದ ಕರ್ತವ್ಯವನ್ನು ಸಾರುವ ಮಾನವತಾವಾದಿಯಾಗಿ ರಾಮ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾನೆ. ಹಾಗಾಗಿಯೇ ವಿಶ್ವದಲ್ಲಿ ಬಂಧುತ್ವದ ಅಗ್ರಗಣ್ಯ ಉದಾಹರಣೆಯಾಗಿ ಶ್ರೀರಾಮ ನಿಲ್ಲುತ್ತಾನೆ.
ಭಾರತದ ಆಡಳಿತ ವ್ಯವಸ್ಥೆಯ ಪರಮಗುರಿ ಭಾರತವನ್ನು ‘ರಾಮರಾಜ್ಯ’ ಆಗಿಸುವುದು. ಶ್ರೀರಾಮ ಯಾಕೆ ತನ್ನ ಆಡಳಿತದ ಕಾರಣಕ್ಕಾಗಿ ಇಂದಿಗೂ ಪ್ರಸ್ತುತವಾಗಿದ್ದಾನೆಂದರೆ ಪ್ರಜಾಪ್ರಭುತ್ವದ ಆಶಯವಾದ ‘ಜನರಿಂದ, ಜನರಿಗಾಗಿ, ಜನರಿಗೋಸ್ಕರ’ ಎನ್ನುವುದನ್ನು ಆತ ಅಕ್ಷರಶಃ ಪಾಲಿಸಿದ್ದ. ಒಬ್ಬ ರಾಜನಾಗಿ ತನ್ನ ಪ್ರಜೆಗಳ ಕ್ಷೇಮಕ್ಕಾಗಿ ಶ್ರಮಿಸುವುದು ಆತನ ಪ್ರಮುಖ ಜವಾಬ್ದಾರಿಯಾಗಿತ್ತು. ಯಾವುದೇ ರೀತಿಯಲ್ಲೂ ತನ್ನ ಪ್ರಜೆಗಳಿಗೆ ತೊಂದರೆಯಾಗದಂತೆ ತನ್ನ ನೀತಿಗಳನ್ನು ರೂಢಿಸಿಕೊಂಡಿದ್ದನು.
ಶ್ರೀರಾಮನ ಆಡಳಿತದ ಪರಿಯಲ್ಲೇ ಸ್ವಾತಂತ್ರ್ಯೋತ್ತರ ಭಾರತವೂ ಮುನ್ನಡೆಯಬೇಕೆಂಬ ಆಶಯ ಮೂಲ ಸಂವಿಧಾನದಲ್ಲಿ ಬಾಲರಾಮನ ಚಿತ್ರದ ಮೂಲಕ ವ್ಯಕ್ತಗೊಂಡಿದೆ. ಇಲ್ಲಿನ ಪ್ರತಿ ಪ್ರಜೆಯೂ, ಜನಪ್ರತಿನಿಧಿಯೂ ಶ್ರೀರಾಮನ ಹಾಗೆ ಕರ್ತವ್ಯನಿಷ್ಠರಾಗಿರಬೇಕು ಎನ್ನುವುದರ ಸಂಕೇತವಾಗಿದೆ.
ಭಾರತದ ಅಖಂಡತೆಯ ಪ್ರತೀಕ ಶ್ರೀರಾಮ. ತನ್ನ ವ್ಯಕ್ತಿತ್ವದ ಮೂಲಕ ಇಡೀ ರಾಷ್ಟ್ರವನ್ನು ಒಂದಾಗಿಸಿದ ಮಹಾನ್ ಪುರುಷ. ರಾಮ ನಡೆದ ಹಾದಿ ರಾಮಾಯಣವೆಂದಿಸಿತು, ರಾಮಾಯಣ ಸಂಪೂರ್ಣ ಭಾರತವನ್ನು ಬೆಸೆಯಿತು. ಅದಕ್ಕೆ ಸಾಕ್ಷಿಯಂತೆ ಭಾರತದ ಪ್ರತಿ ಹಳ್ಳಿಯ ಬಹುತೇಕ ಮನೆಗಳಲ್ಲಿ ಮಕ್ಕಳಿಗೆ ರಾಮನ ವಿವಿಧ ನಾಮಗಳನ್ನೇ ಹೆಸರನ್ನಾಗಿಟ್ಟಿರುವುದನ್ನು ನೋಡುತ್ತೇವೆ.
ಅಯೋಧ್ಯೆಯ ಶ್ರೀರಾಮ ಜನ್ಮಸ್ಥಾನದಲ್ಲಿ ರಾಮನ ಭವ್ಯ ಮಂದಿರವಿತ್ತೆಂದು ಇತಿಹಾಸದ ಅನೇಕ ಪುರಾವೆಗಳು ಸ್ಪಷ್ಟವಾಗಿ ಹೇಳಿವೆ. ವಿಕ್ರಮಾದಿತ್ಯ ಕಟ್ಟಿಸಿದ್ದ ಏಳು ಅಂತಸ್ತಿನ ಭವ್ಯ ಮಂದಿರವನ್ನು 1528ರಲ್ಲಿ ದಾಳಿಕೋರ ಬಾಬರನ ಸೇನಾಧಿಪತಿ ಮೀರ್ಬಾಕಿ ಕೆಡವಿ, ಅದೇ ಸ್ಥಳದಲ್ಲಿ ‘ಜನ್ಮಸ್ಥಾನ್ ಮಸ್ಜೀದ್’ ನಿರ್ವಿುಸಿದ. ಈ ಮಸೀದಿಯನ್ನು ರಾಮನು ಜನಿಸಿದ ಸ್ಥಳದಲ್ಲಿಯೇ ನಿರ್ಮಿಸಲಾಗಿದೆ. ಬಾಬರ್ ನಿರ್ಮಿಸಿರುವುದರಿಂದ ಈ ಮಸೀದಿಗೆ ಬಾಬರಿ ಮಸೀದಿ ಎಂದು ಹೆಸರಿಡುತ್ತಾನೆ. ಮೊಘಲರ ಆಳ್ವಿಕೆ ದೇಶಾದ್ಯಂತ ಹರಡುತ್ತಿದ್ದ ಕಾಲವಿದು. 1528ರಿಂದ 1934ರವರೆಗೆ 76 ಬಾರಿ ಸೋಲು-ಗೆಲುವಿನ ಕದನಗಳು ಉಭಯ ಕೋಮುಗಳ ಮಧ್ಯೆ ನಡೆದು, ಮೂರು ಲಕ್ಷ ಹಿಂದುಗಳು ಶ್ರೀರಾಮ ಜನ್ಮಭೂಮಿ ಮುಕ್ತಿಗಾಗಿ ಬಲಿದಾನಗೈದರು!
ಅಂದಹಾಗೆ, ವಿವಾದಿತ ಕಟ್ಟಡ ಬಾಬರ್ ನಿರ್ವಿುಸಿದ್ದಲ್ಲ. ಬ್ರಿಟಿಷರು ನಿರ್ವಿುಸಿದ್ದು! 1934ರಲ್ಲಿ ‘ಜನ್ಮಸ್ಥಾನ್ ಮಸ್ಜೀದ್’ನ ಬಹುಪಾಲು ಜಖಂಗೊಂಡಿತು. ಇಂತಹ ಹಾನಿಗೀಡಾದ ಕಟ್ಟಡವನ್ನು ಫೈಜಾಬಾದಿನ ಅಂದಿನ ಜಿಲ್ಲಾ ಕಲೆಕ್ಟರ್ ಜೆ.ವಿ.ನಿಕ್ಸಲನ್ ಹಿಂದೂ-ಮುಸ್ಲಿಂರ ಮಧ್ಯೆ ಸದಾ ಘರ್ಷಣೆ ಇರಲೆಂಬ ದುರುದ್ದೇಶದಿಂದ ದುರಸ್ತಿಗೊಳಿಸಿದ. ಹಾಗಾಗಿ, ‘ಬಾಬ್ರಿ ಮಸೀದಿ’ ಎಂದು ಉಲ್ಲೇಖಗೊಳ್ಳುತ್ತಿರುವ ಕಟ್ಟಡ ಬಾಬರ್ ನಿರ್ವಿುತವಲ್ಲ; ಬ್ರಿಟಿಷ್ ನಿರ್ವಿುತ.
1528 ರಿಂದ 1853 ರವರೆಗೆ ಮೊಘಲರು, ನವಾಬರ ಆಳ್ವಿಕೆಯಲ್ಲಿ ಅನೇಕ ದೇವಾಲಯಗಳನ್ನು ನಾಶ ಮಾಡಲಾಯಿತು. 19 ನೇ ಶತಮಾನದಲ್ಲಿ, ಮೊಘಲರು ಮತ್ತು ನವಾಬರ ಆಳ್ವಿಕೆಯು ದುರ್ಬಲಗೊಳ್ಳುತ್ತಾ ಬಂದಿತ್ತು, ಅಷ್ಟರಲ್ಲಿ ಬ್ರಿಟಿಷರ ಆಳ್ವಿಕೆ ಶುರುವಾಗಿತ್ತು, ಈ ಅವಧಿಯಲ್ಲಿ ಹಿಂದೂಗಳು ಭಗವಾನ್ ರಾಮನ ಜನ್ಮಸ್ಥಳವಾದ ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಯಿತು, ರಾಮನ ಜನ್ಮ ಸ್ಥಳ ಮರಳಿಬೇಕೆಂದು ಹೋರಾಟಕ್ಕಿಳಿದರು. ಹೀಗೆ ರಾಮಲಲ್ಲಾ ಜನ್ಮಸ್ಥಳವನ್ನು ಪಡೆಯುವ ಹೋರಾಟ ಆರಂಭವಾಯಿತು.
ಮೊದಲ ಎಫ್‌ಐಆರ್ ದಾಖಲೆ:
ಮಿರ್ಬಾಕಿ ಮಸೀದಿಯನ್ನು ನಿರ್ಮಿಸಿದ 330 ವರ್ಷಗಳ ನಂತರ 1858 ರಲ್ಲಿ ಮೊದಲ ಬಾರಿಗೆ ಆ ಸ್ಥಳದಲ್ಲಿ ಹವನ, ಪೂಜೆ ಮಾಡುವುದರ ವಿರುದ್ಧ ಎಫ್‌ಐಆರ್ ದಾಖಲಿಸಿದಾಗ ಹೋರಾಟವು ಕಾನೂನುಬದ್ಧವಾಯಿತು. ಇದರಿಂದಾಗಿ ತಂತಿ ಬೇಲಿ ನಿರ್ಮಿಸಿ ವಿವಾದಿತ ಜಮೀನಿನ ಒಳ ಮತ್ತು ಹೊರ ಆವರಣದಲ್ಲಿ ಮುಸ್ಲಿಮರು ಹಾಗೂ ಹಿಂದೂಗಳು ಪ್ರತ್ಯೇಕವಾಗಿ ಪೂಜೆ, ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು ಅದಾಗಿ 27 ವರ್ಷಗಳ ನಂತರ 1885ರಲ್ಲಿ ರಾಮ ಜನ್ಮಭೂಮಿಯ ಹೋರಾಟವು ನ್ಯಾಯಾಲಯವನ್ನು ತಲುಪಿತು. ಸಿವಿಲ್ ದಾವೆ ಹೂಡಿ ಬಾಬ್ರಿ ಕಟ್ಟಡದ ಹೊರ ಪ್ರಾಂಗಣದಲ್ಲಿರುವ ರಾಮನ ವೇದಿಕೆಯ ಮೇಲೆ ನಿರ್ಮಿಸಲಾಗಿರುವ ತಾತ್ಕಾಲಿಕ ಮಂದಿರವನ್ನು ಕಾಂಕ್ರೀಟ್ ಮತ್ತು ಮೇಲ್ಛಾವಣಿ ಮಾಡಬೇಕೆಂದು ವಾದ ಮಂಡಿಸಲಾಯಿತು. ಅಲ್ಲಿ ಪೂಜಿಸುವ ಹಕ್ಕು ಹಿಂದೂಗಳಿಗೆ ಇದೆ ಎಂದು ನ್ಯಾಯಾಧೀಶರು ತೀರ್ಪು ನೀಡಿದರು. ಜಿಲ್ಲಾಧಿಕಾರಿಗಳು ತೀರ್ಪು ವಿರೋಧಿಸಿ ದೇವಸ್ಥಾನವನ್ನು ಕಾಂಕ್ರೀಟ್ ಮಾಡಲು ಅನುಮತಿ ನೀಡಲಿಲ್ಲ.
ರಾಮಮಂದಿರ ಹೋರಾಟ ಜಗತ್ತಿನ ಅತ್ಯಂತ ಕಾನೂನುಬದ್ಧ ಆಂದೋಲನ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಹೋರಾಟವು ಜಗತ್ತಿನ ಅತ್ಯಂತ ಕಾನೂನುಬದ್ಧ ಆಂದೋಲನ ಎಂಬುದು ಅನೇಕ ತಜ್ಞರ ಸ್ಪಷ್ಟ ಅಭಿಮತ. ಏಕೆಂದರೆ ರಾಮಜನ್ಮಭೂಮಿಯಲ್ಲೇ ರಾಮಮಂದಿರ ನಿರ್ಮಾಣಗೊಳ್ಳುತ್ತಿರುವ ಇಂದಿನ ನಮ್ಮೆಲ್ಲರ ಸಂಭ್ರಮದ ಹಿಂದೆ 134 ವರ್ಷಗಳ ಸುದೀರ್ಘ ನ್ಯಾಯಾಂಗ ಹೋರಾಟ ನಡೆದಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಹೋರಾಟವು ಜಗತ್ತಿನ ಅತ್ಯಂತ ಕಾನೂನುಬದ್ಧ ಆಂದೋಲನ ಎಂಬುದು ಅನೇಕ ತಜ್ಞರ ಸ್ಪಷ್ಟ ಅಭಿಮತ. ಏಕೆಂದರೆ ರಾಮಜನ್ಮಭೂಮಿಯಲ್ಲೇ ರಾಮಮಂದಿರ ನಿರ್ಮಾಣಗೊಳ್ಳುತ್ತಿರುವ ಇಂದಿನ ನಮ್ಮೆಲ್ಲರ ಸಂಭ್ರಮದ ಹಿಂದೆ 134 ವರ್ಷಗಳ ಸುದೀರ್ಘ ನ್ಯಾಯಾಂಗ ಹೋರಾಟ ನಡೆದಿದೆ.
1949 ಡಿಸೆಂಬರ್ 22ರ ಮಧ್ಯರಾತ್ರಿ ಅಂದಿನ ವಿವಾದಿತ ಕಟ್ಟಡದ ಒಳಗೆ ರಾಮಲಕ್ಷ್ಮಣ ವಿಗ್ರಹಗಳು ಕಾಣಿಸಿಕೊಂಡಿತು. ಅಂದೇ ಅಲ್ಲಿ ವಿಧ್ಯುಕ್ತವಾಗಿ ಶ್ರೀರಾಮಲಲ್ಲಾ ವಿಗ್ರಹ ಸ್ಥಾಪನೆಗೊಂಡಿತು. ಈ ಬೆಳವಣಿಗೆಯಿಂದ ಅಯೋಧ್ಯೆಯ ರಾಮಜನ್ಮಭೂಮಿಯ ಸ್ಥಳವನ್ನು ಸರ್ಕಾರ ‘ವಿವಾದಿತ ಪ್ರದೇಶ’ ಎಂದು ಗುರುತಿಸಿ ಬೇಲಿಯನ್ನು ಹಾಕಿತು.
1950ರಲ್ಲಿ ಗೋಪಾಲಸಿಂಗ್ ಮತ್ತು ಪರಮಹಂಸ ರಾಮಚಂದ್ರದಾಸ್ ಎಂಬ ಇಬ್ಬರು ರಾಮಭಕ್ತರು ರಾಮಜನ್ಮಭೂಮಿಯಲ್ಲಿ ರಾಮನ ಪ್ರತ್ಯಕ್ಷಪೂಜೆಗೆ ಅವಕಾಶವನ್ನು ಕಲ್ಪಿಸಿಕೊಡಬೇಕೆಂದು 2 ಮೊಕದ್ದಮೆಗಳನ್ನು ಹೂಡಿದರು. ಅದಕ್ಕೆ ನ್ಯಾಯಲಯವು ಸಮ್ಮತಿಸಿತಾದರೂ ವಿವಾದಿತ ಕಟ್ಟಡದ ಒಳಾಂಗಣದ ಬಾಗಿಲು ಮುಚ್ಚಿರಬೇಕು ಎಂದು ತಿಳಿಸಿತು.
1986ರ ಫೆಬ್ರವರಿ 1 ರಂದು ಸರ್ಕಾರ ವಿವಾದಿತ ಕಟ್ಟಡದ ದ್ವಾರವನ್ನು ತೆರೆಯಬೇಕೆಂದು ನ್ಯಾಯವಾದಿ ಯು ಸಿ ಪಾಂಡೆ ಫೈಜಾಬಾದ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಈ ಮನವಿಗೆ ಸ್ಪಂದಿಸಿ ಜಿಲ್ಲಾ ನ್ಯಾಯಮೂರ್ತಿಗಳು ಮುಚ್ಚಲಾಗಿರುವ ಸ್ಥಳವನ್ನು ಬಂಧಮುಕ್ತಗೊಳಿಸಿ ಹಿಂದೂಗಳಿಗೆ ಪೂಜೆ ಮತ್ತು ದರ್ಶನ ಮಾಡುವುದಕ್ಕೆ ಬಿಡಬೇಕೆಂದು ತಿಳಿಸಿತು.
1989ರ ನವೆಂಬರ್ 9 ರಂದು ಕೇಂದ್ರ ಸರ್ಕಾರ ವಿಶ್ವ ಹಿಂದೂ ಪರಿಷತ್‌ಗೆ ವಿವಾದಿತ ಪ್ರದೇಶದಲ್ಲಿ ಶಿಲಾನ್ಯಾಸ ನಡೆಸಲು ಅನುವು ಮಾಡಿಕೊಟ್ಟಿತು. ಅದೇ ವರ್ಷ ಫೈಜಾಬಾದ್ ಜಿಲ್ಲಾ ನ್ಯಾಯಲಯದಿಂದ ರಾಮಜನ್ಮಭೂಮಿಯ ವಿವಾದಿತ ಪ್ರದೇಶದ ಕುರಿತಾದ ಎಲ್ಲಾ ಮೊಕದ್ದಮೆಗಳು ಅಲಹಾಬಾದ್ ಉಚ್ಛ ನ್ಯಾಯಾಲಯಕ್ಕೆ ಹಸ್ತಾಂತರವಾಯಿತು.
1989ರಲ್ಲಿ ನಿರ್ಮೋಹಿ ಆಖಾಡಾ (1959) ಮತ್ತು ಸುನ್ನಿ ವಕ್ಫ್ ಬೋರ್ಡ್ (1961) ಮೊಕದ್ದಮೆಗಳಲ್ಲಿರುವ ಕಕ್ಷಿದಾರರನ್ನು ಪ್ರತಿವಾದಿಗಳಾಗಿ ಹೆಸರಿಸಿ ರಾಮ್ ಲಲಾ ವಿರಾಜಮಾನ್ ಎಂಬ ಹೆಸರಿನಲ್ಲಿ ಮತ್ತೊಂದು ಮೊಕದ್ದಮೆಯನ್ನು ಹೈಕೋರ್ಟ್ನಲ್ಲಿ ಸಲ್ಲಿಸಲಾಯಿತು.
1990ರ ಸೆಪ್ಟೆಂಬರ್ 25ರಂದು ಎಲ್ ಕೆ ಅಡ್ವಾನಿ ಅವರು ಗುಜರಾತಿನ ಸೋಮನಾಥದಿಂದ ಉತ್ತರಪ್ರದೇಶದ ಅಯೋಧ್ಯೆಯವರೆಗೆ ರಥಾಯಾತ್ರೆಯನ್ನು ಪ್ರಾರಂಭಿಸುತ್ತಾರೆ.
1992ರ ಡಿಸೆಂಬರ್ 6ರಂದು ವಿವಾದಿತ ಕಟ್ಟಡವನ್ನು ಕಾರಸೇವಕರು ನೆಲಸಮಗೊಳಿಸುತ್ತಾರೆ.
1993ರ ಜನವರಿ 7 ರಂದು ಕೇಂದ್ರ ಸರ್ಕಾರ ವಿವಾದಿತ ಪ್ರದೇಶದ ಸುತ್ತಮುತ್ತಲಿನ 67.7 ಎಕರೆ ಪ್ರದೇಶವನ್ನು ರಾಜ್ಯ ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳಲು ಸುಗ್ರೀವಾಜ್ಞೆ ಹೊರಡಿಸಿತು.
1993ರ ಎಪ್ರಿಲ್ 3 ರಂದು ಇದು Acquisition of Certain Areas at Ayodhya Act-1993 ಕಾಯಿದೆಯಾಗಿ ರೂಪುಗೊಂಡಿತು.
1994ರಲ್ಲಿ ಇಸ್ಮಾಯಿಲ್ ಫರುಕಿ ತೀರ್ಪು 3-2ರ ಬಹುಮತದಿಂದ ಅಯೋಧ್ಯೆ ಕಾಯಿದೆಯಲ್ಲಿ ಕೆಲವು ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವ ಸಾಂವಿಧಾನಿಕತೆಯನ್ನು ಎತ್ತಿಹಿಡಿಯಿತು. ತೀರ್ಪು ನೀಡಿದ ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ಮಾಜಿ ಸಿಜೆಐ ಜೆ.ಎಸ್. ವರ್ಮ ಅವರು ಪ್ರತಿಯೊಂದು ಧಾರ್ಮಿಕ ಸ್ಥಿರ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂದು ತರ್ಕಿಸಿದ್ದರು. ಹಾಗೆಯೇ ಇಸ್ಲಾಂನಲ್ಲಿ ಮಸೀದಿಗೆ ಯಾವುದೇ ನಿರ್ದಿಷ್ಟ ಪ್ರಾಮುಖ್ಯತೆ ಇಲ್ಲದಿದ್ದರೆ ಮಸೀದಿಯಲ್ಲಿ ನಮಾಜ್ ಮಾಡುವುದು ಇಸ್ಲಾಂಗೆ ಅವಿಭಾಜ್ಯವಲ್ಲ ಎಂದೂ ತಿಳಿಸಿದ್ದರು.
2003ರಲ್ಲಿ ಮಾರ್ಚ್‌ನಿಂದ ಆಗಸ್ಟ್ ವರೆಗೆ ಅಲಹಾಬಾದ್ ಉಚ್ಚ ನ್ಯಾಯಾಲಯದ ನಿರ್ದೇಶನದ ಅಡಿಯಲ್ಲಿ ವಿವಾದಿತ ಸ್ಥಳದ ಕೆಳಗಿರುವ ಭೂಮಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಉತ್ಖನನ ಮಾಡಲು ಪ್ರಾರಂಭಿಸುತ್ತದೆ. ಅದು 10ನೇ ಶತಮಾನದ ಹಿಂದೂ ದೇವಾಲಯದ ಅವಶೇಷಗಳನ್ನು ಹೊಂದಿದೆ ಎಂದು ತಿಳಿಸುತ್ತದೆ.
2010ರ ಸೆಪ್ಟೆಂಬರ್ 30ರಂದು ವಿವಾದಿತ 2.77 ಎಕರೆ ಜಮೀನಿನ ಕುರಿತು ತ್ರಿಸದಸ್ಯ ಪೀಠವು ಗಮನಾರ್ಹ ತೀರ್ಪು ನೀಡಿತು. ಅದರನ್ವಯ 2.77 ಎಕರೆ ಜಮೀನಿನ 2/3 ಭಾಗ ಹಿಂದುಗಳಿಗೆ (1/3 ರಾಮಲಲಾ, 1/3 ನಿರ್ಮೋಹಿ ಆಖಾಡಾ), 1/3 ಭಾಗ ಮುಸಲ್ಮಾನರಿಗೆ ಎಂದು ತ್ರಿಸದಸ್ಯ ಪೀಠ ಹೇಳಿತು.
2010ರ ತೀರ್ಪಿನ ಪ್ರಕಾರ 1992ರಲ್ಲಿ ಕಾರಸೇವಕರು ಧ್ವಂಸಗೊಳಿಸಿದ ವಿವಾದಿತ ಕಟ್ಟಡದ ಪ್ರಮುಖ ಸ್ಥಳ ರಾಮಲಲಾನಿಗೆ, ರಾಮ ಚಬೂತರಾ ಹಾಗೂ ಸೀತಾ ರಸೋಯಿ ನಿರ್ಮೋಹಿ ಆಖಾಡಾಕ್ಕೆ ಹಾಗೂ ವಿವಾದಿತ ಕಟ್ಟಡದ ಅಂಗಳದ ಭಾಗ ವಕ್ಫ್ ಬೋರ್ಡ್ಗೆ ಎಂದು ತಿಳಿಸಿತು.
2010ರ ಮೇ 9 ರಂದು ತೀರ್ಪಿನ ಕುರಿತು ಎಲ್ಲಾ ಪಕ್ಷಗಳು ಪಿಟಿಷನ್ ಹಾಕಿದ್ದರಿಂದ 10.9.2010 ರ 2.77 ಎಕರೆ ಜಮೀನು ಹಂಚಿಕೆ ಕುರಿತಾದ ತೀರ್ಪನ್ನು ಸುಪ್ರೀಂಕೋರ್ಟ್ ರದ್ದುಮಾಡಿತು.
2017ರ ಮಾರ್ಚ್ 21ರಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್, ಈ ವಿವಾದವು ಮಾತುಕಥೆಗಳ ಮೂಲಕ ಇತ್ಯರ್ಥವಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
2017ರ ಆಗಸ್ಟ್ 7 ರಂದು 1994ರ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದ ಅರ್ಜಿಯನ್ನು ಮೂರು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಲಾಯಿತು.
2017ರ ನವೆಂಬರ್ 20 ರಂದು ಅಯೋಧ್ಯೆಯಲ್ಲಿ ರಾಮಮಂದಿರವನ್ನೂ, ಲಕ್ನೋದಲ್ಲಿ ಮಸೀದಿಯನ್ನೂ ನಿರ್ಮಿಸಲು ನಮಗೆ ಒಪ್ಪಿಗೆ ಇದೆಯೆಂದು ಉತ್ತರ ಪ್ರದೇಶ ಶಿಯಾ ಸೆಂಟ್ರಲ್ ಬೋರ್ಡ್ ಸುಪ್ರೀಕೋರ್ಟ್ಗೆ ತಿಳಿಸಿತು.
2017 ರ ಆಗಸ್ಟ್ 11 ರಂದು ದೀಪಕ್ ಮಿಶ್ರಾ, ಅಶೋಕ್ ಭೂಷಣ್ ಮತ್ತು ಅಬ್ದುಲ್ ನಜೀರ್ ಎಎ ಅವರನ್ನೊಳಗೊಂಡ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಪೀಠವು ಮೇಲ್ಮನವಿಯ ವಿಚಾರಣೆಯನ್ನು ಪ್ರಾರಂಭಿಸಿತು.
2018ರ ಫೆಬ್ರವರಿ – ಜುಲೈ ವೇಳೆಗೆ ಅರ್ಜಿದಾರರು 1994ರ ಇಸ್ಮಾಯಿಲ್ ಫರುಕಿ ತೀರ್ಪನ್ನು ಮರುಪರಿಶೀಲನೆಗಾಗಿ 7 ನ್ಯಾಯಾಧೀಶರ ಪೀಠಕ್ಕೆ ಉಲ್ಲೇಖಿಸಬೇಕು ಎಂದು ವಾದಿಸುತ್ತಾರೆ.
2018ರ ಸೆಪ್ಟೆಂಬರ್ 2 ರಲ್ಲಿ ಸುಪ್ರೀಂ 1994 ರ ಇಸ್ಮಾಯಿಲ್ ಫರುಕಿ ತೀರ್ಪನ್ನು ದೊಡ್ಡ ಪೀಠದಿಂದ ಮರುಪರಿಶೀಲಿಸುವ ಅಗತ್ಯವಿಲ್ಲ ಎಂದು ಹೇಳಿತು.
2019ರ ಜನವರಿ 8ರಂದು ಸಿಜೆಐ ರಂಜನ್ ಗೊಗೊಯ್ ಅವರು ತಮ್ಮ ಆಡಳಿತಾತ್ಮಕ ಅಧಿಕಾರವನ್ನು ಬಳಸಿಕೊಂಡು 5 ನ್ಯಾಯಾಧೀಶರ ಸಂವಿಧಾನ ಪೀಠದ ಮುಂದೆ ವಿಷಯವನ್ನು ಪಟ್ಟಿ ಮಾಡಿದರು, ಸೆಪ್ಟೆಂಬರ್ 2018ರ ತೀರ್ಪನ್ನು ರದ್ದುಗೊಳಿಸಿದರು. 26.2.2018ರಂದು ಮಾತುಕಥೆಯ ಮೂಲಕ ಪ್ರಕರಣ ಇತ್ಯರ್ಥವಾಗಲಿ ಮತ್ತು ಮಧ್ಯವರ್ತಿಗಳು 5.3.2019ರೊಳಗೆ ಮಾತುಕಥೆ ಪ್ರಗತಿ ಕುರಿತು ವರದಿ ಮಾಡಬೇಕು ಎಂದಿತು ಸುಪ್ರೀಂಕೋರ್ಟ್.
2019ರಜನವರಿ 25 ರಂದು 2018 ಸೆಪ್ಟೆಂಬರ್ 27 ಅಲಹಾಬಾದ್ ಕೋರ್ಟ್ ನೀಡಿದ್ದ ತೀರ್ಪು ಕುರಿತು ವಿಮರ್ಶಿಸಲು ಮೂವರು ನ್ಯಾಯಾಧೀಶರ ಪೀಠವನ್ನು ಸುಪ್ರೀಂ ರಚಿಸಿತು. (29.10.2018) ಐದು ನ್ಯಾಯಮೂರ್ತಿಗಳ ನಿಯುಕ್ತಿಯನ್ನು ಅದು ಒಪ್ಪಲಿಲ್ಲ. ರಾಮಜನ್ಮಭೂಮಿ ಕುರಿತಾದ ಎಲ್ಲಾ ಪ್ರಕರಣಗಳ ವಿಚಾರಣೆಗೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗಾಯ್, ಜಸ್ಟಿಸ್‌ರಾದ ಎನ್.ವಿ. ಬೋಜ್ಜಿ, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್, ಎಸ್. ಅಬ್ದುಲ್ ನಜೀರ್‌ರವರ ಪಂಚಪೀಠ ಘೋಷಣೆ.
2019ರ ಅಗಸ್ಟ್ 6 ರಿಂದ 40 ದಿನಗಳ ಕಾಲ ಪ್ರತಿನಿತ್ಯ ವಿಚಾರಣೆ ಆರಂಭಗೊಂಡಿತು. 16 ಅಕ್ಟೋಬರ್ 2019ರಂದು ಎಲ್ಲಾ ಮೇಲ್ಮನವಿಗಳ ವಿಸ್ತಾರ ವಿಚಾರಣೆ ಮುಕ್ತಾಯಗೊಂಡಿತು.
2019ರ 9 ನವೆಂಬರ್ ರಂದು ಐತಿಹಾಸಿಕ ತೀರ್ಪು ನೀಡಿದ ಸರ್ವೋಚ್ಚ ನ್ಯಾಯಾಲಯದ ಪಂಚ ಸದಸ್ಯ ಪೀಠವು ಒಕ್ಕೊರಲಿನಿಂದ ರಾಮಲಲಾಗೆ ವಿವಾದಿತ 2.77 ಎಕರೆ ಜಾಗ ಸಲ್ಲಬೇಕು ಎಂದಿತು. ಸುನ್ನಿ ವಕ್ಸ್ ಮಂಡಳಿಗೆ ಪರ್ಯಾಯವಾಗಿ ಐದು ಎಕರೆ ಜಮೀನು ನೀಡಬೇಕು. ಇಡೀ ವಿವಾದಿತ ಜಾಗ ತನ್ನ ಸುಪರ್ದಿಗೆ ಒಪ್ಪಿಸಬೇಕೆಂದು ನಿರ್ಮೋಹಿ ಅಖಾಡ ಸಲ್ಲಿಸಿದ್ದ ಅರ್ಜಿಯನ್ನೂ ಸುಪ್ರೀಂಕೋರ್ಟ್ ವಜಾಮಾಡಿತು. ಕೇಂದ್ರ ಸರ್ಕಾರ ಮಂದಿರ ನಿರ್ಮಾಣಕ್ಕಾಗಿ ಮೂರು ತಿಂಗಳೊಳಗೆ ಒಂದು ಟ್ರಸ್ಟ್ನಲ್ಲಿ ನಿರ್ಮಿಸಬೇಕು. ನಿರ್ಮೋಹಿ ಆಖಾಡದ ಪ್ರತಿನಿಧಿಗೂ ಅವಕಾಶ ಕೊಡಬೇಕು ಎಂದು ತೀರ್ಪು ನೀಡಿತು.
ಶ್ರೀರಾಮನ ಭೂಮಿ ಸಿಗಲು ಕಾರಣಕರ್ತರಾದ ಕೆ.ಕೆ.ನಾಯರ್:
ಕೆ.ಕೆ.ನಾಯರ್ ಎಂದು ಕರೆಯಲ್ಪಡುವ ಕಂಡಂಗಲಂ ಕರುಣಾಕರನ್ ನಾಯರ್ ಅವರು ಸೆಪ್ಟೆಂಬರ್ 7, 1907 ರಂದು ಕೇರಳದ ಆಲಪ್ಪುಳದ ಗುಟಂಕಾಡು ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು.
ಭಾರತದ ಸ್ವಾತಂತ್ರ್ಯದ ಮೊದಲು, ಅವರು ಇಂಗ್ಲೆಂಡ್‌ಗೆ ಹೋದರು ಮತ್ತು 21 ನೇ ವಯಸ್ಸಿನಲ್ಲಿ ಬ್ಯಾರಿಸ್ಟರ್ ಆಗಿದ್ದರು ಮತ್ತು ಮನೆಗೆ ಹಿಂದಿರುಗುವ ಮೊದಲು ICS ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದರು.
ಕೇರಳದಲ್ಲಿ ಕೆಲಕಾಲ ದುಡಿದು ಪ್ರಾಮಾಣಿಕತೆ, ಧೈರ್ಯ, ಶೌರ್ಯಕ್ಕೆ ಹೆಸರಾಗಿದ್ದ ಅವರು ಜನಸೇವಕರಾಗಿ ಖ್ಯಾತಿ ಗಳಿಸಿದ್ದರು.
1945 ರಲ್ಲಿ ಅವರು ಉತ್ತರ ಪ್ರದೇಶ ರಾಜ್ಯಕ್ಕೆ ನಾಗರಿಕ ಸೇವಕರಾಗಿ ಸೇರಿದರು. ಅಲ್ಲಿ ಅವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು ಮತ್ತು ಜೂನ್ 1, 1949 ರಂದು ಫೈಜಾಬಾದ್‌ನ ಡೆಪ್ಯುಟಿ ಕಮಿಷನರ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡರು.
ಅಯೋಧ್ಯೆಯಲ್ಲಿ ಹಠಾತ್ತನೆ ಬಾಲ ರಾಮವಿಗ್ರಹ ಕಾಣಿಸಿಕೊಂಡಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಂದಿನ ಪ್ರಧಾನಿ ನೆಹರೂ ಅವರು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದರು. ರಾಜ್ಯದ ಮುಖ್ಯಮಂತ್ರಿ ಗೋವಿಂದ ವಲ್ಲಭ ಪಂತ್ ಅವರು ಕೆ.ಕೆ.ನಾಯರ್ ಅವರನ್ನು ಅಲ್ಲಿಗೆ ಹೋಗಿ ವಿಚಾರಿಸಲು ವಿನಂತಿಸಿದರು. ನಾಯರ್ ಅವರು ತಮ್ಮ ಅಧೀನದಲ್ಲಿದ್ದ ಶ್ರೀ ಗುರುದತ್ ಸಿಂಗ್ ಅವರನ್ನು ತನಿಖೆ ಮಾಡಿ ವರದಿ ಸಲ್ಲಿಸುವಂತೆ ಕೇಳಿಕೊಂಡರು. ಸಿಂಗ್ ಅಲ್ಲಿಗೆ ಹೋಗಿ ವಿಸ್ತೃತ ವರದಿಯನ್ನು ಕೆ.ಕೆ. ನಾಯರ್ ಅವರಿಗೆ ಸಲ್ಲಿಸಿದರು. ಹಿಂದೂಗಳು ಅಯೋಧ್ಯೆಯನ್ನು ಭಗವಾನ್ ರಾಮನ (ರಾಮ್ ಲಲ್ಲಾ) ಜನ್ಮಸ್ಥಳವಾಗಿ ಪೂಜಿಸುತ್ತಾರೆ ಎಂದು ಅವರು ವರದಿಯಲ್ಲಿ ಹೇಳಿದರು. ಆದರೆ ಮುಸ್ಲಿಮರು ಮಸೀದಿ ಇದೆ ಎಂದು ಹೇಳಿಕೊಂಡು ಸಮಸ್ಯೆ ಸೃಷ್ಟಿಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಿ, ಅದು ಒಂದು ಹಿಂದೂ ದೇವಾಲಯ ಎಂದು ಬರೆದರು. ಅದಕ್ಕೆ ಸರ್ಕಾರ ಭೂಮಿ ಮಂಜೂರು ಮಾಡಿ, ದೊಡ್ಡ ದೇವಸ್ಥಾನವನ್ನು ಅಲ್ಲಿ ನಿರ್ಮಿಸಬೇಕು ಎಂದು ಸಲಹೆ ನೀಡಿದರು. ಹಾಗೆಯೆ ಮುಸ್ಲಿಮರು ಆ ಪ್ರದೇಶಕ್ಕೆ ಹೋಗುವುದನ್ನು ನಿಷೇಧಿಸಬೇಕು ಎಂದು ಅವರು ವರದಿಯಲ್ಲಿ ಹೇಳಿದರು.
ಆ ವರದಿಯನ್ನು ಆಧರಿಸಿ ನಾಯರ್ ಅವರು ದೇವಸ್ಥಾನದ 500 ಮೀಟರ್ ವ್ಯಾಪ್ತಿಯೊಳಗೆ ಮುಸ್ಲಿಮರು ಹೋಗುವುದನ್ನು ನಿಷೇಧಿಸಿ ಆದೇಶ ಹೊರಡಿಸಿದರು. (ಇಲ್ಲಿಯವರೆಗೆ ಈ ನಿಷೇಧವನ್ನು ತೆಗೆದುಹಾಕಲು ಸರ್ಕಾರ ಅಥವಾ ನ್ಯಾಯಾಲಯಕ್ಕೆ ಸಾಧ್ಯವಾಗಿಲ್ಲ ಎಂಬುದು ಗಮನಾರ್ಹವಾಗಿದೆ).
ಇದನ್ನು ಕೇಳಿದ ನೆಹರೂ ಬೇಸರಗೊಂಡರು ಮತ್ತು ವ್ಯಗ್ರರಾದರು. ಈ ಪ್ರದೇಶದಿಂದ ಹಿಂದೂಗಳನ್ನು ತಕ್ಷಣವೇ ಸ್ಥಳಾಂತರಿಸಲು ಮತ್ತು ರಾಮ್ ಲಲ್ಲಾನನ್ನು ತೆಗೆದುಹಾಕಲು ರಾಜ್ಯ ಸರ್ಕಾರ ಆದೇಶ ನೀಡಬೇಕೆಂದು ಅವರು ಮುಖ್ಯಮಂತ್ರಿಗೆ ತಿಳಿಸಿದರು.
ಮುಖ್ಯಮಂತ್ರಿ ಗೋವಿಂದ್ ವಲ್ಲಭ ಪಂತ್ ಅವರು ನಾಯರ್ ಅವರಿಗೆ ತಕ್ಷಣವೇ ಹಿಂದೂಗಳನ್ನು ಸ್ಥಳಾಂತರಿಸಲು ಮತ್ತು ರಾಮಲಲ್ಲಾನ ವಿಗ್ರಹವನ್ನು ತೆಗೆದುಹಾಕಲು ಆದೇಶಿಸಿದರು.
ಆದರೆ ಆದೇಶವನ್ನು ಜಾರಿಗೊಳಿಸಲು ನಾಯರ್ ನಿರಾಕರಿಸಿದರು. ಇನ್ನೊಂದೆಡೆ ರಾಮ ಲಲ್ಲಾಗೆ ನಿತ್ಯ ಪೂಜೆ ಸಲ್ಲಿಸಬೇಕು ಎಂದು ಮತ್ತೊಂದು ಆದೇಶ ಹೊರಡಿಸಿದರು. ಪೂಜೆಗೆ ತಗಲುವ ವೆಚ್ಚ ಹಾಗೂ ಪೂಜೆ ಸಲ್ಲಿಸಿದ ಅರ್ಚಕರ ವೇತನವನ್ನು ಸರಕಾರವೇ ಭರಿಸಬೇಕೆಂದು ಕೂಡ ತಮ್ಮ ಆದೇಶದಲ್ಲಿ ತಿಳಿಸಿದರು.
ಈ ಆದೇಶದಿಂದ ಕೋಪಾವಿಷ್ಟರಾದ ನೆಹರು ತಕ್ಷಣವೇ ನಾಯರ್ ಅವರನ್ನು ಸೇವೆಯಿಂದ ತೆಗೆದುಹಾಕಲು ಆದೇಶಿಸಿದರು. ವಜಾಗೊಳಿಸಿ ಆರ್ಡರ್ ಬಂದಾಗ, ನಾಯರ್ ಅವರು ಅಲಹಾಬಾದ್ ನ್ಯಾಯಾಲಯಕ್ಕೆ ಹೋದರು ಮತ್ತು ನೆಹರೂ ಅವರ ವಜಾಗೊಳಿಸುವ ಆದೇಶದ ವಿರುದ್ಧ ಸ್ವತಃ ಯಶಸ್ವಿಯಾಗಿ ವಾದಿಸಿದರು.
ನಾಯರ್ ಅವರನ್ನು ಪುನಃ ನೇಮಕ ಮಾಡಿಕೊಳ್ಳಬೇಕು ಮತ್ತು ಅದೇ ಸ್ಥಳದಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಕೋರ್ಟ್ ಆದೇಶಿಸುತ್ತದೆ. ನ್ಯಾಯಾಲಯದ ಆದೇಶ ನೆಹರೂ ಅವರ ಮುಖಕ್ಕೆ ಕಪ್ಪು ಮಸಿ ಬಳಿದಂತೆ ಭಾಸವಾಯಿತು. ಈ ಆದೇಶವನ್ನು ಕೇಳಿದ ಅಯೋಧ್ಯೆಯ ನಿವಾಸಿಗಳು ನಾಯರ್ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿದರು. ಆದರೆ ಸರ್ಕಾರಿ ನೌಕರನಾಗಿರುವ ತನಗೆ ಚುನಾವಣೆಗೆ ನಿಲ್ಲಲು ಸಾಧ್ಯವಿಲ್ಲ ಎಂದು ನಾಯರ್ ತಿಳಿಸಿದರು. ಆಗ ಅಯೋಧ್ಯೆಯ ನಿವಾಸಿಗಳು ನಾಯರ್ ಅವರ ಪತ್ನಿ ಸ್ಪರ್ಧಿಸಬೇಕೆಂದು ಬಯಸಿದರು. ಜನರ ಮನವಿಯನ್ನು ಸ್ವೀಕರಿಸಿದ ಶ್ರೀಮತಿ ಶಕುಂತಲಾ ನಾಯರ್ ಅವರು ಉತ್ತರ ಪ್ರದೇಶದ ಮೊದಲ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರು. ಆಗ ದೇಶದೆಲ್ಲೆಡೆ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರು. ಆದರೆ ಅಯೋಧ್ಯೆಯಲ್ಲಿ ಮಾತ್ರ ನಾಯರ್ ಪತ್ನಿ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸಾವಿರಾರು ಮತಗಳ ಅಂತರದಿಂದ ಸೋತರು.
ಶ್ರೀಮತಿ ಶಕುಂತಲಾ ನಾಯರ್ ಅವರು 1952 ರಲ್ಲಿ ಜನಸಂಘವನ್ನು ಸೇರಿದರು ಮತ್ತು ಸಂಘಟನೆಯನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದರು. ಆಘಾತಕ್ಕೊಳಗಾದ ನೆಹರು ಮತ್ತು ಕಾಂಗ್ರೆಸ್ ನಾಯರ್ ಮೇಲೆ ಒತ್ತಡ ಹೇರಲು ಆರಂಭಿಸಿದರು.ಆಗ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ವಕೀಲರಾಗಿ ಕೆಲಸ ಮಾಡಲು ಪ್ರಾರಂಭಿಸಿದರು.
1962 ರಲ್ಲಿ ಸಂಸತ್ತಿಗೆ ಚುನಾವಣೆ ಘೋಷಣೆಯಾದಾಗ, ಜನರು ನಾಯರ್ ಮತ್ತು ಅವರ ಪತ್ನಿಯನ್ನು ಸ್ಪರ್ಧಿಸಲು ಮನವೊಲಿಸುವಲ್ಲಿ ಯಶಸ್ವಿಯಾದರು. ಅವರು ನೆಹರೂ ಅವರ ಮುಂದೆ ಹೋಗಿ ನಿಂತು ಅಯೋಧ್ಯೆಯ ಬಗ್ಗೆ ಮಾತನಾಡಬೇಕೆಂದು ಬಯಸಿದ್ದರು. ಜನರು ಬಹ್ರೈಚ್ ಮತ್ತು ಕೈಸರ್‌ಗಂಜ್ ಎರಡೂ ಕ್ಷೇತ್ರಗಳನ್ನು ಗೆಲ್ಲಲು ನಾಯರ್ ದಂಪತಿಗೆ ಸಹಾಯ ಮಾಡಿದರು. ಅದೊಂದು ಐತಿಹಾಸಿಕ ಸಾಧನೆಯಾಗಿ ಪ್ರಸಿಧ್ಧಿಯಾಗಿದೆ. ಇನ್ನೂ ಆಶ್ಚರ್ಯಕರ ಸಂಗತಿ ಏನೆಂದರೆ, ಅವರ ಚಾಲಕ ಕೂಡ ಫೈಸಲಾಬಾದ್ ಕ್ಷೇತ್ರದಿಂದ ರಾಜ್ಯ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದದ್ದು(ನೀವು ನಂಬಲೇಬೇಕು).
ನಂತರ ಇಂದಿರಾ ಆಡಳಿತ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ದಂಪತಿಯನ್ನು ಬಂಧಿಸಿ ಜೈಲಿನಲ್ಲಿಟ್ಟರು. ಆದರೆ ಅವರ ಬಂಧನವು ಅಯೋಧ್ಯೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು ಮತ್ತು ಹೆದರಿದ ಸರ್ಕಾರ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿತು. ದಂಪತಿಗಳು ಅಯೋಧ್ಯೆಗೆ ಹಿಂದಿರುಗಿದರು ಮತ್ತು ತಮ್ಮ ಸಾರ್ವಜನಿಕ ಕೆಲಸವನ್ನು ಮುಂದುವರೆಸಿದರು. ಬಿಜೆಪಿಯು ಅಯೋಧ್ಯೆಯಿಂದ ಒಂದೆರಡು ಬಾರಿ ಹೊರತುಪಡಿಸಿ ವಿಧಾನಸಭೆ ಮತ್ತು ಸಂಸತ್ತಿನ ಚುನಾವಣೆಗಳಲ್ಲಿ ಯಾವಾಗಲೂ ಗೆಲುವು ಸಾಧಿಸುತ್ತಿದೆ.
ಸ್ವಾತಂತ್ರ್ಯದ ನಂತರ ಅಯೋಧ್ಯೆ ಪ್ರಕರಣವನ್ನು ಮೊದಲು ನಿಭಾಯಿಸಿದವರು ನಾಯರ್. ಅದನ್ನು ಸಂಪೂರ್ಣವಾಗಿ ಅವರೇ ನಿರ್ವಹಿಸುತ್ತಿದ್ದರು. ಮತ್ತು ಈಗಲೂ ಅವರು ಅಧಿಕಾರಿಯಾಗಿ ಹೊರಡಿಸಿದ ಆದೇಶಗಳನ್ನು ಬದಲಿಸಲು ಹಿಂದೂ ವಿರೋಧಿಗಳಿಗೆ ಸಾಧ್ಯವಾಗಿಲ್ಲ. ನಾಯರ್ ಹೊರಡಿಸಿದ ಆದೇಶದ ಆಧಾರದ ಮೇಲೆ ರಾಮಲಲ್ಲಾನ ಪೂಜೆಗಳು ಮತ್ತು ದರ್ಶನವು ಈಗಲೂ ಮುಂದುವರೆದಿದೆ.
1976 ರಲ್ಲಿ ಶ್ರೀ ನಾಯರ್ ಅವರು ತಮ್ಮ ಊರಿಗೆ ಮರಳಲು ಬಯಸಿದ್ದರು. ಆದರೆ ಜನರು ಅವರನ್ನು ಹೋಗಲು ಬಿಡಲಿಲ್ಲ. ಆದರೆ, ಕೊನೆಯ ದಿನಗಳಲ್ಲಿ ಹುಟ್ಟೂರಿನಲ್ಲೇ ಇರಬೇಕೆಂದು ಬಯಸಿ ನಾಯರ್ ಜನತೆಗೆ ವಿದಾಯ ಹೇಳಿದರು.
ನಾಯರ್ ಅವರು 7ನೇ ಸೆಪ್ಟೆಂಬರ್ 1977 ರಂದು ತಮ್ಮ ಸ್ವಗ್ರಾಮದಲ್ಲಿ ಶ್ರೀ ರಾಮಚಂದ್ರ ಮೂರ್ತಿಯ ಪಾದಕಮಲಗಳಿಗೆ ಶರಣಾದರು. ಅವರ ಸಾವಿನ ಸುದ್ದಿ ಕೇಳಿ ಅಯೋಧ್ಯೆಯ ನಿವಾಸಿಗಳು ಅಕ್ಷರಷಃ ಕಣ್ಣೀರು ಸುರಿಸಿದ್ದರು. ಅವರ ಚಿತಾಭಸ್ಮವನ್ನು ಸ್ವೀಕರಿಸಲು ಒಂದು ಗುಂಪು ಕೇರಳಕ್ಕೂ ತೆರಳಿತು. ಚಿತಾಭಸ್ಮವನ್ನು ಬಹಳ ಗೌರವದಿಂದ ಸ್ವೀಕರಿಸಲಾಯಿತು. ಅವರನ್ನು ಅಲಂಕೃತ ರಥದಲ್ಲಿ ಕರೆದುಕೊಂಡು ಹೋಗಿ ಅಯೋಧ್ಯೆಯ ಸಮೀಪವಿರುವ ಸರಯೂ ನದಿಯಲ್ಲಿ ಮುಳುಗಿಸಲಾಯಿತು. ಅಲ್ಲಿ ಆ ನದಿಯಲ್ಲಿ ಶ್ರೀರಾಮನು ಪ್ರತಿದಿನ ಸ್ನಾನ ಮಾಡಿ ಸೂರ್ಯನನ್ನು ಪೂಜಿಸುತ್ತಾನೆ ಎಂದು ಹೇಳುತ್ತಾರೆ.
ನಾಯರ್ ಅವರ ಪ್ರಯತ್ನದಿಂದಾಗಿಯೇ ನಾವು ಅಯೋಧ್ಯೆಯ ಶ್ರೀ ರಾಮ ಜನ್ಮ ಭೂಮಿಯಲ್ಲಿ ಪೂಜೆ ಮಾಡಲು ಸಾಧ್ಯವಾಗಿದೆ. ಅವರನ್ನುಅಯೋಧ್ಯೆಯ ಜನರು ದೈವಿಕ ವ್ಯಕ್ತಿ ಎಂದು ಪರಿಗಣಿಸುವುದರಲ್ಲಿ ಆಶ್ಚರ್ಯವಿಲ್ಲ.
ಕೆ.ಕೆ.ನಾಯರ್ ಇಲ್ಲದಿದ್ದರೆ ರಾಮನ ಜನ್ಮಸ್ಥಳ ಇಂದು ಭವ್ಯವಾದ ರಾಮಮಂದಿರವಾಗುತ್ತಿತ್ತೇ? ಇದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದಿದೆ!
ಇಂದಿನವರೆಗೂ ಶ್ರೀರಾಮ ಲಲ್ಲಾನನ್ನು ಪೂಜಿಸುವ ಹಿಂದೂಗಳ ಹಕ್ಕನ್ನು ಏಕಾಂಗಿಯಾಗಿ ಕಾಪಾಡಿದ ಶ್ರೀ ಕೆ.ಕೆ.ನಾಯರ್ ಅವರ ಕೀರ್ತಿಯೂ ಎಲ್ಲ ಕಡೆ ಮೊಳಗಲಿ.
ವಿಶ್ವ ಹಿಂದೂ ಪರಿಷತ್ತು ಅವರ ಹುಟ್ಟೂರಲ್ಲಿ ಭೂಮಿ ಖರೀದಿಸಿ ಅವರ ಸ್ಮಾರಕವನ್ನು ನಿರ್ಮಿಸಿದೆ. ಕೆ.ಕೆ ನಾಯರ್ ಅವರ ಹೆಸರಿನಲ್ಲಿ ಪ್ರಾರಂಭವಾದ ಟ್ರಸ್ಟ್ ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ತರಬೇತಿಯನ್ನು ನೀಡುತ್ತದೆ ಎಂಬುದನ್ನು ಇಲ್ಲಿ ಗಮನಿಸಬಹುದು.
ಕೆ.ಕೆ.ನಾಯರ್ ದಂಪತಿಗೆ ಭಾರತೀಯರು ಸದಾ ಋಣಿಯಾಗಿದ್ದು, ಅಯೋಧ್ಯೆಯಲ್ಲಿ ಶ್ರೀರಾಮನ ಭೂಮಿ ಸಿಗಲು ಕಾರಣಕರ್ತರಾದ ಕೆ.ಕೆ.ನಾಯರ್ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸೋಣ.
ಸಾವಿರ ವರ್ಷಗಳವರೆಗೆ ಗಟ್ಟಿ ಈ ಅಯೋಧ್ಯೆ ರಾಮ ಮಂದಿರ!
2024 ಜನವರಿ 22 ರಂದು ರಾಮಲಲ್ಲಾನ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದೆ. ರಾಮಮಂದಿರದ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಾದಿಯಲ್ಲಿದೆ. ಈ ದೇವಾಲಯವು ಕನಿಷ್ಠ 1000 ವರ್ಷಗಳಿಗೂ ಹೆಚ್ಚು ಕಾಲ ಹವಾಮಾನ ಬದಲಾವಣೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
ಅಯೋಧ್ಯೆಯ ದೇವಾಲಯದ ಸ್ಥಳದಲ್ಲಿ ಮಾಧ್ಯಮದವರೊಂದಿಗೆ ಈ ಬಗ್ಗೆ ಮಾತನಾಡಿದ ರಾಮಮಂದಿರದ ಪ್ರಾಜೆಕ್ಟ್ ಎಂಜಿನಿಯರ್ ಗಿರೀಶ್ ಸಾಹಸಬುಜಿನಿ ಅವರು, ರಾಮಮಂದಿರ ರಚನೆಯ ಸ್ಥಿತಿಸ್ಥಾಪಕತ್ವದ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ. ಆಯೋಧ್ಯ ರಾಮಮಂದಿರ 1000 ರಿಂದ 2500 ವರ್ಷಗಳವರೆಗೆ ಹಾನಿಯನ್ನು ತಡೆದುಕೊಳ್ಳುವಷ್ಟು ಪ್ರಬಲವಾಗಿದೆ ಎಂದು ಅವರು ಹೇಳಿದ್ದಾರೆ.
ಅಯೋಧ್ಯ ರಾಮಮಂದಿರದ ಸಂಪೂರ್ಣ ರಚನೆಯು ಉತ್ತರ ಮತ್ತು ದಕ್ಷಿಣ ಭಾರತದ ವಾಸ್ತುಶಿಲ್ಪದ ಸುಂದರ ಮಿಶ್ರಣವಾಗಿದೆ. “ದೇವಾಲಯದ ಮುಖ್ಯ ರಚನೆಯನ್ನು ಉತ್ತರ ಭಾರತದ ನಾಗರ ಶೈಲಿಯ ವಾಸ್ತುಶಿಲ್ಪವನ್ನು ಅನುಸರಿಸಿ ನಿರ್ಮಿಸಲಾಗುತ್ತಿದೆ. ಉಳಿದ ಸಣ್ಣ ದೇವಾಲಯಗಳು ಹೊರ ಗೋಡೆ (ಪಾರ್ಕೋಟಾ) ಅದರ ಹೋಲಿಕೆಯನ್ನು ಪ್ರತಿಬಿಂಬಿಸುತ್ತದೆ. ದ್ರಾವಿಡ ಶೈಲಿಯ ವಾಸ್ತುಶಿಲ್ಪವು ಉತ್ತರ ಮತ್ತು ದಕ್ಷಿಣದ ಎರಡೂ ಶೈಲಿಗಳನ್ನು ಸುಂದರವಾಗಿ ಸಂಯೋಜಿಸುತ್ತದೆ” ಎಂದು ಸಾಹಸಬುಜಿನಿ ಹೇಳಿದ್ದಾರೆ.
ಜೊತೆಗೆ “ದೇವಾಲಯದ ಸ್ತಂಭದಲ್ಲಿ ಬಳಸಲಾದ ಗ್ರಾನೈಟ್ ಅನ್ನು ಕರ್ನಾಟಕ ಮತ್ತು ತೆಲಂಗಾಣದಿಂದ ತರಲಾಗಿದೆ. ಕಲ್ಲುಗಳನ್ನು ರಾಜಸ್ಥಾನದಿಂದ ಮತ್ತು ನೆಲಹಾಸನ್ನು ಮಧ್ಯಪ್ರದೇಶ ಹಾಗೂ ರಾಜಸ್ಥಾನದಿಂದ ತರಲಾಗಿದೆ. ಇದಲ್ಲದೆ, ಹಗಲಿರುಳು ಕೆಲಸ ಮಾಡುವ ಕುಶಲಕರ್ಮಿಗಳು ದೇಶದ ಮೂಲೆ ಮೂಲೆಗಳಿಂದ ಬಂದಿದ್ದಾರೆ” ಎಂದು ಅವರು ವಿವರಿಸಿದ್ದಾರೆ.
ಒಡಿಶಾದ ಕಲಾವಿದರು ಮರಳುಗಲ್ಲುಗಳ ಮೇಲೆ ಪ್ರತಿಮಾಶಾಸ್ತ್ರವನ್ನು ಮಾಡುತ್ತಿದ್ದಾರೆ, ಆಂಧ್ರದ ಸಂಸ್ಥೆಯ ಉದ್ಯೋಗಿಗಳು ಮರಗೆಲಸವನ್ನು ಮಾಡುತ್ತಿದ್ದಾರೆ. ಮರದ ಕೆತ್ತನೆ ಮಾಡಲು ತಮಿಳುನಾಡಿನ ಕಲಾವಿದರನ್ನು ನೇಮಿಸಿಕೊಳ್ಳಲಾಗಿದೆ. ಹಿತ್ತಾಳೆ ಸಾಮಾನುಗಳನ್ನು ಮೊರಾದಾಬಾದ್‌ನಿಂದ ತರಲಾಗಿದ್ದು ಮತ್ತು ಮುಖ್ಯ ರಚನೆಯಲ್ಲಿ ಬಳಸಬೇಕಾದ ಚಿನ್ನ ಮತ್ತು ತೇಗದ ಮರವನ್ನು ಮಹಾರಾಷ್ಟ್ರದಿಂದ ಪಡೆಯಲಾಗಿದೆ. ದೇಶದ ಎಲ್ಲಾ ರಾಜ್ಯಗಳಿಂದ ಕಲಾವಿದರ ಶ್ರಮ ಆಯೋಧ್ಯಯ ರಾಮಮಂದಿರ ನಿರ್ಮಾಣದಲ್ಲಿದೆ. ಇವರೆಲ್ಲರ ಶ್ರಮದ ಫಲದಿಂದ ಮಂದಿರ ಸುಂದರವಾಗಿ ನಿರೀಕ್ಷೆಯಂತೆ ನಿರ್ಮಾಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಕಳೆದ 2020ರ ಆಗಸ್ಟ್ 5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಸ್ಥಾಪನೆ ಮಾಡಿದರು. ದೇವಸ್ಥಾನದ ನೆಲಮಹಡಿ, ಗರ್ಭಗುಡಿಯ ಸ್ಥಳ ಹಾಗೂ ರಾಮ ಲಲ್ಲಾ ವಿಗ್ರಹವನ್ನು ಇರಿಸುವ ಸ್ಥಳವು ಸದ್ಯ ಸಿದ್ಧವಾಗಿದೆ. ಅಯೋಧ್ಯೆಯ ರಾಮಜನ್ಮಭೂಮಿ ಆವರಣದಲ್ಲಿ ಸೂರ್ಯ, ಗಣೇಶ, ಶಿವ, ದುರ್ಗಾ, ವಿಷ್ಣು ಮತ್ತು ಬ್ರಹ್ಮ ದೇವರಿಗೆ ಸೇರಿದ ಆರು ದೇವಾಲಯಗಳನ್ನು ನಿರ್ಮಿಸಲಾಗಿದೆ. ಈ ಆರು ದೇವತೆಗಳ ದೇವಾಲಯಗಳನ್ನು ರಾಮಮಂದಿರದ ಹೊರವಲಯದಲ್ಲಿ ನಿರ್ಮಿಸಲಾಗಿದೆ. ರಾಮನ ಪೂಜಿಸುವುದರೊಂದಿಗೆ ಈ ದೇವತೆಗಳನ್ನು ಪೂಜಿಸುವುದೂ ಕೂಡ ಹಿಂದೂ ಧರ್ಮದಲ್ಲಿ ಬಹಳ ಮುಖ್ಯವಾಗಿದೆ. ಇನ್ನೂ ಅಯೋಧ್ಯ ರಾಮ ಮಂದಿರ ನಿರ್ಮಾಣದ ಸ್ಥಳದಲ್ಲಿ ಮಣ್ಣು ಅಸ್ಥಿರವಾಗಿರುವುದರಿಂದ ಗಟ್ಟಿ ಅಡಿಪಾಯವನ್ನು ಹಾಕಲಾಗಿದೆ. 400 ಅಡಿ ಮತ್ತು 300 ಅಡಿವರೆಗೂ 50 ಅಡಿ ಆಳದ ಗುಂಡಿಯನ್ನು ತೆಗೆದು 12 ಪದರಗಳಲ್ಲಿ ಕಟ್ಟಡ ಸಾಮಗ್ರಿ, ಸಣ್ಣ ಕಲ್ಲುಗಳು ಮತ್ತು ಬೂದಿಯಿಂದ ಸಂಕ್ಷೇಪಿಸಲಾದ ಸಿಮೆಂಟ್ ಅನ್ನು ತುಂಬಿಸಲಾಗಿದೆ.
ರಾಮ ಮಂತ್ರಾಕ್ಷತೆ:
ಹಿಂದೂ ಧರ್ಮದಲ್ಲಿ ಅಕ್ಕಿ ಅಥವಾ ಅಕ್ಷತೆಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ನಾವು ಯಾವುದೇ ದೇವರ ಸನ್ನಿಧಾನಕ್ಕೆ ಭೇಟಿ ನೀಡಿದರೂ ಅಲ್ಲಿ ಮಂತ್ರಾಕ್ಷತೆಯನ್ನು ಪ್ರಸಾದದ ರೂಪದಲ್ಲಿ ಹಾಗೂ ದೇವರ ಆಶೀರ್ವಾದದ ರೂಪದಲ್ಲಿ ನೀಡಲಾಗುತ್ತದೆ. ಎಲ್ಲಾ ಶುಭಕಾರ್ಯಗಳಿಗೂ ಅಕ್ಷತೆಯನ್ನು ಬಳಕೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಬಳಸುವ ಅಕ್ಷತೆಯಲ್ಲಿ ಲಕ್ಷಾಂತರ ಜನರ ಆಶೀರ್ವಾದ, ಪ್ರಾರ್ಥನೆ ಇರುತ್ತದೆ. ವೇದಗಳಲ್ಲಿ ಉಲ್ಲೇಖವಾಗುವ ಅಕ್ಷತೆಯನ್ನೇ ಇಲ್ಲೂ ಬಳಸಲಾಗಿದೆ. ಆದರೆ ರಾಮನ ಹೆಸರಿನೊಂದಿಗೆ ಅಕ್ಕಿಯನ್ನು ಪ್ರತಿ ಮನೆ ಮನೆಗೂ ತಲುಪಿಸುತ್ತಿರುವುದಕ್ಕೆ ರಾಮಮಂತ್ರಾಕ್ಷತೆ ಎಂದು ಕರೆಯಲಾಗುತ್ತದೆ.
ಅಯೋಧ್ಯೆ ರಾಮ ಮಂದಿರದಿಂದ ಆಗಮಿಸಿರುವ ರಾಮ ಮಂತ್ರಾಕ್ಷತೆ ಪ್ರತೀ ಹಿಂದೂಗಳ ಮನೆಗೆ ತಲುಪಿ, ರಾಮನಲ್ಲಿದ್ದಂತಹ 16 ಸಾತ್ವಿಕ ಗುಣಗಳು ಪ್ರತೀ ಹಿಂದೂವಿನಲ್ಲಿ ಬರುವಂತಾಗಲಿ ಅನ್ನೋ ಆಶಯವೂ ಇದೆ. ಜೊತೆಗೆ ರಾಮ ಮಂತ್ರಾಕ್ಷತೆಯು ಸುಖ, ನೆಮ್ಮದಿ ಹಾಗೂ ಅಭಿವೃದ್ಧಿಯ ಸಂಕೇತವೂ ಆಗಿದೆ. ಇದಕ್ಕೂ ಶುಭ ಕಾರ್ಯಕ್ರಮದಲ್ಲಿ ಬಳಸುವ ಅಕ್ಷತೆಗೂ ವ್ಯತ್ಯಾಸವಿದೆ.
ರಾಮ ಮಂದಿರ ಉದ್ಘಾಟನೆ 2024 ಪೂರ್ಣ ವೇಳಾಪಟ್ಟಿ ಹೀಗಿದೆ:
- 2024 ಜನವರಿ 15 – ಈ ದಿನದಂದೇ ಮಕರ ಸಂಕ್ರಾಂತಿಯು ಇರುವುದು. ಈ ದಿನ ಅಯೋಧ್ಯೆಯ ರಾಮ ಮಂದಿರದ ಗರ್ಭ ಗುಡಿಯಲ್ಲಿ ರಾಮಲಲ್ಲಾನ ವಿಗ್ರಹವನ್ನು ಅಂದರೆ ಶ್ರೀರಾಮನ ಬಾಲರೂಪದ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು.
- 2024 ಜನವರಿ 16 – ಇಂದಿನಿಂದ, ರಾಮಲಲ್ಲಾ ವಿಗ್ರಹಕ್ಕೆ ಸಂಬಂಧಿಸಿದಂತೆ ವಿವಿಧ ಆಚರಣೆಗಳು ಸಹ ಪ್ರಾರಂಭವಾಗುತ್ತವೆ.
- 2024 ಜನವರಿ 17 – ಈ ದಿನ ರಾಮಲಲ್ಲಾನ ಪ್ರತಿಮೆಯನ್ನು ನಗರ ಸಂಚಾರಕ್ಕಾಗಿ ಹೊರತೆಗೆಯಲಾಗುತ್ತದೆ.
- 2024 ಜನವರಿ 18 – ಈ ದಿನದಿಂದ ಜೀವನದ ಪವಿತ್ರೀಕರಣದ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಮಂಟಪ ಪ್ರವೇಶ ಪೂಜೆ, ವಾಸ್ತು ಪೂಜೆ, ವರುಣನ ಪೂಜೆ, ವಿಘ್ನಹರ್ತ ಗಣೇಶ ಪೂಜೆ ಹಾಗೂ ಮಾರ್ತಿಕ ಪೂಜೆ ನಡೆಯಲಿದೆ.
- 2024 ಜನವರಿ 19 – ರಾಮಮಂದಿರದಲ್ಲಿ ಯಾಗದ ಅಗ್ನಿಕುಂಡವನ್ನು ಸ್ಥಾಪಿಸಲಾಗುವುದು. ವಿಶೇಷ ವಿಧಾನದಿಂದ ಅಗ್ನಿ ಸ್ಪರ್ಷ ಮಾಡಲಾಗುವುದು.
- 2024 ಜನವರಿ 20 – ರಾಮ ಮಂದಿರದ ಗರ್ಭಗುಡಿಯನ್ನು 81 ಕಲಶದಿಂದ ಪವಿತ್ರಗೊಳಿಸಲಾಗುವುದು, ಕಲಶದಲ್ಲಿ ಬಳಸುವ ನೀರನ್ನು ವಿವಿಧ ನದಿಗಳಿಂದ ಸಂಗ್ರಹಿಸಲಾಗುವುದು. ವಾಸ್ತು ಶಾಂತಿ ಸಂಸ್ಕಾರ ಕೂಡ ಈ ದಿನ ನಡೆಯಲಿದೆ.
- 2024 ಜನವರಿ 21 – ಈ ದಿನ, ವಿಶೇಷ ಪೂಜೆ ಮತ್ತು ಯಾಗದ ಆಚರಣೆಯಲ್ಲಿ ಹವನದ ನಡುವೆ, ರಾಮಲಲ್ಲಾಗೆ 125 ಕಲಶಗಳ ನೀರಿನಿಂದ ದೈವಿಕ ಅಭಿಷೇಕವನ್ನು ಮಾಡಲಾಗುತ್ತದೆ.
- 2024 ಜನವರಿ 22 – ಈ ದಿನ ರಾಮನಿಗೆ ಮಹಾಮಸ್ತಕಾಭಿಷೇಕ ನಡೆಯುವುದು ಮತ್ತು ಮಧ್ಯಕಾಲದಲ್ಲಿ ಮೃಗಶಿರಾ ನಕ್ಷತ್ರದಲ್ಲಿ ರಾಮಲಲ್ಲಾ ಮಹಾಪೂಜೆಯೂ ನಡೆಯಲಿದೆ. ಈ ದಿನ ಮಧ್ಯಾಹ್ನ 12:29 ರಿಂದ 12:30 ರವರೆಗೆ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಕೇವಲ 84 ಸೆಕೆಂಡುಗಳ ಶುಭ ಮುಹೂರ್ತದಲ್ಲಿ ಈ ಶುಭ ಕಾರ್ಯ ನಡೆಯಲಿದೆ.
ಅಭಿಜಿನ್ ಮುಹೂರ್ತದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ! ಜೊತೆಯಲ್ಲೇ ಬ್ರಹ್ಮ ಕಲಶೋತ್ಸವ..
ಭಾರತ ದೇಶ ಮಾತ್ರವಲ್ಲ, ವಿಶ್ವದೆಲ್ಲೆಡೆಯ ಹಿಂದೂಗಳಿಗೆ ಜನವರಿ 22 ಅತ್ಯಂತ ಮಹತ್ವದ ದಿನ. ಶತಮಾನಗಳ ಕಾಲ ಹಿಂದೂ ಸಮುದಾಯ ಕಾದು ಕುಳಿತಿದ್ದ ಮಹತ್ವದ ಕಾರ್ಯಕ್ರಮವೊಂದು ಆ ದಿನ ನಡೆಯಲಿದೆ. ಅಯೋಧ್ಯೆಯ ಶ್ರೀರಾಮ ಮಂದಿರ ಇನ್ನೇನು ಮುಕ್ತಾಯ ಹಂತದಲ್ಲಿದೆ. ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ಮೂರ್ತಿ, ಅಂದರೆ ಬಾಲ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಜನವರಿ 22ರಂದು ಮುಹೂರ್ತ ನಿಗದಿ ಆಗಿದೆ. ಪ್ರಧಾನಿ ಮೋದಿ ಅವರು ರಾಮ ಮಂದಿರದಿಂದ 500 ಮೀಟರ್ ದೂರದಲ್ಲಿ ಇರುವ ತಾತ್ಕಾಲಿಕ ನೆಲೆಯಿಂದ ಬಾಲ ರಾಮನ ಮೂರ್ತಿಯನ್ನು ತಮ್ಮ ಕೈಗಳಲ್ಲಿ ಹೊತ್ತು ತಂದು ಕಾಲ್ನಡಿಗೆ ಮೂಲಕವೇ ಶ್ರೀರಾಮ ಮಂದಿರದ ಗರ್ಭ ಗೃಹ ತಲುಪಲಿದ್ದಾರೆ. ಅಭಿಜಿನ್ ಮುಹೂರ್ತದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಈ ಮೂಲಕ ಶ್ರೀರಾಮನ ಭವ್ಯ ಮಂದಿರವನ್ನ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
ಗರ್ಭ ಗೃಹದಲ್ಲಿ ಮೂರ್ತಿ ಪ್ರತಿಷ್ಠಾಪನೆ ಆದ ಬೆನ್ನಲ್ಲೇ ಬ್ರಹ್ಮ ಕಲಶೋತ್ಸವ ಕೂಡಾ ಶುರುವಾಗಲಿದೆ. ಜನವರಿ 22 ರಿಂದ ಮಾರ್ಚ್ 10ರವರೆಗೆ ಬರೋಬ್ಬರಿ 48 ದಿನಗಳ ಕಾಲ ಬ್ರಹ್ಮ ಕಲಶೋತ್ಸವ ನಡೆಯಲಿದೆ. ರಾಮ ಮಂದಿರ ಉದ್ಘಾಟನೆಯ ದಿನ ದೇಶದ ಎಲ್ಲ ಜನರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗದ ಕಾರಣ, ಉಳಿದ 48 ದಿನಗಳ ಮಂಡಲೋತ್ಸವದಲ್ಲಿ ಎಲ್ಲರೂ ಭಾಗವಹಿಸಲಿ ಅನ್ನೋದು ಈ ಕಾರ್ಯಕ್ರಮದ ಆಶಯ.
ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಜನವರಿ 22 ರಂದು ರಾಮ ಮಂದಿರದ ಗರ್ಭ ಗೃಹದಲ್ಲಿ ಪ್ರಧಾನಿ ಮೋದಿ ಅವರ ಸಾರಥ್ಯದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಅಂದಿನಿಂದಲೇ ಭಕ್ತರ ದರ್ಶನಕ್ಕೆ ರಾಮ ಮಂದಿರ ತೆರೆಯಲಿದೆ. ಇದರ ಜೊತೆಯಲ್ಲೇ ಬರೋಬ್ಬರಿ 48 ದಿನಗಳ ಕಾಲ ಬ್ರಹ್ಮಕಲಶೋತ್ಸವ ಕೂಡಾ ನಡೆಯಲಿದೆ. ಇದೇ ಹೊತ್ತಲ್ಲಿ ಭಾರತ ದೇಶ ಮಾತ್ರವಲ್ಲ, ವಿಶ್ವಾದ್ಯಂತ ಹಿಂದೂ ಧರ್ಮೀಯರು ಮನೆ ಮನೆಗಳಲ್ಲಿ ದೀಪ ಬೆಳಗಿ ರಾಮ ನಾಮ ಸ್ಮರಣೆ ಮಾಡಲಿದ್ದಾರೆ. ಇನ್ನು ಉದ್ಘಾಟನೆಗೆ ಸಜ್ಜಾಗಿರುವ ಅಯೋಧ್ಯಾ ಶ್ರೀರಾಮ ಮಂದಿರ ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಜೊತೆಯಲ್ಲೇ ಇಲ್ಲಿನ ಪೂಜೆ, ಪುನಸ್ಕಾರಗಳೂ ವಿಶಿಷ್ಟವಾಗಿ ನಡೆಯಲಿದೆ. ಆದರೆ, ರಾಮ ಮಂದಿರದಲ್ಲಿ ಭಕ್ತರಿಗೆ ಹರಕೆ ಸೇವೆಗಳೇ ಇರೋದಿಲ್ಲವಂತೆ!
ಅಯೋಧ್ಯೆ ರಾಮ ಮಂದಿರದ ವಿಶೇಷತೆಗಳು:
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಮಾರಂಭದ ಮೊದಲು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇವಾಲಯದ ಪ್ರಮುಖ ವೈಶಿಷ್ಟ್ಯಗಳನ್ನು ಹಂಚಿಕೊಂಡಿದೆ.
- ಮಂದಿರವು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿದೆ. 380 ಅಡಿ ಉದ್ದ (ಪೂರ್ವ-ಪಶ್ಚಿಮ), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ. ನಾಗರ ವಾಸ್ತುಶಿಲ್ಪವು ಉತ್ತರ ಭಾರತದಲ್ಲಿ ಹುಟ್ಟಿಕೊಂಡ ದೇವಾಲಯದ ವಾಸ್ತುಶಿಲ್ಪದ ಶೈಲಿಯಾಗಿದೆ.
- ದೇವಾಲಯಗಳು ಶಿಖರಗಳೆಂದು ಕರೆಯಲ್ಪಡುವ ಎತ್ತರದ ಪಿರಮಿಡ್ ಗೋಪುರಗಳನ್ನು ಹೊಂದಿದ್ದು, ಮೇಲ್ಭಾಗದಲ್ಲಿ ಕಲಶವಿದೆ. ದೇವಾಲಯಗಳ ಕಂಬಗಳನ್ನು ಸಂಕೀರ್ಣವಾದ ವಿನ್ಯಾಸಗಳಿಂದ ಕೆತ್ತಲಾಗಿದೆ. ಗೋಡೆಗಳನ್ನು ಶಿಲ್ಪಗಳು ಮತ್ತು ಉಬ್ಬುಶಿಲ್ಪಗಳಿಂದ ಅಲಂಕರಿಸಲಾಗಿದೆ.
- ಶ್ರೀ ರಾಮ ಜನ್ಮಭೂಮಿ ತೀರ್ಥದ ಪ್ರಕಾರ, ರಾಮಮಂದಿರವು ಮೂರು ಅಂತಸ್ತಿನದ್ದಾಗಿದ್ದು, ಪ್ರತಿ ಮಹಡಿಯು 20 ಅಡಿ ಎತ್ತರವಿದೆ. ಇದು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ.
- ಗರ್ಭಗೃಹವು ದೇವಾಲಯದ ಒಳಗಿನ ಗರ್ಭಗೃಹವಾಗಿದ್ದು, ಅಲ್ಲಿ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ಮುಖ್ಯ ಗರ್ಭಗುಡಿಯಲ್ಲಿ, ಭಗವಾನ್ ಶ್ರೀರಾಮನ ಬಾಲ್ಯದ ರೂಪವಿದೆ (ಶ್ರೀರಾಮ ಲಲ್ಲಾನ ವಿಗ್ರಹ) ಮತ್ತು ಮೊದಲ ಮಹಡಿಯಲ್ಲಿ ಶ್ರೀರಾಮ ದರ್ಬಾರ್ ಇರುತ್ತದೆ.
- ದೇವಾಲಯವು ಐದು ಮಂಟಪಗಳನ್ನು (ಸಭಾಂಗಣ) ಒಳಗೊಂಡಿದೆ ಅವುಗಳೆಂದರೆ ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನೆ ಮತ್ತು ಕೀರ್ತನ ಮಂಟಪಗಳು. ದೇವತೆಗಳು, ದೇವರುಗಳು ಮತ್ತು ದೇವತೆಗಳ ಪ್ರತಿಮೆಗಳು ಕಂಬಗಳು ಮತ್ತು ಗೋಡೆಗಳನ್ನು ಅಲಂಕರಿಸುತ್ತವೆ.
- ಮಂದಿರದ ಪ್ರವೇಶವು ಪೂರ್ವದಿಂದ, ಸಿಂಗ್ ದ್ವಾರದ ಮೂಲಕ 32 ಮೆಟ್ಟಿಲುಗಳನ್ನು ಏರುತ್ತದೆ, ಜೊತೆಗೆ ಅಂಗವಿಕಲರು ಮತ್ತು ವಯಸ್ಸಾದವರ ಅನುಕೂಲಕ್ಕಾಗಿ ಇಳಿಜಾರು ಮತ್ತು ಲಿಫ್ಟ್‌ಗಳನ್ನು ಒದಗಿಸಲಾಗಿದೆ.
- ಪಾರ್ಕೋಟಾ (ಆಯತಾಕಾರದ ಸಂಯುಕ್ತ ಗೋಡೆ) 732 ಮೀಟರ್ ಉದ್ದ ಮತ್ತು 14 ಅಡಿ ಅಗಲ, ಮಂದಿರವನ್ನು ಸುತ್ತುವರೆದಿದೆ.
- ಆವರಣದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಂದಿರಗಳಿವೆ — ಸೂರ್ಯ ದೇವ, ದೇವಿ ಭಗವತಿ, ಗಣೇಶ್ ಭಗವಾನ್ ಮತ್ತು ಭಗವಾನ್ ಶಿವನಿಗೆ ಸಮರ್ಪಿತವಾಗಿದೆ. ಉತ್ತರದಲ್ಲಿ ಅನ್ನಪೂರ್ಣ ಮಂದಿರವಿದೆ ಮತ್ತು ದಕ್ಷಿಣದಲ್ಲಿ ತೋಳಿನಲ್ಲಿ ಹನುಮಾನ್ ಮಂದಿರವಿದೆ.
- ಮಂದಿರದ ಬಳಿ ಒಂದು ಐತಿಹಾಸಿಕ ಬಾವಿ (ಸೀತಾ ಕೂಪ್) ಇದೆ, ಇದು ಪ್ರಾಚೀನ ಯುಗದ ಹಿಂದಿನದು.
- ಶ್ರೀ ರಾಮ ಜನ್ಮಭೂಮಿ ಮಂದಿರದ ಸಂಕೀರ್ಣದಲ್ಲಿ, ಮಹರ್ಷಿ ವಾಲ್ಮೀಕಿ, ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ನಿಶಾದ್ ರಾಜ್, ಮಾತಾ ಶಬರಿ ಮತ್ತು ದೇವಿ ಅಹಲ್ಯಾಳ ಪೂಜ್ಯ ಪತ್ನಿಗೆ ಸಮರ್ಪಿತವಾದ ಮಂದಿರಗಳಿವೆ.
- ಸಂಕೀರ್ಣದ ನೈಋತ್ಯ ಭಾಗದಲ್ಲಿ, ಕುಬೇರ್ ತಿಲಾದಲ್ಲಿ, ಭಗವಾನ್ ಶಿವನ ಪುರಾತನ ಮಂದಿರವನ್ನು ಜಟಾಯು ಸ್ಥಾಪನೆಯೊಂದಿಗೆ ಪುನಃಸ್ಥಾಪಿಸಲಾಗಿದೆ. ಮಂದಿರದಲ್ಲಿ ಎಲ್ಲಿಯೂ ಕಬ್ಬಿಣವನ್ನು ಬಳಸಿರುವುದಿಲ್ಲ. ನೆಲದ ತೇವಾಂಶದಿಂದ ರಕ್ಷಣೆಗಾಗಿ ಗ್ರಾನೈಟ್ ಬಳಸಿ 21 ಅಡಿ ಎತ್ತರದ ಸ್ತಂಭವನ್ನು ನಿರ್ಮಿಸಲಾಗಿದೆ.
- ಮಂದಿರದ ಅಡಿಪಾಯವನ್ನು 14-ಮೀಟರ್ ದಪ್ಪದ ರೋಲರ್-ಕಾಂಪ್ಯಾಕ್ಟ್ ಕಾಂಕ್ರೀಟ್ (RCC) ಪದರದಿಂದ ನಿರ್ಮಿಸಲಾಗಿದೆ, ಇದು ಕೃತಕ ಬಂಡೆಯ ನೋಟವನ್ನು ನೀಡುತ್ತದೆ.
- ಮಂದಿರ ಸಂಕೀರ್ಣವು ಒಳಚರಂಡಿ ಸಂಸ್ಕರಣಾ ಘಟಕ, ನೀರು ಸಂಸ್ಕರಣಾ ಘಟಕ, ಅಗ್ನಿ ಸುರಕ್ಷತೆಗಾಗಿ ನೀರು ಸರಬರಾಜು ಮತ್ತು ಸ್ವತಂತ್ರ ವಿದ್ಯುತ್ ಕೇಂದ್ರವನ್ನು ಹೊಂದಿದೆ.
- ಇದರ ಹೊರತಾಗಿ, 25,000 ಜನರ ಸಾಮರ್ಥ್ಯದ ಪಿಲ್ಗ್ರಿಮ್ಸ್ ಫೆಸಿಲಿಟಿ ಸೆಂಟರ್ (PFC) ನ್ನು ನಿರ್ಮಿಸಲಾಗುತ್ತಿದೆ, ಇದು ಯಾತ್ರಾರ್ಥಿಗಳಿಗೆ ವೈದ್ಯಕೀಯ ಸೌಲಭ್ಯಗಳು ಮತ್ತು ಲಾಕರ್ ಸೌಲಭ್ಯವನ್ನು ಒದಗಿಸುತ್ತದೆ. ಸಂಕೀರ್ಣವು ಸ್ನಾನದ ಪ್ರದೇಶ, ವಾಶ್‌ರೂಮ್‌ಗಳು, ವಾಶ್‌ಬಾಸಿನ್, ತೆರೆದ ಟ್ಯಾಪ್‌ಗಳು ಇತ್ಯಾದಿಗಳೊಂದಿಗೆ ಪ್ರತ್ಯೇಕ ಬ್ಲಾಕ್ ಅನ್ನು ಸಹ ಹೊಂದಿರುತ್ತದೆ.
- ಮಂದಿರವನ್ನು ಸಂಪೂರ್ಣವಾಗಿ ಭಾರತದ ಸಾಂಪ್ರದಾಯಿಕ ಮತ್ತು ಸ್ಥಳೀಯ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗುತ್ತಿದೆ. ಪರಿಸರ-ಜಲ ಸಂರಕ್ಷಣೆಗೆ ನಿರ್ದಿಷ್ಟ ಒತ್ತು ನೀಡಿ 70 ಎಕರೆ ಪ್ರದೇಶದಲ್ಲಿ 70% ರಷ್ಟು ಹಸಿರು ಬಿಡಲಾಗಿದೆ.
Shri Ram Janmabhoomi Teerth Kshetra
Main Temple
- Total Area:2.7 Acres
- Total Built-up Area:57,400 Sq. ft.
- Total length of the temple:360 feet
- Total width of the temple:235 feet
- The total height of the temple including the peak:161 feet
- Total number of floors:3
- Height of each floor:20 feet
- Number of columns in the ground floor of the temple:160
- Number of columns in the first floor of the temple:132
- Number of columns in the second floor of the temple:74
- Number of pedks and pavilions in the temple:5
- Number of Gates in the temple:12
Temple Darshan Timing
7.00 AM to 11.30 AM – 02:00 PM to 07:00 PM
Aarti timings
Jagaran / Shringar Aarti : 06:30 AM – One Day prior Advance Booking is possible depending upon the availability
Sandhya Aarti : 07:30 PM – Same day booking is possible subject to availability
Note: For Aarti Passes, please reach the Camp Office at Shri Ram Janmabhoomi 30 minutes before the Aarti Time with a valid Government ID Proofe
ಜೈ ಶ್ರೀರಾಮ್……..! ಜೈ ಹಿಂದ್….!!