ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯೆಡೆಗೆ ನನ್ನ ಪ್ರಯತ್ನ; ಮರುವಂಡ ಮಾದಪ್ಪ ಬೆಳ್ಳಿಯಪ್ಪ
ಮರುವಂಡ ಮಾದಪ್ಪ ಬೆಳ್ಯಪ್ಪ, ಉಪಾಧ್ಯಕ್ಷರು: ಗ್ರಾ.ಪಂ. ಕಿರಗಂದೂರು
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಕಿರಗಂದೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಮರುವಂಡ ಮಾದಪ್ಪ ಬೆಳ್ಯಪ್ಪ ಅವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮ ಕೊಡಗು-ನಮ್ಮಗ್ರಾಮ” ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು.
“ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ಮರುವಂಡ ಮಾದಪ್ಪ ಬೆಳ್ಯಪ್ಪನವರು ನನ್ನ ಅಜ್ಜ ಮರುವಂಡ ಬಸಪ್ಪ, ಅಂದಿನ ದಿನಗಳಲ್ಲಿ ಗ್ರಾಮದ ಮುಖ್ಯಸ್ಥರಾಗಿದ್ದರು. ನನ್ನ ತಂದೆ ಮರುವಂಡ ಮಾದಪ್ಪ ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ಹಾಗಾಗಿ ರಾಜಕೀಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನನಗೆ ಕುಟುಂಬದಿಂದಲ್ಲೇ ಪ್ರೇರಣೆ ಸಿಕ್ಕಿತ್ತು.
ನಾನು ಮೈಸೂರಿನಲ್ಲಿ BBM ವ್ಯಾಸಾಂಗ ಮಾಡುತ್ತಿರುವಾಗ ತಂದೆಯವರಿಗೆ ಅನಾರೋಗ್ಯ ನಿಮಿತ್ತ ಅನಿವಾರ್ಯವಾಗಿ ನಾನು ವಾಪಾಸು ಹುಟ್ಟೂರಿಗೆ ಬಂದು ಕೃಷಿಯಲ್ಲಿ ತೊಡಗಿಸಿಕೊಂಡೆ. ನಂತರ ಸಾಮಾಜಿಕ ಕಾರ್ಯಗಳಲ್ಲಿ ನಾನು ಸಕ್ರಿಯವಾಗಿ ಭಾಗವಹಿಸುತ್ತಾ, ಜನರ ಸುಖ ದುಃಖಗಳಲ್ಲಿ ಸಹ ಭಾಗಿಯಾಗುತ್ತಿದ್ದೆ. ಇದನ್ನು ಗಮನಿಸಿದ ಗ್ರಾಮಸ್ಥರ ಒತ್ತಾಸೆಯ ಮೇರೆಗೆ ಕಿರಗಂದೂರಿನ ಬಿಳಿಗೇರಿ ಗ್ರಾಮದಿಂದ 1994 ರಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಪರಾಭವಗೊಂಡೆ. ನಂತರ 2010-15 ಸಾಲಿನಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಅಧ್ಯಕ್ಷನಾಗಿ ಆಯ್ಕೆಯಾದೆ. ಅದಾದ ಬಳಿಕ 2020ರ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ಸದಸ್ಯನಾಗಿ ಆಯ್ಕೆಯಾದೆ. ನಂತರ 2 ನೇ ಅವಧಿಗೆ ಉಪಾಧ್ಯಕ್ಷನಾಗಿ ಆಯ್ಕೆಗೊಂಡು ಕಾರ್ಯನಿರ್ವಹಿಸುತ್ತಿದ್ದೇನೆ.
ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಜಲಜೀವನ್ ಮಿಷನಲ್ಲಿ 70 ಪ್ರತಿಶತ ಕಾರ್ಯ ಪೂರ್ಣಗೊಂಡಿದ್ದು, ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಆಗಿದೆ. 2 ಸಂಖ್ಯೆಯಷ್ಟು ಬೋರ್‌ವೆಲ್ ಕಾಮಗಾರಿ ಬಾಕಿ ಇದೆ. ಗ್ರಾಮೀಣ ವಿದ್ಯುತೀಕರಣ ಯೋಜನೆಯಿಂದ ಪ್ರತಿ ಮನೆ ಮನೆಗೆ ವಿದ್ಯುತ್ ಸಂಪರ್ಕ ಆಗಿದೆ. ಕಿರಗಂದೂರು ಗ್ರಾ.ಪಂ ವ್ಯಾಪ್ತಿಯ ರಸ್ತೆ ಅಭಿವೃದ್ದಿಗೆ ನಿಕಟಪೂರ್ವ ಶಾಸಕರಾದ ರಂಜನ್ ಅವರು 6 ರಿಂದ 7 ಕೋಟಿ ವೆಚ್ಚದ ಅನುದಾನ ಬಿಡುಗಡೆ ಮಾಡಿದ್ದರು, ಹಾಗಾಗಿ 1.5 ಕಿ.ಮೀ ದೂರದ ರಸ್ತೆ ಕಾಮಗಾರಿ ಮಾತ್ರ ಬಾಕಿ ಇದ್ದು ಉಳಿದೆಲ್ಲ ರಸ್ತೆಗಳು ಉತ್ತಮವಾಗಿ ಪೂರ್ಣಗೊಂಡಿದೆ.
ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಮನೆ ಮನೆಗೆ ಶೌಚಾಲಯಗಳು ನಿರ್ಮಾಣಗೊಂಡು 100% ಪೂರ್ಣಗೊಂಡಿದೆ. ಕಸ ವಿಲೇವಾರಿಗೆ 14 ಲಕ್ಷ ವೆಚ್ಚದ ಕಸ ವಿಲೇವಾರಿ ಘಟಕವಿದ್ದು, 4.5 ಲಕ್ಷ ವೆಚ್ಚದ ಒಂದು ವಾಹನದಿಂದ ಮನೆ ಮನೆಗಳಿಂದ ಕಸ ಸಂಗ್ರಹಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ನಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿನ ಕಾಫಿ ತೋಟದಲ್ಲಿ ಕಾರ್ಮಿಕರಿಗೆ ಹಾಗೂ ಗ್ರಾಮದ ವಸತಿರಹಿತ ಕಾರ್ಮಿಕರ 62 ಕುಟುಂಬಗಳಿದ್ದು, ಅವರಿಗೆ ವಸತಿ ನಿರ್ಮಾಣ ಮಾಡಲು ತಾಕೇರಿ ಗ್ರಾಮದಲ್ಲಿ 10 ಏಕರೆ ನಿವೇಶನವನ್ನು ಗುರುತಿಸಲಾಗಿದ್ದು, ನಿವೇಶನ ಮಂಜೂರು ಮಾಡಲು ಜಿಲ್ಲಾಧಿಕಾರಿಗಳ ಬಳಿ ಕಡತ ತಲುಪಿದೆ. ಅದನ್ನು ಆದಷ್ಟು ಶೀಘ್ರದಲ್ಲೇ ಕಾರ್ಯಗತ ರೂಪಕ್ಕೆ ತರಲು ಪ್ರಯತ್ನಿಸಲಾಗುತ್ತಿದ್ದೆ.
ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ವರ್ಲ್ಡ್ ಬ್ಯಾಂಕ್ ಅನುದಾನದಲ್ಲಿ 21 ಹಾಸಿಗೆ ವ್ಯವಸ್ಥೆಯಿರುವ ಉತ್ತಮ ಗುಣಮಟ್ಟದ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರವು ಕಾರ್ಯಾಚರಿಸುತ್ತಿದೆ.
ನಮ್ಮ ಗ್ರಾಮ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಲ್ಲದೆ ಪ್ರಾಥಮಿಕ ಶಾಲೆಯು ಬಾಗಿಲು ಮುಚ್ಚಿದೆ. ನಾವೆಲ್ಲ ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದಿದ್ದು, ಈಗ ಅದು ಮುಚ್ಚಿದ್ದು ಬೇಸರದ ಸಂಗತಿಯಾಗಿದೆ. ಗ್ರಾಮದ ಯುವಕರೆಲ್ಲರೂ ಉದ್ಯೋಗ ನಿಮಿತ್ತ ಹೊರ ಊರಿನಲ್ಲಿದ್ದು, ಈಗ ವಯಸ್ಸಾದ ಹಿರಿಯರು ಮಾತ್ರ ಗ್ರಾಮದಲ್ಲಿದ್ದಾರೆ. ಆದರಿಂದ ಗ್ರಾಮದ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಹಾಗೂ ದೇವಾಲಯಗಳನ್ನು ನೋಡಿ ನಡೆಸಲು ಯುವಕರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ನಮ್ಮ ಕಿರಗಂದೂರು ಗ್ರಾಮ ಪಂಚಾಯಿತಿಗೆ ಅನುದಾನ ಕೊರತೆಯಿದ್ದು, ಕಳೆದ ಎರಡು ವರ್ಷದಿಂದ ಕೇವಲ 15ನೇ ಹಣಕಾಸು ಯೋಜನೆ ಅನುದಾನ ಮಾತ್ರ ದೊರೆತಿದೆ. ಮನೆ ಹಾಗೂ ನೀರಿನ ಕಂದಾಯ ಅಲ್ಲದೆ ಬೇರೆ ಯಾವುದೇ ಆದಾಯದ ಮೂಲಗಳು ಪಂಚಾಯಿತಿಗಿಲ್ಲ. ತಾಕೇರಿ ಗ್ರಾಮದಲ್ಲಿ ಮಾತ್ರ 16 ಜನ ಬೋರ್‌ವೆಲ್ ಆಪರೇಟರ್ ಇದ್ದಾರೆ, ಕಿರಗಂದೂರಿನಲ್ಲಿ 3 , ಬಿಳಿಗೇರಿ 2 ವಾಟರ್‌ಮೇನ್ ಇದ್ದಾರೆ. ಅವರಿಗೆ ಸಂಬಳವನ್ನು ಈ ಆದಾಯಗಳ ಮೂಲಗಳಿಂದಲೇ ಹೊಂದಿಸಬೇಕಾದ ಪರಿಸ್ಥಿತಿ ಇದೆ.
ಒಟ್ಟಿನಲ್ಲಿ ನಮ್ಮ ಗ್ರಾಮದ ಸರ್ವಾಂಗಿಣ ಅಭಿವೃದ್ದಿಯತ್ತ ನನ್ನ ಪ್ರಯತ್ನ ಸಾಗಿದೆ. ನನ್ನ ಈ ಎಲ್ಲಾ ಕಾರ್ಯಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ಸಹಕಾರವು ಉತ್ತಮವಾಗಿ ದೊರಕುತ್ತಿದೆ”
ಮೂಲತಃ ಕೃಷಿಕರಾಗಿರುವ ಮರುವಂಡ ಮಾದಪ್ಪ ಬೆಳ್ಯಪ್ಪನವರು ರಾಜಕೀಯ ಕ್ಷೇತ್ರದಲ್ಲಿ ಬಿ.ಜೆ.ಪಿ. ಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲಿ ಬಿಳಿಗೇರಿ ಗ್ರಾಮದ ಗ್ರಾಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆ ಬಿಳಿಗೇರಿ ಯೂತ್ ಕ್ಲಬ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸೋಮವಾರಪೇಟೆ ತಾಲ್ಲೂಕು ಪುಷ್ಪಗಿರಿ ರೈತ ಕೂಟ (FPO) ಇದರ ಆದಳಿತ ಮಂಡಳಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಧಾರ್ಮಿಕ ಕ್ಷೇತ್ರದಲ್ಲಿ ಬಿಳಿಗೇರಿ ಬಸವೇಶ್ವರ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆ ಬಿಳಿಗೇರಿ ಭದ್ರಕಾಳಿ ದೇವಾಲಯ ಹಾಗೂ ಈಶ್ವರ ದೇವಾಲಯದ ಉಪಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಕಿರಗಂದೂರು ಫ್ರೌಡ ಶಾಲೆಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮರುವಂಡ ಮಾದಪ್ಪ ಬೆಳ್ಯಪ್ಪನವರ ಕುಟುಂಬ ಪರಿಚಯ:
ಮರುವಂಡ ಮಾದಪ್ಪ ಬೆಳ್ಯಪ್ಪನವರ ತಂದೆ: ದಿವಂಗತ ಮರುವಂಡ.ಎಂ. ಮಾದಪ್ಪ. ತಾಯಿ: ಮುತ್ತಮ್ಮ ಪತ್ನಿ: ಬಿ.ಬಿ. ಡಿಪ್ಪನ್ನ್. ಹಿರಿಯ ಮಗ: ಬೋಪಣ್ಣ, ಎಂ.ಬಿ.ಎ ವ್ಯಾಸಂಗ ನಿರತರಾಗಿದ್ದಾರೆ. ಕಿರಿಯ ಮಗ: ಅಯ್ಯಣ್ಣ ಬಿ.ಕಾಂ ವ್ಯಾಸಂಗ ನಿರತರಾಗಿದ್ದಾರೆ.
ಮರುವಂಡ ಮಾದಪ್ಪ ಬೆಳ್ಯಪ್ಪನವರು ಪ್ರಸ್ತುತ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬಿಳಿಗೇರಿ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 01-05-2024