ಅಮ್ಮಣಿಚಂಡ. ಜಿ. ರಂಜು ಪೂಣಚ್ಚ, ಸಹಕಾರಿಗಳು: ರುದ್ರುಗುಪ್ಪೆ. Rudraguppe
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅಮ್ಮಣಿಚಂಡ. ಜಿ. ರಂಜು ಪೂಣಚ್ಚನವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.
2004 ರಲ್ಲಿ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಸ್ಪರ್ಧಿಸಿದ ರಂಜು ಪೂಣಚ್ಚರವರು ಸಾಮಾಜಿಕ ಕಳಕಳಿ, ಸಮಾಜಸೇವೆ ಮಾಡುವ ನಿಟ್ಟಿನಲ್ಲಿ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ನಂತರ 2018 ರಲ್ಲಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡ ರಂಜು ಪೂಣಚ್ಚರವರು 2023 ರವರಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. 2023ರಲ್ಲಿ ಸಂಘದ ಚುನಾವಣೆಯಲ್ಲಿ ಆಯ್ಕೆಗೊಂಡು ಪ್ರಸ್ತುತ ಸರ್ವಾನುಮತದಿಂದ ಅವಿರೋಧವಾಗಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. 2011 ರಿಂದ 2016 ರವರಗೆ ವಿ.ಬಾಡಗ ಈಶ್ವರಿ ಧವಸ ಭಂಡಾರದ ನಿರ್ದೇಶಕರಾಗಿಯೂ, 2016 ರಿಂದ 2021 ರವರಗೆ ಉಪಾಧ್ಯಕ್ಷರಾಯೂ, 2021 ರಿಂದ ಪ್ರಸ್ತುತ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಯುತರು ಕಳೆದ 28 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇವರನ್ನು”ಸರ್ಚ್ ಕೂರ್ಗ್ ಮೀಡಿಯಾ”ವು ಪ್ರಸ್ತುತ ಪಡಿಸಿರುವ “ಕೊಡಗು ಸಹಕಾರ ದರ್ಶನ” ಎಂಬ ಕೊಡಗಿನ ಸಹಕಾರ ಚಳುವಳಿಯ ಡಿಜಿಟಲ್ ದಾಖಲೆಗೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅಮ್ಮಣಿಚಂಡ. ಜಿ. ರಂಜು ಪೂಣಚ್ಚನವರು “ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶೇಕಡ 99% ಸಾಲ ಮರುಪಾವತಿಯಾಗಿದೆ. ಸಂಘದ ವತಿಯಿಂದ ಗೊಬ್ಬರ ಮಾರಾಟವು ದಾಖಲೆಯಾಗಿದ್ದು, 10 ಕೋಟಿಗೂ ಅಧಿಕ ಕೆ.ಸಿ.ಸಿ ಸಾಲವನ್ನು ಸದಸ್ಯರಿಗೆ ನೀಡಲಾಗಿದೆ. ಜಾಮೀನು ಸಾಲ, ವಾಹನ ಸಾಲ, ಮನೆ ನಿರ್ಮಾಣ ಸಾಲ, ವಾಣಿಜ್ಯ ಕಟ್ಟಡ ನಿರ್ಮಾಣ ಸಾಲ, ಕೃಷಿಯೇತರ ಸಾಲ, ಮಧ್ಯಮಾವಧಿ ಸಾಲ, ಸಿಬ್ಬಂದಿಗಳಿಗೆ ವೇತನ ಆಧಾರಿತ ಸಾಲ ಹಾಗೂ ಸಭಾಂಗಣದಿಂದ ಬಾಡಿಗೆ ರೂಪದ ಆದಾಯ ಇವುಗಳಿಂದಾಗಿ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಲಾಭದ ಹಾದಿಯಲ್ಲಿ ಸಾಗುತ್ತಿದೆ.
ನಮ್ಮ ಸಹಕಾರ ಸಂಘವು ಗ್ರಾಮೀಣ ಭಾಗದಲ್ಲಿ ಕಾರ್ಯಾಚರಿಸುತ್ತಿದ್ದು, ವಾಣಿಜ್ಯ ವಹಿವಾಟು ಮಾಡಲು ಅನಾನುಕೂಲವಾದ ವಾತವರಣವಿದೆ. ಸಂಘದ ರೈತ ಸದಸ್ಯರು ತಮ್ಮ ಜಮೀನಿಗೆ ಬೇಕಾದ ಸುಣ್ಣ, ಕಾಫರ್ ಸಲ್ಪೇಟ್ ಹಾಗೂ ಗೊಬ್ಬರವನ್ನು ಪಡೆದು ಕೊಂಡು ಅದರ ಸದುಪಯೋಗವನ್ನು ಪಡೆದು ಕೊಂಡು ಅದರೊಂದಿಗೆ ಪ್ರತಿಯೋರ್ವ ಸದಸ್ಯರು ಕೆ.ಸಿ.ಸಿ. ಸಾಲವನ್ನು ಪಡೆದು ಅದರ ಪ್ರಯೋಜನವನ್ನು ಪಡೆದು ಕೊಳ್ಳುವಂತೆ ಈ ಸಂದರ್ಭದಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಸಂಘದ ಸದಸ್ಯರ ಸಹಕಾರದೊಂದಿಗೆ ಮನೆಯ ಬಾಗಿಲಿಗೆ ಗೊಬ್ಬರವನ್ನು ವಿತರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೇರೆ ಬೇರೆ ವಿಷಯಗಳ ಕುರಿತು ವಿಚಾರ ಸಂಕೀರ್ಣಗಳನ್ನು ಏರ್ಪಡಿಸುವ ಕುರಿತು ಕ್ರೀಯಾ ಯೋಜನೆಗಳನ್ನು ಮಾಡಲಾಗಿದೆ. ಹಾಗೆ ಈ ಕಾರ್ಯಕ್ರಮವನ್ನು ಆದಷ್ಟು ಶೀಘ್ರದಲ್ಲೇ ಚಾಲನೆಗೆ ತರಲಾಗುವುದು. ಸಂಘದ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣ ಡಿಜಟಲಿಕರಣ ಮಾಡುವ ಕಾರ್ಯವು ಪ್ರಗತಿಯಲ್ಲಿದ್ದು, ಗ್ರಾಮೀಣ ಬ್ಯಾಂಕಿಂಗ್ ರೀತಿಯಲ್ಲಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದೇವೆ.
ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕೊಡಗು ಡಿಸಿಸಿ ಬ್ಯಾಂಕಿನಿಂದ ಉತ್ತಮ ಕಾರ್ಯನಿರ್ವಹಣೆಗಾಗಿ ಬಹುಮಾನವನ್ನು ಪಡೆದುಕೊಂಡಿದೆ. ಜೊತೆಗೆ ಅಪೆಕ್ಸ್ ಬ್ಯಾಂಕಿನಿಂದಲೂ ಪ್ರಶಸ್ತಿ ಪಡೆದುಕೊಂಡಿದೆ. ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ.
ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ. ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಪೂರ್ಣ ಮಟ್ಟದಲ್ಲಿ ಇರಬಾರದು ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಎಂಬುವುದು ನನ್ನ ಅಭಿಪ್ರಾಯವಾಗಿದೆ.
ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ತಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂಬುವುದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಭಾವಿ ಯುವಶಕ್ತಿಗೆ ನನ್ನ ಸಂದೇಶವಾಗಿದೆ”
ರಾಜಕೀಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಅಮ್ಮಣಿಚಂಡ. ಜಿ. ರಂಜು ಪೂಣಚ್ಚನವರು ಭಾರತೀಯ ಜನತಾ ಪಾರ್ಟಿಯ ವಿ.ಬಾಡಗ ಬೂತ್ ಕಾರ್ಯದರ್ಶಿಗಳಾಗಿ, ಎರಡು ಅವಧಿಯಲ್ಲಿ ಬಿಟ್ಟಂಗಾಲ ಬಿ.ಜೆ.ಪಿ. ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾಗಿ ಹಾಗೂ ಅಧ್ಯಕ್ಷರಾಗಿ, ಬಿ.ಜೆ.ಪಿ. ವಿರಾಜಪೇಟೆ ಮಂಡಲ ಕಾರ್ಯದರ್ಶಿಯಾಗಿ, ಪ್ರಸ್ತುತ ಕೊಡಗು ಜಿಲ್ಲಾ ಬಿ.ಜೆ.ಪಿ. ರೈತ ಮೋರ್ಚಾದ ಜಿಲ್ಲಾಧ್ಯಕ್ಷರಾಗಿಯೂ ಭಾರತೀಯ ಜನತಾ ಪಾರ್ಟಿಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲಿ ವಿರಾಜಪೇಟೆ ಬಾಡಗ ಚಾಮುಂಡಿ ಯೂತ್ ಕ್ಲಬ್‌ನ ಸ್ಥಾಪಕ ಅಧ್ಯಕ್ಷರಾಗಿ, ಚಾಮುಂಡಿ ಕಲ್ಚರಲ್ ಕ್ಲಬ್‌ನ ಸ್ಥಾಪಕ ಅಧ್ಯಕ್ಷರಾಗಿಯೂ, ಒಂಬತ್ತು ವರ್ಷಗಳ ಕಾಲ ಚಾಮುಂಡಿ ದೇವರ ಫಂಡ್‌ನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ. ಕುತ್ತುನಾಡು-ಬೇರಳಿನಾಡು ಬೆಳೆಗಾರರ ಸಂಘದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕರಾಗಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ವಿ.ಬಾಡಗ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿ ವಿ.ಬಾಡಗ ಹೈಪ್ಲೈರಸ್ ಕ್ರೀಡಾ ಸಮಿತಿ ವತಿಯಿಂದ ಪ್ರತಿವರ್ಷ ಕುತ್ತುನಾಡು-ಬೇರಳಿನಾಡು-ಬೊಟ್ಟಿಯತ್ ನಾಡು ಇದರ ವ್ಯಾಪ್ತಿಗೆ ಒಳಪಡುವ ಕೊಡವ ಕುಟುಂಬಗಳ ಹಾಕಿ ಪಂದ್ಯಾವಳಿ ಆಯೋಜನೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಮ್ಮಣಿಚಂಡ. ಜಿ. ರಂಜು ಪೂಣಚ್ಚನವರ ಕುಟುಂಬ ಪರಿಚಯ:
ಅಮ್ಮಣಿಚಂಡ. ಜಿ. ರಂಜು ಪೂಣಚ್ಚನವರ ತಂದೆ ದಿವಂಗತ ಅಮ್ಮಣಿಚಂಡ ಜಯ ಗಣಪತಿ ಕೆ.ಎಸ್.ಆರ್.ಪಿ.ಯ ಇನ್ಸ್ಪೆಕ್ಟರ್ ಆಗಿ ಸೇವೆಸಲ್ಲಿಸಿದ್ದರು. ತಾಯಿ ದಿವಂಗತ ಅಮ್ಮಣಿಚಂಡ ಪೊನ್ನಮ್ಮ. ಪತ್ನಿ ದಮಯಂತಿ ಗೃಹಿಣಿಯಾಗಿದ್ದಾರೆ. ಹಿರಿಯ ಮಗ ಸಜ್ಜನ್ ಸುಬ್ಬಯ್ಯ ಎಂ.ಬಿ.ಎ. ವ್ಯಾಸಂಗ ನಿರತರಾಗಿದ್ದಾರೆ. ಮಗಳು ಸಾನ್ವಿ ಪೊನ್ನಮ್ಮ 8ನೇ ತರಗತಿಯಲ್ಲಿ ವ್ಯಾಸಂಗ ನಿರತರಾಗಿದ್ದಾರೆ.
ಮೂಲತಃ ಕೃಷಿಕರಾಗಿರುವ ಅಮ್ಮಣಿಚಂಡ. ಜಿ. ರಂಜು ಪೂಣಚ್ಚನವರ ಪ್ರಸ್ತುತ ಬಿಟ್ಟಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ವಿ. ಬಾಡಗ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 09-05-2024