ತಾರಾ ಸುಧೀರ್,ಅಧ್ಯಕ್ಷರು: ಗ್ರಾ.ಪಂ. ಕಿರಗಂದೂರು
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಕಿರಗಂದೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ತಾರಾ ಸುಧೀರ್ ಅವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮ ಕೊಡಗು-ನಮ್ಮಗ್ರಾಮ” ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು.
“ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ತಾರಾ ಸುಧೀರ್ “ನಾನು ಜನಪ್ರತಿನಿಧಿಯಾಗಿ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಪ್ರೇರಣೆಯೆಂದರೆ, ನನ್ನ ಗ್ರಾಮವನ್ನು ಹೆಚ್ಚಿನ ಮಟ್ಟದಲ್ಲಿ ವ್ಯವಸ್ಥಿತವಾಗಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳೊಂದಿಗೆ ಅಭಿವೃದ್ಧಿಯತ್ತ ಮುನ್ನಡೆಸುವುದಾಗಿತ್ತು. ಇದರೊಂದಿಗೆ ನನ್ನ ಗ್ರಾಮಸ್ಥರು ನನ್ನ ಬಗ್ಗೆ ಒಲವು ಪ್ರೇರಣೆ ನೀಡಿತ್ತು. ಅಲ್ಲದೆ ನನ್ನ ಪತಿಯಾದ ಎಚ್.ಎಂ. ಸುಧೀರ್ ಅವರು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು ಬಿ.ಜೆ.ಪಿ ಯ ಬೂತ್ ಅಧ್ಯಕ್ಷರಾಗಿದ್ದು ಅವರ ಸಹಕಾರವು ನನಗೆ ಪೂರಕವಾಗಿತ್ತು. ಇದರೊಂದಿಗೆ ನಾನು 2020 ರಲ್ಲಿ ಮೊದಲ ಬಾರಿಗೆ ಗ್ರಾ.ಪಂ ಚುನಾವಣೆಯಲ್ಲಿ ಸ್ಪರ್ದಿಸಿ ಗೆದ್ದು ಮೊದಲ ಅವಧಿಯಲ್ಲಿ ಸದಸ್ಯೆಯಾಗಿ ನಂತರ 2 ನೇ ಅವಧಿಗೆ ಅಧ್ಯಕ್ಷಳಾಗಿ ಅವಿರೋಧ ಆಯ್ಕೆಯಾದೆ.
ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಪ್ರಸ್ತುತ ತಾಕೇರಿ, ಕಿರಗಂದೂರು ಹಾಗೂ ಬಿಳಿಗೇರಿ 3 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದ್ದೇನೆ. ಜಲ್ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ತಾಕೇರಿ ಗ್ರಾಮದಲ್ಲಿ ಕಾಮಗಾರಿ ಪೂರ್ಣವಾಗಿದ್ದು, ಇನ್ನುಳಿದ ವಾರ್ಡ್‌ಗಳಲ್ಲಿ ಕಾಮಗಾರಿಯು ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿ ಪೂರ್ಣವಾಗಲಿದೆ.
ಉದ್ಯೋಗ ಖಾತ್ರಿಯಲ್ಲಿ ರಸ್ತೆಗಳ ಕಾಮಗಾರಿ ನಿರ್ವಹಿಸಲು ಅನುದಾನ ಕೊರತೆ ಇದೆ, ಇದಕ್ಕಾಗಿ ಪಂಚಾಯಿತಿಯಲ್ಲಿನ ರಸ್ತೆ ಅಭಿವೃದ್ಧಿಗೆ ಹೆಚ್ಚು ಅನುದಾನವನ್ನು ನೀಡಬೇಕಾಗಿ ಸರಕಾರಕ್ಕೆ ಮನವಿ ನೀಡಲಾಗಿದೆ. ಅನುದಾನದ ಕೊರತೆಯಿಂದ ನಾವು ಯೋಜನೆ ಮಾಡಿದ್ದ ಸಮಯದಲ್ಲಿ ರಸ್ತೆ ಕಾಮಗಾರಿ ಪೂರ್ಣವಾಗದೇ ಇರುವುದು ಬೇಸರದ ಸಂಗತಿಯಾಗಿದೆ.
ಮಳೆಗಾಲದಲ್ಲಿ ವಿದ್ಯುತ್ ಸಿಂಗಲ್ ಫೇಸ್ ಸಮಸ್ಯೆ ಇದ್ದು, ಪರಿಹಾರಕ್ಕಾಗಿ ತಾಕೇರಿ ಗ್ರಾಮಕ್ಕೆ ಅನುದಾನ ದೊರೆತಿದ್ದು ಮುಂದಿನ ದಿನಗಳಲ್ಲಿ ಈ ಕಾಮಗಾರಿ ಪೂರ್ಣವಾಗಲಿದೆ.
ಸ್ವಚ್ಛಭಾರತ್ ಮಿಷನ್‌ನಲ್ಲಿ ಕಸ ವಿಲೇವಾರಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೆಲವೊಂದು ಮನೆಗಳ ಅಂತರ ದೂರ ದೂರ ಇರುವುದರಿಂದ ಅವುಗಳನ್ನು ಹೊರತು ಪಡಿಸಿ ಗುಂಪು ಗುಂಪಾಗಿರುವ ಮನೆಗಳಿಂದ ಪ್ರತೀ ಸೋಮವಾರ ಒಣ ಕಸವನ್ನು ವಾಹನದಿಂದ ಸಂಗ್ರಹ ಮಾಡಿ , ಕಸ ವಿಲೇವಾರಿ ಘಟಕಕ್ಕೆ ತಲುಪಿಸಲಾಗುತ್ತಿದೆ. ಹಾಗೆ ಎಲ್ಲಾ ಮನೆಗಳಿಗೆ ಕಸದ ಬುಟ್ಟಿಗಳನ್ನು ತಲುಪಿಸಲಾಗಿದೆ.
15ನೇ ಹಣಕಾಸು ಯೋಜನೆಯ ಅನುದಾನವನ್ನು ಪೂರ್ಣವಾಗಿ ಬಳಸಲಾಗಿದೆ. ಈ ಹಿಂದೆ ನಮ್ಮ ಪಂಚಾಯಿತಿಗೆ ಸುವರ್ಣ ಗ್ರಾಮ ಪಂಚಾಯಿತಿ ಪ್ರಶಸ್ತಿ ದೊರೆತಿದ್ದು, ಅದರಲ್ಲಿ ಗ್ರಾಮಸ್ಥರ ಆರೋಗ್ಯದ ಹಿತ ದೃಷ್ಠಿಯಿಂದ ವ್ಯಾಯಾಮ ಮಾಡಲು ಒಂದು ಜಿಮ್ ಅನ್ನು ಸ್ಥಾಪಿಸಲಾಗಿದ್ದು ಗ್ರಾಮದ ಯುವಕರು ಇದರ ಸದುಪಯೋಗ ಪಡಿಸುಕೊಳ್ಳುತ್ತಿದ್ದಾರೆ.
ಗ್ರಾಮಸ್ಥರು ಪಂಚಾಯಿತಿಯ ವ್ಯವಹಾರಗಳಿಗೆ ಪಂಚಾಯಿತಿ ಕಛೇರಿಗೆ ಮೊದಲ ದಿನ ಬಂದಾಗ ಅದೇ ದಿನ ಅವರ ಕೆಲಸ ಕಾರ್ಯಗಳು ಪೂರ್ಣವಾಗಲು ಕಷ್ಟವಾಗುತ್ತಿದೆ, ಕಾರಣವೇನೆಂದರೆ ಹಾಗಾಗಿ ಕಾಡುವ ವಿದ್ಯುತ್ ಹಾಗೂ ಇಂಟರ್‌ನೆಟ್ ಸಮಸ್ಯೆ. ಆ ನಿಟ್ಟಿನಲ್ಲಿ ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲು ಶ್ರಮಿಸುತ್ತಿದ್ದೇವೆ.
ಪ್ರತೀ ಮನೆಗಳ ಸಮೀಪ ಬೀದಿ ದೀಪಗಳನ್ನು ಅಳವಡಿಸಲು ಯೋಜನೆಯೊಂದನ್ನು ರೂಪಿಸಲಾಗಿದ್ದು, ಮನೆಗಳ ಅಂತರ ಹೆಚ್ಚಿರುವ ಕಾರಣ ಅಲ್ಲಲ್ಲಿ ಸೋಲಾರ್ ದೀಪ ಗಳನ್ನು ಅಳವಡಿಸಲು ಯೋಜನೆಯನ್ನು ರೂಪಿಸಲಾಗಿದೆ. ಪ್ರತೀ ಮನೆಗಳಿಗೆ ರಸ್ತೆ, ಕುಡಿಯುವ ನೀರು ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂಬುದು ನನ್ನ ಆಶಯ ಹಾಗು ಗುರಿಯಾಗಿದೆ. ನನ್ನ ಈ ಎಲ್ಲಾ ಕಾರ್ಯಗಳಿಗೆ ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ಸಹಕಾರವು ಉತ್ತಮವಾಗಿ ದೊರಕುತ್ತಿದೆ”
ಮೂಲತಃ ಕೃಷಿಕರಾಗಿರುವ ತಾರಾ ಸುಧೀರ್ ರವರು ರಾಜಕೀಯ ಕ್ಷೇತ್ರದಲ್ಲಿ ಬಿ.ಜೆ.ಪಿ. ಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಪ್ರಗತಿ ಪರ ಮಹಿಳಾ ವೇದಿಕೆ, ಸೋಮವಾರಪೇಟೆ ತಾಲೂಕು ಸದಸ್ಯರಾಗಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಶಟಲ್ ಬ್ಯಾಡ್ಮಿಂಟನ್ ಮುಂತಾದ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕುಟುಂಬ ಪರಿಚಯ:
ತಾರಾ ಸುಧೀರ್ ರವರ ತಂದೆ: ರಾಮೇಗೌಡ. ತಾಯಿ: ಕಾವೇರಿ. ಪತಿ: ಸುಧೀರ್ ಎಚ್.ಎನ್. (ಕೃಷಿಕರು ಹಾಗೂ ಬಿ.ಜೆ.ಪಿ. ಯ ಸಕ್ರಿಯ ಕಾರ್ಯಕರ್ತರು )ಮಗ: ದುಶ್ಯಂತ್, ಎಂ.ಬಿ.ಎ. ವ್ಯಾಸಾಂಗ ನಿರತರಾಗಿದ್ದಾರೆ.
ತಾರಾ ಸುಧೀರ್ ರವರು ಪ್ರಸ್ತುತ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ತಾಕೇರಿ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ:29-05-2024