ಪ್ರೀತಿ ವಿಶ್ವಾಸಕ್ಕೆ ಭಾಷೆ ಅಡ್ಡಬರಲು ಸಾಧ್ಯವಿಲ್ಲ- ಶಾಸಕ ಎ.ಎಸ್ ಪೊನ್ನಣ್ಣ
ನಾಪೋಕ್ಲು: ಸಮಾಜದಲ್ಲಿ ಎಲ್ಲರೂ ಸೌಹಾರ್ದತೆಯಿಂದ ಮಾನವೀಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಪ್ರೀತಿ ವಿಶ್ವಾಸಕ್ಕೆ ಭಾಷೆ ಅಡ್ಡಬರಲು ಸಾಧ್ಯವಿಲ್ಲ ಎಂದು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಹೇಳಿದರು.
ನಾಪೋಕ್ಲು ಸಮೀಪದ ಕಕ್ಕಬ್ಬೆ ಕುಂಜಿಲ ಗ್ರಾಮದ ಪೈನರಿ ಆವರಣದಲ್ಲಿ ಆಯೋಜಿಸಲಾದ ಪೈನರಿ ಜುಮಾ ಮಸೀದಿಯ ಪುನರ್ ನಿರ್ಮಾಣದ ಶಂಕುಸ್ಥಾಪನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಮಾಜದಲ್ಲಿ ನಾವು ಯಾವುದೇ ಭಾಷೆಯಲ್ಲಿ ಮಾತನಾಡಿದರು ಪ್ರೀತಿ,ವಿಶ್ವಾಸ,ಬಾಂದವ್ಯದಿಂದ ಸೌಹಾರ್ದತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ. ನಮ್ಮ ಸಂವಿಧಾನ ಎಲ್ಲರಿಗೂ ಕೂಡ ಅವರವರ ಧರ್ಮದ ಆಚರಣೆಗಳನ್ನು ಆಚರಿಸಲು ಮುಕ್ತ ಅವಕಾಶ ಕಲ್ಪಿಸಿದೆ. ದೇಶದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಮತ್ತೊಬ್ಬರ ಪದ್ಧತಿ, ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಂಡು ನಮ್ಮ ಮಕ್ಕಳಿಗೂ ನಾವು ಪ್ರೇರಣೆಯಾಗಬೇಕು. ಆದರೆ ಮಾತ್ರ ವಿವಿಧತೆಯಲ್ಲಿ ಏಕತೆ ಎಂಬ ನಮ್ಮ ಘೋಷಣೆ ಅಸ್ತಿತ್ವಕ್ಕೆ ಬರಲು ಸಾಧ್ಯ ಎಂದ ಅವರು ನಮ್ಮ ಜಿಲ್ಲೆಯಲ್ಲಿ ನಿರ್ಭೀತಿಯಿಂದ ಬದುಕುವ ಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಇದೇ ವಾತಾವರಣ ಮುಂದುವರಿಯಲು ನಾವೆಲ್ಲರೂ ಶಾಂತಿ ಸೌಹಾರ್ದತೆ, ಸಾಮರಸ್ಯದಿಂದ ಬದುಕಲು ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಎ. ಎಸ್.ಹುಸೈನ್ ಈ ದೇಶದ ಮುಸಲ್ಮಾನರು 629 ನೇ ಇಸವಿಯಲ್ಲಿ ಕೇರಳದ ತ್ರಿಶೂರ್ ಜಿಲ್ಲೆಯ ಚೇರ್ಮಾನ್ ಎಂಬ ಗ್ರಾಮದಲ್ಲಿ ಮೊದಲ ಬಾರಿಗೆ ನಿರ್ಮಿಸಲಾದ ಮಸೀದಿಯ ಶಂಕುಸ್ಥಾಪನೆ ಮಾಡಿದ ಮಾಲಿಕ್ ದಿನಾರ್ (ರ ಅ )ಅವರ ಅನುಯಾಯಿ ಗಳಾಗಿದ್ದಾರೆ. ಮುಸಲ್ಮಾನರು ಖಿಲ್ಜಿ,ಮೊಘಲರ ಅನುಯಾಹಿಗಳಲ್ಲ.ಕೆಲವರು ಅಪಪ್ರಚಾರದ ಮೂಲಕ ಇಸ್ಲಾಂ ಧರ್ಮ ಕತ್ತಿಯಿಂದ ಪ್ರಚೋದನೆಮಾಡಿ ದೇಶಕ್ಕೆ ಬಂದ ಧರ್ಮ ಎಂದು ಬಿಂಬಿಸಲಾಗುತ್ತಿದೆ. ಇಸ್ಲಾಂ ಧರ್ಮ ಬಂದ ಹಾದಿಗೆ ಇತಿಹಾಸವಿದೆ ಎಂದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ ಎಲ್ಲಾ ಧರ್ಮದಲ್ಲೂ ದೇವರು ಒಬ್ಬನೇ. ನಾವ್ಯಾರು ದೇವರನ್ನು ಕಂಡಿಲ್ಲ. ನಿತ್ಯ ಜೀವನದಲ್ಲಿ ನಿರ್ವಹಿಸುವ ಕೆಲಸಗಳಲ್ಲಿರುವ ವಿಶ್ವಾಸ,ಆತ್ಮಸಾಕ್ಷಿಯೇ ದೇವರು. ಇದನ್ನು ಉಳಿಸಲು ಎಲ್ಲಾ ಧರ್ಮದವರು ನಿರ್ಮಿಸುವ ಒಂದು ಪವಿತ್ರವಾದ ಸ್ಥಳವೇ ಪ್ರಾರ್ಥನ ಮಂದಿರವಾಗಿದೆ. ಕಾಲಾನುಕಾಲದಿಂದ ಬಂದಿರುವ ನಂಬಿಕೆಯ ಉಳಿವಿಗೆ ಎಲ್ಲಾ ಧರ್ಮದಲ್ಲೂ ಆಧುನಿಕವಾಗಿ ಪ್ರಾರ್ಥನಾ ಮಂದಿರಗಳು ನಿರ್ಮಾಣವಾಗುತ್ತಿದೆ. ಅದರಂತೆ ಇಲ್ಲಿನ ಗ್ರಾಮಸ್ಥರಿಗೆ ಅನುಗುಣವಾಗಿ ಉತ್ತಮ ಪ್ರಾರ್ಥನಾ ಮಂದಿರ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ನಾಪೋಕ್ಲು,ಯಾಕೂಬ್ ಸೋಮವಾರಪೇಟೆ , ಉದ್ಯಮಿ ಇಮ್ರಾನ್ ಸಿದ್ದೀಕಿ, ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಲತೀಫ್ ಸುಂಟಿಕೊಪ್ಪ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಪೈನರಿ ಮಸೀದಿಯ ಖತೀಬರಾದ ನಿಝಾರ್ ಅಹ್ಸನಿ ಕಕ್ಕಡಿಪುರಂ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದಕ್ಕೂ ಮೊದಲು ಸಯ್ಯದ್ ಸ್ವಾದಿಕಲಿ ಶಿಯಾಬ್ ತಂಙಳ್ ಪಾಣಕ್ಕಾಡ್ ಹಾಗೂ ವಳ ಪಟ್ಟಣಂ ಖಾಝಿಗಳಾದ ಸಯ್ಯದ್ ಜಮಲುಲೈಲ್ಲಿ ಸಖಾಫಿ ಅಲ್ ಬುಖಾರಿ ಯವರು ಪೈನರಿ ಮಸೀದಿಪುನರ್ ನಿರ್ಮಾಣದ ಶಂಕುಸ್ಥಾಪನೆಗೆ ನೇತೃತ್ವ ವಹಿಸಿ ಮಾತನಾಡಿದರು.
ಈ ಸಂದರ್ಭ ಪೈನರಿ ಮಸೀದಿಯ ಅಧ್ಯಕ್ಷ ಸೌಕತ್ ಆಲಿ, ಉಪಾಧ್ಯಕ್ಷ ಇಬ್ರಾಹಿಂ,ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷರಾದ ಮೊಯ್ದು ಬೆಟ್ಟಗೇರಿ, ವಿರಾಜಪೇಟೆ ಪುರಸಭಾ ಸದಸ್ಯ ಮೊಹಮ್ಮದ್ ರಾಫಿ, ಹಮೀದ್ ಮುಸ್ಲಿಯಾರ್ ಸುಂಟಿಕೊಪ್ಪ, ಕೊಳಕೇರಿ ಮಸೀದಿ ಅಧ್ಯಕ್ಷ ಅಬ್ದುಲ್ ನಾಸಿರ್,ಗ್ರಾಮ ಪಂಚಾಯತಿ ಸದಸ್ಯರಾದ ಬಶೀರ್ ಪೊಯಕ್ಕರೆ,ಕುಂಡಂಡ ರಝಾಕ್, ಮಾಜಿ ಸದಸ್ಯ ಬಾಚಾಮಂಡ ಲವ ಚಿಣ್ಣಪ್ಪ,ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಪನ್ ಅಯ್ಯಪ್ಪ,ಅಬ್ದುಲ್ಲ ಸಖಾಫಿ, ಕೊಳಕೇರಿ ಮಸೀದಿ ಖತೀಬ್ ಶಹಜಹಾನ್ ಸಖಾಫಿ,ಎಡಪಾಲ ಮಸೀದಿ ಅಧ್ಯಕ್ಷ ಶಾಫಿ,ಉಮ್ಮರ್ ಫೈಝಿ, ಬಷೀರ್ ಹಾಜಿ ಎಡಪಾಲ,ರಫೀಕ್ ನಾಪೋಕ್ಲು, ಗುತ್ತಿಗೆದಾರ ತಾಜುದ್ದೀನ್ ಮಟ್ಟನ್ನೂರ್ ಹಾಗೂ ಮಸೀದಿಯ ಆಡಳಿತ ಮಂಡಳಿ ಪದಾಧಿಕಾರಿಗಳು,ಜಮಾಅತ್ ನ ಎಲ್ಲಾ ಸದಸ್ಯರು, ದರ್ಸ್ ವಿದ್ಯಾರ್ಥಿಗಳು ಮತಿತ್ತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಇಬ್ರಾಹಿಂ ಬಾದುಷಾ ನಿರೂಪಿಸಿದರು, ಮಸೀದಿಯ ಮಾಜಿ ಅಧ್ಯಕ್ಷ ಹಾಗೂ ಮಸೀದಿ ಕಟ್ಟಡ ಸಮಿತಿ ಸದಸ್ಯ ಮೊಹಮ್ಮದ್ ಹಾಜಿ ಕುಂಜಿಲ ಸ್ವಾಗತಿಸಿ, ಸಲಹಾ ಸಮಿತಿಯ ಸದಸ್ಯ ಅಬು ವಯಕೋಲ್ ವಂದಿಸಿದರು.